ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಯೆಹೋವನು ತನ್ನ ನಂಬಿಗಸ್ತ ಸೇವಕರಿಗೆ ಪ್ರತಿಫಲ ಕೊಡುತ್ತಾನೆ

ಯೆಹೋವನು ತನ್ನ ನಂಬಿಗಸ್ತ ಸೇವಕರಿಗೆ ಪ್ರತಿಫಲ ಕೊಡುತ್ತಾನೆ

‘ದೇವರನ್ನು ಸಮೀಪಿಸುವವನು ಆತನು ಇದ್ದಾನೆ ಎಂದೂ ತನ್ನನ್ನು ಶ್ರದ್ಧೆಯಿಂದ ಹುಡುಕುವವರಿಗೆ ಪ್ರತಿಫಲವನ್ನು ಕೊಡುತ್ತಾನೆ ಎಂದೂ ನಂಬಬೇಕು.’ —ಇಬ್ರಿ. 11:6.

ಗೀತೆಗಳು: 85, 134

1, 2. (ಎ) ಪ್ರೀತಿಗೂ ನಂಬಿಕೆಗೂ ಯಾವ ಸಂಬಂಧವಿದೆ? (ಬಿ) ಯಾವ ಪ್ರಶ್ನೆಗಳ ಬಗ್ಗೆ ಚರ್ಚಿಸಲಿದ್ದೇವೆ?

ನಮ್ಮ ತಂದೆಯಾದ ಯೆಹೋವನು ತನ್ನ ನಿಷ್ಠಾವಂತ ಸೇವಕರನ್ನು ಆಶೀರ್ವದಿಸುತ್ತೇನೆ ಎಂದು ಮಾತುಕೊಟ್ಟಿದ್ದಾನೆ. ಯೆಹೋವನಿಗೆ ನಮ್ಮ ಮೇಲೆ ಪ್ರೀತಿ ಇದೆ ಎನ್ನುವುದಕ್ಕೆ ಇದೊಂದು ಪುರಾವೆ. ‘ಆತನು ಮೊದಲು ನಮ್ಮನ್ನು ಪ್ರೀತಿಸಿದ್ದಾನೆ.’ ಆದ್ದರಿಂದ ನಾವೂ ಆತನನ್ನು ಪ್ರೀತಿಸುತ್ತೇವೆ. (1 ಯೋಹಾ. 4:19) ಆ ಪ್ರೀತಿ ಹೆಚ್ಚಾದ ಹಾಗೆ ಆತನ ಮೇಲೆ ಇರುವ ನಂಬಿಕೆ ಕೂಡ ಬಲವಾಗುತ್ತಾ ಹೋಗುತ್ತದೆ. ಮಾತ್ರವಲ್ಲ, ಆತನು ಯಾರನ್ನು ಪ್ರೀತಿಸುತ್ತಾನೋ ಅವರಿಗೆ ಖಂಡಿತ ಪ್ರತಿಫಲ ಕೊಡುತ್ತಾನೆ ಎಂಬ ಭರವಸೆ ಇನ್ನೂ ಹೆಚ್ಚಾಗುತ್ತದೆ.ಇಬ್ರಿಯ 11:6 ಓದಿ.

2 ಯೆಹೋವನು ಪ್ರತಿಫಲ ಕೊಡುತ್ತಾನೆ! ಇದು ಆತನ ವ್ಯಕ್ತಿತ್ವಕ್ಕೆ ಹಿಡಿದ ಕನ್ನಡಿ. ಆತನನ್ನು ಶ್ರದ್ಧೆಯಿಂದ ಹುಡುಕಿದರೆ ಪ್ರತಿಫಲ ಕೊಡುತ್ತಾನೆ ಎಂದು ಭರವಸೆ ಇಡಬೇಕು. ಇಲ್ಲದಿದ್ದರೆ ನಮಗೆ ದೇವರ ಮೇಲೆ ಸಂಪೂರ್ಣ ನಂಬಿಕೆ ಇಲ್ಲ ಎಂದು ಅರ್ಥ. ಯಾಕೆ? ಯಾಕೆಂದರೆ “ನಂಬಿಕೆಯು ನಿರೀಕ್ಷಿಸುವ ವಿಷಯಗಳ ನಿಶ್ಚಿತ ಭರವಸೆ” ಆಗಿದೆ ಎಂದು ಬೈಬಲ್‌ ಹೇಳುತ್ತದೆ. (ಇಬ್ರಿ. 11:1) ದೇವರು ತನಗೆ ನಿಷ್ಠೆ ತೋರಿಸುವ ಜನರನ್ನು ಖಂಡಿತ ಆಶೀರ್ವದಿಸುತ್ತಾನೆ ಎಂದು ನಂಬಬೇಕು. ದೇವರು ನಮಗೆ ಪ್ರತಿಫಲ ಕೊಡುತ್ತಾನೆ ಎಂದು ನಂಬುವುದರಿಂದ ಸಿಗುವ ಪ್ರಯೋಜನವೇನು? ಹಿಂದಿನ ಕಾಲದಲ್ಲಿ ನಿಷ್ಠೆ ತೋರಿಸಿದವರಿಗೆ ಯೆಹೋವನು ಯಾವ ಪ್ರತಿಫಲ ಕೊಟ್ಟನು? ಈಗ ನಿಷ್ಠೆ ತೋರಿಸುವ ಜನರಿಗೆ ಯಾವ ಪ್ರತಿಫಲ ಕೊಡುತ್ತಾನೆ? ಇದರ ಬಗ್ಗೆ ಚರ್ಚಿಸೋಣ.

ಯೆಹೋವನು ಮಾತುಕೊಟ್ಟಿದ್ದಾನೆ

3. ಮಲಾಕಿಯ 3:10⁠ರಲ್ಲಿ ಯೆಹೋವನು ಯಾವ ಕರೆಕೊಟ್ಟಿದ್ದಾನೆ?

3 ತನ್ನ ನಂಬಿಗಸ್ತ ಸೇವಕರಿಗೆ ಪ್ರತಿಫಲ ಕೊಡುತ್ತೇನೆಂದು ಯೆಹೋವ ದೇವರು ಮಾತುಕೊಟ್ಟಿದ್ದಾನೆ. ನಾವು ಪೂರ್ಣ ಶಕ್ತಿ, ಮನಸ್ಸು ಕೊಟ್ಟು ಆತನ ಸೇವೆ ಮಾಡುವುದಾದರೆ ಆತನು ಖಂಡಿತ ಆಶೀರ್ವದಿಸುತ್ತಾನೆ. ಈ ವಿಷಯದಲ್ಲಿ ‘ನನ್ನನ್ನು ಪರೀಕ್ಷಿಸಿರಿ’ ಎಂದು ಆತನೇ ಕರೆಕೊಟ್ಟಿದ್ದಾನೆ. ‘ನಾನು ಪರಲೋಕದ ದ್ವಾರಗಳನ್ನು ತೆರೆದು ನಿಮ್ಮಲ್ಲಿ ಸ್ಥಳಹಿಡಿಯಲಾಗದಷ್ಟು ಸುವರವನ್ನು ಸುರಿಯುವೆನೋ ಇಲ್ಲವೋ ನೋಡಿ’ ಎಂದು ಹೇಳಿದ್ದಾನೆ. (ಮಲಾ. 3:10) ಈ ವಿಷಯದಲ್ಲಿ ಯೆಹೋವನನ್ನು ಪರೀಕ್ಷಿಸಿ ನೋಡಲು ನೀವು ತಯಾರಾ?

4. ಮತ್ತಾಯ 6:33⁠ರಲ್ಲಿರುವ ಯೇಸುವಿನ ಮಾತನ್ನು ನಂಬಲು ಯಾವ ಆಧಾರ ಇದೆ?

4 ದೇವರ ರಾಜ್ಯಕ್ಕೆ ಮೊದಲ ಸ್ಥಾನ ಕೊಟ್ಟರೆ ದೇವರು ನಮ್ಮನ್ನು ಆಶೀರ್ವದಿಸುತ್ತಾನೆ ಎಂದು ಯೇಸು ಹೇಳಿದನು. (ಮತ್ತಾಯ 6:33 ಓದಿ.) ದೇವರು ತನ್ನ ಮಾತನ್ನು ಖಂಡಿತ ನೆರವೇರಿಸುತ್ತಾನೆ ಎಂದು ಯೇಸುವಿಗೆ ಚೆನ್ನಾಗಿ ಗೊತ್ತಿದ್ದರಿಂದ ಹಾಗೆ ಹೇಳಿದನು. (ಯೆಶಾ. 55:11) ಅದೇ ರೀತಿ ನಾವು ಕೂಡ ಯೆಹೋವನ ಮೇಲೆ ನಂಬಿಕೆ ಇಡಬಹುದು. “ನಾನು ಎಂದಿಗೂ ನಿನ್ನ ಕೈಬಿಡುವುದಿಲ್ಲ, ಎಂದಿಗೂ ತೊರೆಯುವುದಿಲ್ಲ” ಎಂದು ಯೆಹೋವನೇ ಹೇಳಿದ್ದಾನೆ. (ಇಬ್ರಿ. 13:5) ಯೆಹೋವನ ಈ ಮಾತು ಮತ್ತಾಯ 6:33⁠ರಲ್ಲಿ ಯೇಸು ಹೇಳಿದ ಮಾತನ್ನು ನಂಬಲು ನಮಗೆ ಸಹಾಯ ಮಾಡುತ್ತದೆ.

ಶಿಷ್ಯರು ಮಾಡಿದ ಎಲ್ಲಾ ತ್ಯಾಗಗಳಿಗೆ ಖಂಡಿತ ಪ್ರತಿಫಲ ಸಿಗುತ್ತದೆ ಎಂದು ಯೇಸು ಹೇಳಿದನು (ಪ್ಯಾರ 5 ನೋಡಿ)

5. ಯೇಸು ಪೇತ್ರನಿಗೆ ಕೊಟ್ಟ ಉತ್ತರದಿಂದ ನಮ್ಮೆಲ್ಲರಿಗೂ ಹೇಗೆ ಉತ್ತೇಜನ ಸಿಗುತ್ತದೆ?

5 ಅಪೊಸ್ತಲ ಪೇತ್ರನು ಒಮ್ಮೆ ಯೇಸುವಿಗೆ ‘ನಾವು ಎಲ್ಲವನ್ನೂ ಬಿಟ್ಟು ನಿನ್ನನ್ನು ಹಿಂಬಾಲಿಸಿದ್ದೇವೆ; ನಮಗೆ ಏನು ಸಿಗುತ್ತದೆ?’ ಎಂದು ಕೇಳಿದನು. (ಮತ್ತಾ. 19:27) ಇಂಥಾ ಪ್ರಶ್ನೆ ಕೇಳಿದ್ದಕ್ಕೆ ಯೇಸು ಪೇತ್ರನನ್ನು ಗದರಿಸಲಿಲ್ಲ. ಶಿಷ್ಯರು ಮಾಡಿದ ಎಲ್ಲಾ ತ್ಯಾಗಗಳಿಗೆ ಖಂಡಿತ ಪ್ರತಿಫಲ ಸಿಗುತ್ತದೆ ಎಂದು ಯೇಸು ಹೇಳಿದನು. ಅಪೊಸ್ತಲರು ಮತ್ತು ಬೇರೆ ನಂಬಿಗಸ್ತ ಶಿಷ್ಯರಿಗೆ ಸ್ವರ್ಗದಲ್ಲಿ ಯೇಸುವಿನೊಂದಿಗೆ ಆಳುವ ಸುಯೋಗ ಸಿಗಲಿಕ್ಕಿತ್ತು. ಇದು ಮುಂದಕ್ಕೆ ಸಿಗಲಿತ್ತಾದರೂ ಈಗಲೇ ಸಿಗುವ ಆಶೀರ್ವಾದಗಳ ಬಗ್ಗೆ ಹೇಳುತ್ತಾ ಯೇಸು ಅಂದದ್ದು: “ನನ್ನ ಹೆಸರಿನ ನಿಮಿತ್ತವಾಗಿ ಮನೆಗಳನ್ನಾಗಲಿ ಅಣ್ಣತಮ್ಮಂದಿರನ್ನಾಗಲಿ ಅಕ್ಕತಂಗಿಯರನ್ನಾಗಲಿ ತಂದೆಯನ್ನಾಗಲಿ ತಾಯಿಯನ್ನಾಗಲಿ ಮಕ್ಕಳನ್ನಾಗಲಿ ಹೊಲಗಳನ್ನಾಗಲಿ ಬಿಟ್ಟುಬಂದ ಪ್ರತಿಯೊಬ್ಬನಿಗೂ ಅನೇಕ ಪಾಲು ಹೆಚ್ಚಾಗಿ ಸಿಗುವುದು ಮತ್ತು ಅವನು ನಿತ್ಯಜೀವಕ್ಕೆ ಬಾಧ್ಯನಾಗುವನು.” (ಮತ್ತಾ. 19:29) ಯೇಸುವಿನ ಹಿಂಬಾಲಕರೆಲ್ಲರಿಗೆ ಇಂದು ಸಭೆಯಲ್ಲಿ ತಂದೆಗಳು, ತಾಯಂದಿರು, ಅಣ್ಣತಮ್ಮಂದಿರು, ಅಕ್ಕತಂಗಿಯರು, ಮಕ್ಕಳು ಸಿಗುತ್ತಾರೆ. ಈ ಸಂಬಂಧಗಳಿಂದ ಸಂತೋಷ-ಸಂತೃಪ್ತಿ ಅನುಭವಿಸುವಾಗ ನಾವು ಮಾಡಿರುವ ತ್ಯಾಗ ಸಾರ್ಥಕ ಅನಿಸುತ್ತದೆ ಅಲ್ವಾ?

“ನಮ್ಮ ಪ್ರಾಣಕ್ಕೆ ಲಂಗರ”

6. ತನ್ನ ಸೇವಕರಿಗೆ ಯೆಹೋವನು ಪ್ರತಿಫಲ ಕೊಡುತ್ತಾನೆಂದು ನಂಬುವುದರಿಂದ ಯಾವ ಪ್ರಯೋಜನ ಇದೆ?

6 ಇಂದು ನಮಗೆ ಅನೇಕ ಆಶೀರ್ವಾದಗಳನ್ನು ಕೊಡುವುದು ಮಾತ್ರವಲ್ಲ ಮುಂದೆ ಇದಕ್ಕಿಂತ ಹೆಚ್ಚಿನ ಆಶೀರ್ವಾದಗಳನ್ನು ಕೊಡುತ್ತೇನೆಂದು ಯೆಹೋವನು ಮಾತುಕೊಟ್ಟಿದ್ದಾನೆ. (1 ತಿಮೊ. 4:8) ಇದರಲ್ಲಿ ಎಳ್ಳಿನ ಏಳರಷ್ಟೂ ಸಂಶಯ ಬೇಡ. ಯೆಹೋವನನ್ನು ಹುಡುಕುವವರಿಗೆ ಆತನು ಪ್ರತಿಫಲ ಕೊಡುತ್ತಾನೆ ಎಂದು ನಾವು ಸಂಪೂರ್ಣವಾಗಿ ನಂಬುವುದಾದರೆ ಅದೆಂಥ ಕಷ್ಟ ಬಂದರೂ ಸಹಿಸಿಕೊಂಡು ಹೋಗುತ್ತೇವೆ, ಯೆಹೋವನಿಗೆ ನಂಬಿಗಸ್ತರಾಗಿ ಇರುತ್ತೇವೆ.—ಇಬ್ರಿ. 11:6.

7. ನಮ್ಮ ನಿರೀಕ್ಷೆಯನ್ನು ಯಾವುದಕ್ಕೆ ಹೋಲಿಸಬಹುದು, ಯಾಕೆ?

7 ಯೇಸು “ಉಲ್ಲಾಸಪಡಿರಿ, ಅತ್ಯಾನಂದಪಡಿರಿ; ಸ್ವರ್ಗದಲ್ಲಿ ನಿಮಗೆ ಬಹಳ ಪ್ರತಿಫಲವಿದೆ; ಏಕೆಂದರೆ ನಿಮಗಿಂತ ಮುಂಚೆ ಇದ್ದ ಪ್ರವಾದಿಗಳನ್ನು ಅವರು ಅದೇ ರೀತಿಯಲ್ಲಿ ಹಿಂಸೆಪಡಿಸಿದರು” ಎಂದು ಪರ್ವತ ಪ್ರಸಂಗದಲ್ಲಿ ಹೇಳಿದನು. (ಮತ್ತಾ. 5:12) ದೇವರ ಸೇವಕರಲ್ಲಿ ಕೆಲವರಿಗೆ ಸ್ವರ್ಗಕ್ಕೆ ಹೋಗುವ ಪ್ರತಿಫಲ ಸಿಗುವುದರಿಂದ ಸಂತೋಷಪಡುತ್ತಾರೆ. ಹೆಚ್ಚಿನವರಿಗೆ ಇದೇ ಭೂಮಿಯಲ್ಲಿ ಸದಾಕಾಲ ಜೀವಿಸುವ ಪ್ರತಿಫಲ ಸಿಗಲಿದೆ. ಆದ್ದರಿಂದ ಭೂನಿರೀಕ್ಷೆ ಇರುವವರೂ ‘ಉಲ್ಲಾಸಪಡುತ್ತಾರೆ, ಅತ್ಯಾನಂದಪಡುತ್ತಾರೆ.’ (ಕೀರ್ತ. 37:11; ಲೂಕ 18:30) ನಮಗೆ ಸ್ವರ್ಗೀಯ ನಿರೀಕ್ಷೆ ಇರಲಿ ಭೂನಿರೀಕ್ಷೆ ಇರಲಿ ಅದು “ನಮ್ಮ ಪ್ರಾಣಕ್ಕೆ ಲಂಗರದಂತಿದ್ದು ನಿಶ್ಚಯವಾದದ್ದೂ ದೃಢವಾದದ್ದೂ ಆಗಿದೆ.” (ಇಬ್ರಿ. 6:17-20) ದೊಡ್ಡ ಬಿರುಗಾಳಿ ಬೀಸುವ ಸಮಯದಲ್ಲಿ ಹಡಗು ಮುಳುಗದಿರಲು ಲಂಗರ ಸಹಾಯ ಮಾಡುವಂತೆ ಕಷ್ಟಗಳ ಸಮಯದಲ್ಲಿ ನಂಬಿಗಸ್ತರಾಗಿರಲು ನಿರೀಕ್ಷೆ ಸಹಾಯ ಮಾಡುತ್ತದೆ.

8. ನಿರೀಕ್ಷೆ ನಮ್ಮ ಚಿಂತೆಯನ್ನು ಹೇಗೆ ಕಡಿಮೆಮಾಡುತ್ತದೆ?

8 ನಿರೀಕ್ಷೆ ಚಿಂತೆಯನ್ನು ಕಡಿಮೆಮಾಡಲು ನಮಗೆ ಸಹಾಯ ಮಾಡುತ್ತದೆ. ಸುಡುಬಿಸಿಲಲ್ಲಿ ಬೀಸುವ ತಂಗಾಳಿಯಂತೆ ದೇವರು ಕೊಟ್ಟ ಮಾತುಗಳು ಚಿಂತೆಯಿಂದ ತುಂಬಿದ ನಮ್ಮ ಮನಸ್ಸಿಗೆ ಮುದನೀಡುತ್ತದೆ. ನಮ್ಮ ಚಿಂತಾಭಾರವನ್ನು ಯೆಹೋವನ ಮೇಲೆ ಹಾಕಿದರೆ ಆತನು ನಮಗೆ ಸಹಾಯ ಮಾಡುತ್ತಾನೆ ಎನ್ನುವ ವಿಷಯ ಎಷ್ಟು ನೆಮ್ಮದಿ ಕೊಡುತ್ತೆ ಅಲ್ಲವೇ? (ಕೀರ್ತ. 55:22) ಆತನು “ನಾವು ಬೇಡುವುದಕ್ಕಿಂತಲೂ . . . ಎಷ್ಟೋ ಮಿಗಿಲಾದದ್ದನ್ನು ಅತ್ಯಧಿಕವಾಗಿ” ಕೊಡುತ್ತಾನೆ. (ಎಫೆ. 3:20) ಯೆಹೋವನು ನಮಗೆ ಅಧಿಕವಾಗಿ ಅಲ್ಲ, ಅತ್ಯಧಿಕವಾಗಿ ಅಲ್ಲ, ಅದಕ್ಕಿಂತಲೂ ಎಷ್ಟೋ ಹೆಚ್ಚಾಗಿ ಸಹಾಯ ಮಾಡುತ್ತಾನೆ!!!

9. ಯೆಹೋವನು ನಮ್ಮನ್ನು ಖಂಡಿತ ಆಶೀರ್ವದಿಸುತ್ತಾನೆ ಎಂದು ನಮಗೆ ಹೇಗೆ ಗೊತ್ತು?

9 ನಮಗೆ ಪ್ರತಿಫಲ ಸಿಗಬೇಕಾದರೆ ಯೆಹೋವನ ಮೇಲೆ ಸಂಪೂರ್ಣ ನಂಬಿಕೆ ಇಡಬೇಕು ಮತ್ತು ಆತನ ನಿರ್ದೇಶನಗಳನ್ನು ಪಾಲಿಸಬೇಕು. ಮೋಶೆ ಇಸ್ರಾಯೇಲ್ಯರಿಗೆ ‘ನೀವು ನಿಮ್ಮ ದೇವರಾದ ಯೆಹೋವನ ಮಾತಿಗೆ ಕಿವಿಗೊಟ್ಟು ನಾನು ಈಗ ನಿಮಗೆ ಬೋಧಿಸುವ ಈ ಧರ್ಮೋಪದೇಶವನ್ನೆಲ್ಲಾ ಅನುಸರಿಸಿದರೆ ನಿಮ್ಮ ದೇವರಾದ ಯೆಹೋವನು ವಾಗ್ದಾನಮಾಡಿದಂತೆ ನಿಮ್ಮನ್ನು ಅಭಿವೃದ್ಧಿಪಡಿಸುವನು’ ಎಂದು ಹೇಳಿದನು. (ಧರ್ಮೋ. 15:4-6) ನೀವು ಸಹ ಯೆಹೋವನಿಗೆ ವಿಧೇಯರಾಗಿದ್ದರೆ ಆತನು ನಿಮ್ಮನ್ನು ಆಶೀರ್ವದಿಸುತ್ತಾನೆ ಎಂದು ನಂಬುತ್ತೀರಾ? ನಂಬಲು ಬಲವಾದ ಕಾರಣಗಳಿವೆ.

ಯೆಹೋವನು ಕೊಟ್ಟ ಪ್ರತಿಫಲ

10, 11. ಯೆಹೋವನು ಯೋಸೇಫನಿಗೆ ಯಾವ ಪ್ರತಿಫಲ ಕೊಟ್ಟನು?

10 ನಮ್ಮ ಪ್ರಯೋಜನಕ್ಕಾಗಿ ಬೈಬಲನ್ನು ಬರೆಯಲಾಗಿದೆ. ದೇವರು ತನ್ನ ನಂಬಿಗಸ್ತ ಸೇವಕರಿಗೆ ಪ್ರತಿಫಲ ಕೊಡುತ್ತಾನೆ ಎನ್ನುವುದಕ್ಕೆ ಅದರಲ್ಲಿ ಅನೇಕ ಉದಾಹರಣೆಗಳಿವೆ. (ರೋಮ. 15:4) ಅದರಲ್ಲಿ ಒಂದು ಅತ್ಯುತ್ತಮ ಉದಾಹರಣೆ ಯೋಸೇಫನದ್ದು. ಅವನ ಅಣ್ಣಂದಿರು ಅವನನ್ನು ದಾಸನಾಗಿ ಮಾರಿದರು. ಐಗುಪ್ತದಲ್ಲಿ ಅವನ ಯಜಮಾನನ ಪತ್ನಿ ಯೋಸೇಫನ ಮೇಲೆ ಸುಳ್ಳು ಆರೋಪ ಹಾಕಿದಳು. ಇದರಿಂದ ಅವನು ಜೈಲು ಸೇರಬೇಕಾಗಿ ಬಂತು. ಜೈಲಲ್ಲಿದ್ದ ಯೋಸೇಫ ಯೆಹೋವನಿಂದ ದೂರ ಆದನಾ? ಇಲ್ಲ. ಕಷ್ಟದಲ್ಲಿದ್ದಾಗ ಯೆಹೋವನು ಕೈಬಿಡಲ್ಲ ಎಂದು ಯೋಸೇಫನಿಗೆ ಗೊತ್ತಿತ್ತು. ‘ಯೆಹೋವನು ಯೋಸೇಫನ ಸಂಗಡ ಇದ್ದು ಅವನ ಮೇಲೆ ಕೃಪೆಯನ್ನಿಟ್ಟು ಅವನು ನಡಿಸಿದ್ದೆಲ್ಲವನ್ನು ಕೈಗೂಡಿಸಿದನು’ ಎಂದು ಬೈಬಲ್‌ ಹೇಳುತ್ತದೆ.—ಆದಿ. 39:21, 23.

11 ಕೆಲವು ವರ್ಷಗಳ ನಂತರ ಯೋಸೇಫನನ್ನು ಫರೋಹ ಜೈಲಿಂದ ಬಿಡುಗಡೆ ಮಾಡಿದನು. ದಾಸನಾಗಿದ್ದವನು ಐಗುಪ್ತದಲ್ಲಿ ರಾಜನ ನಂತರದ ಸ್ಥಾನಕ್ಕೆ ಬಂದನು. (ಆದಿ. 41:1, 37-43) ಯೋಸೇಫನಿಗೆ ಮಕ್ಕಳಾದಾಗ ದೊಡ್ಡವನಿಗೆ “ನಾನು ನನ್ನ ಎಲ್ಲಾ ಕಷ್ಟವನ್ನೂ ತಂದೆಯ ಮನೆಯವರನ್ನೂ ಮರೆತುಬಿಡುವಂತೆ ದೇವರು ಮಾಡಿದ್ದಾನಲ್ಲಾ ಎಂದು ಹೇಳಿ ಅವನಿಗೆ ಮನಸ್ಸೆ ಎಂದು ಹೆಸರಿಟ್ಟನು. ಎರಡನೆಯ ಮಗನು ಹುಟ್ಟಿದಾಗ ಅವನು—ನನಗೆ ಸಂಕಟ ಬಂದ ದೇಶದಲ್ಲೇ ದೇವರು ಅಭಿವೃದ್ಧಿಯನ್ನು ದಯಪಾಲಿಸಿದ್ದಾನೆಂದು ಹೇಳಿ ಆ ಮಗನಿಗೆ ಎಫ್ರಾಯೀಮ್‌ ಎಂದು ಹೆಸರಿಟ್ಟನು.” (ಆದಿ. 41:51, 52) ಬರಗಾಲ ಬಂದಾಗ ಯೋಸೇಫ ಇಸ್ರಾಯೇಲ್ಯರನ್ನು ಮತ್ತು ಐಗುಪ್ತ್ಯರನ್ನು ಕಾಪಾಡಿದನು. ಇದಕ್ಕೆ ಕಾರಣ ಯೆಹೋವನೇ ಎಂದು ಯೋಸೇಫನಿಗೆ ಚೆನ್ನಾಗಿ ಗೊತ್ತಿತ್ತು. ಹೀಗೆ ಯೋಸೇಫ ತೋರಿಸಿದ ನಿಷ್ಠೆಗೆ ಯೆಹೋವನು ಪ್ರತಿಫಲ ಕೊಟ್ಟನು.—ಆದಿ. 45:5-9.

12. ಕಷ್ಟ-ತೊಂದರೆಗಳು ಬಂದರೂ ನಂಬಿಗಸ್ತನಾಗಿರಲು ಯೇಸುವಿಗೆ ಯಾವುದು ಸಹಾಯ ಮಾಡಿತು?

12 ಯೇಸುವಿಗೆ ಸಹ ಅನೇಕ ಕಷ್ಟ-ತೊಂದರೆಗಳು ಬಂದರೂ ದೇವರಿಗೆ ವಿಧೇಯನಾಗಿದ್ದನು. ಅದಕ್ಕಾಗಿ ಯೆಹೋವನು ಅವನಿಗೆ ಪ್ರತಿಫಲವನ್ನೂ ಕೊಟ್ಟನು. ನಂಬಿಗಸ್ತನಾಗಿ ಇರಲು ಯೇಸುವಿಗೆ ಸಹಾಯ ಮಾಡಿದ್ದು ಯಾವುದು? ‘ಅವನು ತನ್ನ ಮುಂದೆ ಇಡಲ್ಪಟ್ಟಿದ್ದ ಆನಂದಕ್ಕೋಸ್ಕರ ಅವಮಾನವನ್ನು ಅಲಕ್ಷ್ಯಮಾಡಿ ಯಾತನಾ ಕಂಬವನ್ನು ಸಹಿಸಿಕೊಂಡನು’ ಎಂದು ದೇವರ ವಾಕ್ಯ ಹೇಳುತ್ತದೆ. (ಇಬ್ರಿ. 12:2) ದೇವರ ನಾಮವನ್ನು ಪವಿತ್ರೀಕರಿಸುವುದರಲ್ಲಿ ಯೇಸು ಆನಂದಪಟ್ಟನು. ಇದರಿಂದ ಅವನಿಗೆ ಸಿಕ್ಕಿದ ಪ್ರತಿಫಲವೇನು? ಯೆಹೋವನು ಅವನನ್ನು ಮೆಚ್ಚಿದನು ಮತ್ತು ಅನೇಕ ಸುಯೋಗಗಳನ್ನು ಕೊಟ್ಟನು. ಅವನು ‘ದೇವರ ಸಿಂಹಾಸನದ ಬಲಗಡೆಯಲ್ಲಿ ಕುಳಿತುಕೊಂಡನು.’ ಅಷ್ಟೇ ಅಲ್ಲ, ದೇವರು “ಅವನನ್ನು ಉನ್ನತವಾದ ಸ್ಥಾನಕ್ಕೆ ಏರಿಸಿ ಬೇರೆ ಎಲ್ಲ ಹೆಸರುಗಳಿಗಿಂತಲೂ ಉನ್ನತವಾದ ಹೆಸರನ್ನು ಅವನಿಗೆ ದಯಪಾಲಿಸಿದನು” ಎಂದು ಬೈಬಲ್‌ ಹೇಳುತ್ತದೆ.—ಫಿಲಿ. 2:9.

ಯೆಹೋವನು ಮರೆಯುವುದಿಲ್ಲ

13, 14. ಯೆಹೋವನಿಗಾಗಿ ನಾವು ಮಾಡಿದ್ದನ್ನು ಆತನು ಮರೆಯದೆ ಹೇಗೆ ಸಹಾಯ ಮಾಡುತ್ತಾನೆ?

13 ಯೆಹೋವನು ಆತನ ಸೇವೆಯಲ್ಲಿ ನಾವು ಮಾಡುವ ಪ್ರತಿಯೊಂದನ್ನೂ ನೆನಪಿಟ್ಟುಕೊಳ್ಳುತ್ತಾನೆ. ‘ನಾನು ಅರ್ಹನಲ್ಲ, ನನ್ನಲ್ಲಿ ಸಾಮರ್ಥ್ಯ ಇಲ್ಲ’ ಎಂದು ನೊಂದುಕೊಳ್ಳುವಾಗ ದೇವರು ನಮ್ಮನ್ನು ಸಂತೈಸುತ್ತಾನೆ. ‘ನನಗೆ ಕೆಲಸ ಇಲ್ಲ, ಸಂಸಾರ ಹೇಗೆ ಸಾಗಿಸಲಿ’ ಎಂಬ ಚಿಂತೆ ಕಾಡುವಾಗ ಯೆಹೋವನು ನಮ್ಮನ್ನು ನೋಡಿಕೊಳ್ಳುತ್ತಾನೆ. ಕಾಯಿಲೆ ಅಥವಾ ಖಿನ್ನತೆಯಿಂದ ‘ಯೆಹೋವನಿಗೆ ಹಿಂದೆ ಮಾಡಿದಷ್ಟು ಸೇವೆಯನ್ನ ಈಗ ಮಾಡಕ್ಕಾಗ್ತಿಲ್ಲ’ ಎಂದು ಕೊರಗುವಾಗ ಆತನು ನಮ್ಮನ್ನು ಅರ್ಥಮಾಡಿಕೊಳ್ಳುತ್ತಾನೆ. ಕಷ್ಟಗಳಿದ್ದರೂ ನಂಬಿಗಸ್ತರಾಗಿ ಇರುವುದನ್ನು ನೋಡಿ ಯೆಹೋವನು ಸಂತೋಷ ಪಡುತ್ತಾನೆ ಎನ್ನುವ ಸಂಪೂರ್ಣ ಭರವಸೆ ನಮಗಿರಬೇಕು.ಇಬ್ರಿಯ 6:10, 11 ಓದಿ.

14 ಯೆಹೋವನು ‘ಪ್ರಾರ್ಥನೆಯನ್ನು ಕೇಳುವವನು’ ಎನ್ನುವುದನ್ನು ನಾವು ಮರೆಯಬಾರದು. ನಮ್ಮ ಪ್ರಾರ್ಥನೆಗಳನ್ನು ಕೇಳಿ ಖಂಡಿತ ಉತ್ತರ ಕೊಡುತ್ತಾನೆ. (ಕೀರ್ತ. 65:2) ಆತನು “ಕೋಮಲ ಕರುಣೆಯ ತಂದೆಯೂ ಸಕಲ ಸಾಂತ್ವನದ ದೇವರೂ” ಆಗಿರುವುದರಿಂದ ನಾವು ಯಾವಾಗಲೂ ಆತನ ಹತ್ತಿರವಿರಲು ಬೇಕಾದ ಎಲ್ಲ ಸಹಾಯವನ್ನು ಕೊಡುತ್ತಾನೆ. ಅದರಲ್ಲಿ ಒಂದು ವಿಧ ಆತನು ನಮ್ಮ ಸಹೋದರ ಸಹೋದರಿಯರ ಮೂಲಕ ಕೊಡುವ ಸಹಾಯ. (2 ಕೊರಿಂ. 1:3) ನಾವು ಬೇರೆಯವರ ಕಷ್ಟಗಳನ್ನು ಅರ್ಥಮಾಡಿಕೊಂಡು ಸಹಾಯ ಮಾಡುವಾಗ ಯೆಹೋವನಿಗೆ ಸಂತೋಷ ಆಗುತ್ತದೆ. ‘ಬಡವರಿಗೆ ದಯೆತೋರಿಸುವವನು ಯೆಹೋವನಿಗೆ ಸಾಲಕೊಡುತ್ತಾನೆ; ಆ ಉಪಕಾರಕ್ಕೆ ಯೆಹೋವನೇ ಪ್ರತ್ಯುಪಕಾರ ಮಾಡುತ್ತಾನೆ.’ (ಜ್ಞಾನೋ. 19:17; ಮತ್ತಾ. 6:3, 4) ಹಾಗಾಗಿ ನಾವು ಆಪತ್ಭಾಂದವರಾಗಿ ನಮ್ಮ ಸಹೋದರರಿಗೆ ಸಹಾಯ ಮಾಡಿದರೆ ಯೆಹೋವನಿಗೆ ಸಾಲ ಕೊಟ್ಟಂತೆ ಇರುತ್ತದೆ. ಅದಕ್ಕೆ ನಮಗೆ ಯೆಹೋವನು ಖಂಡಿತ ಪ್ರತಿಫಲ ಕೊಟ್ಟೇ ಕೊಡುತ್ತಾನೆ.

ಪ್ರತಿಫಲ ಇಂದಿಗೂ ಎಂದೆಂದಿಗೂ

15. ನೀವು ಯಾವ ಪ್ರತಿಫಲವನ್ನು ಪಡೆಯಲು ಕಾಯುತ್ತಾ ಇದ್ದೀರಾ? (ಲೇಖನದ ಆರಂಭದ ಚಿತ್ರ ನೋಡಿ.)

15 ಯೇಸು ಅಭಿಷಿಕ್ತ ಕ್ರೈಸ್ತರಿಗೆ “ನೀತಿಯ ಕಿರೀಟ” ಎಂಬ ಪ್ರತಿಫಲವನ್ನು ಕೊಡುತ್ತಾನೆ. (2 ತಿಮೊ. 4:7, 8) ಭೂನಿರೀಕ್ಷೆ ಇರುವವರಿಗೆ ಸಿಗುವ ಪ್ರತಿಫಲ ಕಡಿಮೆ ಏನಲ್ಲ. ‘ಬೇರೆ ಕುರಿಗಳ’ ಭಾಗವಾಗಿರುವ ಮಿಲ್ಯಾಂತರ ಜನರು ನಿತ್ಯಜೀವದ ಪ್ರತಿಫಲವನ್ನು ಪಡೆಯಲು ಕಾತುರದಿಂದ ಕಾಯುತ್ತಿದ್ದಾರೆ. ಪರದೈಸಿನಲ್ಲಿ “ಅವರು ಮಹಾಸೌಖ್ಯದಿಂದ ಆನಂದಿಸುವರು.”—ಯೋಹಾ. 10:16; ಕೀರ್ತ. 37:11.

16. ಒಂದನೇ ಯೋಹಾನ 3:19, 20⁠ರಲ್ಲಿ ನಮಗೆ ಯಾವ ಆಶ್ವಾಸನೆ ಸಿಗುತ್ತದೆ?

16 ಕೆಲವೊಮ್ಮೆ ನಾವು ಮಾಡುತ್ತಿರುವ ಸೇವೆ ತುಂಬ ಕಡಿಮೆ ಅಂತ ನಮಗೆ ಅನಿಸಬಹುದು. ಯೆಹೋವನು ನಮ್ಮ ಸೇವೆಯನ್ನು ಮೆಚ್ಚುತ್ತಾನಾ ಎನ್ನುವ ಸಂಶಯ ಬರಬಹುದು. ದೇವರು ಕೊಡುವ ಪ್ರತಿಫಲವನ್ನು ಪಡೆಯುವಷ್ಟು ಯೋಗ್ಯತೆ ನನಗಿಲ್ಲ ಎಂಬ ಕೀಳರಿಮೆ ಕಾಡಬಹುದು. ಆದರೆ “ದೇವರು ನಮ್ಮ ಹೃದಯಗಳಿಗಿಂತ ಹೆಚ್ಚು ಶ್ರೇಷ್ಠನಾಗಿದ್ದಾನೆ ಮತ್ತು ಎಲ್ಲವನ್ನೂ ತಿಳಿದವನಾಗಿದ್ದಾನೆ” ಎನ್ನುವುದನ್ನು ಮರೆಯಬೇಡಿ. (1 ಯೋಹಾನ 3:19, 20 ಓದಿ.) ಯೆಹೋವನ ಮೇಲೆ ಪ್ರೀತಿ, ನಂಬಿಕೆಯಿಂದ ನಾವು ಆತನ ಸೇವೆ ಮಾಡುವಾಗ ಅದನ್ನು ಯೆಹೋವನು ಮೆಚ್ಚುತ್ತಾನೆ. ‘ನಾನೇನೂ ಹೆಚ್ಚು ಮಾಡ್ತಾ ಇಲ್ಲ’ ಅಂತ ನಮಗೆ ಅನಿಸಿದರೂ ಅದಕ್ಕೆ ಪ್ರತಿಫಲ ಕೊಡುತ್ತಾನೆ.—ಮಾರ್ಕ 12:41-44.

17. ಇಂದು ಯೆಹೋವನು ನಮ್ಮನ್ನು ಹೇಗೆಲ್ಲ ಆಶೀರ್ವದಿಸಿದ್ದಾನೆ?

17 ಸೈತಾನನ ಈ ದುಷ್ಟ ಲೋಕದ ಕಡೇ ದಿವಸಗಳಲ್ಲೂ ಯೆಹೋವನು ತನ್ನ ಜನರನ್ನು ಆಶೀರ್ವದಿಸಿದ್ದಾನೆ. ಆತನ ಬಗ್ಗೆ ನಾವು ಪಡೆಯುವ ಜ್ಞಾನದಲ್ಲಿ ಕಡಿಮೆಯಾಗದಂತೆ ನೋಡಿಕೊಳ್ಳುತ್ತಿದ್ದಾನೆ. ಅಂತಾರಾಷ್ಟ್ರೀಯ ಸಹೋದರ ಬಳಗದಲ್ಲಿ ಶಾಂತಿ ಇರುವಂತೆ ನೋಡಿಕೊಳ್ಳುತ್ತಿದ್ದಾನೆ. (ಯೆಶಾ. 54:13) ಯೇಸು ಹೇಳಿದಂತೆ, ಸಹೋದರ ಸಹೋದರಿಯರ ಒಂದು ದೊಡ್ಡ ಕುಟುಂಬದ ಭಾಗವಾಗಿ ಇರುವಂತೆ ಮಾಡಿ ನಮ್ಮನ್ನು ಆಶೀರ್ವದಿಸಿದ್ದಾನೆ. (ಮಾರ್ಕ 10:29, 30) ಆತನನ್ನು ಶ್ರದ್ಧೆಯಿಂದ ಹುಡುಕುವವರಿಗೆ ಸಂತೋಷ, ಸಂತೃಪ್ತಿ, ಮನಶ್ಶಾಂತಿ ಸಿಗುವಂತೆ ಮಾಡಿದ್ದಾನೆ.—ಫಿಲಿ. 4:4-7.

18, 19. ಯೆಹೋವನು ಕೊಟ್ಟಿರುವ ಪ್ರತಿಫಲದ ಬಗ್ಗೆ ಕೆಲವರು ಏನು ಹೇಳುತ್ತಾರೆ?

18 ನಮ್ಮ ತಂದೆಯಾದ ಯೆಹೋವನಿಂದ ಪ್ರತಿಫಲವನ್ನು ಪಡೆದಿರುವ ಸಹೋದರ ಸಹೋದರಿಯರ ಉದಾಹರಣೆಗಳು ಬೇಕಾದಷ್ಟಿವೆ. ಅದರಲ್ಲಿ ಒಬ್ಬರು ಜರ್ಮನಿಯಲ್ಲಿರುವ ಬಿಯಾಂಕ. ಅವರು ಹೇಳುವುದು: “ಯೆಹೋವನು ನನ್ನ ಪಕ್ಕದಲ್ಲೇ ಇದ್ದು ನನ್ನ ಚಿಂತೆಗಳನ್ನು ನಿಭಾಯಿಸಲು ಸಹಾಯ ಮಾಡುತ್ತಿದ್ದಾನೆ. ಅದಕ್ಕೆ ನಾನು ಎಷ್ಟು ಧನ್ಯವಾದ ಹೇಳಿದರೂ ಸಾಕಾಗಲ್ಲ. ಈ ಲೋಕ ತುಂಬಾ ಕೆಟ್ಟು ಹೋಗಿದೆ. ಆದರೆ ನಾನು ಯೆಹೋವನ ಸೇವೆ ಮಾಡುತ್ತಿರುವುದರಿಂದ ಆತನ ಕೈಯಲ್ಲಿ ಸುರಕ್ಷಿತವಾಗಿದ್ದೇನೆ. ಆತನ ಸೇವೆಗಾಗಿ ಒಂದು ಚಿಕ್ಕ ತ್ಯಾಗ ಮಾಡಿದರೂ ಯೆಹೋವನು ನನ್ನನ್ನು ನೂರು ಪಟ್ಟು ಆಶೀರ್ವದಿಸುತ್ತಾನೆ.”

19 ಕೆನಡ ದೇಶದ ಪೋಲ ಎಂಬ ಸಹೋದರಿಯ ಉದಾಹರಣೆ ಗಮನಿಸಿ. 70 ವರ್ಷದ ಇವರಿಗೆ ಬೆನ್ನೆಲುಬಿನ ಗಂಭೀರ ಕಾಯಿಲೆ ಇದೆ. ಇದರಿಂದಾಗಿ ಬೇಕಾದ ಕಡೆ ಓಡಾಡಲು ಆಗುವುದಿಲ್ಲ. ಆದರೂ ಅವರು ತಮ್ಮ ಸೇವೆಯನ್ನು ಕಡಿಮೆ ಮಾಡಿಲ್ಲ. ಅವರು ಹೇಳುವುದು: “ನಾನು ಫೋನ್‌ ಮೂಲಕ ಜನರಿಗೆ ಸಾಕ್ಷಿ ಕೊಡುತ್ತೇನೆ, ಅನೌಪಚಾರಿಕವಾಗಿ ಸಾಕ್ಷಿ ಕೊಡುತ್ತೇನೆ. ನನಗೆ ಇಷ್ಟವಾದ ವಚನಗಳನ್ನು, ನಮ್ಮ ಪ್ರಕಾಶನಗಳಲ್ಲಿ ಬರೋ ಒಳ್ಳೊಳ್ಳೆ ವಿಷಯಗಳನ್ನು ಒಂದು ಪುಸ್ತಕದಲ್ಲಿ ಬರೆದಿಟ್ಟು ಬೇಜಾರಾದಾಗೆಲ್ಲ ಅದನ್ನು ತೆಗೆದು ಓದುತ್ತೇನೆ. ಆಗ ಬೇಜಾರೆಲ್ಲ ಓಡಿಹೋಗುತ್ತೆ. ಆ ಪುಸ್ತಕವನ್ನು ‘ನನ್ನ ಬಾಳ ಬೆಳದಿಂಗಳು’ ಅಂತ ಕರೆಯುತ್ತೇನೆ. ಏನೇ ಕಷ್ಟ ಬಂದರೂ ಯೆಹೋವನು ಯಾವಾಗಲೂ ನಮಗೆ ಸಹಾಯ ಮಾಡುತ್ತಾನೆ.” ನಮ್ಮ ಪರಿಸ್ಥಿತಿ ಈ ಸಹೋದರಿಯರ ಹಾಗೆ ಇರಲಿಕ್ಕಿಲ್ಲ. ಬೇರೆ ಯಾವುದೋ ಕಷ್ಟ ನಮ್ಮನ್ನು ಕಾಡುತ್ತಿರಬಹುದು. ಆದರೂ ಯೆಹೋವನು ನಮ್ಮನ್ನು ಮತ್ತು ನಮ್ಮ ಸಭೆಯಲ್ಲಿ ಇರುವವರನ್ನು ಹೇಗೆ ಆಶೀರ್ವದಿಸಿದ್ದಾನೆ ಎನ್ನುವುದರ ಬಗ್ಗೆ ಧ್ಯಾನಿಸಿದರೆ ಬಲ ಸಿಗುತ್ತದೆ. ನಮಗೆ ದೇವರು ಈಗ ಕೊಟ್ಟಿರುವ ಮತ್ತು ಮುಂದೆ ಕೊಡುವ ಪ್ರತಿಫಲದ ಬಗ್ಗೆ ಧ್ಯಾನಿಸುವುದು ತುಂಬ ಒಳ್ಳೇದು.

20. ನಂಬಿಗಸ್ತರಾಗಿ ಯೆಹೋವನ ಸೇವೆ ಮಾಡುತ್ತಾ ಇದ್ದರೆ ನಮಗೆ ಯಾವ ಪ್ರತಿಫಲ ಸಿಗುತ್ತದೆ?

20 ನಾವು ಮನಬಿಚ್ಚಿ ಯೆಹೋವನಿಗೆ ಪ್ರಾರ್ಥಿಸಿದರೆ ನಮಗೆ “ಮಹಾ ಪ್ರತಿಫಲ” ಸಿಗುತ್ತದೆ. ‘ನಾವು ದೇವರ ಚಿತ್ತವನ್ನು ಮಾಡಿದರೆ ವಾಗ್ದಾನದ ನೆರವೇರಿಕೆಯನ್ನು ಹೊಂದುತ್ತೇವೆ’ ಎಂಬ ಮಾತಿನಲ್ಲಿ ನಮಗೆ ಭರವಸೆ ಮೂಡುತ್ತದೆ. (ಇಬ್ರಿ. 10:35, 36) ವಾಗ್ದಾನದ ನೆರವೇರಿಕೆಯನ್ನು ಪಡೆಯುವ ವರೆಗೆ ನಮ್ಮ ನಂಬಿಕೆಯನ್ನು ಬಲಪಡಿಸುತ್ತಾ ಇರೋಣ. ಸೇವೆಯಲ್ಲಿ ನಮ್ಮ ಕೈಲಾದದ್ದೆಲ್ಲಾ ಮಾಡೋಣ. ಯೆಹೋವನು ಅದಕ್ಕೆಲ್ಲ ಪ್ರತಿಫಲ ಕೊಟ್ಟೇ ಕೊಡುತ್ತಾನೆ.ಕೊಲೊಸ್ಸೆ 3:23, 24 ಓದಿ.