ಮಾಹಿತಿ ಇರುವಲ್ಲಿ ಹೋಗಲು

“ಕಲ್ಲು ಬಂಡೆಗೆ”-ಸುಸ್ವಾಗತ

“ಕಲ್ಲು ಬಂಡೆಗೆ”-ಸುಸ್ವಾಗತ

ಯೆಹೋವನ ಸಾಕ್ಷಿಗಳು ಲೋಕವ್ಯಾಪಕವಾಗಿ ಒಟ್ಟಾರೆ 15 ಮುದ್ರಣಾಲಯಗಳನ್ನು ನಡಿಸುತ್ತಾರೆ. ಅದರಲ್ಲಿ ಒಂದು, ಮಧ್ಯ ಯೂರೋಪಿನಲ್ಲಿದೆ. ಇದು ಜರ್ಮನಿಯ ಸೆಲ್ಟರ್ಸ್‌ ನಗರದ ಸ್ಟೈನ್‌ಫೆಲ್ಸ್‌ ಎಂಬ ಜಾಗದಲ್ಲಿದೆ. ಜರ್ಮನ್‌ ಭಾಷೆಯಲ್ಲಿ ಸ್ಟೈನ್‌ಫೆಲ್ಸ್‌ ಅಂದರೆ “ಕಲ್ಲು ಬಂಡೆ” ಎಂದರ್ಥ.

2014ರ ಮೇ 23ರಿಂದ 25ರ ತನಕ ಮಧ್ಯ ಯೂರೋಪಿನ ಬ್ರಾಂಚ್‌ನಲ್ಲಿ ಒಂದು ವಿಶೇಷ ಕಾರ್ಯಕ್ರಮ ನಡೆಯಿತು. ಇದಕ್ಕೆ ನೆರೆಹೊರೆಯವರನ್ನು, ಅಲ್ಲಿರುವ ವ್ಯಾಪಾರಿಗಳನ್ನು ಮತ್ತು ಸ್ಥಳೀಯ ಅಧಿಕಾರಿಗಳನ್ನು ಬ್ರಾಂಚ್‌ ಆಮಂತ್ರಿಸಿತು. “ಸೆಲ್ಟರ್ಸ್‌ನಲ್ಲಿ ಕಳೆದ 30 ವರ್ಷ” ಎಂಬುದು ಕಾರ್ಯಕ್ರಮದ ಶೀರ್ಷಿಕೆಯಾಗಿತ್ತು. ಏಪ್ರಿಲ್‌ 21, 1984ರಂದು ಈ ಬ್ರಾಂಚನ್ನು ಉದ್ಘಾಟಿಸಿದ್ದರಿಂದ ಈ ಶೀರ್ಷಿಕೆ ಸೂಕ್ತವಾಗಿತ್ತು.

ಈ ಕಾರ್ಯಕ್ರಮಕ್ಕೆ ಯಾರು ಬೇಕಾದರೂ ಹಾಜರಾಗಬಹುದಿತ್ತು. 3,000ಕ್ಕಿಂತ ಹೆಚ್ಚು ಮಂದಿ ಈ ಆಮಂತ್ರಣವನ್ನು ಸ್ವೀಕರಿಸಿ ಬ್ರಾಂಚನ್ನು ಸುತ್ತಾಡಿ ನೋಡಿದರು. 30 ವರ್ಷಗಳಿಂದ ಸೆಲ್ಟರ್ಸ್‌ನ ಮೇಯರಾಗಿ ಕೆಲಸಮಾಡುತ್ತಿರುವವರು, “ಯೆಹೋವನ ಸಾಕ್ಷಿಗಳ ಬ್ರಾಂಚ್‌ ಆಫೀಸ್‌ಗೆ ಭೇಟಿ ನೀಡುವುದು ಸಂಭ್ರಮವೇ ಸರಿ. 1979ರಿಂದ 1984ರೊಳಗೆ ಎಷ್ಟು ಬೇಗ ಈ ದೊಡ್ಡ ಬ್ರಾಂಚನ್ನು ಕಟ್ಟಿ ಮುಗಿಸಿದರು ಅಂದರೆ ಈಗಲೂ ನನಗೆ ಆಶ್ಚರ್ಯ ಆಗುತ್ತೆ!” ಅಂತ ತಮ್ಮ ಮೆಚ್ಚುಗೆಯನ್ನು ತಿಳಿಸಿದರು.

ಕಾರ್ಯಕ್ರಮದ ಮುಖ್ಯಾಂಶಗಳು

ಕಾರ್ಯಕ್ರಮದಲ್ಲಿ “ಮಧ್ಯ ಯೂರೋಪಿನಲ್ಲಿ ಯೆಹೋವನ ಸಾಕ್ಷಿಗಳ ಪಯಣ” ಎಂಬ ಒಂದು ಪ್ರದರ್ಶನವಿತ್ತು. ಇದರ ಮೂಲಕ, ಮಧ್ಯ ಯೂರೋಪಿನಲ್ಲಿ ಯೆಹೋವನ ಸಾಕ್ಷಿಗಳ ಇತಿಹಾಸದ ಪುಟಗಳನ್ನು ಸುಮಾರು 120 ವರ್ಷಗಳಷ್ಟು ಹಿಂದಿನ ವರೆಗೆ ತಿರುಗಿಸಿ ನೋಡುವ ಅವಕಾಶ ಎಲ್ಲರಿಗೆ ಸಿಕ್ಕಿತು. ಆ ಪ್ರದರ್ಶನವನ್ನು ಈಗಲೂ ನೋಡಬಹುದು.

ತುಂಬಾ ವಿಶೇಷವಾದ ಮತ್ತು ಅಪೂರ್ವವಾದ ಬೈಬಲ್‌ಗಳನ್ನು ಇನ್ನೊಂದು ಪ್ರದರ್ಶನದಲ್ಲಿ ಇಟ್ಟಿದ್ದರು. ಉದಾಹರಣೆಗೆ, 1534ರ ಜರ್ಮನ್‌ ಭಾಷೆಯ ಸಂಪೂರ್ಣ ಬೈಬಲೊಂದನ್ನು ಇಡಲಾಗಿತ್ತು. 1599ರ ಎಲೀಯಾಸ್‌ ಹುಟ್ಟರವರ ಪಾಲೀಗ್ಲಾಟ್‌ ಬೈಬಲ್‌ನ ಒಂದು ಭಾಗವನ್ನೂ ಪ್ರದರ್ಶಿಸಲಾಯಿತು. ಈ ಬೈಬಲ್‌ನಲ್ಲಿ ವಚನಗಳನ್ನು 12 ಭಾಷೆಗಳಲ್ಲಿ ನೋಡಬಹುದು. ಇದಲ್ಲದೆ ಇನ್ನೊಂದು ಪ್ರದರ್ಶನದಲ್ಲಿ ನಕ್ಷೆ, ವಿಡಿಯೋ ಮುಂತಾದವುಗಳ ಮೂಲಕ ಬೈಬಲ್‌ ಆಧುನಿಕ ಕಾಲದಲ್ಲೂ ಹೇಗೆ ಪ್ರಯೋಜನಕಾರಿ ಎಂದು ತೋರಿಸಲಾಯಿತು.

ಜೊತೆಗೆ, ಎರಡು ವಿಶೇಷ ಟೂರ್‌ಗಳನ್ನು ಏರ್ಪಡಿಸಲಾಗಿತ್ತು. ಇವುಗಳ ಮೂಲಕ, ಬ್ರಾಂಚ್‌ ಆಫೀಸ್‌ನಲ್ಲಿ ಸೇವೆ ಸಲ್ಲಿಸುತ್ತಿರುವ ಸುಮಾರು 1,000 ಸ್ವಯಂಸೇವಕರ ದೈನಂದಿನ ಜೀವನವನ್ನು ನೋಡುವ ಅವಕಾಶ ಜನರಿಗೆ ಸಿಕ್ಕಿತು. “ನಮ್ಮ ಜೀವನ” ಎಂಬ ಹೆಸರುಳ್ಳ ಮೊದಲನೇ ಟೂರ್‌ನಲ್ಲಿ ಅವರು ಬ್ರಾಂಚ್‌ ಆಫೀಸ್‌ನಲ್ಲಿ ವಾಸವಾಗಿರುವ ಕೆಲವರ ರೂಮ್‌ಗಳನ್ನು ನೋಡಿದರು. ಅಲ್ಲದೆ ಸ್ವಯಂ ಸೇವಕರೊಟ್ಟಿಗೆ ಊಟ ಮಾಡಿದರು ಮತ್ತು ಬ್ರಾಂಚ್‌ನ ತೋಟದಂಥ ಜಮೀನನ್ನು ಸುತ್ತಾಡಿದರು. “ಎರಡು ಕಣ್ಣು ಸಾಕಾಗಲ್ಲ, ಅಷ್ಟು ಸುಂದರವಾಗಿದೆ ಈ ಜಾಗ!” ಅಂತ ಅಲ್ಲಿ ಹಾಜರಾದವರೊಬ್ಬರು ಪ್ರಶಂಸಿಸಿದರು.

ಎರಡನೇ ಟೂರ್‌ನ ಹೆಸರು “ಮುದ್ರಣಕಾರ್ಯ”. ಇದರಲ್ಲಿ ಜನರು ಮುದ್ರಣಾ ಕೊಠಡಿ, ಬೈಂಡಿಂಗ್‌ ವಿಭಾಗ ಮತ್ತು ಶಿಪ್ಪಿಂಗ್‌ ಡಿಪಾರ್ಟ್‌ಮೆಂಟ್‌ನಲ್ಲಿ ನಡೆಯುವ ಕೆಲಸವನ್ನು ನೋಡಿದರು. ಬೈಬಲ್‌ ಸಾಹಿತ್ಯಗಳನ್ನು ಹೇಗೆ ಮುದ್ರಿಸಲಾಗುತ್ತದೆ, ಅದಕ್ಕೆ ಬೈಂಡ್‌ ಹೇಗೆ ಹಾಕಲಾಗುತ್ತದೆ ಮತ್ತು ಸುಮಾರು 50 ದೇಶಗಳಿಗೆ ಅದನ್ನು ಹೇಗೆ ರವಾನಿಸಲಾಗುತ್ತದೆ ಅಂತ ಕಣ್ಣಾರೆ ಕಂಡರು. “ಯೆಹೋವನ ಸಾಕ್ಷಿಗಳ ಕೆಲಸ ಲೋಕವ್ಯಾಪಕವಾದದ್ದು ಅಂತ ನಾನೆಂದೂ ಯೋಚಿಸಿರಲಿಲ್ಲ. ಭೂಮಿಯ ಕಟ್ಟಕಡೆಗೆ ಅವರ ಸಾಹಿತ್ಯಗಳು ತಲಪುತ್ತವೆ. ಅದರಲ್ಲೂ ಇವನ್ನು ಸ್ವಯಂಸೇವಕರು ಮಾಡುತ್ತಿದ್ದಾರೆಂದರೆ ಅದು ಅದ್ಭುತವೇ ಸರಿ!” ಅಂತ ಒಬ್ಬರು ತಮ್ಮ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು.

jw.org ವೆಬ್‌ಸೈಟ್‌ ಬಗ್ಗೆ ತಿಳಿದುಕೊಳ್ಳುತ್ತಿರುವ ಜ 

ಕಾರ್ಯಕ್ರಮದ ಒಂದು ವೈಶಿಷ್ಟ್ಯ ಯೆಹೋವನ ಸಾಕ್ಷಿಗಳ ಅಧಿಕೃತ ವೆಬ್‌ಸೈಟಾದ jw.orgಯ ಪ್ರದರ್ಶನ. ಅದರ ಮೂಲಕ ಚಿಕ್ಕವರಿಂದ ಹಿಡಿದು ದೊಡ್ಡವರೆಲ್ಲರೂ ವಿಡಿಯೋಗಳನ್ನು, ಪ್ರದರ್ಶನಗಳನ್ನು ನೋಡಿದರು ಮತ್ತು ತಮ್ಮ ಪ್ರಶ್ನೆಗಳಿಗೆ ಉತ್ತರಗಳನ್ನೂ ಕಂಡುಕೊಂಡರು.

ಯೆಹೋವನ ಸಾಕ್ಷಿಗಳ ಲೋಕವ್ಯಾಪಕ ಕೆಲಸವನ್ನು ಈ ಕಾರ್ಯಕ್ರಮದ ಮೂಲಕ ತಿಳಿದುಕೊಂಡ ಜನರು ನಮ್ಮ ಕೆಲಸವನ್ನು ಶ್ಲಾಘಿಸುತ್ತಾ ಸಂತೋಷದಿಂದ ಮನೆಗೆ ಹಿಂದಿರುಗಿದರು. ಒಬ್ಬ ವ್ಯಕ್ತಿ ಹೇಳಿದ್ದು: “ಯೆಹೋವನ ಸಾಕ್ಷಿಗಳ ಬಗ್ಗೆ ನನಗೆ ಏನೇನೋ ತಪ್ಪಭಿಪ್ರಾಯಗಳಿದ್ದವು. ಆದ್ರೆ ಈಗ ನಾನು ನನ್ನ ಅಭಿಪ್ರಾಯ ಬದಲಾಯಿಸಿಕೊಳ್ಳಬೇಕು ಅಂತನಿಸುತ್ತೆ.” “ಸಾಕ್ಷಿಗಳ ಬಗ್ಗೆ ಇದ್ದ ತಪ್ಪಭಿಪ್ರಾಯಗಳೆಲ್ಲಾ ಸುಳ್ಳು ಅಂತ ಈ ದಿನದ ಕಾರ್ಯಕ್ರಮ ಸಾಬೀತು ಪಡಿಸಿತು” ಅಂತ ಸ್ತ್ರೀಯೊಬ್ಬಳು ತನ್ನ ಅಭಿಪ್ರಾಯ ತಿಳಿಸಿದಳು.

^ ಪ್ಯಾರ. 17 2014ರ ಅಂಕಿಅಂಶದ ಪ್ರಕಾರ

^ ಪ್ಯಾರ. 21 2014ರ ಅಂಕಿಅಂಶದ ಪ್ರಕಾರ

^ ಪ್ಯಾರ. 24 2014ರ ಅಂಕಿಅಂಶದ ಪ್ರಕಾರ