ಮಾಹಿತಿ ಇರುವಲ್ಲಿ ಹೋಗಲು

ಭೂಮಿ ನಾಶ ಆಗುತ್ತಾ?

ಭೂಮಿ ನಾಶ ಆಗುತ್ತಾ?

ಬೈಬಲ್‌ ಕೊಡೋ ಉತ್ತರ

 ಇಲ್ಲ, ಭೂಮಿ ಯಾವತ್ತೂ ನಾಶ ಆಗಲ್ಲ, ಬೆಂಕಿಯಿಂದ ಸುಟ್ಟು ಹೋಗಲ್ಲ ಅಥ್ವಾ ಭೂಮಿ ಇರೋ ಜಾಗದಲ್ಲಿ ಬೇರೆ ಹೊಸ ಗ್ರಹ ಸೃಷ್ಟಿ ಆಗಲ್ಲ. ದೇವರು, ಭೂಮಿಲಿ ಮನುಷ್ಯರು ಶಾಶ್ವತವಾಗಿ ಇರಬೇಕು ಅಂತಾನೇ ಅದನ್ನ ಸೃಷ್ಟಿ ಮಾಡಿದ್ರು ಅಂತ ಬೈಬಲ್‌ ಹೇಳುತ್ತೆ.

  •   “ನೀತಿವಂತರು ಭೂಮಿಯನ್ನ ಆಸ್ತಿಯಾಗಿ ಪಡ್ಕೊತಾರೆ, ಅವರು ಅದ್ರಲ್ಲಿ ಶಾಶ್ವತವಾಗಿ ವಾಸಿಸ್ತಾರೆ.”— ಕೀರ್ತನೆ 37:29.

  •   “ಆತನು [ದೇವರು] ಭೂಮಿಯನ್ನ ಅದ್ರ ಅಸ್ತಿವಾರದ ಮೇಲೆ ಸ್ಥಿರಮಾಡಿದ್ದಾನೆ, ಅದು ತನ್ನ ಜಾಗ ಬಿಟ್ಟು ಯಾವತ್ತೂ ಕದಲಲ್ಲ. ಶಾಶ್ವತವಾಗಿ ಇದ್ದಲ್ಲೇ ಇರುತ್ತೆ.”—ಕೀರ್ತನೆ 104:5.

  •   “ಭೂಮಿ ಶಾಶ್ವತವಾಗಿ ಇರುತ್ತೆ.”— ಪ್ರಸಂಗಿ 1:4.

  •   “ಆತನು ಭೂಮಿಯನ್ನ ನಿರ್ಮಿಸಿ, ರಚಿಸಿ, ಅದನ್ನ ದೃಢವಾಗಿ ಸ್ಥಾಪಿಸಿದನು, ಆತನು ಅದನ್ನ ಹಾಗೇ ಸುಮ್ಮನೆ ಸೃಷ್ಟಿಸಲಿಲ್ಲ, ಜನ ವಾಸಿಸಬೇಕಂತನೇ ರೂಪಿಸಿದನು.”—ಯೆಶಾಯ 45:18.

ಮನುಷ್ಯರು ಭೂಮಿನ ನಾಶ ಮಾಡ್ತಾರಾ?

 ಪರಿಸರ ಮಾಲಿನ್ಯ, ಯುದ್ಧಗಳು ಅಥ್ವಾ ಬೇರೆ ಯಾವುದಾದ್ರೂ ರೀತಿಲಿ ಮನುಷ್ಯರು ಭೂಮಿನ ನಾಶಮಾಡಿಬಿಡ್ತಾರೆ ಅಂತ ಜನ ಅನ್ಕೊತಾರೆ. ಆದ್ರೆ ದೇವರು ಆ ರೀತಿ ಆಗೋಕೆ ಯಾವತ್ತೂ ಬಿಡಲ್ಲ. ಬದಲಿಗೆ ‘ಭೂಮಿಯನ್ನು ನಾಶಮಾಡ್ತಿರೋ ಜನ್ರನ್ನ ನಾಶಮಾಡ್ತಾನೆ.’ (ಪ್ರಕಟನೆ 11:18) ಅದನ್ನ ಹೇಗೆ ಮಾಡ್ತಾನೆ ಗೊತ್ತಾ?

 ಮಾನವ ಸರ್ಕಾರಗಳು ಈ ಭೂಮಿಯನ್ನ ಹಾಳುಮಾಡ್ತಿವೆ. ಆ ಸರ್ಕಾರಗಳನ್ನ ದೇವ್ರು ತೆಗೆದು ಹಾಕಿ, ಅದರ ಬದ್ಲು ತನ್ನ ಸರ್ಕಾರನ ತರ್ತಾನೆ. ಸ್ವರ್ಗದಲ್ಲಿರೋ ಈ ಸರ್ಕಾರ ಭೂಮಿಯನ್ನ ಚೆನ್ನಾಗಿ ನೋಡಿಕೊಳ್ಳುತ್ತೆ. (ದಾನಿಯೇಲ 2:44; ಮತ್ತಾಯ 6:9, 10) ಆ ಸರ್ಕಾರಕ್ಕೆ ದೇವರ ಮಗನಾದ ಯೇಸು ಕ್ರಿಸ್ತನೇ ರಾಜ. (ಯೆಶಾಯ 9:6, 7) ಯೇಸು ಭೂಮಿಲಿದ್ದಾಗ ಅದ್ಭುತಗಳನ್ನ ಮಾಡಿ, ಇಡೀ ಪ್ರಕೃತಿ ಮೇಲೆ ತನಗೆ ಅಧಿಕಾರ ಇದೆ ಅಂತ ತೋರಿಸಿ ಕೊಟ್ಟನು. (ಮಾರ್ಕ 4:35-41) ಯೇಸು ದೇವರ ರಾಜ್ಯದ ರಾಜನಾಗಿ ಭೂಮಿನ ಆಳೋವಾಗ ಆತನಿಗೆ ಭೂಮಿ ಮತ್ತು ಅದರಲ್ಲಿರೋ ಎಲ್ಲದರ ಮೇಲೆ ಸಂಪೂರ್ಣ ನಿಯಂತ್ರಣ ಇರುತ್ತೆ. ಏದೆನ್‌ ತೋಟ ಹೇಗಿತ್ತೋ ಹಾಗೆ ಮತ್ತೆ ಈ ಭೂಮಿನ ಸುಂದರವಾಗಿ ಮಾಡ್ತಾನೆ.—ಮತ್ತಾಯ 19:28; ಲೂಕ 23:43.

ಭೂಮಿ ಬೆಂಕಿಯಿಂದ ನಾಶ ಆಗುತ್ತೆ ಅಂತ ಬೈಬಲ್‌ ಹೇಳುತ್ತಾ?

 ಇಲ್ಲ, ಬೈಬಲ್‌ ಹಾಗೇ ಹೇಳಲ್ಲ. ಕೆಲವ್ರು 2 ಪೇತ್ರ 3:7ನ್ನ ತಪ್ಪಾಗಿ ಅರ್ಥ ಮಾಡ್ಕೊಂಡಿರೋದ್ರಿಂದ ಈ ತರ ಅಂದ್ಕೊಂಡಿದ್ದಾರೆ. ಅದು ಹೇಳೋದು, “ಈಗಿರೋ ಆಕಾಶ ಮತ್ತು ಭೂಮಿಯನ್ನೂ ನಾಶ ಮಾಡೋಕೆ ಇಟ್ಟಿದ್ದಾರೆ.” ಆದ್ರೆ ಇದ್ರ ನಿಜ ಅರ್ಥ ಏನು ಅಂತ ತಿಳ್ಕೊಳ್ಳೋಕೆ ಈ ಮುಂದಿನ ಎರಡು ಮುಖ್ಯ ಅಂಶಗಳು ಸಹಾಯ ಮಾಡುತ್ತೆ.

  1.   ಬೈಬಲಿನಲ್ಲಿ “ಆಕಾಶ,” “ಭೂಮಿ,” ಮತ್ತು “ಬೆಂಕಿ”ಯನ್ನ ಬೇರೆ ಬೇರೆ ವಿಷ್ಯಗಳನ್ನ ಸೂಚಿಸಲು ಬಳಸಲಾಗಿದೆ. ಉದಾಹರಣೆಗೆ ಆದಿಕಾಂಡ 11:1 ಹೀಗೆ ಹೇಳುತ್ತೆ: “ಆಗ ಇಡೀ ಭೂಮೀಲಿ ಎಲ್ರೂ ಒಂದೇ ಭಾಷೆ ಮಾತಾಡ್ತಿದ್ರು.” ಇಲ್ಲಿ ತಿಳಿಸಿರೋ, “ಭೂಮಿ” ಮಾನವ ಸಮಾಜವನ್ನ ಸೂಚಿಸುತ್ತೆ.

  2.   2 ಪೇತ್ರ 3:7 ರ ಹಿನ್ನಲೆ ಆಕಾಶ, ಭೂಮಿ ಮತ್ತು ಬೆಂಕಿಯ ಅರ್ಥವನ್ನ ತಿಳ್ಕೊಳ್ಳೋಕೆ ಸಹಾಯ ಮಾಡುತ್ತೆ. ವಚನ 5 ಮತ್ತು 6 ನೋಹನ ಜಲಪ್ರಳಯದ ಬಗ್ಗೆ ಮಾತಾಡುತ್ತೆ. ಆ ಪ್ರಳಯದಲ್ಲಿ ಅಲ್ಲಿದ್ದ ದುಷ್ಟ ಜನರು ನಾಶ ಆದ್ರು, ಭೂಮಿ ನಾಶ ಆಗಲಿಲ್ಲ. ಜಲಪ್ರಳಯದ ಮೂಲಕ ದೇವರು ‘ಭೂಮಿಯನ್ನ’ ಅಂದ್ರೆ ಕೆಟ್ಟ ಜನ್ರನ್ನ ನಾಶ ಮಾಡಿದನು. (ಆದಿಕಾಂಡ 6:11) ಅಲ್ಲಿದ್ದ “ಆಕಾಶವನ್ನು” ಅಂದ್ರೆ ಮಾನವರನ್ನ ಆಳ್ತಿದ್ದ ಸರ್ಕಾರಗಳನ್ನ ಕೂಡ ನಾಶ ಮಾಡಿದನು. ಇದ್ರಿಂದ ನಮಗೆ ಏನ್‌ ಗೊತ್ತಾಗುತ್ತೆ ಅಂದ್ರೆ ಆ ಪ್ರಳಯದಲ್ಲಿ ಕೆಟ್ಟ ಜನ್ರು ನಾಶ ಆದ್ರೆ ಹೊರತು ಈ ಭೂಮಿ ನಾಶ ಆಗ್ಲಿಲ್ಲ. ನೋಹ ಮತ್ತು ಅವನ ಕುಟುಂಬದವ್ರು ಮಾತ್ರ ಈ ಪ್ರಳಯದಿಂದ ಪಾರಾಗಿ ಇಡೀ ಭೂಮಿಯಲ್ಲಿ ತುಂಬಿಕೊಂಡ್ರು.—ಆದಿಕಾಂಡ 8:15-18.

 ಜಲಪ್ರಳಯದಲ್ಲಿ ಆದ ಹಾಗೇ 2 ಪೇತ್ರ 3:7 ರಲ್ಲಿ ಹೇಳಿರೋ “ಬೆಂಕಿ”ಯಿಂದ ಕೂಡ ಕೆಟ್ಟ ಜನ್ರು ನಾಶ ಆಗ್ತಾರೆ ಹೊರತು ಈ ಭೂಮಿ ನಾಶ ಆಗಲ್ಲ. ಬದಲಿಗೆ ದೇವರು ‘ಹೊಸ ಆಕಾಶ, ಹೊಸ ಭೂಮಿಯನ್ನು ತರ್ತೀನಿ, ಅಲ್ಲಿ ನೀತಿವಂತರು ಮಾತ್ರ ಇರ್ತಾರೆ’ ಅಂತ ಮಾತು ಕೊಟ್ಟಿದ್ದಾನೆ. (2 ಪೇತ್ರ 3:13) “ಹೊಸ ಭೂಮಿ,” ಅಂದ್ರೆ ಹೊಸ ಮಾನವ ಸಮಾಜವನ್ನ, “ಹೊಸ ಆಕಾಶ” ಅಂದ್ರೆ ಹೊಸ ಸರ್ಕಾರವನ್ನ ಸೂಚಿಸುತ್ತೆ. ಈ ಹೊಸ ಸರ್ಕಾರವೇ ದೇವರ ರಾಜ್ಯ. ಈ ಸರ್ಕಾರದ ಕೆಳಗೆ ಇಡೀ ಭೂಮಿ ಸುಂದರ ತೋಟವಾಗುತ್ತೆ.—ಪ್ರಕಟನೆ 21:1-4.