ಮಾಹಿತಿ ಇರುವಲ್ಲಿ ಹೋಗಲು

ಅವರ ನಂಬಿಕೆಯನ್ನ ಅನುಕರಿಸಿ | ಯೋಬ

ಯೆಹೋವ ಅವನ ನೋವನ್ನು ನೀಗಿಸಿದನು

ಯೆಹೋವ ಅವನ ನೋವನ್ನು ನೀಗಿಸಿದನು

ಕೊನೆಗೆ ಎಲ್ಲರು ಸುಮ್ಮನೆ ಆದ್ರು. ಬಹುಶಃ ಅಲ್ಲಿ ಅರಬ್ಬಿ ಮರುಭೂಮಿ ಕಡೆಯಿಂದ ಬಿಸಿ ಗಾಳಿ ಬೀಸೋ ಶಬ್ದ ಮಾತ್ರ ಕೇಳಿ ಬರ್ತಿರಬಹುದು. ಯೋಬನಿಗೆ ತುಂಬ ಹೊತ್ತಿಂದ ಅವ್ರ ಜೊತೆ ವಾದ ಮಾಡಿ-ಮಾಡಿ ಸಾಕಾಗಿದೆ. ಇನ್ನು ಅವನ ಹತ್ರ ಮಾತಾಡೋಕೆ ಏನೂ ಉಳಿದಿಲ್ಲ. ಮೂವರು ಸ್ನೇಹಿತರಾದ ಎಲೀಫಜ, ಬಿಲ್ದದ ಮತ್ತು ಚೋಫರ ‘ಎಷ್ಟು ಮಾತಾಡ್ತಾರೋ ಮಾತಾಡ್ಲಿ’ ಅಂತ ಮನಸ್ಸಲ್ಲಿ ನೆನಸ್ಕೊಂಡು ಸಿಟ್ಟಿಂದ ಗುರಾಯಿಸ್ಕೊಂಡು ನೋಡೋ ಯೋಬನನ್ನ ಉಹಿಸ್ಕೊಳ್ಳಿ. ಆ ಮೂವರು ಚಾಣಾಕ್ಷತನದಿಂದ ಮಾತಾಡಿದ್ರೂ ಅವ್ರ ಮಾತುಗಳಲ್ಲಿ ಬರೀ ನೋವು ತರೋ, ಹಾನಿ ಮಾಡೋ ವ್ಯರ್ಥ ಮಾತುಗಳೇ ತುಂಬಿತ್ತು. ಆ ಮಾತುಗಳಿಂದ ಅವನಿಗೆ ಹಾನಿ ಆಯಿತೆ ಹೊರತು ಒಳ್ಳೇದೇನು ಆಗ್ಲಿಲ್ಲ. ಹಾಗಾಗಿ ಅವ್ರಿಂದ ಯೋಬನನ್ನ ತಲೆ ಎತ್ತಿ ನೋಡೋಕೆ ಆಗ್ಲಿಲ್ಲ. (ಯೋಬ 16:3) ಇಷ್ಟೆಲ್ಲ ಆದ್ರೂ ಯೋಬ ನಿಯತ್ತಿಂದ ಇರಬೇಕು ಅನ್ನೋ ತನ್ನ ದೃಢ ನಿರ್ಧಾರವನ್ನ ಬಿಟ್ಟುಕೊಟ್ಟಿಲ್ಲ.

ಯೋಬನ ಹತ್ರ ಈಗ ಉಳಿದಿದ್ದು ಒಂದೇ ಒಂದು, ಅದು ಅವನ ನಿಯತ್ತು. ಆಸ್ತಿ-ಪಾಸ್ತಿ, ಹತ್ತು ಮಕ್ಕಳು, ಅಕ್ಕಪಕ್ಕದವರ, ಸ್ನೇಹಿತರ ಬೆಂಬಲ, ಗೌರವ ಎಲ್ಲ ಕಳ್ಕೊಂಡಿದ್ದ. ಕೊನೆಗೆ ಅವನ ಆರೋಗ್ಯನೂ ಹಾಳಾಗಿ ಹೋಗಿತ್ತು. ಕಾಯಿಲೆಯಿಂದ ಅವನ ಚರ್ಮ ಕಪ್ಪಾಗಿತ್ತು. ಮೈಯಲ್ಲೆಲ್ಲ ಗಾಯ, ಗಾಯದ ಮೇಲೆ ಗಟ್ಟಿ ಚರ್ಮ. ಇದು ಸಾಲದ್ದಕ್ಕೆ ಹುಳಗಳು ಅವನನ್ನ ಮುತ್ಕೊಂಡಿದವು. ಅವನ ಹತ್ರ ಹೋದ್ರೆ ಗಬ್ಬು ವಾಸನೆ. (ಯೋಬ 7:5; 19:17; 30:30) ಹೇಗೂ ಇದನ್ನೆಲ್ಲ ಸಹಿಸ್ಕೊಂಡಿದ್ದ ಯೋಬನಿಗೆ ಆ ಮೂವರು ಆಡಿದ ಕೆಣಕೋ ಮಾತುಗಳಿಂದ ತುಂಬ ಸಿಟ್ಟು ಬಂತು. ‘ನಾನೇನೊ ದೊಡ್ಡ ಪಾಪ ಮಾಡಿದ್ದೀನಿ ಅಂತ ಹೇಳ್ತಿದ್ದೀರಲ್ಲ, ಅದೆಲ್ಲ ಸುಳ್ಳು’ ಅಂತ ಹೇಳ್ತಿದ್ದ. ಕೊನೆಗೂ ಯೋಬ ಹೇಳಿದ ಮಾತಿಗೆ ಅವರೆಲ್ಲ ಬಾಯಿ ಮುಚ್ಕೊಂಡ್ರು. ಇಷ್ಟೋತ್ತು ಆಡಿದ ಬೇಡದಿರುವ ಚುಚ್ಚೋ ಮಾತುಗಳನ್ನ ಈಗ ನಿಲ್ಲಿಸಿದ್ರು. ಆದ್ರೆ ಯೋಬನಿಗೆ ನೋವು ಇನ್ನು ಇತ್ತು, ಸಹಾಯ ಬೇಕೇ ಬೇಕಿತ್ತು.

ಯೋಬನಿಗೆ ಈ ಸನ್ನಿವೇಶದಲ್ಲಿ ಯಾಕೆ ಸರಿಯಾಗಿ ಯೋಚಿಸೋಕೆ ಆಗಿಲ್ಲ ಅಂತ ನಮ್ಗೆ ಅರ್ಥ ಆಗುತ್ತೆ. ಅವನಿಗೆ ಮಾರ್ಗದರ್ಶನ ಬೇಕಿತ್ತು, ಯಾರಾದ್ರೂ ತಿದ್ದಬೇಕಿತ್ತು. ಅವನಿಗೆ ಆಗಿರೋ ನೋವನ್ನು ವಾಸಿ ಮಾಡೋ ತರ ಸಮಾಧಾನ ಹೇಳಬೇಕಿತ್ತು. ಅದನ್ನ ಅವನ ಮೂವರ ಸ್ನೇಹಿತರು ಮಾಡಬೇಕಿತ್ತು, ಆದ್ರೆ ಮಾಡ್ಲಿಲ್ಲ. ಇಂಥ ಸನ್ನಿವೇಶ ನಿಮಗೆ ಯಾವತ್ತಾದ್ರೂ ಬಂದಿತ್ತಾ? ನಿಮಗೆ ಸಮಾಧಾನ ಹೇಳೋರು, ಮಾರ್ಗದರ್ಶನ ಕೊಡೋರು ಯಾರೂ ಇಲ್ಲ ಅಂತ ಅನಿಸಿತ್ತಾ? ನಿಮ್ಮ ಸ್ನೇಹಿತರೇ ನಿಮ್ಮ ಕೈ ಬಿಟ್ರಾ? ಹಾಗಾದ್ರೆ ಬೇಜಾರು ಮಾಡ್ಕೊಬೇಡಿ. ಯೆಹೋವ ದೇವರು ಹೇಗೆ ಯೋಬನಿಗೆ ಸಹಾಯ ಮಾಡಿದನು, ಯೋಬ ಅದಕ್ಕೆ ಹೇಗೆ ಪ್ರತಿಕ್ರಿಯಿಸಿದ ಅಂತ ನೀವು ಮುಂದೆ ಓದುವಾಗ ನೀವೇನು ಮಾಡಬೇಕೆಂದು ಗೊತ್ತಾಗುತ್ತೆ.

ವಿವೇಕ ಮತ್ತು ಕಾಳಜಿ ಇರೋ ಸಲಹೆಗಾರ

ಯೋಬನ ಕಥೆಯಲ್ಲಿ ಮುಂದೆ ನಡೆದ ವಿಷ್ಯಗಳನ್ನ ನೋಡಿದ್ರೆ ಆಶ್ಚರ್ಯ ಆಗುತ್ತೆ. ಅಲ್ಲೇ ಎಲೀಹು ಅನ್ನೋ ಯುವಕ ಇದ್ದ. ಅಲ್ಲಿದ್ದ ವಯಸ್ಸಾದವರು ಮಾತಾಡೋದನ್ನ ಅವನೂ ಅಷ್ಟರ ತನಕ ಕೇಳಿಸ್ಕೊಳ್ತಾ ಇದ್ದ. ಅವರ ಮಾತು ಕೇಳಿ ಅವನಿಗೆ ತುಂಬ ಸಿಟ್ಟು ಬಂತು.

ಎಲೀಹುಗೆ ಯೋಬನ ಮೇಲೆ ಬೇಜಾರಾಯ್ತು. ಆ ಮೂವರ ಮಾತಿಂದ ಯೋಬನಿಗೆ ಕಿರಿಕಿರಿ ಆಗಿ ಏನು ಮಾಡಬೇಕಂತ ಗೊತ್ತಾಗದೆ ಅವನು “ದೇವರಿಗಿಂತಲೂ ತಾನೇ ನ್ಯಾಯವಂತನೆಂದು” ತೋರಿಸೋಕೆ ಪ್ರಯತ್ನಿಸಿದ್ರಿಂದ ಎಲೀಹುಗೆ ಸಹಿಸೋಕೆ ಆಗ್ಲಿಲ್ಲ. ಆದ್ರೂ ಯೋಬ ಅನುಭವಿಸ್ತಿದ್ದ ನೋವು, ಅವನ ಪ್ರಾಮಾಣಿಕತೆ ನೋಡಿ ಎಲೀಹುಗೆ ‘ಪಾಪ’ ಅನಿಸ್ತು. ಯೋಬ ತನಗೆ ಸಮಾಧಾನ ಹೇಳುವವರು, ಬುದ್ಧಿ ಹೇಳುವವರು ಯಾರೂ ಇಲ್ವಲ್ಲ ಅಂತ ಒದ್ದಾಡೋದನ್ನ ನೋಡಿ ಅವನಿಗೆ ಅಯ್ಯೋ ಅನಿಸ್ತು. ಆ ಮೂವರು ಯೋಬನಿಗೆ ನೋವಾಗುವ ತರ ಮಾತಾಡಿದ್ದನ್ನ, ಅವನ ನಂಬಿಕೆ, ಗೌರವ, ನಿಯತ್ತನ್ನ ಹಾಳು ಮಾಡಲಿಕ್ಕೆ ಪ್ರಯತ್ನಿಸಿದ್ದನ್ನ ನೋಡಿ ನೋಡಿ ಎಲೀಹುಗೆ ಸಾಕಾಗಿ ಹೋಯ್ತು. ಇದಕ್ಕಿಂತ ದುಃಖದ ವಿಷ್ಯ ಏನೆಂದ್ರೆ, ಆ ಮೂವರು ದೇವರೇ ದುಷ್ಟ ಅನ್ನೋ ರೀತಿ ಸುಳ್ಳು ಸುಳ್ಳು ಹೇಳಿದ್ರು. ಎಲೀಹುಗೆ ಇದೆಲ್ಲ ಕೇಳಿಸಿಕೊಂಡ ಮೇಲೆ ಇನ್ನು ಮಾತಾಡದಿದ್ರೆ ಆಗಲ್ಲ ಅಂತ ಅನಿಸ್ತು.—ಯೋಬ 32:2-4, 18.

ಆಮೇಲೆ ಅವನು ‘ನೀವೆಲ್ಲ ವಯಸ್ಸಲ್ಲಿ ದೊಡ್ಡವರು, ನಾನು ಚಿಕ್ಕವನು. ಅದಕ್ಕೇ ನೀವು ಮಾತಾಡುವಾಗ ಮಧ್ಯದಲ್ಲಿ ಬಾಯಿ ಹಾಕಲಿಲ್ಲ. ಆದ್ರೆ ಇನ್ನು ನಾನು ಮಾತಾಡದೆ ಇರಲ್ಲ’ ಅಂದ. ಅಲ್ಲದೇ ಅವನು, “ವೃದ್ಧರೇ ಜ್ಞಾನಿಗಳಲ್ಲ, ಮುದುಕರು ಮಾತ್ರ ನ್ಯಾಯ ಬಲ್ಲವರಲ್ಲ” ಅಂತ ಹೇಳಿದ. (ಯೋಬ 32:6, 9) ಸತ್ಯ ಏನಂತ ತಿಳಿಸೋಕೆ ಎಲೀಹು ತುಂಬ ಹೊತ್ತು ಮಾತಾಡಿದ. ಎಲೀಫಜ, ಬಿಲ್ದದ ಮತ್ತು ಚೋಫರ ಮಾತಾಡಿದ ತರ ಎಲೀಹು ಮಾತಾಡಲಿಲ್ಲ. ತಾನು ಯೋಬನನ್ನ ಇನ್ನೂ ಕೀಳಾಗಿ ಮಾಡೋ ತರ ಮಾತಾಡಲ್ಲ ಅಥವಾ ಗಾಯಕ್ಕೆ ಉಪ್ಪು ಹಾಕೋ ತರ ಮಾತಾಡಲ್ಲ ಅಂತ ಅವನು ಮಾತುಕೊಟ್ಟ. ಅಲ್ಲದೆ, ಎಲೀಹು ಆ ಮೂವರ ತರ ಮಾಡದೆ ಯೋಬನ ಹೆಸ್ರನ್ನ ಹೇಳಿ ಮರ್ಯಾದೆ ಕೊಟ್ಟು ಮಾತಾಡಿದ. * ಅವನು ಗೌರವದಿಂದ ‘ಯೋಬನೇ, ದಯವಿಟ್ಟು ನನ್ನ ನುಡಿಯನ್ನು ಕೇಳು’ ಅಂದ.—ಯೋಬ 33:1, 7; 34:7.

ಎಲೀಹು ದಯೆಯಿಂದ, ಗೌರವದಿಂದ ಯೋಬನ ಹೆಸರು ಎತ್ತಿ ಮಾತಾಡಿದ

ಎಲೀಹು ಯೋಬನಿಗೆ ಕೆಲವು ನೇರವಾದ ಸಲಹೆಗಳನ್ನ ಕೊಟ್ಟ. ಅವನು ಹೀಗಂದ: “ನಿನ್ನ ನುಡಿಯ ಧ್ವನಿಯನ್ನು ಕೇಳಿದ್ದೇನೆ, ನನ್ನ ಕಿವಿಗೆ ಬಿದ್ದ ಈ ಮಾತುಗಳನ್ನು ಆಡೇ ಆಡಿದ್ದೀ—ನಾನು ಪರಿಶುದ್ಧನು, ನನ್ನೊಳಗೆ ದೋಷವಿಲ್ಲ, ನಾನು ನಿರ್ಮಲನು, ನನ್ನಲ್ಲಿ ಏನೂ ಪಾಪವಿಲ್ಲ. ದೇವರು ನನ್ನಲ್ಲಿ ವಿರೋಧಕ್ಕೆ ಕಾರಣಗಳನ್ನು ಕಂಡುಹಿಡಿಯುತ್ತಾ ನನ್ನನ್ನು ಶತ್ರು ತರ ನೋಡಿದ್ದಾನೆ.” ಆಮೇಲೆ ಎಲೀಹು ಯೋಬನ ನಿಜವಾದ ಸಮಸ್ಯೆ ಏನಂತ ಹೇಳಿದ. ದೇವ್ರಿಗಿಂತ ನೀನೇ ನೀತಿವಂತನು ಅಂತ ಅಂದ್ಕೊಂಡು, ನೀನೇ ಸರಿ ಅಂತ ಹೇಳ್ತಿದ್ದೀಯಾ? ಎಂದು ಕೇಳಿದ. ಯೋಬ ಈ ತರ ಯೋಚನೆ ಮಾಡೋಕೆ ಎಲೀಹು ಬಿಡಲಿಲ್ಲ. ಅದಕ್ಕೆ, ಆ ಯುವಕ ಎಲೀಹು, ನೀನು ಹೀಗೆ ಮಾತಾಡೋದು ಸರಿಯಲ್ಲ ಅಂದ. (ಯೋಬ 33:8-12; 35:2) ಯೋಬನಿಗೆ ತುಂಬ ದೊಡ್ಡ ನಷ್ಟ ಆಗಿರೋದ್ರಿಂದ ಮತ್ತು ಅವನನ್ನ ಸಮಾಧಾನ ಪಡಿಸಬೇಕಾದ ಸ್ನೇಹಿತರು ಚುಚ್ಚಿ-ಚುಚ್ಚಿ ಮಾತಾಡಿದ್ರಿಂದ ಅವನು ಕೋಪದಿಂದ ಇದ್ದಾನೆ ಅಂತ ಎಲೀಹುಗೆ ಗೊತ್ತಿತ್ತು. ಅದಕ್ಕೆ ಅವನು ಯೋಬನಿಗೆ, “ನಿನ್ನ ಸಿಟ್ಟು ನಿನ್ನನ್ನು ಮರುಳುಗೊಳಿಸಿ ಕುಚೋದ್ಯಕ್ಕೆ ನೂಕೀತು, ನೋಡಿಕೋ” ಅಂತ ಎಚ್ಚರಿಕೆ ಕೊಟ್ಟ.—ಯೋಬ 36:18.

ಎಲೀಹು ಯೆಹೋವನ ದಯೆ ಬಗ್ಗೆ ಒತ್ತಿಹೇಳಿದ

ಯೆಹೋವ ದೇವರು ಯಾವಾಗ್ಲೂ ಸರಿಯಾದದ್ದನ್ನೇ ಮಾಡ್ತಾನೆ ಅಂತ ಪದೇ-ಪದೇ ಎಲೀಹು ಹೇಳಿದ. ಅವನು ಈ ಮುಂದಿನ ಸತ್ಯವನ್ನ ಸರಳವಾಗಿ, ಅದೇ ಸಮಯದಲ್ಲಿ ಬಲವಾಗಿ ಹೇಳಿದ್ದಾನೆ. ಅದೇನಂದ್ರೆ, “ದೇವರು ಕೆಟ್ಟದ್ದನ್ನು ಮಾಡಾನೆಂಬ ಯೋಚನೆಯೂ ಸರ್ವಶಕ್ತನು ಅನ್ಯಾಯವನ್ನು ನಡಿಸಾನೆಂಬ ಭಾವನೆಯೂ ದೂರವಾಗಿರಲಿ! . .  ಸರ್ವಶಕ್ತನು ನೀತಿಯನ್ನು ಡೊಂಕುಮಾಡುವದೇ ಇಲ್ಲ.” (ಯೋಬ 34:10, 12) ಯೆಹೋವ ಕರುಣೆಯ ದೇವರು, ನ್ಯಾಯದ ದೇವರು ಅಂತ ಯೋಬ ಅರ್ಥಮಾಡ್ಕೊಳ್ಳೋಕೆ ಎಲೀಹು ಸಹಾಯ ಮಾಡಿದ. ಯಾಕಂದ್ರೆ ಯೋಬ ತನ್ನ ಬಗ್ಗೆನೇ ಯೋಚನೆ ಮಾಡ್ತಾ ದೇವರ ವಿಷ್ಯದಲ್ಲಿ ಗೌರವ ಕೊಡದೆ ಮಾತಾಡಿದ. ಹೀಗೆ ಮಾಡಿದಕ್ಕೆ ಯೆಹೋವ ಅವನಿಗೆ ಶಿಕ್ಷೆ ಕೊಡಬಹುದಿತ್ತು, ಆದ್ರೆ ಹಾಗೆ ಮಾಡಲಿಲ್ಲ. (ಯೋಬ 35:13-15) ಎಲೀಹು ತನಗೆ ದೇವರ ಬಗ್ಗೆ ಎಲ್ಲಾ ಗೊತ್ತು ಅನ್ನೋ ರೀತಿ ಮಾತಾಡದೆ ದೀನತೆಯಿಂದ, “ದೇವರು ಮಹೋನ್ನತನಾಗಿದ್ದಾನೆ, ನಾವು ಆತನನ್ನು ಅರಿಯಲಾರೆವು” ಅಂತ ಹೇಳಿದ.—ಯೋಬ 36:26.

ಎಲೀಹು ಯೋಬನಿಗೆ ನೇರವಾಗಿ ಸಲಹೆ ಕೊಟ್ಟರೂ ಅದನ್ನ ದಯೆಯಿಂದ ಕೊಟ್ಟ. ಯೆಹೋವನು ಯೋಬನ ಆರೋಗ್ಯವನ್ನ ಒಂದಲ್ಲ ಒಂದಿನ ಗುಣಪಡಿಸ್ತಾನೆ ಅಂತ ಭರವಸೆಯನ್ನ ತುಂಬಿಸಿದ. ದೇವರು ತನ್ನ ನಿಷ್ಠಾವಂತ ಸೇವಕನ ಬಗ್ಗೆ ಹೀಗೆ ಹೇಳಿದ್ದನು: “ಅವನ ದೇಹವು ಬಾಲ್ಯಕ್ಕಿಂತಲೂ ಕೋಮಲವಾಗುವದು, ಅವನು ಪುನಃ ಎಳೆಯತನದ ದಿನಗಳನ್ನು ಅನುಭವಿಸುವನು.” ಎಲೀಹು ಇನ್ನೊಂದು ರೀತಿಯಲ್ಲೂ ಯೋಬನಿಗೆ ದಯೆ ತೋರಿಸಿದ. ಅವನೊಬ್ಬನೇ ಮಾತಾಡ್ತಾ ಯೋಬನಿಗೆ ‘ಹೀಗೆ ಮಾಡು ಹಾಗೆ ಮಾಡು’ ಅಂತ ಹೇಳೋ ಬದಲು ಯೋಬ ಕೂಡ ಮಾತಾಡೋ ಅವಕಾಶ ಕೊಟ್ಟ. ಅವನು ಯೋಬನಿಗೆ, “ಮಾತಾಡು, ನಿನ್ನನ್ನು ನೀತಿವಂತನೆಂದು ಸ್ಥಾಪಿಸಬೇಕೆಂಬದೇ ನನ್ನ ಆಶೆ” ಅಂತ ಹೇಳಿದ. (ಯೋಬ 33:25, 32) ಆದ್ರೆ ಯೋಬ ಸುಮ್ಮನೆ ಇದ್ದ. ಎಲೀಹು ಯೋಬನಿಗೆ ತುಂಬ ದಯೆ ತೋರಿಸಿದ್ರಿಂದ, ಉತ್ತೇಜನ ಕೊಟ್ಟಿದ್ರಿಂದ ಅವನಿಗೆ ‘ನಾನೀಗ ನನ್ನನ್ನ ಸಮರ್ಥಿಸ್ಕೊಳ್ಳಬೇಕು’ ಅಂತ ಅನಿಸದೇ ಇದ್ದಿರಬಹುದು. ಎಲೀಹು ನನಗೆ ಎಷ್ಟು ಕಾಳಜಿ ತೋರಿಸ್ತಿದ್ದಾನಲ್ಲ ಅಂತ ನೆನಸಿ ಯೋಬನಿಗೆ ಅಳುನೇ ಬಂದಿರಬಹುದು.

ಈ ಇಬ್ಬರು ನಂಬಿಗಸ್ತರಿಂದ ನಾವು ಪ್ರಾಮುಖ್ಯ ಪಾಠಗಳನ್ನ ಕಲಿಯಬಹುದು. ಹೇಗೆ ಸಲಹೆಗಳನ್ನ ಕೊಡಬೇಕು, ಅಗತ್ಯ ಇದ್ದವರಿಗೆ ಹೇಗೆ ಸಾಂತ್ವನ ಕೊಡಬೇಕು ಅಂತ ಎಲೀಹುನಿಂದ ಕಲಿಬಹುದು. ಒಬ್ಬ ನಿಜವಾದ ಸ್ನೇಹಿತ ತನಗೆ ಎಷ್ಟೇ ಕಷ್ಟ ಆದ್ರೂ ನಿಮಗೆ ನಿಮ್ಮ ಬಲಹೀನತೆಗಳೇನು, ನೀವು ಎಷ್ಟು ದೊಡ್ಡ ತಪ್ಪು ಮಾಡಿದ್ದೀರಾ ಅಂತ ತಿಳಿಸ್ತಾನೆ. (ಜ್ಞಾನೋಕ್ತಿ 27:6) ನಾವು ಸಹ ಯಾರಾದ್ರೂ ಬಾಯಿಗೆ ಬಂದ ಹಾಗೆ, ಯೋಚನೆ ಮಾಡ್ದೆ ಮಾತಾಡಿದ್ರೆ ಒಳ್ಳೇ ಮನಸ್ಸು ಇರೋ ಸ್ನೇಹಿತನ ತರ ದಯೆಯಿಂದ ಪ್ರೋತ್ಸಾಹ ಕೊಡೋ ರೀತಿಯಲ್ಲಿ ಇರಬೇಕಲ್ವಾ? ಯೋಬನ ಮಾದರಿಯಿಂದ ನಾವೊಂದು ಪಾಠ ಕಲಿಬಹುದು. ಏನಂದ್ರೆ ಯಾರಾದ್ರೂ ನಮಗೆ ಸರಿಯಾದ ಸಲಹೆ ಕೊಟ್ರೆ ಅದನ್ನ ಕಿವಿಗೆ ಹಾಕಿಕೊಳ್ಳದೆ ಇರೋ ಬದಲು ದೀನತೆಯಿಂದ ಅದನ್ನ ಕೇಳಬೇಕು. ನಮ್ಮೆಲ್ಲರಿಗೂ ಸಲಹೆ, ತಿದ್ದುಪಾಟು ಬೇಕು. ಅದನ್ನ ಸ್ವೀಕರಿಸಿದರೆ ನಮ್ಮ ಜೀವ ಉಳಿಯುತ್ತೆ.—ಜ್ಞಾನೋಕ್ತಿ 4:13.

“ಬಿರುಗಾಳಿಯೊಳಗಿಂದ”

ಗಾಳಿ, ಮೋಡ, ಗುಡುಗು ಮತ್ತು ಮಿಂಚಿನ ಬಗ್ಗೆ ಎಲೀಹು ತಿಳಿಸಿದ. ಅವನು ಯೆಹೋವನ ಬಗ್ಗೆ ಹೇಳ್ತಾ ಹೀಗಂದ: “ಗುಡುಗುಟ್ಟುವ ಆತನ ಧ್ವನಿಗೆ ಕಿವಿಗೊಡಿರಿ.” ಇದಾದ ಸ್ವಲ್ಪ ಸಮಯದಲ್ಲಿ ಎಲೀಹು ಒಂದು ‘ಬಿರುಗಾಳಿಯ’ ಬಗ್ಗೆ ಹೇಳಿದ. (ಯೋಬ 37:2, 9) ಬಹುಶಃ ಎಲೀಹು ಯೋಬನ ಹತ್ರ ಮಾತಾಡ್ತಿರುವಾಗ ಒಂದು ಬಿರುಗಾಳಿ ಎದ್ದಿರಬಹುದು. ಅದ್ರ ವೇಗ ಜಾಸ್ತಿ ಆಗ್ತಾ ಹೋಗಿರಬಹುದು. ಕೊನೆಗೆ ಅದು ಸಿಕ್ಕಾಪಟ್ಟೆ ವೇಗವಾಗಿ ಬೀಸುತ್ತಾ ಇದ್ದಿರಬಹುದು. ಆಗ ಒಂದು ಆಶ್ಚರ್ಯಕರ ಘಟನೆ ನಡಿತು. ಯೆಹೋವ ದೇವರು ಮಾತಾಡಿದನು!—ಯೋಬ 38:1.

ವಿಶ್ವವನೇ ಸೃಷ್ಟಿ ಮಾಡಿದ ದೇವರು ಕಾಲೇಜ್‌ ಲೆಕ್ಚರ್‌ ತರ ನೈಸರ್ಗಿಕ ವಿಷ್ಯಗಳ ಬಗ್ಗೆ ಪಾಠ ಮಾಡುವಾಗ ಅಲ್ಲಿದ್ದು ಕೇಳಿಸಿಕೊಳ್ಳೋದು ಎಂಥ ದೊಡ್ಡ ಸುಯೋಗ ಆಗಿದ್ದಿರಬಹುದು ಅಂತ ಚಿತ್ರಿಸಿಕೊಳ್ಳಿ!

ಯೋಬ ಪುಸ್ತಕವನ್ನ ಓದುವಾಗ, ಅದರಲ್ಲೂ ಯೆಹೋವನ ಮಾತುಗಳಿರೋ ಈ ಅಧ್ಯಾಯಗಳನ್ನ ಓದುವಾಗ ನಮಗೆ ತುಂಬ ಖುಷಿ ಆಗುತ್ತೆ. ಬಿರುಗಾಳಿ ಹೇಗೆ ಕಸವನ್ನ ಹೊಡ್ಕೊಂಡು ಹೋಗುತ್ತೋ ಹಾಗೆ ಯೆಹೋವನ ಮಾತುಗಳು ಎಲೀಫಜ, ಬಿಲ್ದದ ಮತ್ತು ಚೋಫರರ ಸುಳ್ಳು-ಪೊಳ್ಳು ಮಾತುಗಳನ್ನ ಹೊಡ್ಕೊಂಡು ಹೋಯ್ತು. ಯೆಹೋವ ತುಂಬ ಹೊತ್ತು ಆ ಮೂವರ ಜೊತೆ ಮಾತಾಡಲಿಲ್ಲ. ಆತನ ಪೂರ್ತಿ ಗಮನ ಯೋಬನ ಮೇಲೇ ಇತ್ತು. ತಂದೆ ಮಗನನ್ನ ಸರಿಪಡಿಸೋ ಹಾಗೆ ದೇವರು ತನಗೆ ತುಂಬ ಇಷ್ಟ ಆಗಿರೋ ಸೇವಕನಾದ ಯೋಬನನ್ನ ನೇರವಾಗಿ ಅದೇ ಸಮಯದಲ್ಲಿ ದಯೆಯಿಂದ ತಿದ್ದಿದನು.

ಯೋಬನ ನೋವನ್ನ ಯೆಹೋವ ಅರ್ಥ ಮಾಡ್ಕೊಂಡನು. ಆತನಿಗೆ ತನ್ನ ಪ್ರಿಯ ಮಕ್ಕಳು ಕಷ್ಟಪಡುವಾಗ ಮಮತೆ ಉಕ್ಕಿ ಬರೋ ಹಾಗೆ ಯೋಬನ ವಿಷ್ಯದಲ್ಲೂ ಆಯ್ತು. ಆತನಿಗೆ ಅವನನ್ನ ನೋಡಿ ಕನಿಕರ ಉಕ್ಕಿ ಬಂತು. (ಯೆಶಾಯ 63:9; ಜೆಕರ್ಯ 2:8) ಯೋಬ ತಿಳುವಳಿಕೆ ಇಲ್ಲದೆ ಮಾತಾಡಿ ಅವನು ತನ್ನ ಸಮಸ್ಯೆಗಳನ್ನ ಇನ್ನೂ ದೊಡ್ಡದು ಮಾಡ್ಕೊಳ್ತಿದ್ದಾನೆ ಅಂತ ಯೆಹೋವನಿಗೆ ಗೊತ್ತಾಯ್ತು. ಹಾಗಾಗಿ ಯೋಬ ಯೋಚನೆ ಮಾಡೋಕೆ ಯೆಹೋವ ದೇವರು ತುಂಬ ಪ್ರಶ್ನೆಗಳನ್ನ ಕೇಳಿದನು. ಆತನು ಹೀಗೆ ಕೇಳಿದನು: “ನಾನು ಲೋಕಕ್ಕೆ ಅಸ್ತಿವಾರಹಾಕಿದಾಗ ನೀನು ಎಲ್ಲಿದ್ದಿ? ನೀನು ಜ್ಞಾನಿಯಾಗಿದ್ದರೆ ಹೇಳು.” ದೇವರು ಮಾಡಿದ ಅದ್ಭುತ ಸೃಷ್ಟಿಯನ್ನ ನೋಡಿ ಮುಂಜಾನೆಯ ನಕ್ಷತ್ರಗಳು ಅಂದ್ರೆ ದೇವರ ಕುಟುಂಬದಲ್ಲಿರೋ ದೇವದೂತರು ಸಂತೋಷದಿಂದ ಜೋರಾಗಿ ಹಾಡಿ ಹೊಗಳಿದ್ರು. (ಯೋಬ 38:2, 4, 7) ಇದ್ರ ಬಗ್ಗೆ ಯೋಬನಿಗೇನು ಗೊತ್ತಿರಲಿಲ್ಲ. ಹಾಗಾಗಿ ಅವನಿಗೆ ಉತ್ತರ ಕೊಡೋಕೆ ಆಗ್ಲಿಲ್ಲ.

ಯೆಹೋವ ಯೋಬನ ಯೋಚನೆಯನ್ನ ಸರಿಪಡಿಸೋಕೆ ಬಿರುಗಾಳಿ ಒಳಗಿಂದ ಮಾತಾಡಿದನು

ಯೆಹೋವ ಈಗ ತಾನು ಮಾಡಿದ ಸೃಷ್ಟಿ ಬಗ್ಗೆ ಹೇಳೋಕೆ ಶುರು ಮಾಡ್ತಾನೆ. ದೇವರು ಯೋಬನಿಗೆ ನಾವೀಗ ಕರೆಯೋ ನೈಸರ್ಗಿಕ ವಿಜ್ಞಾನದ ಬಗ್ಗೆ ಸ್ವಲ್ಪ ಮಟ್ಟಿಗೆ ಹೇಳಿರಬಹುದು. ಅದರಲ್ಲಿ ಖಗೋಳಶಾಸ್ತ್ರ, ಜೀವಶಾಸ್ತ್ರ, ಭೂವಿಜ್ಞಾನ, ಭೌತಶಾಸ್ತ್ರ ಇದ್ದಿರಬಹುದು. ಮುಖ್ಯವಾಗಿ ಹೇಳೋದ್ದಾದ್ರೆ ಯೋಬ ಇದ್ದ ಸ್ಥಳದಲ್ಲೇ ವಾಸಿಸ್ತಿದ್ದ ಕೆಲವೊಂದು ಪ್ರಾಣಿ-ಪಕ್ಷಿಗಳ ಬಗ್ಗೆ ಯೆಹೋವ ಹೇಳಿದನು. ಅದು ಯಾವುದಂದ್ರೆ, ಸಿಂಹ, ಕಾಗೆ, ಬೆಟ್ಟದ ಮೇಕೆ, ಕಾಡುಕತ್ತೆ, ಕಾಡುಕೋಣ, ಉಷ್ಟ್ರಪಕ್ಷಿ, ಕುದುರೆ, ಗಿಡಗ, ಹದ್ದು, ಬೆಹೇಮೋತ್‌ (ನೀರಾನೆ ಇದ್ದಿರಬಹುದು), ಲಿವ್ಯಾತಾನ್‌ (ಮೋಸಳೆ ಇದ್ದಿರಬಹುದು.) ವಿಶ್ವವನೇ ಸೃಷ್ಟಿ ಮಾಡಿದ ದೇವರು ಕಾಲೇಜ್‌ ಲೆಕ್ಚರ್‌ ತರ ನೈಸರ್ಗಿಕ ವಿಷ್ಯಗಳ ಬಗ್ಗೆ ಪಾಠ ಮಾಡುವಾಗ ಕೇಳಿಸಿಕೊಳ್ಳೋದು ಎಂಥ ದೊಡ್ಡ ಸುಯೋಗ ಆಗಿದ್ದಿರಬಹುದು ಅಂತ ಚಿತ್ರಿಸ್ಕೊಳ್ಳಿ! *

ದೀನತೆ ಮತ್ತು ಪ್ರೀತಿಯ ಬಗ್ಗೆ ಪಾಠ

ಈ ಎರಡು ಗುಣಗಳ ಬಗ್ಗೆ ಯೋಬನಿಗೆ ಯೆಹೋವ ಏನ್‌ ಹೇಳಬೇಕಂತ್ತಿದ್ದಾನೆ? ಯೋಬ ಇನ್ನೂ ದೀನತೆ ಬೆಳೆಸಿಕೊಳ್ಳೋ ಅಗತ್ಯ ಇತ್ತು. ಯೆಹೋವ ತನ್ನ ಜೊತೆ ನ್ಯಾಯವಾಗಿ ನಡ್ಕೊಳ್ಳಿಲ್ಲ ಅಂತ ಯೋಬ ದೂರುತ್ತಿದ್ದಾನೆ. ಯೋಬ ಹೀಗೆ ಮಾಡೋದ್ರಿಂದ ತನ್ನ ಪ್ರೀತಿಯ ತಂದೆಯೊಟ್ಟಿಗಿನ ಸಂಬಂಧವನ್ನ ಹಾಳು ಮಾಡ್ಕೊಳ್ತಿದ್ದಾನೆ. ಇದ್ರಿಂದ ಅವನು ಇನ್ನಷ್ಟು ಕಷ್ಟದಲ್ಲಿ ಬೀಳ್ತಿದ್ದಾನೆ. ಹಾಗಾಗಿ ಯೆಹೋವ, ‘ನಾನು ವಿಶ್ವದಲ್ಲಿರೋ ಎಲ್ಲ ಅದ್ಭುತವಾದ ಸೃಷ್ಟಿಯನ್ನು ಮಾಡುವಾಗ ನೀನು ಎಲ್ಲಿದ್ದಿ? ನಾನು ಮಾಡಿದ ಜೀವಿಗಳಿಗೆ ನೀನು ಆಹಾರ ಕೊಟ್ಟು ಪೋಷಿಸಬಹುದಾ? ಅವುಗಳನ್ನ ನಿನ್ನ ಹಿಡಿತದಲ್ಲಿ ಇಟ್ಕೊಳ್ಳಬಹುದಾ?’ ಅಂತ ಪದೇ-ಪದೇ ಯೋಬನಿಗೆ ಕೇಳಿದ. ಯೋಬನಿಗೆ ಯೆಹೋವ ಮಾಡಿರೋ ಸೃಷ್ಟಿಯನ್ನ ನಿಯಂತ್ರಿಸೋ ಸಾಮರ್ಥ್ಯನೇ ಇಲ್ಲ, ಅಂದ್ಮೇಲೆ ಸೃಷ್ಟಿ ಮಾಡಿದವನಿಗೆ ಏನು ಮಾಡಬೇಕಂತ ಹೇಳೋ ಹಕ್ಕು ತನಗಿದೆ ಅಂತ ಅವನು ಹೇಗೆ ಯೋಚಿಸೋಕೆ ಸಾಧ್ಯ? ಏನು ಮಾಡಬೇಕು ಹೇಗೆ ಮಾಡಬೇಕು ಅನ್ನೋದು ಯೋಬನಿಗಿಂತ ಯೆಹೋವನಿಗೆ ಸಾವಿರ ಪಟ್ಟು ಹೆಚ್ಚು ಗೊತ್ತು!

ಯೋಬ ವಾದ ಮಾಡಲಿಲ್ಲ, ತಾನೇ ಸರಿ ಎಂದು ಹೇಳಲಿಲ್ಲ.

ಯೆಹೋವ ಹೇಳಿದ ಪ್ರತಿಯೊಂದು ಮಾತಿನಲ್ಲೂ ಆತನಿಗೆ ಯೋಬನ ಮೇಲಿರೋ ಪ್ರೀತಿ ಎದ್ದು ಕಾಣ್ತಿತ್ತು. ಆತನು ಯೋಬನಿಗೆ ಹೀಗೆ ಕೇಳಿದನು: ‘ಮಗ, ನಾನು ಇದನ್ನೆಲ್ಲ ಸೃಷ್ಟಿ ಮಾಡಿ ನೋಡಿಕೊಳ್ತಿದ್ದೀನಿ, ಅಂದ್ಮೇಲೆ ನಾನು ನಿನ್ನನ್ನು ನೋಡಿಕೊಳ್ಳಲ್ವಾ? ನಾನು ನಿನ್ನ ಕೈ ಬಿಟ್ಟುಬಿಡ್ತೀನಾ? ನಿನ್ನ ಮಕ್ಕಳನ್ನ, ನಿನ್ನ ಆಸ್ತಿಪಾಸ್ತಿಯನ್ನ ಕಿತ್ತುಕೊಳ್ತಿನಾ? ನಿನ್ನ ಆರೋಗ್ಯನ ಹಾಳು ಮಾಡ್ತಿನಾ? ನಿನಗಾಗಿರೋ ನಷ್ಟವನ್ನ ಸರಿಪಡಿಸೋದು, ನಿನ್ನ ನೋವನ್ನ ವಾಸಿಮಾಡೋದು ನಾನೇ ಅಲ್ಲವಾ?’

ಯೆಹೋವ ಯೋಬನಿಗೆ ಯೋಚನೆ ಮಾಡೋಕೆ ಕೇಳಿದ ಪ್ರಶ್ನೆಗಳಿಗೆ ಅವನು ಎರಡು ಸಲ ಮಾತ್ರ ಉತ್ರ ಕೊಟ್ಟ. ಅವನು ವಾದ ಮಾಡಲಿಲ್ಲ, ತಾನೇ ಸರಿ ಎಂದು ಹೇಳಲಿಲ್ಲ. ತನಗೆ ಸ್ವಲ್ಪನೇ ಗೊತ್ತು ಅಂತ ದೀನತೆಯಿಂದ ಒಪ್ಪಿಕೊಂಡ ಮತ್ತು ದುಡುಕಿ ಮಾತಾಡಿದಕ್ಕೆ ಪಶ್ಚಾತ್ತಾಪಪಟ್ಟ. (ಯೋಬ 40:4, 5; 42:1-6) ಇಲ್ಲಿ ನಂಬಿಕೆ ವಿಷ್ಯದಲ್ಲಿ ಯೋಬ ತೋರಿಸಿದ ಒಳ್ಳೇ ಮಾದರಿಯನ್ನ ನಾವು ನೋಡಬಹುದು. ಅವನಿಗೆ ಇಷ್ಟೆಲ್ಲ ಕಷ್ಟಗಳು ಬಂದ್ರು ಯೆಹೋವನ ಮೇಲಿನ ನಂಬಿಕೆ ಕಳಕೊಳ್ಳಲಿಲ್ಲ. ಯೆಹೋವ ಅವನನ್ನು ತಿದ್ದಿದಾಗ ತನ್ನನ್ನು ಸರಿಪಡಿಸಿಕೊಂಡ ಮತ್ತು ತನ್ನ ಮನೋಭಾವವನ್ನ ಬದಲಾಯಿಸಿಕೊಂಡ. ಈ ಮುಂದಿನ ಪ್ರಶ್ನೆ ಬಗ್ಗೆ ನಾವು ಯೋಚನೆ ಮಾಡಬೇಕು: ‘ನನಗೆ ತಿದ್ದುಪಾಟು, ಸಲಹೆ ಸಿಕ್ಕಿದಾಗ ಅದನ್ನು ಸ್ವೀಕರಿಸುವಷ್ಟು ದೀನತೆ ನನಗೆ ಇದ್ಯಾ?’ ನಮಗೆಲ್ಲರಿಗೂ ಸಹಾಯ ಬೇಕೇಬೇಕು. ನಾವದನ್ನ ಸ್ವೀಕರಿಸಿದರೆ ಯೋಬ ತೋರಿಸಿದ ನಂಬಿಕೆಯನ್ನ ಅನುಕರಿಸಿದ ಹಾಗೆ ಆಗುತ್ತೆ.

“ನನ್ನ ವಿಷಯವಾಗಿ ಯಥಾರ್ಥವಾಗಿ ನೀವು ಮಾತಾಡಲಿಲ್ಲ”

ಯೋಬನನ್ನ ಸಮಾಧಾನ ಮಾಡೋಕ್ಕೆ ಯೆಹೋವ ಮುಂದಾಗ್ತಾನೆ. ಆ ಮೂವರು ಸುಳ್ಳು ಸ್ನೇಹಿತರಲ್ಲಿ ದೊಡ್ಡವನಾದ ಎಲೀಫಜನಿಗೆ ಯೆಹೋವ ಹೀಗಂದನು: “ನಿನ್ನ ಮೇಲೆಯೂ ನಿನ್ನ ಇಬ್ಬರು ಸ್ನೇಹಿತರ ಮೇಲೆಯೂ ಕೋಪಗೊಂಡಿದ್ದೇನೆ; ನನ್ನ ದಾಸನಾದ ಯೋಬನು ನನ್ನ ವಿಷಯವಾಗಿ ಯಥಾರ್ಥವನ್ನಾಡಿದಂತೆ ನೀವು ಆಡಲಿಲ್ಲ.” (ಯೋಬ 42:7) ಈ ಮಾತುಗಳ ಬಗ್ಗೆ ಯೋಚಿಸಿ. ಆ ಮೂವರು ಸ್ನೇಹಿತರು ಹೇಳಿದ್ದೆಲ್ಲ ಸುಳ್ಳು, ಯೋಬ ಹೇಳಿದ್ದೆಲ್ಲ ಸತ್ಯ ಅಂತ ಯೆಹೋವ ಹೇಳ್ತಿದ್ದಾನಾ? ಖಂಡಿತ ಇಲ್ಲ. * ಆದ್ರೆ ಯೋಬನಿಗೂ, ಅವನನ್ನ ದೂರುತ್ತಾ ಇದ್ದವರಿಗೂ ವ್ಯತ್ಯಾಸ ಅಂತೂ ಇತ್ತು. ಸುಳ್ಳಾರೋಪಗಳಿಂದ, ಕಠಿಣ ಮಾತುಗಳಿಂದ ಯೋಬನ ಮನಸ್ಸಿಗೆ ತುಂಬ ನೋವಾಯಿತು. ಅದಕ್ಕೆ ಕೆಲವೊಂದು ಸಲ, ಯೋಬ ದುಡುಕಿ ಮಾತಾಡಿದ ಅಂತ ನಮಗೆ ಅರ್ಥ ಆಗುತ್ತೆ. ಯೋಬನಿಗೆ ಬಂದ ಕಷ್ಟ ಎಲೀಫಜ ಮತ್ತು ಅವನ ಇಬ್ಬರು ಸ್ನೇಹಿತರಿಗೆ ಬರಲಿಲ್ಲ. ಅವರಿಗೆ ದೇವರ ಮೇಲೆ ಅಷ್ಟು ನಂಬಿಕೆ ಇರಲಿಲ್ಲ. ಹಾಗಾಗಿ ಅವರು ಸೊಕ್ಕಿನಿಂದ ಮನಸ್ಸಿಗೆ ಬಂದ ಹಾಗೆ ಮಾತಾಡಿದ್ರು. ಅವರು ಒಬ್ಬ ಅಮಾಯಕನನ್ನು ನುಂಗಿಹಾಕಲು ಪ್ರಯತ್ನಿಸಿದ್ದು ಮಾತ್ರ ಅಲ್ಲ ಯೆಹೋವ ದೇವರಿಗೆ ಕರುಣೆ ಇಲ್ಲ, ಆತನು ದುಷ್ಟ ಅನ್ನೋ ರೀತಿ ಕಣ್ಣಿಗೆ ಕಟ್ಟುವಂತೆ ಚಿತ್ರಿಸಿದ್ರು. ಇದು ಅವರು ಮಾಡಿದ ದೊಡ್ಡ ತಪ್ಪು.

ಹಾಗಾಗಿ ಯೆಹೋವ ಆ ಮೂವರಿಗೆ ಬೆಲೆಬಾಳುವ ಯಜ್ಞ ಅರ್ಪಿಸೋಕೆ ಕೇಳಿಕೊಂಡದ್ದು ನ್ಯಾಯನೇ. ಅವರು ಏಳು ಹೋರಿ, ಏಳು ಕುರಿಗಳನ್ನ ಅರ್ಪಿಸಬೇಕಿತ್ತು. ಅದಕ್ಕೆ ತುಂಬ ಖರ್ಚಾಗ್ತಿತ್ತು. ಕಾಲಾನಂತರ ಮೋಶೆ ಧರ್ಮಶಾಸ್ತ್ರದಲ್ಲಿ ಇದೇ ತರದ ಒಂದು ನಿಯಮ ಬಂತು. ಮಹಾ ಯಾಜಕ ಮಾಡಿದ ಪಾಪದಿಂದ ಇಡೀ ದೇಶಕ್ಕೆ ದೋಷ ಬಂದರೆ ಅವನು ಹೋರಿಯನ್ನ ಅರ್ಪಿಸಬೇಕೆಂದು ಆ ನಿಯಮ ಹೇಳ್ತು. (ಯಾಜಕಕಾಂಡ 4:3) ಧರ್ಮಶಾಸ್ತ್ರದ ಪ್ರಕಾರ ಈ ಪ್ರಾಣಿ ಯಜ್ಞ ತುಂಬ ದುಬಾರಿ ಆಗಿತ್ತು. ಇನ್ನೊಂದು ವಿಷ್ಯ ಏನಂದ್ರೆ, ದೂರಿದ ಆ ಮೂವರಿಗಾಗಿ ಯೋಬ ಪ್ರಾರ್ಥಿಸಿದ್ರೆ ಮಾತ್ರ ಯೆಹೋವ ಅವರ ಆ ಯಜ್ಞವನ್ನ ಸ್ವೀಕರಿಸ್ತೀನಿ ಅಂತ ಹೇಳಿದನು. * (ಯೋಬ 42:8) ಯೋಬನನ್ನ ತಪ್ಪು ಇಲ್ಲದವನು ಅಂತ ಯೆಹೋವ ದೇವರೇ ಹೇಳಿದಾಗ, ದೇವರ ನ್ಯಾಯ ಸ್ಪಷ್ಟವಾಗಿ ಕಾಣಿಸಿದ್ದಾಗ ಯೋಬನ ಮನಸ್ಸಿಗೆ ಎಷ್ಟು ನೆಮ್ಮದಿ ಆಗಿರಬೇಕಲ್ವಾ!

“ನನ್ನ ದಾಸನಾದ ಯೋಬನು ನಿಮ್ಮ ಪಕ್ಷವಾಗಿ ಪ್ರಾರ್ಥನೆ ಮಾಡುವನು.”—ಯೋಬ 42:8.

ತುಂಬ ನೋವು ಮಾಡಿದ ಆ ಮೂವರನ್ನ ಯೋಬ ಕ್ಷಮಿಸ್ತಾನೆ ಅಂತ ಯೆಹೋವನಿಗೆ ಪೂರ್ಣ ನಂಬಿಕೆ ಇತ್ತು. ತನ್ನ ತಂದೆ ತನ್ನ ಮೇಲಿಟ್ಟ ನಂಬಿಕೆಯನ್ನ ಯೋಬ ಉಳಿಸ್ಕೊಂಡ. (ಯೋಬ 42:9) ಯೋಬ ಯೆಹೋವನಿಗೆ ನಿಷ್ಠೆಯಿಂದ ಇದ್ದಾನೆ ಅಂತ ತನ್ನ ಮಾತಿಗಿಂತ ಹೆಚ್ಚಾಗಿ ಕ್ರಿಯೆಯಲ್ಲಿ ತೋರಿಸಿದ. ಯೋಬ ವಿಧೇಯತೆ ತೋರಿಸಿದ್ರಿಂದ ಯೆಹೋವನು ಅವನನ್ನ ಹೇರಳವಾಗಿ ಆಶೀರ್ವದಿಸಿದನು.

“ಕೋಮಲ ಮಮತೆಯುಳ್ಳವನು”

ಯೆಹೋವನು ಯೋಬನಿಗೆ ‘ಕೋಮಲವಾದ ಮಮತೆಯನ್ನ ಕರುಣೆಯನ್ನ’ ತೋರಿಸಿದನು. (ಯಾಕೋಬ 5:11) ಹೇಗೆ? ಯೆಹೋವನು ಯೋಬನ ಆರೋಗ್ಯವನ್ನ ಗುಣಪಡಿಸಿದನು. ಈ ಹಿಂದೆ ಎಲೀಹು ಹೇಳಿದ ಹಾಗೆ ತನ್ನ “ದೇಹವು ಬಾಲ್ಯಕ್ಕಿಂತಲೂ ಕೋಮಲ” ಆಗಿರೋದನ್ನ ಯೋಬ ನೋಡಿದಾಗ ಅವನಿಗೆ ಹೇಗನಿಸಿರಬೇಕು ಅಂತ ಊಹಿಸಿ ನೋಡಿ! ಕೊನೆಗೂ ಯೋಬನ ಕುಟುಂಬದವರು, ಸ್ನೇಹಿತರು ಅವನಿಗೆ ಬೇಕಾದ ಸಹಾನುಭೂತಿಯನ್ನ ತೋರಿಸಿದ್ರು, ಉಡುಗೊರೆಗಳನ್ನ ಕೊಟ್ರು. ಯೆಹೋವ ಯೋಬನಿಗೆ ಈ ಹಿಂದೆ ಇದ್ದದಕ್ಕಿಂತ ಎರಡು ಪಟ್ಟು ಹೆಚ್ಚು ಆಸ್ತಿ-ಪಾಸ್ತಿಯನ್ನ ಕೊಟ್ಟನು. ಅವನ ಜೀವನದಲ್ಲಿ ಮರಿಯೋಕೆ ಸಾಧ್ಯ ಇಲ್ಲದ ಮಕ್ಕಳನ್ನ ಕಳ್ಕೊಂಡ ನೋವಿಂದ ಹೊರಬರೋಕೆ ಯೆಹೋವ ಹೇಗೆ ಸಹಾಯ ಮಾಡಿದನು? ಯೋಬ ಮತ್ತು ಅವನ ಹೆಂಡತಿಗೆ 10 ಮಕ್ಕಳು ಆದಾಗ ಅವ್ರಿಗೆ ಸ್ವಲ್ಪ ಸಮಾಧಾನ ಆಯ್ತು. ಅಷ್ಟೇ ಅಲ್ಲ, ಯೆಹೋವನು ಯೋಬನ ವಯಸ್ಸನ್ನ ಅದ್ಭುತಕರವಾಗಿ ಹೆಚ್ಚಿಸಿದನು. ಇದಾದ್ಮೇಲೆ ಯೋಬ 140ಕ್ಕಿಂತ ಹೆಚ್ಚು ವರ್ಷ ಬದುಕಿದ. ತನ್ನ ಸಂತಾನದ ನಾಲ್ಕು ತಲೆಮಾರುಗಳನ್ನ ನೋಡಿದ. ಕೊನೆಗೆ, “ಯೋಬ ತುಂಬ ವರ್ಷ ಸಂತೋಷ ತೃಪ್ತಿಯಿಂದ ಬದುಕಿ ತೀರಿಹೋದ” ಅಂತ ಬೈಬಲಿನಲ್ಲಿ ನೋಡ್ತೀವಿ. (ಯೋಬ 42:10-17) ಮುಂದೆ ಪರದೈಸಲ್ಲಿ ಯೋಬ, ಅವನ ಪ್ರಿಯ ಹೆಂಡತಿ ಮತ್ತು ಅವನ ಕುಟುಂಬ ಪುನಃ ಒಂದಾಗಲ್ಲಿದ್ದಾರೆ. ಆಗ ಸೈತಾನ ಕಿತ್ತುಕೊಂಡ ಆ 10 ಮಕ್ಕಳು ಸಹ ಅವ್ರ ಜೊತೆ ಸೇರಲ್ಲಿದ್ದಾರೆ.—ಯೋಹಾನ 5:28, 29.

ಯೆಹೋವ ಯೋಬನನ್ನ ಅಷ್ಟು ಸಮೃದ್ಧವಾಗಿ ಆಶೀರ್ವದಿಸೋಕೆ ಕಾರಣ ಏನು? “ನೀವು ಯೋಬನ ತಾಳ್ಮೆಯ ಕುರಿತು ಕೇಳಿಸಿಕೊಂಡಿದ್ದೀರಿ” ಅಂತ ಬೈಬಲ್‌ ಹೇಳುತ್ತೆ. (ಯಾಕೋಬ 5:11) ನಮ್ಮಲ್ಲಿ ಹೆಚ್ಚಿನವರು ಊಹಿಸಿಕೊಳ್ಳೋಕೆ ಸಾಧ್ಯವಿಲ್ಲದಷ್ಟು ಕಷ್ಟಸಂಕಟಗಳನ್ನ ಯೋಬ ತಾಳಿಕೊಂಡ. ಇಲ್ಲಿ “ತಾಳ್ಮೆ” ಅನ್ನೋ ಪದ ಯೋಬ ಸುಮ್ಮನೆ ಇದನ್ನೆಲ್ಲ ಸಹಿಸ್ಕೊಳ್ಳೋದಕ್ಕಿಂತ ಹೆಚ್ಚಿನದನ್ನ ಮಾಡಿದ ಅಂತ ತೋರಿಸಿಕೊಡುತ್ತೆ. ಅವನಿಗೆ ಯೆಹೋವನ ಮೇಲೆ ಪ್ರೀತಿ ಮತ್ತು ನಂಬಿಕೆ ಇದಿದ್ರಿಂದ ಈ ರೀತಿ ತಾಳಿಕೊಳ್ಳೋಕೆ ಆಯ್ತು. ಬೇಕುಬೇಕೆಂದು ನೋವು ಮಾಡಿದವ್ರ ಮೇಲೆ ಸಿಟ್ಟಿಂದ ಸೇಡು ತೋರಿಸೋಕೆ ಹೋಗದೆ ಅವರನ್ನ ಮನಸ್ಸಾರೆ ಕ್ಷಮಿಸೋಕೆ ಅವನು ಸಿದ್ಧನಿದ್ದ. ಅವನು ತನಗೆ ಅಮೂಲ್ಯವಾಗಿದ್ದ ನಿರೀಕ್ಷೆಯನ್ನ ಎಂದಿಗೂ ಬಿಟ್ಟುಕೊಟ್ಟಿಲ್ಲ. ತನ್ನ ದೃಷ್ಟಿಯಲ್ಲಿ ಯಾವಾಗ್ಲೂ ಬೆಲೆಬಾಳುವ ಒಂದು ವಿಷ್ಯವನ್ನ ಅಂದ್ರೆ ದೇವರಿಗೆ ಕೊಡೋ ನಿಷ್ಠೆಯನ್ನ ಬಲವಾಗಿ ಹಿಡ್ಕೊಂಡ.—ಯೋಬ 27:5.

ನಮ್ಮೆಲ್ಲರಿಗೂ ತಾಳ್ಮೆ ಇರಲೇಬೇಕು. ಸೈತಾನ ಯೋಬನಿಗೆ ಮಾಡಿದಂತೆ ನಮಗೂ ನಿರುತ್ಸಾಹ ಪಡಿಸ್ತಾನೆ. ಒಂದುವೇಳೆ ನಾವು ನಂಬಿಕೆಯಿಂದ ತಾಳಿಕೊಂಡ್ರೆ, ದೀನತೆ ತೋರಿಸಿದ್ರೆ, ಬೇರೆಯವರನ್ನ ಕ್ಷಮಿಸೋಕೆ ಮುಂದಾದ್ರೆ, ನಮ್ಮ ನಿಯತ್ತನ್ನ ಬಿಟ್ಟುಕೊಡದೆ ಇದ್ರೆ ನಮಗೂ ಮುಂದೆ ಸುಂದರವಾದ ಭವಿಷ್ಯ ಇದೆ ಅಂತ ನಮಗೆ ಗೊತ್ತು. (ಇಬ್ರಿಯ 10:36) ನಾವು ಯೋಬನ ತರ ನಂಬಿಗಸ್ತರಾಗಿ ಉಳಿದ್ರೆ ಸೈತಾನನಿಗೆ ತುಂಬ ಕೋಪ ಬರುತ್ತೆ. ಆದ್ರೆ ನಮ್ಮನ್ನ ಪ್ರೀತಿಸೋ ಯೆಹೋವನಿಗೆ ತುಂಬ ಸಂತೋಷ ಆಗುತ್ತೆ!

^ ಪ್ಯಾರ. 9 ಎಲೀಫಜ, ಬಿಲ್ದದ ಮತ್ತು ಚೋಫರ ಯೋಬನ ಜೊತೆ ತುಂಬ ಹೊತ್ತು ಮಾತಾಡಿದ್ರು. ಆ ಮಾತುಗಳನ್ನ ಬೈಬಲಿನಲ್ಲಿ ಬರಿಯೋಕೆ ಒಂಬತ್ತು ಅಧ್ಯಾಯಗಳು ಬೇಕಿತ್ತು. ಆದ್ರೆ ಅಲ್ಲೆಲ್ಲು ಅವರು ಒಂದೇ ಒಂದು ಸಲ ಯೋಬನ ಹೆಸ್ರನ್ನ ಹೇಳಿ ಮಾತಾಡಲಿಲ್ಲ.

^ ಪ್ಯಾರ. 19 ಯೆಹೋವ ಯೋಬನ ಜೊತೆ ಮಾತಾಡ್ವಾಗ ಕೆಲವೊಂದು ಸಲ ಅಕ್ಷರಾರ್ಥಕವಾಗಿ, ಕೆಲವೊಂದು ಸಲ ಕಾವ್ಯಾತ್ಮಕವಾಗಿ ಮಾತಾಡಿದ್ದಾನೆ. ಇದು ಎಷ್ಟು ಚೆನ್ನಾಗಿ ಇದೆ ಅಂದ್ರೆ ಯೆಹೋವ ಯೋಬನಿಗೆ ತಿಳಿಸುವಾಗ ಈ ರೀತಿ ಬೇರೆ-ಬೇರೆ ವಿಧಾನಗಳನ್ನ ಬಳಸಿದ್ದಾನೆ ಅನ್ನೋದನ್ನ ಗುರುತಿಸೋಕೆ ಆಗಲ್ಲ. (ಉದಾಹರಣೆಗೆ, ಯೋಬ 41:1, 7, 8, 19-21 ನೋಡಿ.) ವಿಧಾನ ಏನೇ ಇರಲಿ ಯೋಬ ತನ್ನನ್ನು ಸೃಷ್ಟಿ ಮಾಡಿದವನ ಬಗ್ಗೆ ಚೆನ್ನಾಗಿ ತಿಳ್ಕೊಳ್ಳೋಕೆ ಸಹಾಯ ಮಾಡಬೇಕು ಅನ್ನೋದೇ ಯೆಹೋವನ ಉದ್ದೇಶವಾಗಿತ್ತು.

^ ಪ್ಯಾರ. 25 ಎಲೀಫಜ ಹೇಳಿದ ಒಂದು ಮಾತು ಸತ್ಯ ಅಂತ ಅಪೊಸ್ತಲ ಪೌಲ ಹೇಳಿದನು. (ಯೋಬ 5:13; 1 ಕೊರಿಂಥ 3:19) ಹೌದು, ಎಲೀಫಜ ಹೇಳಿದ್ದು ಸತ್ಯನೇ. ಆದ್ರೆ ಅವನು ಅದನ್ನ ಯೋಬನಿಗೆ ತಪ್ಪಾಗಿ ಅನ್ವಯಿಸಿದ.

^ ಪ್ಯಾರ. 26 ಯೋಬ ತನ್ನ ಹೆಂಡತಿಗೋಸ್ಕರ ಇದೇ ರೀತಿಯ ಯಜ್ಞವನ್ನ ಅರ್ಪಿಸಬೇಕಿತ್ತು ಅನ್ನೋ ರುಜುವಾತು ಬೈಬಲ್‌ನಲ್ಲಿ ಎಲ್ಲಿಯೂ ಇಲ್ಲ.