ಮಾಹಿತಿ ಇರುವಲ್ಲಿ ಹೋಗಲು

ಪ್ರಕಟನೆ 17ನೇ ಅಧ್ಯಾಯದಲ್ಲಿರೋ ಕೆಂಪು ಕಾಡುಪ್ರಾಣಿ ಯಾವುದನ್ನ ಸೂಚಿಸುತ್ತೆ?

ಪ್ರಕಟನೆ 17ನೇ ಅಧ್ಯಾಯದಲ್ಲಿರೋ ಕೆಂಪು ಕಾಡುಪ್ರಾಣಿ ಯಾವುದನ್ನ ಸೂಚಿಸುತ್ತೆ?

ಬೈಬಲ್‌ ಕೊಡೋ ಉತ್ತರ

 ಪ್ರಕಟನೆ 17ನೇ ಅಧ್ಯಾಯದಲ್ಲಿ ಹೇಳಿರೋ ಕೆಂಪು ಕಾಡುಪ್ರಾಣಿ, ಈ ಲೋಕದಲ್ಲಿರೋ ದೇಶಗಳನ್ನ ಪ್ರತಿನಿಧಿಸೋ ಮತ್ತು ಅವುಗಳನ್ನ ಒಂದು ಮಾಡೋ ಉದ್ದೇಶ ಇಟ್ಟುಕೊಂಡಿರೋ ಒಂದು ಸಂಘಟನೆಯನ್ನ ಸೂಚಿಸುತ್ತೆ. ಇದು ಮೊದಲು ರಾಷ್ಟ್ರಸಂಘವಾಗಿ ಹುಟ್ಟಿಕೊಳ್ತು. ಈಗ ವಿಶ್ವಸಂಸ್ಥೆಯಾಗಿದೆ.

ಕೆಂಪು ಕಾಡುಪ್ರಾಣಿಯನ್ನ ಪತ್ತೆಹಚ್ಚೋದು ಹೇಗೆ?

  1.   ಇದು ರಾಜಕೀಯ ಸಂಘಟನೆಯಾಗಿದೆ. ಈ ಕೆಂಪು ಕಾಡುಪ್ರಾಣಿಗೆ ‘ಏಳು ತಲೆಗಳಿವೆ.’ ಅವು “ಏಳು ಬೆಟ್ಟಗಳನ್ನ” ಮತ್ತು ‘ಏಳು ರಾಜರನ್ನ’ ಅಥವಾ ಲೋಕಶಕ್ತಿಗಳನ್ನು ಸೂಚಿಸುತ್ತೆ. (ಪ್ರಕಟನೆ 17:9, 10) ಬೈಬಲ್‌ನಲ್ಲಿ, ಸರ್ಕಾರಗಳನ್ನ ಸೂಚಿಸೋಕೆ ಬೆಟ್ಟಗಳು ಮತ್ತು ಕಾಡುಪ್ರಾಣಿಗಳನ್ನ ಬಳಸಲಾಗಿದೆ.—ಯೆರೆಮೀಯ 51:24, 25; ದಾನಿಯೇಲ 2:44, 45; 7:17, 23.

  2.   ಇದು ಭೂಮಿಯಲ್ಲಿರೋ ರಾಜಕೀಯ ವ್ಯವಸ್ಥೆಯ ತರಾನೇ ಇದೆ. ಪ್ರಕಟನೆ 13ನೇ ಅಧ್ಯಾಯದಲ್ಲಿ ಹೇಳಿರೋ ಏಳು ತಲೆಯಿರೋ ಕಾಡುಪ್ರಾಣಿ ಇಡೀ ಭೂಮಿಯಲ್ಲಿರೋ ರಾಜಕೀಯ ವ್ಯವಸ್ಥೆಯನ್ನ ಸೂಚಿಸುತ್ತೆ. ಕೆಂಪು ಬಣ್ಣದ ಕಾಡುಪ್ರಾಣಿ ನೋಡೋಕೆ ಇದರ ತರಾನೇ ಇದೆ. ಯಾಕಂದ್ರೆ ಎರಡೂ ಕಾಡುಪ್ರಾಣಿಗಳಿಗೂ ಏಳು ತಲೆ, ಹತ್ತು ಕೊಂಬಿದೆ ಮತ್ತು ಅವುಗಳ ಮೇಲೆ ದೇವರಿಗೆ ಅವಮಾನ ಮಾಡೋ ಹೆಸ್ರುಗಳು ಇವೆ. (ಪ್ರಕಟನೆ 13:1; 17:3) ಈ ಹೋಲಿಕೆಗಳು ಅದಾಗದೇ ಬಂದಿಲ್ಲ. ಈ ಕೆಂಪು ಕಾಡುಪ್ರಾಣಿ ಇಡೀ ಭೂಮಿಯಲ್ಲಿರೋ ರಾಜಕೀಯ ವ್ಯವಸ್ಥೆಯ ಮೂರ್ತಿಯಾಗಿದೆ ಅಥವಾ ಇದನ್ನ ಅದರ ತರಾನೇ ಮಾಡಲಾಗಿದೆ.—ಪ್ರಕಟನೆ 13:15.

  3.   ಇದಕ್ಕೆ ಅಧಿಕಾರ ಸಿಗೋದು ಬೇರೆ ಅಧಿಕಾರಿಗಳಿಂದ. ಈ ಕೆಂಪು ಕಾಡುಪ್ರಾಣಿ ಬೇರೆ ಅಧಿಕಾರಿಗಳಿಂದ “ಹುಟ್ಟುತ್ತೆ.” ಅಂದ್ರೆ ಬೇರೆಯವರು ಅಧಿಕಾರ ಕೊಟ್ಟಿದ್ರಿಂದನೇ ಇದು ಅಸ್ತಿತ್ವಕ್ಕೆ ಬಂತು.—ಪ್ರಕಟನೆ 17:11, 17.

  4.   ಇದಕ್ಕೂ ಧರ್ಮಕ್ಕೂ ಸಂಬಂಧ ಇದೆ. ಇಡೀ ಭೂಮಿಯಲ್ಲಿರೋ ಸುಳ್ಳು ಧರ್ಮಗಳು ಅಂದ್ರೆ ಮಹಾ ಬಾಬೆಲ್‌, ಈ ಕೆಂಪು ಕಾಡುಪ್ರಾಣಿಯ ಮೇಲೆ ಕೂತಿದ್ದಾಳೆ. ಇದರ ಅರ್ಥ ಆ ಕಾಡುಪ್ರಾಣಿಯ ಮೇಲೆ ಸುಳ್ಳು ಧರ್ಮಗಳು ಅಧಿಕಾರ ಚಲಾಯಿಸ್ತಿದೆ.—ಪ್ರಕಟನೆ 17:3-5.

  5.   ಇದು ದೇವರಿಗೆ ಅವಮಾನ ಮಾಡುತ್ತೆ. ಈ ಕಾಡುಪ್ರಾಣಿಯ ‘ಮೈತುಂಬ ದೇವರಿಗೆ ಅವಮಾನ ಮಾಡೋ ಹೆಸ್ರುಗಳಿದೆ.’—ಪ್ರಕಟನೆ 17:3.

  6.   ಇದು ಸ್ವಲ್ಪಕಾಲಕ್ಕೆ ನಿಷ್ಕ್ರಿಯವಾಗಿರುತ್ತೆ. ಈ ಕೆಂಪು ಕಾಡುಪ್ರಾಣಿ ಸ್ವಲ್ಪಕಾಲಕ್ಕೆ ‘ಅಗಾಧ ಸ್ಥಳದಲ್ಲಿರುತ್ತೆ’ a ಅಥವಾ ನಿಷ್ಕ್ರಿಯವಾಗಿರುತ್ತೆ. ಆಮೇಲೆ ಮತ್ತೆ ಬರುತ್ತೆ.—ಪ್ರಕಟನೆ 17:8.

ಬೈಬಲ್‌ ಭವಿಷ್ಯವಾಣಿ ನಿಜ ಆಯ್ತು!

 ಮುಂಚೆ ಇದ್ದ ರಾಷ್ಟ್ರಸಂಘ ಮತ್ತು ಈಗಿರೋ ವಿಶ್ವಸಂಸ್ಥೆ, ಕೆಂಪು ಕಾಡುಪ್ರಾಣಿಯ ಬಗ್ಗೆ ಬೈಬಲ್‌ ಹೇಳಿದ್ದ ಭವಿಷ್ಯವಾಣಿಯನ್ನ ಹೇಗೆ ನೆರವೇರಿಸಿತು ಅಂತ ನೋಡಿ.

  1.   ಇದು ರಾಜಕೀಯ ಸಂಘಟನೆಯಾಗಿದೆ. “ತನ್ನ ಸದಸ್ಯರ ಸಾರ್ವಭೌಮ ಸಮಾನತೆಯನ್ನು” ಎತ್ತಿಹಿಡಿಯುವ ಮೂಲಕ ವಿಶ್ವಸಂಸ್ಥೆಯು ರಾಜಕೀಯ ವ್ಯವಸ್ಥೆಗೆ ಬೆಂಬಲ ಕೊಡುತ್ತಿದೆ. b

  2.   ಇದು ಭೂಮಿಯಲ್ಲಿರೋ ರಾಜಕೀಯ ವ್ಯವಸ್ಥೆಯ ತರಾನೇ ಇದೆ. 2011ರಲ್ಲಿ ವಿಶ್ವಸಂಸ್ಥೆ ಒಂದು ದೇಶವನ್ನು 193ನೇ ಸದಸ್ಯ ರಾಷ್ಟ್ರವಾಗಿ ಸೇರಿಸಿಕೊಳ್ತು. ಹೀಗೆ ಇದು ಭೂಮಿಯಲ್ಲಿರೋ ಹೆಚ್ಚಿನ ದೇಶಗಳನ್ನ ಮತ್ತು ಜನರನ್ನ ಪ್ರತಿನಿಧಿಸುತ್ತಿದೆ ಎಂದು ಹೇಳಿಕೊಳ್ಳುತ್ತಿದೆ.

  3.   ಇದಕ್ಕೆ ಅಧಿಕಾರ ಸಿಗೋದು ಬೇರೆ ಅಧಿಕಾರಿಗಳಿಂದ. ವಿಶ್ವಸಂಸ್ಥೆ ಅದರ ಸದಸ್ಯ ರಾಷ್ಟ್ರಗಳಿಂದನೇ ಅಸ್ತಿತ್ವದಲ್ಲಿದೆ. ಆ ರಾಷ್ಟ್ರಗಳಿಂದನೇ ಇದಕ್ಕೆ ಅಧಿಕಾರ ಮತ್ತು ಶಕ್ತಿ ಸಿಗುತ್ತಿದೆ.

  4.   ಇದಕ್ಕೂ ಧರ್ಮಕ್ಕೂ ಸಂಬಂಧ ಇದೆ. ರಾಷ್ಟ್ರಸಂಘ ಮತ್ತು ವಿಶ್ವಸಂಸ್ಥೆಗೆ ಲೋಕದಲ್ಲಿರೋ ಧರ್ಮಗಳು ಇಲ್ಲಿ ತನಕ ಬೆಂಬಲ ಕೊಡ್ತಾ ಬಂದಿದೆ. c

  5.   ಇದು ದೇವರಿಗೆ ಅವಮಾನ ಮಾಡುತ್ತೆ. “ಅಂತಾರಾಷ್ಟ್ರೀಯ ಶಾಂತಿ ಮತ್ತು ಭದ್ರತೆಯನ್ನು ಕಾಪಾಡಲು” ಈ ವಿಶ್ವಸಂಸ್ಥೆಯನ್ನು ಸ್ಥಾಪಿಸಲಾಯಿತು. d ಇವರು ಒಳ್ಳೇ ಉದ್ದೇಶ ಇಟ್ಟುಕೊಂಡೇ ಇದನ್ನ ಮಾಡ್ತಿದ್ದಾರೆ ಅಂತ ನಮಗನಿಸಬಹುದು, ಆದ್ರೆ ಅವರು ದೇವರಿಗೆ ಅವಮಾನ ಮಾಡ್ತಾ ಇದ್ದಾರೆ. ಯಾಕಂದ್ರೆ ಭೂಮಿಯಲ್ಲಿ ಶಾಂತಿ ಮತ್ತು ಭದ್ರತೆಯನ್ನು ತರೋಕೆ ಆಗೋದು ತನ್ನ ಸರ್ಕಾರಕ್ಕೆ ಮಾತ್ರ ಅಂತ ದೇವರು ಹೇಳಿದ್ದಾನೆ.—ಕೀರ್ತನೆ 46:9; ದಾನಿಯೇಲ 2:44.

  6.   ಇದು ಸ್ವಲ್ಪಕಾಲಕ್ಕೆ ನಿಷ್ಕ್ರಿಯವಾಗಿರುತ್ತೆ. ಶಾಂತಿ ಕಾಪಾಡೋಕೆ ಅಂತ ಮೊದಲನೇ ಮಹಾ ಯುದ್ಧದ ನಂತರ ರಾಷ್ಟ್ರಸಂಘ ಸ್ಥಾಪನೆ ಆಯ್ತು. ಆದ್ರೆ ಇದಕ್ಕೆ ರಾಷ್ಟ್ರಗಳ ನಡುವೆ ನಡಿತಾ ಇರೋ ಕಿತ್ತಾಟಗಳನ್ನ ತಡೆಯೋಕೆ ಆಗ್ತಿಲ್ಲ. 1939ರಲ್ಲಿ ಎರಡನೇ ಮಹಾಯುದ್ಧ ಶುರುವಾದಾಗ ಈ ಸಂಘ ತನ್ನ ಕೆಲಸವನ್ನ ನಿಲ್ಲಿಸಿಬಿಡ್ತು, ಇದ್ರಿಂದ ಅದು ನಿಷ್ಕ್ರಿಯವಾಯ್ತು. ಆಮೇಲೆ 1945ರಲ್ಲಿ ಎರಡನೇ ಮಹಾಯುದ್ಧ ಕೊನೆಯಾದಾಗ ವಿಶ್ವಸಂಸ್ಥೆ ಸ್ಥಾಪನೆಯಾಯ್ತು. ಈ ವಿಶ್ವಸಂಸ್ಥೆಯ ಉದ್ದೇಶ, ಕೆಲಸವೆಲ್ಲಾ ರಾಷ್ಟ್ರಸಂಘದ ತರಾನೇ ಇದೆ.

a ವೈನ್ಸ್‌ ಎಕ್ಸ್‌ಪೊಸಿಟರಿ ಡಿಕ್ಷನೆರಿ ಆಫ್‌ ಓಲ್ಡ್‌ ಆ್ಯಂಡ್‌ ನ್ಯೂ ಟೆಸ್ಟಮೆಂಟ್‌ ವರ್ಡ್ಸ್‌ ಅನ್ನೋ ಪುಸ್ತಕದ ಪ್ರಕಾರ ಅಗಾಧ ಸ್ಥಳದ ಗ್ರೀಕ್‌ ಪದದ ಅರ್ಥ “ತುಂಬ ಆಳ” “ಊಹಿಸಕ್ಕೂ ಆಗದಷ್ಟು ಆಳ, ಕೊನೆ ಇಲ್ಲ” ಎಂದಾಗಿದೆ. ಕಿಂಗ್‌ ಜೇಮ್ಸ್‌ ವರ್ಷನ್‌ನಲ್ಲಿ ಈ ಪದವನ್ನ “ತಳವಿಲ್ಲದ ಹೊಂಡ” ಅಥವಾ “ಅಧೋಲೋಕ” ಅಂತ ಭಾಷಾಂತರಿಸಲಾಗಿದೆ. ಬೈಬಲ್‌ನಲ್ಲಿ ಈ ಪದ ಸೆರೆಯಲ್ಲಿ ಇರೋದಕ್ಕೆ ಅಥವಾ ಸೆರೆಯ ಸ್ಥಳವನ್ನ ಮತ್ತು ನಿಷ್ಕ್ರಿಯ ಸ್ಥಿತಿಗೆ ಸೂಚಿಸುತ್ತೆ.

b ವಿಶ್ವಸಂಸ್ಥೆಯ ಲಿಖಿತ ಸಂವಿಧಾನದ ಆರ್ಟಿಕಲ್‌ ಎರಡನ್ನು ನೋಡಿ.

c ಉದಾಹರಣೆಗೆ, 1918ರಲ್ಲಿ ಅಮೆರಿಕಾದ ಪ್ರಾಟೆಸ್ಟೆಂಟ್‌ ಪಂಗಡಗಳನ್ನ ಪ್ರತಿನಿಧಿಸಿದ ಕೌನ್ಸಿಲ್‌ ಈ “ಸಂಘವು ‘ಭೂಮಿಯ ಮೇಲೆ ದೇವರ ರಾಜ್ಯದ ರಾಜಕೀಯ ಅಭಿವ್ಯಕ್ತಿ’” ಅಂತ ಹೇಳಿತು. 1965ರಲ್ಲಿ ಬೌದ್ಧ ಧರ್ಮದವರು, ಕ್ಯಾಥೋಲಿಕ್‌ ಧರ್ಮದವರು, ಪ್ರಾಚ್ಯ ಸಂಪ್ರದಾಯದವರು, ಹಿಂದೂ, ಇಸ್ಲಾಮ್‌, ಯೆಹೂದಿ ಮತ್ತು ಪ್ರಾಟೆಸ್ಟೆಂಟ್‌ ಧರ್ಮದವರೆಲ್ಲ ವಿಶ್ವಸಂಸ್ಥೆಗೆ ಬೆಂಬಲ ಕೊಡೋಕೆ ಮತ್ತು ಅದಕ್ಕಾಗಿ ಪ್ರಾರ್ಥಿಸೋಕೆ ಸ್ಯಾನ್‌ ಫ್ರಾನ್ಸಿಸ್ಕೋದಲ್ಲಿ ಸೇರಿ ಬಂದರು. 1979ರಲ್ಲಿ 2ನೇ ಪೋಪ್‌ ಜಾನ್‌ ಪೌಲ್‌ ವಿಶ್ವಸಂಸ್ಥೆಯನ್ನು “ಸಾಮರಸ್ಯ ಹಾಗೂ ಶಾಂತಿಗಾಗಿರುವ ಅಂತಿಮ ನಿರೀಕ್ಷೆ” ಅಂತ ಹೇಳಿದನು.

d ವಿಶ್ವಸಂಸ್ಥೆಯ ಲಿಖಿತ ಸಂವಿಧಾನದ ಆರ್ಟಿಕಲ್‌ ಒಂದನ್ನು ನೋಡಿ.