ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ವಾಚಕರಿಂದ ಪ್ರಶ್ನೆಗಳು

ವಾಚಕರಿಂದ ಪ್ರಶ್ನೆಗಳು

ಯೆಹೆಜ್ಕೇಲ ಅಧ್ಯಾಯ 37ರಲ್ಲಿ ಎರಡು ಕೋಲುಗಳು ಒಂದಾಗುವವು ಎಂದು ತಿಳಿಸಲಾಗಿದೆ. ಇದರ ಅರ್ಥವೇನು?

ಯೆಹೋವನು ತನ್ನ ಪ್ರವಾದಿ ಯೆಹೆಜ್ಕೇಲನ ಮೂಲಕ ತನ್ನ ಜನರು ವಾಗ್ದತ್ತ ದೇಶಕ್ಕೆ ಹಿಂದಿರುಗುವರೆಂದು ಮತ್ತು ಪುನಃ ಒಂದೇ ಜನಾಂಗವಾಗಿ ಐಕ್ಯರಾಗುವರೆಂದು ಮುಂತಿಳಿಸಿದನು. ಅದೇ ಪ್ರವಾದನೆಯು ಕಡೇ ದಿವಸಗಳಲ್ಲಿ ದೇವರನ್ನು ಆರಾಧಿಸುವವರು ಒಂದೇ ಜನಾಂಗವಾಗಿ ಐಕ್ಯರಾಗುವರೆಂದು ಸಹ ಮುಂತಿಳಿಸಿತು.

ಯೆಹೋವನು ಪ್ರವಾದಿ ಯೆಹೆಜ್ಕೇಲನಿಗೆ ಎರಡು ದಂಡಗಳ ಮೇಲೆ ಅಂದರೆ ಕೋಲುಗಳ ಮೇಲೆ ಬರೆಯುವಂತೆ ಹೇಳಿದನು. ಒಂದು ಕೋಲಿನ ಮೇಲೆ “ಯೆಹೂದದ್ದು, ಯೆಹೂದಕ್ಕೆ ಸೇರಿದ ಇಸ್ರಾಯೇಲ್ಯರದು” ಎಂದು, ಇನ್ನೊಂದರ ಮೇಲೆ “ಯೋಸೇಫಿನದು, ಎಫ್ರಾಯೀಮಿನದು, ಯೋಸೇಫಿಗೆ ಸೇರಿದ ಎಲ್ಲಾ ಇಸ್ರಾಯೇಲ್ಯರದು” ಎಂದು ಬರೆಯಬೇಕಿತ್ತು. ಈ ಎರಡೂ ಕೋಲುಗಳು ಯೆಹೆಜ್ಕೇಲನ ಕೈಯಲ್ಲಿ ‘ಒಂದಾಗಲಿದ್ದವು.’—ಯೆಹೆ. 37:15-17.

‘ಎಫ್ರಾಯೀಮ್‌’ ಯಾರನ್ನು ಸೂಚಿಸುತ್ತದೆ? ಉತ್ತರದ ಇಸ್ರಾಯೇಲ್‌ ರಾಜ್ಯದಲ್ಲಿದ್ದ ಹತ್ತು ಕುಲಗಳಲ್ಲಿ ಎಫ್ರಾಯೀಮ್‌ ಕುಲ ಅತಿ ಪ್ರಧಾನ. ಆ ಉತ್ತರದ ರಾಜ್ಯವನ್ನು ಆಳಿದ ಮೊದಲ ರಾಜನಾದ ಯಾರೊಬ್ಬಾಮ ಎಫ್ರಾಯೀಮ್‌ ಕುಲದವನು. (ಧರ್ಮೋ. 33:13, 17; 1 ಅರ. 11:26) ಈ ಕುಲದ ಮೂಲಪುರುಷನು ಯೋಸೇಫನ ಮಗನಾದ ಎಫ್ರಾಯೀಮ್‌. (ಅರ. 1:32, 33) ಯೋಸೇಫನಿಗೆ ಅವನ ತಂದೆಯಾದ ಯಾಕೋಬನಿಂದ ವಿಶೇಷ ಆಶೀರ್ವಾದ ಸಿಕ್ಕಿತ್ತು. ಆದ್ದರಿಂದ ‘ಎಫ್ರಾಯೀಮಿನ ಕೋಲು’ ಹತ್ತು ಕುಲಗಳಿದ್ದ ಉತ್ತರ ರಾಜ್ಯವನ್ನು ಸೂಕ್ತವಾಗಿಯೇ ಸೂಚಿಸುತ್ತದೆ. ಯೆಹೆಜ್ಕೇಲನು ಪ್ರವಾದಿಸಿದಕ್ಕಿಂತ ಎಷ್ಟೋ ಸಮಯದ ಹಿಂದೆ ಅಂದರೆ ಕ್ರಿ.ಪೂ. 740ರಲ್ಲಿ ಅಶ್ಶೂರ್ಯದವರು ಉತ್ತರದ ಇಸ್ರಾಯೇಲ್‌ ರಾಜ್ಯವನ್ನು ವಶಪಡಿಸಿ, ಜನರನ್ನು ಸೆರೆಯಾಳುಗಳಾಗಿ ಒಯ್ದಿದ್ದರು. (2 ಅರ. 17:6) ವರ್ಷಗಳ ನಂತರ ಬಾಬೆಲಿನವರು ಅಶ್ಶೂರ್ಯರನ್ನು ಸೋಲಿಸಿದರು. ಹಾಗಾಗಿ, ಎರಡು ಕೋಲುಗಳ ಕುರಿತ ಈ ಪ್ರವಾದನೆಯನ್ನು ಯೆಹೆಜ್ಕೇಲನು ಬರೆದಾಗ ಇಸ್ರಾಯೇಲ್ಯರಲ್ಲಿ ಹೆಚ್ಚಿನವರು ಬಾಬೆಲ್‌ ಸಾಮ್ರಾಜ್ಯದಲ್ಲೆಲ್ಲ ಚೆದರಿಹೋಗಿದ್ದರು.

ಕ್ರಿ.ಪೂ. 607ರಲ್ಲಿ ಬಾಬೆಲಿನವರು ಎರಡು ಕುಲಗಳಿದ್ದ ಯೆಹೂದದ ದಕ್ಷಿಣ ರಾಜ್ಯವನ್ನು ವಶಪಡಿಸಿ, ಅಲ್ಲಿನ ಜನರನ್ನು ಬಾಬೆಲಿಗೆ ಸೆರೆ ಒಯ್ದರು. ಆಗ ಉತ್ತರದ ಇಸ್ರಾಯೇಲ್‌ ರಾಜ್ಯದಲ್ಲಿ ಉಳಿದಿದ್ದವರನ್ನೂ ಅವರು ಒಯ್ದಿರಬಹುದು. ದಕ್ಷಿಣ ರಾಜ್ಯದ ರಾಜರು ಯೆಹೂದ ಕುಲದವರಾಗಿದ್ದರು. ಯೆಹೂದದಲ್ಲೇ ಯಾಜಕರು ಸಹ ವಾಸಿಸುತ್ತಿದ್ದರು. ಏಕೆಂದರೆ ಅವರು ಯೆರೂಸಲೇಮಿನ ಆಲಯದಲ್ಲಿ ಸೇವೆಮಾಡಬೇಕಿತ್ತು. (2 ಪೂರ್ವ. 11:13, 14; 34:30) ಆದ್ದರಿಂದ ‘ಯೆಹೂದದ ಕೋಲು’ ದಕ್ಷಿಣ ರಾಜ್ಯದ ಎರಡು ಕುಲಗಳನ್ನು ಸೂಚಿಸುವುದು ಸೂಕ್ತವಾಗಿತ್ತು.

ಈ ಎರಡು ಕೋಲುಗಳು ಒಂದಾದದ್ದು ಯಾವಾಗ? ಕ್ರಿ.ಪೂ. 537ರಲ್ಲಿ. ದಕ್ಷಿಣ ಹಾಗೂ ಉತ್ತರ ರಾಜ್ಯದಿಂದ ಬಾಬೆಲಿಗೆ ಸೆರೆಗೆ ಒಯ್ಯಲ್ಪಟ್ಟವರ ಪ್ರತಿನಿಧಿಗಳು ಆ ವರ್ಷದಲ್ಲಿ ಯೆರೂಸಲೇಮಿಗೆ ಹಿಂದಿರುಗಿ ಆಲಯವನ್ನು ಪುನಃ ಕಟ್ಟಿದರು. ಅಂದಿನಿಂದ ಇಸ್ರಾಯೇಲ್‌ ಜನಾಂಗ ಎರಡು ರಾಜ್ಯಗಳಾಗಿ ವಿಭಜಿತವಾಗಿರಲಿಲ್ಲ. ಪುನಃ ಒಮ್ಮೆ ಇಸ್ರಾಯೇಲ್ಯರು ಒಟ್ಟಿಗೆ ಯೆಹೋವನನ್ನು ಆರಾಧಿಸಿದರು. (ಯೆಹೆ. 37:21, 22) ಈ ಐಕ್ಯವನ್ನು ಯೆಶಾಯ ಹಾಗೂ ಯೆರೆಮೀಯ ಪ್ರವಾದಿಗಳು ಸಹ ಮುಂತಿಳಿಸಿದ್ದರು.—ಯೆಶಾ. 11:12, 13; ಯೆರೆ. 31:1, 6, 31.

ಯೆಹೆಜ್ಕೇಲನ ಪ್ರವಾದನೆ ಶುದ್ಧ ಆರಾಧನೆಯ ಬಗ್ಗೆ ಏನನ್ನು ಮುಂತಿಳಿಸಿದೆ? ಯೆಹೋವನು ತನ್ನ ಆರಾಧಕರೆಲ್ಲರನ್ನು ಒಂದಾಗುವಂತೆ ಮಾಡುವನೆಂದೇ. (ಯೆಹೆ. 37:18, 19) ಈ ವಾಗ್ದಾನ ನಮ್ಮೀ ದಿನದಲ್ಲಿ ನೆರವೇರಿದೆಯಾ? ಹೌದು. 1919ರಿಂದ ಆ ಪ್ರವಾದನೆ ನೆರವೇರಲು ಆರಂಭವಾಯಿತು. ಅದಕ್ಕೆ ಮುಂಚೆ ಸೈತಾನನು ದೇವರ ಜನರನ್ನು ಕಾಯಂ ಆಗಿ ವಿಭಜಿಸಲು ಪ್ರಯತ್ನಿಸಿದ್ದನು. ಆದರೆ 1919ರಲ್ಲಿ ದೇವರು ತನ್ನ ಜನರನ್ನು ಹಂತ ಹಂತವಾಗಿ ಪುನಃ ಸಂಘಟಿಸಿ, ಮತ್ತೆ ಐಕ್ಯಗೊಳಿಸಿದನು.

ಆ ಸಮಯದಲ್ಲಿ ದೇವಜನರಲ್ಲಿ ಹೆಚ್ಚಿನವರಿಗೆ ಯೇಸುವಿನ ಜೊತೆ ಸ್ವರ್ಗದಲ್ಲಿ ರಾಜರು, ಯಾಜಕರು ಆಗುವ ನಿರೀಕ್ಷೆಯಿತ್ತು. (ಪ್ರಕ. 20:6) ಅವರು ‘ಯೆಹೂದದ ಕೋಲಿನಂತೆ’ ಇದ್ದರು. ಆದರೆ ಭೂಮಿ ಮೇಲೆ ಸದಾ ಜೀವಿಸುವ ನಿರೀಕ್ಷೆಯುಳ್ಳ ಕೆಲವರೂ ಇದ್ದರು. ಸಮಯ ದಾಟಿದಂತೆ ಈ ನಿರೀಕ್ಷೆಯುಳ್ಳವರ ಸಂಖ್ಯೆ ಹೆಚ್ಚುತ್ತಾ ಹೋಯಿತು. (ಜೆಕ. 8:23) ಇವರು ‘ಯೋಸೇಫಿನ ಕೋಲಿನಂತಿದ್ದರು.’

ಇಂದು ಈ ಎರಡೂ ಗುಂಪುಗಳು ಜೊತೆಯಾಗಿ ಯೆಹೋವನ ಸೇವೆಮಾಡುತ್ತವೆ. ಅವರಿಗೆ ಒಬ್ಬನೇ ರಾಜನಿದ್ದಾನೆ. ಆತನು ಯೇಸು ಕ್ರಿಸ್ತ. ಆತನನ್ನು ಯೆಹೆಜ್ಕೇಲನ ಪ್ರವಾದನೆಯಲ್ಲಿ “ನನ್ನ ಸೇವಕನಾದ ದಾವೀದ” ಎಂದು ಕರೆಯಲಾಗಿದೆ. (ಯೆಹೆ. 37:24, 25) ಯೇಸು ತನ್ನ ಹಿಂಬಾಲಕರ ವಿಷಯದಲ್ಲಿ ತನ್ನ ತಂದೆಗೆ ಹೀಗೆ ಪ್ರಾರ್ಥಿಸಿದನು: “ಇವರೆಲ್ಲರೂ ಒಂದಾಗಿರಬೇಕೆಂದೂ ನೀನು ನನ್ನೊಂದಿಗೆ ಮತ್ತು ನಾನು ನಿನ್ನೊಂದಿಗೆ ಐಕ್ಯವಾಗಿರುವಂತೆ ಇವರು ಸಹ ನಮ್ಮೊಂದಿಗೆ ಐಕ್ಯವಾಗಿರಬೇಕೆಂದೂ ಕೇಳಿಕೊಳ್ಳುತ್ತೇನೆ.” * (ಯೋಹಾ. 17:20, 21) ತನ್ನ ಅಭಿಷಿಕ್ತ ಶಿಷ್ಯರಿಂದ ಕೂಡಿದ ಚಿಕ್ಕ ಹಿಂಡು ತನ್ನ ‘ಬೇರೆ ಕುರಿಗಳ’ ಜೊತೆ ಸೇರಿ “ಒಂದೇ ಹಿಂಡು” ಆಗುವುದೆಂದು ಸಹ ಯೇಸು ಮುಂತಿಳಿಸಿದನು. ಅವರೆಲ್ಲರೂ “ಒಬ್ಬನೇ ಕುರುಬ”ನನ್ನು ಹಿಂಬಾಲಿಸುವರು ಎಂದೂ ಹೇಳಿದನು. (ಯೋಹಾ. 10:16) ಆತನು ವರ್ಣಿಸಿದಂತೆಯೇ ದೇವಜನರೆಲ್ಲರೂ ಅವರ ನಿರೀಕ್ಷೆ ಸ್ವರ್ಗದ್ದಾಗಿರಲಿ ಭೂಮಿಯದ್ದಾಗಿರಲಿ ಇಂದು ಐಕ್ಯರಾಗಿದ್ದಾರೆ.

^ ಪ್ಯಾರ. 6 ಕಡೇ ದಿವಸಗಳ ಬಗ್ಗೆ ತಿಳಿಸುತ್ತಿದ್ದಾಗ ಯೇಸು ತನ್ನ ಶಿಷ್ಯರಿಗೆ ಹಲವಾರು ದೃಷ್ಟಾಂತಗಳನ್ನು ಕೊಟ್ಟನು. ಮೊದಲು ಆತನು ‘ನಂಬಿಗಸ್ತನೂ ವಿವೇಚನೆಯುಳ್ಳವನೂ ಆದ ಆಳಿಗೆ’ ಅಂದರೆ ದೇವಜನರ ಮಧ್ಯೆ ಮುಂದಾಳತ್ವ ವಹಿಸುವ ಅಭಿಷಿಕ್ತ ಸಹೋದರರ ಚಿಕ್ಕ ಗುಂಪಿಗೆ ಸೂಚಿಸಿದ್ದು ಆಸಕ್ತಿಕರ. (ಮತ್ತಾ. 24:45-47) ನಂತರ ಆತನು ಎಲ್ಲ ಅಭಿಷಿಕ್ತರಿಗೆ ಸೂಚಿಸುವಂಥ ದೃಷ್ಟಾಂತಗಳನ್ನು ಕೊಟ್ಟನು. (ಮತ್ತಾ. 25:1-30) ಕೊನೆಗೆ ಆತನು ಕ್ರಿಸ್ತನ ಸಹೋದರರನ್ನು ಬೆಂಬಲಿಸಿ, ಭೂಮಿ ಮೇಲೆ ಸದಾಕಾಲ ಜೀವಿಸುವವರ ಬಗ್ಗೆ ಮಾತಾಡಿದನು. (ಮತ್ತಾ. 25:31-46) ಅದೇ ರೀತಿಯಲ್ಲಿ ನಮ್ಮ ದಿನಗಳಲ್ಲಿ ಯೆಹೆಜ್ಕೇಲನ ಪ್ರವಾದನೆಯ ನೆರವೇರಿಕೆ ಆರಂಭವಾದಾಗ ಮೊದಲು ಅದು ಸ್ವರ್ಗದಲ್ಲಿ ಜೀವಿಸುವ ನಿರೀಕ್ಷೆಯಿದ್ದವರಿಗೆ ಅನ್ವಯವಾಯಿತು. ಇಸ್ರಾಯೇಲಿನ ಹತ್ತು ಕುಲಗಳು ಭೂಮಿ ಮೇಲೆ ಸದಾ ಜೀವಿಸುವವರಿಗೆ ಸಾಮಾನ್ಯವಾಗಿ ಸೂಚಿಸುವುದಿಲ್ಲವಾದರೂ, ಆ ಪ್ರವಾದನೆಯಲ್ಲಿ ವರ್ಣಿಸಲಾಗಿರುವ ಐಕ್ಯವು ಇವರ ಮತ್ತು ಅಭಿಷಿಕ್ತರ ಮಧ್ಯೆ ಇರುವ ಐಕ್ಯವನ್ನು ನೆನಪಿಗೆ ತರುತ್ತದೆ.