ಮಾಹಿತಿ ಇರುವಲ್ಲಿ ಹೋಗಲು

ದೇವರು ಇದ್ದಾನಾ?

ದೇವರು ಇದ್ದಾನಾ?

ಬೈಬಲ್‌ ಕೊಡೋ ಉತ್ತರ

 ಹೌದು. ದೇವರು ಇದ್ದಾನೆ ಅನ್ನೋದಕ್ಕೆ ಬಲವಾದ ಆಧಾರನ ಬೈಬಲ್‌ ಕೊಡುತ್ತೆ. ಧರ್ಮಗಳು ಹೇಳೋದನ್ನೆಲ್ಲಾ ಕಣ್ಮುಚ್ಚಿ ನಂಬಬೇಕು ಅಂತ ಬೈಬಲ್‌ ಹೇಳಲ್ಲ, ಬದಲಿಗೆ “ಯೋಚನಾ ಸಾಮರ್ಥ್ಯವನ್ನ” ಮತ್ತು “ತಿಳುವಳಿಕೆ” ಉಪಯೋಗಿಸಿ ದೇವರ ಮೇಲೆ ನಂಬಿಕೆ ಬೆಳೆಸಿಕೊಳ್ಳಬೇಕು ಅಂತ ಬೈಬಲ್‌ ಹೇಳುತ್ತೆ. (ರೋಮನ್ನರಿಗೆ 12:1; 1 ಯೋಹಾನ 5:20) ದೇವರು ಇದ್ದಾನೆ ಅನ್ನೋದಕ್ಕೆ ಬೈಬಲ್‌ ಆಧಾರಿತ ಕಾರಣಗಳನ್ನ ಗಮನಿಸಿ:

  •   ವಿಶ್ವದಲ್ಲಿರೋ ಎಲ್ಲಾ ವಸ್ತುಗಳು ಅಚ್ಚುಕಟ್ಟಾಗಿ ಇರೋದೆ ತೋರಿಸಿಕೊಡುತ್ತೆ ಒಬ್ಬ ಸೃಷ್ಟಿಕರ್ತ ಇದ್ದಾನೆ ಅಂತ. “ನಿಜ ಹೇಳಬೇಕಂದ್ರೆ, ಪ್ರತಿಯೊಂದು ಮನೆಯನ್ನ ಯಾರಾದ್ರೂ ಒಬ್ರು ಕಟ್ಟಿರ್ತಾರೆ. ಆದ್ರೆ ಎಲ್ಲವನ್ನೂ ಸೃಷ್ಟಿಸಿದ್ದು ದೇವರೇ” ಅಂತ ಬೈಬಲ್‌ ಹೇಳುತ್ತೆ. (ಇಬ್ರಿಯ 3:4) ಈ ವಚನದಲ್ಲಿ ಹೇಳಿರೋ ಕಾರಣ ತುಂಬಾ ಸರಳ ಅಂತ ಅನಿಸಬಹುದು. ಆದ್ರೆ ತುಂಬಾ ಓದಿರೋರು ಕೂಡ ಇದ್ರ ಬಗ್ಗೆ ಯೋಚ್ನೆ ಮಾಡೋ ತರ ಮಾಡುತ್ತೆ. a

  •   ಎಲ್ಲಾ ಮನುಷ್ಯರಿಗೆ ಶಾರೀರಿಕ ಅಗತ್ಯಗಳು ಹೇಗೆ ಇದೆಯೋ ಅದೇ ತರ ‘ನಾವು ಯಾಕೆ ಬಂದ್ವಿ, ನಮ್ಮ ಜೀವನ ಉದ್ದೇಶ ಏನು’ ಅಂತ ತಿಳ್ಕೊಳ್ಳೋ ಆಸೆನೂ ಇದೆ. ಈ ಆಸೆನ ಬೈಬಲ್‌ “ಆಧ್ಯಾತ್ಮಿಕ ಅಗತ್ಯದ ಪ್ರಜ್ಞೆ” ಅಂತ ಹೇಳುತ್ತೆ. ಅದ್ರಲ್ಲಿ ದೇವರ ಬಗ್ಗೆ ತಿಳ್ಕೊಳ್ಳೋದು ಮತ್ತು ಆತನನ್ನ ಆರಾಧನೆ ಮಾಡೋದು ಸೇರಿದೆ. (ಮತ್ತಾಯ 5:3; ಪ್ರಕಟನೆ 4:11) ನಮ್ಮಲ್ಲಿರೋ ಈ ಆಸೆ ದೇವರು ಇದ್ದಾನೆ ಅಂತ ತೋರಿಸುತ್ತೆ. ಅಷ್ಟೇ ಅಲ್ಲ, ಆ ಆಸೆನಾ ನಾವು ಪೂರೈಸಿಕೊಳ್ಳಬೇಕು ಅಂತ ಪ್ರೀತಿಯ ಸೃಷ್ಟಿಕರ್ತ ಇಷ್ಟಪಡ್ತಾನೆ ಅಂತ ಗೊತ್ತಾಗುತ್ತೆ.—ಮತ್ತಾಯ 4:4.

  •   ನೂರಾರು ವರ್ಷಗಳ ಹಿಂದೆ ಬರೆದಿರೋ ಅನೇಕ ಪ್ರವಾದನೆಗಳು ಬೈಬಲಿನಲ್ಲಿವೆ. ಅದ್ರಲ್ಲಿರೋ ಪ್ರತಿಯೊಂದು ಮಾತು ಚಾಚೂತಪ್ಪದೇ ನಡೆದಿದೆ. ಮನುಷ್ಯರು ಅದನ್ನ ಬರೆದಿದ್ರೆ ಅಷ್ಟು ನಿಖರವಾಗಿ ವಿಷ್ಯಗಳು ‘ಹೀಗೇ ನಡೆಯುತ್ತೆ’ ಅಂತ ಹೇಳೋಕೆ ಆಗ್ತಿರಲಿಲ್ಲ.—2 ಪೇತ್ರ 1:21.

  •   ಬೈಬಲನ್ನ ಬರೆದವರಿಗೆ ಆ ಕಾಲದಲ್ಲಿದ್ದ ವಿಜ್ಞಾನಿಗಳಿಗಿಂತ ಹೆಚ್ಚು ವೈಜ್ಞಾನಿಕ ಜ್ಞಾನ ಇತ್ತು. ಉದಾಹರಣೆಗೆ, ಹಿಂದಿನ ಕಾಲದಲ್ಲಿ ಭೂಮಿ ಆನೆ, ಹಂದಿ ಅಥವಾ ಎತ್ತಿನ ಮೇಲೆ ನಿಂತಿದೆ ಅಂತ ಜನ ನಂಬಿದ್ರು. ಆದ್ರೆ ಬೈಬಲ್‌, ದೇವರು “ಭೂಮಿಯನ್ನ ಯಾವ ಆಧಾರನೂ ಇಲ್ಲದೆ ತೂಗು ಹಾಕಿದ್ದಾನೆ” ಅಂತ ಹೇಳುತ್ತೆ. (ಯೋಬ 26:7) ಅಷ್ಟೇ ಅಲ್ಲ ಭೂಮಿ “ಗೋಳ” ಅಥವಾ “ವೃತ್ತ” ಆಕಾರದಲ್ಲಿ ಇದೆ ಅಂತ ಬೈಬಲ್‌ ಹೇಳುತ್ತೆ. (ಯೆಶಾಯ 40:22) ಬೈಬಲ್‌ ಬರೆದವರಿಗೆ ಈ ನಿಖರ ಮಾಹಿತಿ ಖಂಡಿತ ದೇವರಿಂದನೇ ಸಿಕ್ಕಿರಬಹುದು ಅಂತ ತುಂಬಾ ಜನ ನಂಬ್ತಾರೆ.

  •   ಬೈಬಲ್‌ ಅನೇಕ ಪ್ರಾಮುಖ್ಯ ಪ್ರಶ್ನೆಗಳಿಗೆ ಉತ್ರ ಕೊಡುತ್ತೆ. ಕೆಲವರು ಈ ಪ್ರಶ್ನೆಗಳಿಗೆ ಉತ್ರ ಸಿಕ್ಕಿಲ್ಲ ಅಂತ ದೇವರಲ್ಲಿ ನಂಬಿಕೆ ಇಡೋದನ್ನೇ ಬಿಟ್ಟುಬಿಟ್ಟಿದ್ದಾರೆ. ಉದಾಹರಣೆಗೆ, ತುಂಬಾ ಪ್ರೀತಿ ಮತ್ತು ಶಕ್ತಿ ಇರೋ ದೇವರು ಈ ಲೋಕದಲ್ಲಿ ಇಷ್ಟೊಂದು ಕಷ್ಟ ಇರೋಕೆ ಯಾಕೆ ಬಿಟ್ಟಿದ್ದಾನೆ? ಧರ್ಮಗಳು ಒಳ್ಳೇದು ಮಾಡೋ ಬದಲು ಯಾಕೆ ಕೆಟ್ಟದನ್ನ ಮಾಡ್ತಿವೆ?—ತೀತ 1:16.

a ಉದಾಹರಣೆ, ಖಗೋಳ ಶಾಸ್ತ್ರಜ್ಞ ಆಲೆನ್‌ ಸ್ಯಾನ್‌ಡಜ್‌ ವಿಶ್ವದ ಬಗ್ಗೆ ಒಂದು ಸಲ ಹೀಗೆ ಹೇಳಿದ್ರು, “ಇಡೀ ವಿಶ್ವ ಒಂದು ದೊಡ್ಡ ಸ್ಫೋಟದಿಂದ ಆಯ್ತು ಅನ್ನೋದನ್ನ ನಂಬೋಕೆ ಆಗಲ್ಲ. ಇದ್ರ ಹಿಂದೆ ಒಬ್ಬ ಬುದ್ಧಿವಂತ ಕೆಲ್ಸಗಾರ ಇದ್ದಾನೆ. ದೇವರು ಇದ್ದಾನೆ ಅನ್ನೋದೇ ನಂಗೆ ಅರ್ಥವಾಗದ ವಿಷ್ಯ. ಆದ್ರೂ ಸುತ್ತಮುತ್ತ ಇರೋ ವಿಷ್ಯಗಳನ್ನ ನೋಡೋವಾಗ ಆತನು ಇದ್ದಾನೆ ಅಂತ ಒಪ್ಕೊಳ್ಳಲೇಬೇಕು, ಬೇರೆ ದಾರಿ ಇಲ್ಲ.”