ಮಾಹಿತಿ ಇರುವಲ್ಲಿ ಹೋಗಲು

ಸಾಮೂಹಿಕ ಹತ್ಯೆ ಯಾಕೆ ನಡಿತು? ದೇವರು ಯಾಕೆ ಅದನ್ನ ನಿಲ್ಲಿಸಲಿಲ್ಲ?

ಸಾಮೂಹಿಕ ಹತ್ಯೆ ಯಾಕೆ ನಡಿತು? ದೇವರು ಯಾಕೆ ಅದನ್ನ ನಿಲ್ಲಿಸಲಿಲ್ಲ?

 ಸಾಮೂಹಿಕ ಹತ್ಯೆಯಲ್ಲಿ ಕುಟುಂಬದವರು ಅಥವಾ ನಮಗೆ ಬೇಕಾದವರು ಯಾರಾದರೂ ತೀರಿಕೊಂಡಾಗ ಈ ತರ ಪ್ರಶ್ನೆ ನಮಗೆ ಬರುತ್ತೆ. ಜನರು ಈ ಪ್ರಶ್ನೆಗಳಿಗೆ ಬರೀ ಉತ್ತರ ಮಾತ್ರ ಹುಡುಕಲ್ಲ ಬದಲಾಗಿ ಸಮಾಧಾನ ಕೊಡುವಂತ ಉತ್ತರನ ಹುಡುಕುತ್ತಾರೆ. ಸಾಮೂಹಿಕ ಹತ್ಯೆ ಮನುಷ್ಯರಲ್ಲಿ ಇರುವ ಕ್ರೂರತನನ ಎತ್ತಿ ತೋರಿಸುತ್ತೆ. ಇದರಿಂದ ನೋವನ್ನ ಅನುಭವಿಸಿದವರು ದೇವರಲ್ಲಿ ನಂಬಿಕೆ ಇಡೋದನ್ನೇ ಬಿಟ್ಟು ಬಿಟ್ಟಿದ್ದಾರೆ.

ದೇವರ ಬಗ್ಗೆ ಮತ್ತು ಸಾಮೂಹಿಕ ಹತ್ಯೆಯ ಬಗ್ಗೆ ಇರೋ ಕೆಲವು ತಪ್ಪಾಭಿಪ್ರಾಯಗಳು

 ತಪ್ಪಾಭಿಪ್ರಾಯ: ಸಾಮೂಹಿಕ ಹತ್ಯೆ ನಡೆಯುವಂತೆ ‘ನೀನು ಯಾಕೆ ಬಿಟ್ಟೆ?’ ಅಂತ ದೇವರನ್ನ ಕೇಳೋದು ತಪ್ಪು.

 ನಿಜ: ದೇವರ ಮೇಲೆ ತುಂಬಾ ನಂಬಿಕೆ ಇಟ್ಟಿರುವ ಕೆಲವರು ಕೂಡ ಈ ತರ ಪ್ರಶ್ನೆಗಳನ್ನ ಕೇಳಿದ್ದಾರೆ. ಉದಾಹರಣೆಗೆ ಪ್ರವಾದಿ ಹಬಕ್ಕೂಕ ದೇವರನ್ನ ಹೀಗೆ ಕೇಳ್ತಾನೆ: “ಯಾಕೆ ಈ ಕೆಟ್ಟ ಕೆಲಸಗಳು ನನ್ನ ಕಣ್ಣಿಗೆ ಬೀಳೋ ತರ ಮಾಡ್ತೀಯ? ಯಾಕೆ ದೌರ್ಜನ್ಯ ನೋಡಿನೂ ನೋಡದ ಹಾಗಿದ್ದೀಯ? ಯಾಕೆ ಹಿಂಸೆ ಮತ್ತು ಸುಲಿಗೆ ನನ್ನ ಕಣ್ಮುಂದೆನೇ ಇದೆ? ಯಾಕೆ ಜಗಳ ಮತ್ತು ಯುದ್ಧಗಳು ನಡಿತಾನೇ ಇದೆ?” (ಹಬಕ್ಕೂಕ 1:3) ಈ ತರ ಪ್ರಶ್ನೆಗಳನ್ನ ಹಬಕ್ಕೂಕ ಕೇಳಿದಕ್ಕೆ ದೇವರು ಬೈದಿಲ್ಲ ಬದಲಾಗಿ ಅವನು ಕೇಳಿದ ಪ್ರಶ್ನೆಗಳನ್ನ ಬೇರೆ ಜನರು ಓದಿ ತಿಳ್ಕೊಳ್ಳೋಕೆ ಅದನ್ನ ಬೈಬಲ್‌ನಲ್ಲಿ ಬರೆಸಿದ್ದಾನೆ.

 ತಪ್ಪಾಭಿಪ್ರಾಯ: ಜನರಿಗೆ ಬರೋ ಕಷ್ಟಗಳ ಬಗ್ಗೆ ದೇವರು ಕೇರ್‌ ಮಾಡಲ್ಲ.

 ನಿಜ: ದೇವರು ಕೆಟ್ಟತನ ಮತ್ತು ಅದರಿಂದ ಆಗೋ ನೋವನ್ನ ದ್ವೇಷಿಸುತ್ತಾನೆ. (ಜ್ಞಾನೋಕ್ತಿ 6:16-19) ನೋಹನ ಕಾಲದಲ್ಲಿ, ಇಡೀ ಭೂಮಿಯಲ್ಲಿ ಹಿಂಸೆ ತುಂಬಿದಾಗ ದೇವರು “ಹೃದಯದಲ್ಲಿ ನೊಂದ್ಕೊಂಡನು” ಅಂತ ಬೈಬಲ್‌ ಹೇಳುತ್ತೆ. (ಆದಿಕಾಂಡ 6:5, 6) ಇದರಿಂದ ನಮಗೇನು ಗೊತ್ತಾಗುತ್ತೆ? ಸಾಮೂಹಿಕ ಹತ್ಯೆ ನಡೆದಾಗಲೂ ದೇವರಿಗೆ ಅಷ್ಟೇ ನೋವು ಆಯ್ತು.—ಮಲಾಕಿ 3:6.

 ತಪ್ಪಾಭಿಪ್ರಾಯ: ಸಾಮೂಹಿಕ ಹತ್ಯೆ ದೇವರು ಯೆಹೂದ್ಯ ಜನರಿಗೆ ಕೊಟ್ಟ ಶಿಕ್ಷೆ.

 ನಿಜ: ದೇವರು ಒಂದನೇ ಶತಮಾನದಲ್ಲಿ ರೋಮನ್ನರು ಯೆರೂಸಲೇಮ್‌ನ ನಾಶಮಾಡೋ ತರ ಬಿಟ್ಟು ಕೊಟ್ಟನು. (ಮತ್ತಾಯ 23:37–24:2) ಈ ಘಟನೆ ಆದ್ಮೇಲೆ ಮತ್ತೆ, ದೇವರು ಯಾವತ್ತೂ ಈ ತರ ಮಾಡಿಲ್ಲ. ಯಾವುದೇ ಒಂದು ಗುಂಪಿಗೆ ಸಾಮೂಹಿಕವಾಗಿ ಶಿಕ್ಷೆ ಕೊಡೋದಾಗಲಿ ಅಥವಾ ಅವರನ್ನ ಕಷ್ಟದಿಂದ ಕಾಪಾಡೋದಾಗಲಿ ಮಾಡಲಿಲ್ಲ. ದೇವರ ದೃಷ್ಟಿಯಲ್ಲಿ ‘ಯೆಹೂದ್ಯರು ಗ್ರೀಕರು ಅನ್ನೋ ಭೇದಭಾವ ಇಲ್ಲ’ ಎಲ್ಲರೂ ಸಮಾನರು.—ರೋಮನ್ನರಿಗೆ 10:12.

 ತಪ್ಪಾಭಿಪ್ರಾಯ: ತುಂಬ ಪ್ರೀತಿ ಮತ್ತು ಶಕ್ತಿ ಇರೋ ದೇವರು ಸಾಮೂಹಿಕ ಹತ್ಯೆ ನಡೆಯದಂತೆ ಯಾಕೆ ತಡಿಲಿಲ್ಲ.

 ನಿಜ: ದೇವರು ಕಷ್ಟ ಕೊಡಲ್ಲ. ಆದರೆ ಸ್ವಲ್ಪ ಸಮಯದ ವರೆಗೂ ಇದೆಲ್ಲಾ ನಡೆಯುವಂತೆ ಬಿಟ್ಟಿದ್ದಾನೆ.—ಯಾಕೋಬ 1:13; 5:11.

ಸಾಮೂಹಿಕ ಹತ್ಯೆ ನಡೆಯೋಕೆ ದೇವರು ಯಾಕೆ ಬಿಟ್ಟಿದ್ದಾನೆ?

 ಸಾಮೂಹಿಕ ಹತ್ಯೆ ಮಾತ್ರ ಅಲ್ಲ ಮನುಷ್ಯರು ಇವತ್ತು ಅನುಭವಿಸುತ್ತಿರುವ ಎಲ್ಲಾ ಕಷ್ಟಗಳನ್ನ ದೇವರು ತಡಿದೇ ಇರೋದು ಒಂದೇ ಕಾರಣಕ್ಕಾಗಿ, ಅದೇನಂದರೆ: ದೇವರು ಆಳುವ ವಿಧಾನ ಸರಿ ಇಲ್ಲ ಅಂತ ಸೈತಾನ ಎಬ್ಬಿಸಿದ ಪ್ರಶ್ನೆಗೆ ಸರಿಯಾದ ಉತ್ತರ ಕೊಡೋದಕ್ಕೆ. ಈ ಲೋಕನ ಆಳ್ತಿರೋದು ದೇವರಲ್ಲ ಸೈತಾನನು ಅಂತ ಬೈಬಲ್‌ ಹೇಳುತ್ತೆ. (ಲೂಕ 4:1, 2, 6; ಯೋಹಾನ 12:31) ಈ ಎರಡು ಕಾರಣಗಳು ಸಾಮೂಹಿಕ ಹತ್ಯೆ ನಡೆಯೋಕೆ ದೇವರು ಯಾಕೆ ಬಿಟ್ಟ ಅನ್ನೋದಕ್ಕೆ ಕಾರಣ ಕೊಡುತ್ತೆ:

  1.   ದೇವರು ಮನುಷ್ಯರಿಗೆ ಇಚ್ಛಾ ಸ್ವಾತಂತ್ರ ಕೊಟ್ಟಿದ್ದಾನೆ. ಇಚ್ಛಾ ಸ್ವಾತಂತ್ರ ಅಂದ್ರೆ ಏನು? ದೇವರು ಆದಾಮ-ಹವ್ವರನ್ನ ಸೃಷ್ಟಿ ಮಾಡಿದಾಗ ಅವರು ಏನು ಮಾಡಬೇಕು ಅಂತ ಹೇಳಿದನು. ಆದರೆ ಅದನ್ನ ಮಾಡಲೇಬೇಕು ಅಂತ ಒತ್ತಾಯ ಮಾಡಲಿಲ್ಲ. ಈ ಸ್ವಾತಂತ್ರನ ಅವರು ಕೆಟ್ಟ ಆಯ್ಕೆ ಮಾಡೋಕ್ಕೆ ಉಪಯೋಗಿಸಿಕೊಂಡರು, ಒಳ್ಳೇ ಆಯ್ಕೆ ಮಾಡಲಿಲ್ಲ. ಅವತ್ತಿಂದ ಇವತ್ತಿನ ತನಕ ತುಂಬಾ ಜನರು ಅವರ ತರನೇ ತಮ್ಮ ಜೀವನದಲ್ಲಿ ಕೆಟ್ಟ ಆಯ್ಕೆಗಳನ್ನ ಮಾಡ್ತಿದ್ದಾರೆ. ಅದ್ರಿಂದನೇ ಇವತ್ತು ಈ ಲೋಕದಲ್ಲಿ ಇಷ್ಟೊಂದು ಕಷ್ಟ ಇರೋದು. (ಆದಿಕಾಂಡ 2:17; 3:6; ರೋಮನ್ನರಿಗೆ 5:12) ಸ್ಟೇಟ್‌ಮೆಂಟ್‌ ಆಫ್‌ ಪ್ರಿನ್ಸಿಪಲ್ಸ್‌ ಆಫ್‌ ಕನ್ಸರ್ವೆಟಿವ್‌ ಜೂಡೆಯಿಸಂ ಅನ್ನೋ ಪುಸ್ತಕ ಇಚ್ಛಾ ಸ್ವಾತಂತ್ರ್ಯದ ಬಗ್ಗೆ ಹೀಗೆ ಹೇಳುತ್ತೆ: “ಲೋಕದಲ್ಲಿನ ಹೆಚ್ಚಿನ ಕಷ್ಟಗಳು ನಮಗೆ ಕೊಟ್ಟಿರುವ ಇಚ್ಛಾ ಸ್ವಾತಂತ್ರ್ಯದ ದುರುಪಯೋಗದ ಫಲಿತಾಂಶ.” ಇಚ್ಛಾ ಸ್ವಾತಂತ್ರ್ಯನ ತಪ್ಪಾಗಿ ಬಳಸಿದಕ್ಕೆ ಆ ಸ್ವಾತಂತ್ರ್ಯನ ದೇವರು ಕಿತ್ತುಕೊಂಡಿಲ್ಲ. ಬದಲಿಗೆ ದೇವರ ಸಹಾಯ ಇಲ್ಲದೆ ಜನರು ಎಷ್ಟು ಕಾಲದ ತನಕ ಸಂತೋಷವಾಗಿ ಇರ್ತಾರೆ ಅಂತ ಅವರೇ ಅನುಭವಿಸಿ ತಿಳ್ಕೊಳ್ಳೋಕೆ ದೇವರು ಬಿಟ್ಟಿದ್ದಾನೆ.

  2.   ಸಾಮೂಹಿಕ ಹತ್ಯೆಯಲ್ಲಿ ಆದ ನಷ್ಟ ಮತ್ತು ಹಾನಿಯನ್ನೆಲ್ಲ ‘ನಾನು ಸರಿಪಡಿಸ್ತೀನಿ’ ಅಂತ ದೇವರು ಮಾತು ಕೊಟ್ಟಿದ್ದಾನೆ. ದೇವರು ಸತ್ತು ಹೋಗಿರೋ ಜನರನ್ನೆಲ್ಲ ಎಬ್ಬಿಸ್ತೀನಿ ಅಂತ ಮಾತು ಕೊಟ್ಟಿದ್ದಾನೆ. ಅದರಲ್ಲಿ ಈ ಸಾಮೂಹಿಕ ಹತ್ಯೆಯಲ್ಲಿ ಸತ್ತವರು ಕೂಡ ಸೇರಿದ್ದಾರೆ. ಅಷ್ಟೇ ಅಲ್ಲ ಸಾಮೂಹಿಕ ಹತ್ಯೆಯಿಂದ ಬಚಾವಾದ ಕೆಲವರು ಪಟ್ಟ ನೋವು ಮತ್ತು ಕಹಿನೆನಪುಗಳನ್ನ ಕೂಡ ತೆಗೆದುಹಾಕ್ತೀನಿ ಅಂತ ದೇವರ ಮಾತು ಕೊಟ್ಟಿದ್ದಾನೆ. (ಯೆಶಾಯ 65:17; ಅಪೊಸ್ತಲರ ಕಾರ್ಯ 24:15) ದೇವರಿಗೆ ನಮ್ಮ ಮೇಲೆ ಪ್ರೀತಿ ಇರೋದ್ರಿಂದ ಆತನು ನಮಗೆ ಕೊಟ್ಟ ಮಾತನ್ನೆಲ್ಲ ಖಂಡಿತ ನೆರವೇರಿಸುತ್ತಾನೆ.—ಯೋಹಾನ 3:16.

 ಸಾಮೂಹಿಕ ಹತ್ಯೆಗೆ ಬಲಿಯಾದವರು ಮತ್ತು ಅದರಿಂದ ಬಚಾವಾದರು ತಮ್ಮ ನಂಬಿಕೆಯನ್ನ ಕಾಪಾಡಿಕೊಳ್ಳೋಕೆ ಮತ್ತು ಅರ್ಥಭರಿತ ಜೀವನವನ್ನ ನಡೆಸೋಕೆ ಯಾವುದು ಅವರಿಗೆ ಸಹಾಯ ಮಾಡಿತು? ದೇವರು ಕಷ್ಟವನ್ನ ಯಾಕೆ ಅನುಮತಿಸಿದ್ದಾನೆ ಅನ್ನೋ ಕಾರಣ ಮತ್ತು ಅದನ್ನ ಹೇಗೆ ಸರಿಪಡಿಸುತ್ತಾನೆ ಅನ್ನೋ ಸಮಾಧಾನದ ಮಾತು ಅವರಿಗೆ ಸಹಾಯ ಮಾಡಿತು.