ಮಾಹಿತಿ ಇರುವಲ್ಲಿ ಹೋಗಲು

ಯೆಹೋವನ ಸಾಕ್ಷಿಗಳು ರಕ್ಷಣೆಯನ್ನು ಗಳಿಸುವ ಸಲುವಾಗಿ ಮನೆಮನೆ ಹೋಗಿ ಸಾರುತ್ತಾರಾ?

ಯೆಹೋವನ ಸಾಕ್ಷಿಗಳು ರಕ್ಷಣೆಯನ್ನು ಗಳಿಸುವ ಸಲುವಾಗಿ ಮನೆಮನೆ ಹೋಗಿ ಸಾರುತ್ತಾರಾ?

 ಇಲ್ಲ. ನಾವು ನಿಯತವಾಗಿ ಮನೆಮನೆ ಸೇವಾ ಕಾರ್ಯದಲ್ಲಿ ತೊಡಗುತ್ತೇವೆ. ಆದರೆ ಆ ಕೆಲಸ ಮಾಡುವುದರಿಂದ ರಕ್ಷಣೆಯನ್ನು ಗಳಿಸಸಾಧ್ಯ ಎಂದು ನಾವು ನಂಬುವುದಿಲ್ಲ. (ಎಫೆಸದವರಿಗೆ 2:8) ಯಾಕೆ?

 ಈ ಉದಾಹರಣೆ ಗಮನಿಸಿ: ಉದಾರಿ ಮನುಷ್ಯನೊಬ್ಬನು ತಾನು ತಿಳಿಸಿದ ಜಾಗಕ್ಕೆ, ತಿಳಿಸಿದ ಸಮಯಕ್ಕೆ ಬಂದವರೆಲ್ಲರಿಗೆ ಒಂದು ಬೆಲೆಬಾಳುವ ಉಡುಗೊರೆ ಕೊಡುವೆನೆಂದು ಮಾತುಕೊಡುತ್ತಾನೆ. ಆ ವ್ಯಕ್ತಿ ಹೇಳಿದ ಮಾತನ್ನು ನೀವು ನಂಬುತ್ತೀರಾದರೆ ಆತ ಹೇಳಿದಂತೆ ಖಂಡಿತ ಮಾಡುವಿರಿ. ಅಷ್ಟು ಮಾತ್ರವಲ್ಲದೆ, ನಿಮ್ಮ ಸ್ನೇಹಿತರಿಗೂ ಸಂಬಂಧಿಕರಿಗೂ ಈ ಅವಕಾಶದ ಕುರಿತು ತಿಳಿಸಿ ಅವರೂ ಅದರಿಂದ ಪ್ರಯೋಜನ ಪಡೆಯುವಂತೆ ಸಹಾಯಮಾಡುವಿರಿ. ಹಾಗಿದ್ದರೂ ಒಂದು ವಿಷಯವಂತೂ ಸತ್ಯ. ನೀವೇನೇ ಮಾಡಿದರೂ ಆ ಉಡುಗೊರೆಯನ್ನು ನೀವು ಗಳಿಸಲು ಅಥವಾ ಸಂಪಾದಿಸಲು ಸಾಧ್ಯವಿಲ್ಲ. ಉಡುಗೊರೆ ಯಾವಾಗಲೂ ಉಡುಗೊರೆಯೇ. ಅದನ್ನು ಕೊಡುವುದೋ ಬೇಡವೋ ಎಂಬುದು ವ್ಯಕ್ತಿಯ ಮೇಲೆ ಹೊಂದಿಕೊಂಡಿದೆ. ಸಂಬಳದಂತೆ ನಾವದನ್ನು ಸಂಪಾದಿಸಲು ಇಲ್ಲವೆ ಗಳಿಸಲು ಸಾಧ್ಯವಿಲ್ಲ.

 ಹಾಗೆಯೇ ದೇವರು ಒಂದು ಮಾತು ಕೊಟ್ಟಿದ್ದಾನೆ. ತನ್ನ ಮಾತಿಗೆ ವಿಧೇಯರಾಗುವ ಪ್ರತಿಯೊಬ್ಬರಿಗೆ ಅನಂತಜೀವನ ಕೊಡುತ್ತೇನೆ ಎಂಬುದೇ ಆ ಮಾತು. ಇದರಲ್ಲಿ ಯೆಹೋವನ ಸಾಕ್ಷಿಗಳಿಗೆ ಪೂರ್ಣ ನಂಬಿಕೆಯಿದೆ. (ರೋಮನ್ನರಿಗೆ 6:23) ಅಷ್ಟೇ ಅಲ್ಲ, ದೇವರ ಈ ವಾಗ್ದಾನದಿಂದ ಇತರರೂ ಪ್ರಯೋಜನ ಪಡೆಯಲಿ ಎಂಬ ಆಸೆಯಿಂದ ಅವರಿಗೂ ನಮ್ಮ ನಂಬಿಕೆಯ ಕುರಿತು ತಿಳಿಸುತ್ತೇವೆ. ಆದರೆ ಮನೆಮನೆ ಸೇವೆ ಮಾಡುವ ಮೂಲಕ ನಮ್ಮ ರಕ್ಷಣೆಯನ್ನು ಗಳಿಸಬಹುದು ಎಂದು ನಾವು ನಂಬುವುದಿಲ್ಲ. (ರೋಮನ್ನರಿಗೆ 1:17; 3:28) ಸಾವೇ ಇಲ್ಲದೆ ಬದುಕುವ ಅದ್ಭುತಕರ ಉಡುಗೊರೆಯನ್ನು ಯಾವನೇ ಮನುಷ್ಯ ತನ್ನ ಸ್ವಂತ ಪ್ರಯತ್ನದಿಂದ ಸಂಪಾದಿಸಲು ಅಥವಾ ಗಳಿಸಲು ಎಂದಿಗೂ ಸಾಧ್ಯವಿಲ್ಲ. “ನಾವು ಮಾಡಿದ ನೀತಿಯ ಕಾರ್ಯಗಳ ನಿಮಿತ್ತವಾಗಿ ಅಲ್ಲ ಆತನ ಕರುಣೆಯಿಂದಾಗಿ . . . ಆತನು ನಮ್ಮನ್ನು ರಕ್ಷಿಸಿದನು.”—ತೀತ 3:5.