ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

‘ನಾ ಮುಂದು’ ಪ್ರಪಂಚದಲ್ಲಿ ಪರೋಪಕಾರಿ ಮಕ್ಕಳು

‘ನಾ ಮುಂದು’ ಪ್ರಪಂಚದಲ್ಲಿ ಪರೋಪಕಾರಿ ಮಕ್ಕಳು

ಮುಖಪುಟ ಲೇಖನ

‘ನಾ ಮುಂದು’ ಪ್ರಪಂಚದಲ್ಲಿ ಪರೋಪಕಾರಿ ಮಕ್ಕಳು

ಉಪಕಾರ ಮಾಡುವ, ಸಹಾಯ ಮಾಡುವ ಎಷ್ಟೋ ಅವಕಾಶಗಳು ದಿನಂಪ್ರತಿ ಸಿಗುತ್ತವೆ. ಆದರೆ ಜನರೇಕೋ ಸ್ವಾರ್ಥಿಗಳಾಗುತ್ತಿದ್ದಾರೆ. ಸುತ್ತಮುತ್ತ ನೀವೂ ಅದನ್ನು ನೋಡಿರಬಹುದು. ಜನರು ಮನಸಾಕ್ಷಿಯಿಲ್ಲದೆ ಮೋಸ ಮಾಡುತ್ತಾರೆ. ಗಾಡಿ ಓಡಿಸುವಾಗ ಯಾರಿಗೂ ಕ್ಯಾರೇ ಅನ್ನೋದಿಲ್ಲ. ಕೆಟ್ಟ ಕೆಟ್ಟ ಮಾತುಗಳಿಂದ ಹಿಡಿದು ಕೋಪದ ಭಯಾನಕ ರೂಪಗಳನ್ನು ತೋರಿಸುತ್ತಾರೆ.

ಈ ಸ್ಪರ್ಧಾತ್ಮಕ ಮನೋಭಾವ ಮನೆಯ ವರೆಗೂ ಬಂದಿದೆ. ಉದಾಹರಣೆಗೆ, ‘ನಾನೇ ಶ್ರೇಷ್ಠ’ ಅನ್ನೋ ಪೈಪೋಟಿಯ ಕಾರಣ ಎಷ್ಟೋ ಗಂಡಹೆಂಡಿರು ವಿಚ್ಛೇದನಕ್ಕಾಗಿ ಕೋರ್ಟ್‌ ಮೆಟ್ಟಿಲು ಹತ್ತುತ್ತಿದ್ದಾರೆ. ಇನ್ನೊಂದು ಕಡೆ ಹೆತ್ತವರು ಅರಿವಿಲ್ಲದೇ ತಮ್ಮ ಮಕ್ಕಳ ಮನಸ್ಸಲ್ಲಿ ಪೋಟಾಪೋಟಿಯ ಬೀಜ ಬಿತ್ತುತ್ತಿದ್ದಾರೆ. ಹೇಗೆ? ಕೇಳಿದ್ದನ್ನೆಲ್ಲ ಕೊಡಿಸುವುದರಿಂದ. ಸ್ವಲ್ಪನೂ ಶಿಸ್ತು ಕೊಡದೆ ಅತಿಯಾಗಿ ಮುದ್ದುಮಾಡುವುದರಿಂದ.

ಆದರೆ ಇನ್ನು ಕೆಲವು ಹೆತ್ತವರಿದ್ದಾರೆ ಅವರು ಮಕ್ಕಳಿಗೆ ಪರಚಿಂತನೆಯನ್ನು ಕಲಿಸುತ್ತಿದ್ದಾರೆ. ಇದರ ಪ್ರಯೋಜನಗಳು ಅಪಾರ. ಇಂಥ ಪರೋಪಕಾರಿ ಮಕ್ಕಳು ಸ್ನೇಹಜೀವಿಗಳಾಗುತ್ತಾರೆ. ಬಾಳುವ ಸಂಬಂಧಗಳನ್ನು ನಿರ್ಮಿಸುತ್ತಾರೆ. ಸಂತೋಷ, ಸಂತೃಪ್ತಿಕರ ಜೀವನ ನಡೆಸುತ್ತಾರೆ. ಯಾಕೆಂದರೆ ಬೈಬಲ್‌ ಹೇಳುತ್ತೆ: “ತೆಗೆದುಕೊಳ್ಳುವುದಕ್ಕಿಂತಲೂ ಕೊಡುವುದರಲ್ಲಿ ಹೆಚ್ಚಿನ ಸಂತೋಷವಿದೆ.”—ಅಪೊಸ್ತಲರ ಕಾರ್ಯಗಳು 20:35.

ಸ್ವಾರ್ಥ ಮೇಲುಗೈ ಸಾಧಿಸಿರುವ ಈ ಲೋಕದಲ್ಲಿ ಮಕ್ಕಳು ಪರಹಿತಕ್ಕೆ ಆದ್ಯತೆ ಕೊಟ್ಟರೆ ಅವರಿಗೇ ಹಿತ. ಈ ವಿಷಯದಲ್ಲಿ ಹೆತ್ತವರಾದ ನಿಮ್ಮ ಕರ್ತವ್ಯ ಏನು? ಮಕ್ಕಳಲ್ಲಿ ಸ್ಪರ್ಧಾತ್ಮಕ ಬೀಜ ಮೊಳಕೆಯೊಡೆಯುವಂತೆ ಮಾಡುವ ಮೂರು ವಿಷಯಗಳು ಯಾವುವು ಮತ್ತು ಮಕ್ಕಳಲ್ಲಿ ಆ ಮನೋಭಾವ ಚಿಗುರದಂತೆ ಹೆತ್ತವರು ಏನು ಮಾಡಬೇಕು ಏನು ಮಾಡಬಾರದು ಎನ್ನುವ ಮಾಹಿತಿ ಈ ಲೇಖನದಲ್ಲಿದೆ.

1 ಅತಿಯಾದ ಹೊಗಳಿಕೆ

ಸಮಸ್ಯೆ. ಸಂಶೋಧಕರು ಕಂಡುಕೊಂಡ ಒಂದು ಮಾರಕ ಪ್ರವೃತ್ತಿ ಏನು ಗೊತ್ತೆ? ಬಹುಮಂದಿ ಯುವಜನತೆ ಕೆಲಸಕ್ಕೆ ಸೇರುವಾಗಲೇ ತಾವು ಇಂಥ ಹುದ್ದೆಗೆ ಅರ್ಹರು ಎನ್ನುವುದನ್ನು ತಲೆಯಲ್ಲಿ ತುಂಬಿಕೊಂಡಿರುತ್ತಾರೆ. ಅಂದರೆ ಅಲ್ಪಸ್ವಲ್ಪ ಅಥವಾ ಏನೂ ಕೆಲಸ ಮಾಡದಿದ್ದರೂ ಯಶಸ್ಸು ತಮಗೆ ಕಟ್ಟಿಟ್ಟ ಬುತ್ತಿ ಎಂಬ ಮನೋಭಾವ ಅವರದು. ಕೆಲವರಿಗೆ ಕೆಲಸ ಬರದಿದ್ದರೂ ಸ್ವಲ್ಪ ಸಮಯದಲ್ಲೇ ಭಡ್ತಿ ಸಿಗುತ್ತೆ ಎನ್ನುವ ಭ್ರಮೆ. ಇನ್ನು ಕೆಲವರು ತಾವು ಅಪ್ರತಿಮರು, ಅರ್ಹರು ಅನ್ನೋದು ತಮ್ಮಷ್ಟೇ ಸತ್ಯ ಅಂತ ನಂಬಿರುತ್ತಾರೆ. ಆದರೆ ಅವರ ಬಗ್ಗೆ ಜನರಿಗೆ ಆ ಅಭಿಪ್ರಾಯ ಇಲ್ಲ ಅಂತ ತಿಳಿದಾಗ ನುಚ್ಚುನೂರಾಗಿಬಿಡುತ್ತಾರೆ.

ಕಾರಣ. ತಾನು ಮೇಲು ಉಳಿದವರೆಲ್ಲ ಕೀಳು ಎಂಬ ಭಾವನೆಗೆ ವ್ಯಕ್ತಿ ಬೆಳೆದು ಬಂದ ವಾತಾವರಣ ಕೆಲವೊಮ್ಮೆ ಕಾರಣವಾಗುತ್ತೆ. ಉದಾ: ಮಕ್ಕಳ ಸ್ವಪ್ರತಿಷ್ಠೆಯನ್ನು ಹೆಚ್ಚಿಸುವ ಕಾರ್ಯ ಕೆಲವು ದಶಕಗಳಿಂದ ಜನಪ್ರಿಯಗೊಳ್ಳುತ್ತಿದೆ. ಈಗಂತೂ ಇದು ಬಹಳ ಬಿರುಸಿನಿಂದ ನಡೆಯುತ್ತಿದೆ. ಈ ಕಾರ್ಯಾಚರಣೆಯ ಸಿದ್ಧಾಂತ ಏನೆಂದರೆ ‘ಅಲ್ಪಸ್ವಲ್ಪ ಹೊಗಳಿಕೆನೇ ಮಕ್ಕಳಿಗೆ ಒಳಿತು ಮಾಡುವಾಗ ಜಾಸ್ತಿ ಹೊಗಳಿದರೆ ಇನ್ನೂ ಒಳಿತಾಗುತ್ತೆ.’ ಈ ಸಿದ್ಧಾಂತ ಹೆತ್ತವರಿಗೆ ಸರಿ ಎನಿಸಿ ಅದನ್ನೇ ಅನುಸರಿಸುತ್ತಿದ್ದಾರೆ. ಅದೂ ಅಲ್ಲದೆ ಒಂದು ಚಿಕ್ಕ ಉಪೇಕ್ಷೆ ಕೂಡ ಮಕ್ಕಳ ಉತ್ಸಾಹಕ್ಕೆ ಉರುಲಾಗುತ್ತೆ ಅನ್ನುವುದು ಲೋಕದ ಎಣಿಕೆ. ಲೋಕದಲ್ಲಿ ಚಾಲ್ತಿಯಲ್ಲಿರುವ ಸ್ವಪ್ರತಿಷ್ಠೆ ಹೆಚ್ಚಿಸುವ ಕಾರ್ಯಕ್ಕೆ ಕೈಜೋಡಿಸದಿದ್ದರೆ ನಿಮ್ಮಂಥ ಕೆಟ್ಟ ಹೆತ್ತವರು ಜಗತ್ತಿನಲ್ಲಿ ಬೇರಾರೂ ಇಲ್ಲ ಅನ್ನೋ ಹಣೆಪಟ್ಟಿ ಸಿಗುತ್ತೆ. ಹೆತ್ತವರ ತಲೆಯಲ್ಲಿ ತುಂಬಿರುವುದು ಇಷ್ಟೆ: ಕೀಳರಿಮೆಯ ಭಾವನೆ ಮಕ್ಕಳನ್ನು ಕೂದಲೆಳೆಯಷ್ಟೂ ಸೋಕಬಾರದು.

ಹೀಗಾಗಿ ಅತ್ಯಧಿಕ ತಂದೆತಾಯಿಗಳು ತಮ್ಮ ಮಕ್ಕಳು ಯಾವ ಪ್ರಶಂಸಾರ್ಹ ಕೆಲಸವನ್ನು ಮಾಡದಿದ್ದರೂ ಸರಿಯೇ ಹೊಗಳಿಕೆಯ ಸುರಿಮಳೆಗೈಯುವ ಆಚಾರವನ್ನು ಆರಂಭಿಸಿದ್ದಾರೆ. ಇದರಿಂದಾಗಿ ಮಕ್ಕಳ ಒಂದು ಚಿಕ್ಕ ಸಾಧನೆಗೆ ಅವರನ್ನು ಹೊಗಳಿ ಹೊಗಳಿ ಅಟ್ಟಕೇರಿಸುತ್ತಿದ್ದಾರೆ. ಹಾಗೇ ದೊಡ್ಡ ದೊಡ್ಡ ತಪ್ಪುಗಳನ್ನು ಅಲಕ್ಷಿಸುತ್ತಿದ್ದಾರೆ. ‘ತಪ್ಪನ್ನೆಲ್ಲ ಬಿಟ್ಟುಬಿಡಬೇಕು ಪ್ರತಿಯೊಂದನ್ನೂ ಹೊಗಳಬೇಕು’ ಇದೇ ಮಕ್ಕಳ ಸ್ವಪ್ರತಿಷ್ಠೆಯನ್ನು ಹೆಚ್ಚಿಸುವ ಮಂತ್ರ ಎನ್ನುವುದು ಹೆತ್ತವರ ಎಣಿಕೆ. ಒಂದು ಕೆಲಸವನ್ನು ಹೇಗೆ ಮಾಡಬೇಕೆಂದು ಕಲಿಸುವುದಕ್ಕಿಂತ, ಮಕ್ಕಳು ತಮ್ಮ ಬಗ್ಗೆಯೇ ಹೆಮ್ಮೆಪಟ್ಟುಕೊಳ್ಳಲು ಕಲಿಸುವುದೇ ಹೆತ್ತವರ ಗುರಿಯಾಗಿ ಹೋಗಿದೆ.

ಬೈಬಲ್‌ ಏನು ಹೇಳುತ್ತೆ? ಶ್ಲಾಘನೆಗೆ ಅರ್ಹರಾದಾಗ ಶ್ಲಾಘಿಸಲೇ ಬೇಕೆನ್ನುತ್ತೆ ಬೈಬಲ್‌. (ಮತ್ತಾಯ 25:19-21) ಆದರೆ ಮಕ್ಕಳ ಸಂತೋಷಕ್ಕೆಂದು ಸುಖಾಸುಮ್ಮನೆ ಹೊಗಳಿದರೆ ಅವರಿಗೆ ತಮ್ಮ ಬಗ್ಗೆ ಅತಿಯಾದ ನಿರೀಕ್ಷೆಗಳು ಹುಟ್ಟಿಕೊಳ್ಳುತ್ತೆ. ಅದನ್ನೇ ಬೈಬಲ್‌ ಹೀಗನ್ನುತ್ತೆ: “ಏನೂ ಅಲ್ಲದವನೊಬ್ಬನು ತಾನು ಏನೊ ಆಗಿದ್ದೇನೆಂದು ನೆನಸುವುದಾದರೆ ಅವನು ತನ್ನ ಮನಸ್ಸನ್ನೇ ಮೋಸಗೊಳಿಸಿಕೊಳ್ಳುತ್ತಿದ್ದಾನೆ.” (ಗಲಾತ್ಯ 6:3) ಹಾಗಾಗಿ “ಹುಡುಗನ ಶಿಕ್ಷೆಗೆ ಹಿಂತೆಗೆಯಬೇಡ; ಬೆತ್ತದ ಏಟಿಗೆ ಸಾಯನು” * ಎಂದು ಹೆತ್ತವರಿಗೆ ಕಿವಿಮಾತು ಹೇಳುತ್ತೆ ಬೈಬಲ್‌.—ಜ್ಞಾನೋಕ್ತಿ 23:13.

ನಿಮ್ಮ ಕರ್ತವ್ಯ. ಮಕ್ಕಳು ತಪ್ಪು ಮಾಡಿದಾಗ ತಿದ್ದಿ. ಒಳ್ಳೇ ಕೆಲಸಮಾಡಿದಾಗ ಶ್ಲಾಘಿಸಿ. ಇದು ನಿಮ್ಮ ಗುರಿಯಾಗಿರಲಿ. ಸಂತೋಷಪಡಲಿ ಅನ್ನೋ ಕಾರಣಕ್ಕೆ ಮಕ್ಕಳನ್ನು ಹೊಗಳಬೇಡಿ. ಅದರಿಂದ ಮಕ್ಕಳಿಗೆ ನಿಜವಾದ ಸಂತೋಷ ಸಿಗಲ್ಲ. “ನಿಮ್ಮನ್ನು ಯಾರಾದರೂ ಮಹಾನ್‌ ಅಂದಾಕ್ಷಣ ನಿಮ್ಮಲ್ಲಿ ಆತ್ಮವಿಶ್ವಾಸ ಮೂಡುವುದಿಲ್ಲ. ನೀವು ಪ್ರತಿಭಾವಂತರಾಗುತ್ತಾ ಹೋದಹಾಗೆ, ಬೇರೆ ಬೇರೆ ವಿಷಯಗಳನ್ನು ಕಲಿಯುತ್ತಾ ಹೋದಹಾಗೆ ನಿಮ್ಮಲ್ಲಿ ಆತ್ಮವಿಶ್ವಾಸ ಮೂಡುತ್ತೆ” ಎನ್ನುತ್ತೆ ಜನರೇಷನ್‌ ಮಿ ಎಂಬ ಪುಸ್ತಕ.

2 ಅತಿಯಾದ ಸಂರಕ್ಷಣೆ

ಸಮಸ್ಯೆ. ಕೆಲಸಕ್ಕೆ ಸೇರುವ ಅನೇಕ ಯುವಜನರು ಸವಾಲುಗಳನ್ನು ಎದುರಿಸಲು ಕಲಿತಿರುವುದೇ ಇಲ್ಲ. ಒಂದು ಚಿಕ್ಕ ಟೀಕೆಗೂ ತತ್ತರಿಸಿಹೋಗುತ್ತಾರೆ. ಇನ್ನು ಬೇರೆಯವರನ್ನು ತೆಗೆದುಕೊಂಡರೆ ಅವರು ದೊಡ್ಡ ದೊಡ್ಡ ನಿರೀಕ್ಷೆಗಳಿಟ್ಟುಕೊಂಡಿರುತ್ತಾರೆ. ಹಾಗಾಗಿ ಅವರನ್ನು ಮೆಚ್ಚಿಸುವುದೇ ಕಷ್ಟ. ಅವರ ನಿರೀಕ್ಷೆಗೆ ತಕ್ಕಂಥ ಕೆಲಸಗಳನ್ನು ಮಾತ್ರ ಮಾಡುತ್ತಾರೆ. ಉದಾಹರಣೆಗೆ ಎಸ್ಕೇಪಿಂಗ್‌ ದ ಎಂಡ್‌ಲೆಸ್‌ ಅಡೋಲಸೆನ್ಸ್‌ ಎಂಬ ಪುಸ್ತಕದಲ್ಲಿ ಡಾಕ್ಟರ್‌ ಜೋಸೆಫ್‌ ಆ್ಯಲೆನ್‌ ಒಬ್ಬ ಯುವಕನ ಬಗ್ಗೆ ಬರೆಯುತ್ತಾರೆ. ಆ ಯುವಕನನ್ನು ಡಾಕ್ಟರ್‌ ಉದ್ಯೋಗದ ಸಲುವಾಗಿ ಇಂಟರ್‌ವ್ಯೂ ಮಾಡುವಾಗ ಅವನು ಹೇಳಿದ್ದು: “ಕೆಲವೊಮ್ಮೆ ಈ ಕೆಲಸ ಬೋರ್‌ ಹೊಡೆಯುತ್ತೆ ಅನ್ಸುತ್ತೆ. ನನಗೆ ಬೋರಿಂಗ್‌ ಕೆಲಸ ಮಾಡಕ್ಕೆ ಇಷ್ಟಇಲ್ಲ.” ಇದರ ಬಗ್ಗೆ ಡಾಕ್ಟರ್‌ ಆ್ಯಲನ್‌ ಅವರ ಪುಸ್ತಕದಲ್ಲಿ ಬರೆಯುವುದು: “ಎಲ್ಲ ಕೆಲಸದಲ್ಲೂ ಒಂದಲ್ಲ ಒಂದು ವಿಷ್ಯ ಬೋರ್‌ ಹೊಡಿಸುತ್ತೆ ಅಂತ ಅವನಿಗೆ ಗೊತ್ತೇ ಇಲ್ವೇನೊ. 23 ವರ್ಷದ ಹುಡುಗನಿಗೆ ಇಂಥ ಸಾಮಾನ್ಯ ವಿಷ್ಯನೂ ಗೊತ್ತಿಲ್ಲ ಅಂದ್ರೆ ಆಶ್ಚರ್ಯ ಆಗುತ್ತೆ.”

ಕಾರಣ. ಮಕ್ಕಳಿಗೆ ಕಷ್ಟದ ಅರಿವೇ ಆಗದ ಹಾಗೇ ಬೆಳೆಸುವ ರೂಢಿ ಇತ್ತೀಚಿನ ದಶಕಗಳಲ್ಲಿ ಕಂಡುಬರುತ್ತಿದೆ. ಮಗಳು ಫೇಲಾದರೆ ಸಾಕು ಶಿಕ್ಷಕರ ಬಳಿ ಹೋಗಿ ಇನ್ನು ಸ್ವಲ್ಪ ಅಂಕಗಳನ್ನು ಕೊಟ್ಟು ಪಾಸ್‌ ಮಾಡಿಬಿಡಿ ಅಂತ ಹೇಳುತ್ತಾರೆ. ಮಗ ರಾತ್ರಿ ಬಹಳ ಹೊತ್ತು ಟಿ.ವಿ ನೋಡಿ ತಡವಾಗಿ ಮಲಗಿದ ಕಾರಣ ಮರುದಿನ ಬೆಳಿಗ್ಗೆ ತಡವಾಗಿ ಎದ್ದು ಶಾಲೆಗೆ ಹೋಗುವ ಬಸ್‌ ತಪ್ಪಿಹೋದರೆ ಹೆತ್ತವರು ತಮ್ಮ ವಾಹನದಲ್ಲಿ ಕರೆದುಕೊಂಡು ಹೋಗಿ ಬಿಡುತ್ತಾರೆ. ತಮ್ಮ ಮಕ್ಕಳಿಗೂ ಪಕ್ಕದ ಮನೆ ಮಕ್ಕಳಿಗೂ ಜಗಳವಾದರೆ ತಪ್ಪನ್ನೆಲ್ಲ ಆ ಮಕ್ಕಳ ಮೇಲೆ ಹೊರಿಸುತ್ತಾರೆ.

ಮಕ್ಕಳಿಗೆ ಸಹಾಯ ಮಾಡಬೇಕು ಅವರನ್ನು ರಕ್ಷಿಸಬೇಕೆಂಬ ಭಾವನೆ ಹೆತ್ತವರಲ್ಲಿ ಬರೋದು ಸಾಮಾನ್ಯ ಅದರಲ್ಲಿ ತಪ್ಪೇನಿಲ್ಲ. ಆದರೆ ಅತಿಯಾದ ಸಂರಕ್ಷಣೆ ಮಕ್ಕಳಲ್ಲಿ ತಪ್ಪು ಕಲ್ಪನೆಯನ್ನು ಹುಟ್ಟಿಸುತ್ತೆ. ಅಂದರೆ ತಮ್ಮ ಕೆಲಸಕ್ಕೆ ಯಾವಾಗಲೂ ಬೇರೆಯವರನ್ನೇ ಹೊಣೆ ಮಾಡುವ ಹವ್ಯಾಸ ಬೆಳೆದುಬಿಡುತ್ತೆ. “ಇಂಥ ಮಕ್ಕಳು ನೋವು ನಿರಾಶೆಯನ್ನು ಸಹಿಸಿಕೊಳ್ಳಲು ಕಲಿಯೋ ಬದಲು ಸ್ವಾರ್ಥಿಗಳಾಗುತ್ತಿದ್ದಾರೆ, ತಾವು ಏನು ಮಾಡಬೇಕೆಂದು ಯೋಚಿಸೋದಿಲ್ಲ ಬದಲಾಗಿ ತಂದೆ ತಾಯಿ ಅಥವಾ ಬೇರೆಯವರು ತಮಗೆ ಏನು ಮಾಡಬೇಕೆಂದೇ ಯೋಚಿಸುತ್ತಾರೆ” ಎನ್ನುತ್ತೆ ಪಾಸಿಟಿವ್‌ ಡಿಸಿಪ್ಲಿನ್‌ ಫಾರ್‌ ಟೀನೇಜರ್ಸ್‌ ಎಂಬ ಪುಸ್ತಕ.

ಬೈಬಲ್‌ ಏನು ಹೇಳುತ್ತೆ? ಮನುಷ್ಯ ಎಂದಮೇಲೆ ಕಷ್ಟ-ಕೋಟಲೆಗಳು ಇದ್ದದ್ದೇ. ಬೈಬಲೇ ಹೇಳುತ್ತೆ, “ಕೆಟ್ಟದ್ದು ಯಾರಿಗೂ ತಪ್ಪಿದ್ದಲ್ಲ.” (ಪ್ರಸಂಗಿ 9:11, ಈಸಿ-ಟು-ರೀಡ್‌ ವರ್ಷನ್‌) ಯಾರಿಗೂ ಅಂತ ಹೇಳುವಾಗ ಅದರಲ್ಲಿ ಒಳ್ಳೆಯವರೂ ಸೇರುತ್ತಾರೆ. ಯೇಸುವಿನ ಅನುಯಾಯಿ ಪೌಲ ಎಲ್ಲ ತರಹದ ಕಷ್ಟಗಳನ್ನು ಅನುಭವಿಸಿದ್ದರು. ಇದೆಲ್ಲ ಅವರಿಗೆ ಕಷ್ಟಗಳನ್ನು ಜಯಿಸೋದು ಹೇಗೆಂದು ಕಲಿಸಿಕೊಟ್ಟಿತು. “ಎಲ್ಲ ಸನ್ನಿವೇಶಗಳಲ್ಲಿಯೂ ಸಂತುಷ್ಟನಾಗಿರುವುದು ಹೇಗೆಂಬುದನ್ನು ನಾನು ಕಲಿತುಕೊಂಡಿದ್ದೇನೆ . . . ಸಂತೃಪ್ತನಾಗಿರುವುದು ಹೇಗೆ, ಹಸಿದವನಾಗಿರುವುದು ಹೇಗೆ, ಸಮೃದ್ಧಿಯಿಂದಿರುವುದು ಹೇಗೆ ಮತ್ತು ಕೊರತೆಯಿಂದಿರುವುದು ಹೇಗೆ ಎಂಬುದರ ಗುಟ್ಟು ನನಗೆ ತಿಳಿದಿದೆ” ಎಂದು ಆತ ಬೈಬಲಿನಲ್ಲಿ ಬರೆದಿದ್ದಾರೆ.—ಫಿಲಿಪ್ಪಿ 4:11, 12.

ನಿಮ್ಮ ಕರ್ತವ್ಯ. ನಿಮ್ಮ ಮಕ್ಕಳ ಪ್ರಬುದ್ಧತೆಯ ಮಟ್ಟವನ್ನು ಮನಸ್ಸಿನಲ್ಲಿ ಇಟ್ಟುಕೊಂಡು ಈ ಬೈಬಲ್‌ ತತ್ವವನ್ನು ಪಾಲಿಸಿ: “ಪ್ರತಿಯೊಬ್ಬನು ಸ್ವಂತ ಹೊರೆಯನ್ನು ಹೊತ್ತುಕೊಳ್ಳಬೇಕು.” (ಗಲಾತ್ಯ 6:5, ಸತ್ಯವೇದವು) ನಿಮ್ಮ ಮಗ ರಾತ್ರಿ ಬಹಳ ಹೊತ್ತು ಟಿ.ವಿ ನೋಡಿ ತಡವಾಗಿ ಮಲಗಿದ ಕಾರಣ ಮರುದಿನ ಬೆಳಿಗ್ಗೆ ತಡವಾಗಿ ಎದ್ದು ಶಾಲೆಗೆ ಹೋಗುವ ಬಸ್‌ ತಪ್ಪಿಹೋದರೆ ನೀವು ನಿಮ್ಮ ವಾಹನದಲ್ಲಿ ಕರೆದುಕೊಂಡು ಹೋಗಿ ಬಿಡುವ ಬದಲು ಇನ್ನೊಂದು ಬಸ್‌ ಹಿಡಿದುಕೊಂಡು ಹೋಗುವಂತೆ ಹೇಳಿ. ಅವನು ಶಾಲೆಗೆ ತಡವಾಗಿ ಹೋಗಿ ಶಿಕ್ಷೆ ಅನುಭವಿಸಿದರೆ ಮುಂದಿನ ಸಲ ಆ ತಪ್ಪನ್ನು ಮಾಡುವುದಿಲ್ಲ. ನಿಮ್ಮ ಮಗಳು ಪರೀಕ್ಷೆಯಲ್ಲಿ ಫೇಲ್‌ ಆಗಿದ್ದಾಳೆ ಎಂದಾದರೆ ಮುಂದಿನ ಸಾರಿ ಪರೀಕ್ಷೆಯನ್ನು ಚೆನ್ನಾಗಿ ಮಾಡಲು ಒಳ್ಳೇ ತಯಾರಿ ನಡೆಸಲಿ. ನಿಮ್ಮ ಮಗನಿಗೂ ಪಕ್ಕದ ಮನೆಯ ಮಕ್ಕಳಿಗೂ ಜಗಳವಾದರೆ ಸಮಾಧಾನ ಮಾಡಿ. ಆದರೆ ಒಂದು ಒಳ್ಳೇ ಸಮಯ ನೋಡಿ ಸ್ವಪರೀಕ್ಷೆ ಮಾಡಿಕೊಳ್ಳಲು ಅವನಿಗೆ ಸಹಾಯನೀಡಿ: “ನಂದೇನಾದರೂ ತಪ್ಪಿದೆಯಾ?” ಅಂತ ಯೋಚಿಸಲು ಹೇಳಿ. ಸಮಸ್ಯೆಗಳು ಬಂದಾಗ ಮಕ್ಕಳು ತಾವಾಗಿಯೇ ಅದನ್ನು ಬಗೆಹರಿಸಲು ಪ್ರಯತ್ನಿಸುವುದರಿಂದ ಅವರ ಮನೋಬಲ ಹೆಚ್ಚುತ್ತೆ. ಆತ್ಮವಿಶ್ವಾಸ ಮೂಡುತ್ತೆ. ಆದರೆ ಯಾರಾದರೂ ಸದಾ ಶ್ರೀರಕ್ಷೆ ನೀಡುತ್ತಿದ್ದರೆ ಇದನ್ನು ಗಳಿಸಲು ಮಕ್ಕಳಿಗೆ ಸಾಧ್ಯವಾಗದು.

3 ಅತಿಯಾದ ವಸ್ತುಪೂರೈಕೆ

ಸಮಸ್ಯೆ. ಯುವಪ್ರಾಯದವರ ಬಗ್ಗೆ ನಡೆಸಿರುವ ಸಮೀಕ್ಷೆಯಲ್ಲಿ ಶೇಕಡಾ 81ರಷ್ಟು ಮಂದಿ ‘ಶ್ರೀಮಂತರಾಗುವುದೇ’ ತಮ್ಮ ಜೀವನದ ಧ್ಯೇಯ ಎಂದಿದ್ದಾರೆ. ಇದರರ್ಥ ಇತರರಿಗೆ ಸಹಾಯ ಮಾಡುವುದಕ್ಕೆ ಅವರ ಜೀವನದಲ್ಲಿ ಎಡೆಯೇ ಇಲ್ಲ. ಆದರೆ ಹಣ-ಸಂಪತ್ತು ಗುಡ್ಡೆಹಾಕಲು ಶ್ರಮಿಸುವುದರಿಂದ ಸಂತೃಪ್ತಿ ಸಿಗಲ್ಲ. ಸಂಶೋಧನೆಗಳ ಪ್ರಕಾರ, ಹಣ-ಸಂಪತ್ತಿನ ಹಿಂದೆ ಹೋಗುವವರ ಮನಸ್ಸಿನ ಒಂದು ಮೂಲೆಯಲ್ಲಿ ಮಾತ್ರ ಸಂತಸವಿದ್ದರೆ ಉಳಿದೆಲ್ಲ ಭಾಗವನ್ನು ದುಃಖ ನಿರಾಶೆ ತುಂಬಿರುತ್ತೆ. ಮಾನಸಿಕ ಹಾಗೂ ದೈಹಿಕ ಆರೋಗ್ಯ ಸಮಸ್ಯೆಗಳು ಜಾಸ್ತಿ ಇರುತ್ತೆ.

ಕಾರಣ. ಹಣ-ಸಂಪತ್ತಿನ ಮೋಹವಿರುವ ಪರಿವಾರದಲ್ಲಿ ಕೆಲವು ಮಕ್ಕಳು ಬೆಳೆದಿರುತ್ತಾರೆ. “ಮಕ್ಕಳು ನೋಡಿದ ವಸ್ತುಗಳನ್ನೆಲ್ಲ ಕೇಳುತ್ತಿರುತ್ತಾರೆ. ಅಪ್ಪಅಮ್ಮಗೆ ಮಕ್ಕಳನ್ನು ಖುಷಿಪಡಿಸಬೇಕು. ಹಾಗಾಗಿ ಮಕ್ಕಳು ಕೇಳಿದ್ದನ್ನೆಲ್ಲ ತಂದುಕೊಡುತ್ತಾರೆ. ಮಕ್ಕಳಿಗೆ ಖುಷಿಯಾಗುತ್ತೆ. ಆದರೆ ಸ್ವಲ್ಪ ದಿನಗಳಾದ ಮೇಲೆ ಇನ್ನು ಹೊಸ ಹೊಸ ವಸ್ತುಗಳನ್ನ ಕೇಳ್ತಾರೆ” ಎನ್ನುತ್ತದೆ ದ ನಾರ್ಸಿಸಮ್‌ ಎಪಿಡಮಿಕ್‌ ಪುಸ್ತಕ.

ಜಾಹೀರಾತು ಕ್ಷೇತ್ರ ಇಂಥ ವಸ್ತು ದಾಹವಿರುವ ಜನರ ಲಾಭ ಪಡೆಯುತ್ತಿದೆ. ಜಾಹಿರಾತುಗಳು ಜನರ ತಲೆಯಲ್ಲಿ ‘ಇದು ನಿಮಗಂತಲೇ ಹೇಳಿ ಮಾಡಿಸಿದ ವಸ್ತು’ ‘ಇಂಥ ವಸ್ತುವನ್ನು ಪಡೆಯಲು ನೀವು ಮಾತ್ರ ಅರ್ಹರು’ ಎಂಬ ವಿಚಾರಗಳನ್ನು ತುಂಬಿಸುತ್ತಿವೆ. ಇಂಥ ಮಾತುಗಳಿಗೆ ಮಾರುಹೋಗಿ ಅನೇಕ ಯುವಜನರು ಸಾಲದಲ್ಲಿ ಬಿದ್ದಿದ್ದಾರೆ, ಖರೀದಿಸಿದ ವಸ್ತುಗಳ ಬೆಲೆ ಪಾವತಿಸಲಾಗದೆ ಒದ್ದಾಡುತ್ತಿದ್ದಾರೆ.

ಬೈಬಲ್‌ ಏನು ಹೇಳುತ್ತೆ? ಹಣದ ಅಗತ್ಯ ಇದೆ ಎಂದು ಬೈಬಲ್‌ ಒಪ್ಪಿಕೊಳ್ಳುತ್ತೆ. (ಪ್ರಸಂಗಿ 7:12) ಆದರೆ “ಹಣದ ಪ್ರೇಮವು ಎಲ್ಲ ರೀತಿಯ ಹಾನಿಕರವಾದ ವಿಷಯಗಳಿಗೆ ಮೂಲವಾಗಿದೆ ಮತ್ತು ಕೆಲವರು ಈ ಪ್ರೇಮವನ್ನು ಬೆನ್ನಟ್ಟುತ್ತಾ . . . ಅನೇಕ ವೇದನೆಗಳಿಂದ ತಮ್ಮನ್ನು ಎಲ್ಲ ಕಡೆಗಳಲ್ಲಿ ತಿವಿಸಿಕೊಂಡಿದ್ದಾರೆ” ಎಂದೂ ಬೈಬಲ್‌ ಎಚ್ಚರಿಸುತ್ತದೆ. (1 ತಿಮೊಥೆಯ 6:10) ನಾವು ಲೌಕಿಕ ಸುಖಭೋಗಗಳ ಹಿಂದೆ ಹೋಗುವ ಬದಲು ಜೀವನಕ್ಕೆ ಬೇಕಾದ ಮೂಲಭೂತ ವಿಷಯಗಳಲ್ಲೇ ಸಂತೃಪ್ತರಾಗಿರುವಂತೆ ಬೈಬಲ್‌ ಪ್ರೋತ್ಸಾಹಿಸುತ್ತೆ.—1 ತಿಮೊಥೆಯ 6:7, 8.

ನಿಮ್ಮ ಕರ್ತವ್ಯ. ಹೆತ್ತವರಾದ ನಿಮ್ಮನ್ನೇ ನೀವು ಆತ್ಮಾವಲೋಕನ ಮಾಡಿಕೊಳ್ಳಿ: ಹಣ ಖರ್ಚು ಮಾಡುವ ವಿಷಯದಲ್ಲಿ, ವಸ್ತುಗಳನ್ನು ಖರೀದಿಸುವ ವಿಷಯದಲ್ಲಿ ನೀವು ಯಾವ ರೀತಿ ಇದ್ದೀರಾ? ಮಕ್ಕಳಿಗೆ ಒಳ್ಳೇ ಮಾದರಿ ಇಟ್ಟಿದ್ದೀರಾ? ಅಗತ್ಯವಿರುವ ವಸ್ತುಗಳನ್ನು ಮಾತ್ರ ಖರೀದಿಸಿ. ಮಕ್ಕಳಿಗೂ ಅದನ್ನೇ ಕಲಿಸಿ. ದ ನಾರ್ಸಿಸಮ್‌ ಎಪಿಡಮಿಕ್‌ ಪುಸ್ತಕ ಕೊಡುವ ಸಲಹೆ: “‘ವಸ್ತುಗಳನ್ನು ಕೊಂಡುಕೊಳ್ಳೋದು ಯಾವಾಗ ಒಳ್ಳೇದು? ಯಾವಾಗ ಒಳ್ಳೇದಲ್ಲ?’ ‘ಬಡ್ಡಿದರ ಅಂದ್ರೆ ಏನು?’ ‘ಬೇರೆಯವರು ಹೇಳ್ತಾರೆ ಅಂತ ಯಾವಾಗಾದ್ರೂ ನೀವು ವಸ್ತುಗಳನ್ನು ಖರೀದಿಸಿದ್ದೀರಾ?’ ಇಂಥ ವಿಷಯಗಳ ಬಗ್ಗೆ ಹೆತ್ತವರು ಮಕ್ಕಳ ಜತೆ ಮಾತಾಡಬೇಕು.”

ಕುಟುಂಬದಲ್ಲಿ ಸಮಸ್ಯೆ ಎದ್ದಾಗ ಅದನ್ನು ಬಗೆಹರಿಸುವ ಬದಲು ವಸ್ತುಗಳಿಂದ ಸಮಸ್ಯೆಯನ್ನು ಮರೆಮಾಡಲು ಪ್ರಯತ್ನಿಸಬೇಡಿ. ದ ಪ್ರೈಸ್‌ ಆಫ್‌ ಪ್ರಿವ್ಲೇಜ್‌ ಹೇಳುವಂತೆ “ಸಮಸ್ಯೆಗಳನ್ನು ಪರಿಹರಿಸಲು ವಸ್ತುಗಳನ್ನು ಕೊಡಿಸುವ ಮಾರ್ಗ ಸರಿಯಲ್ಲ. ಅದರಿಂದ ಏನೂ ಪ್ರಯೋಜನ ಇಲ್ಲ. ಬುದ್ಧಿ, ವಿವೇಕ, ಅನುತಾಪದಿಂದ ಸಮಸ್ಯೆಗಳನ್ನು ಬಗೆಹರಿಸಬೇಕೇ ಹೊರತು ವಸ್ತು ಮತ್ತು ಹಣದಿಂದಲ್ಲ.” ◼ (g13-E 01)

[ಪಾದಟಿಪ್ಪಣಿ]

^ ಶಾರೀರಿಕ ಹಾಗೂ ಮಾನಸಿಕವಾಗಿ ಮಕ್ಕಳ ಮೇಲೆ ದೌರ್ಜನ್ಯ ನಡೆಸುವುದನ್ನು ಬೈಬಲ್‌ ಖಂಡಿಸುತ್ತೆ. (ಎಫೆಸ 4:29, 31; 6:4) ಶಿಕ್ಷೆ ಕೊಡುವ ಉದ್ದೇಶ ಮಕ್ಕಳಿಗೆ ಸನ್ಮಾರ್ಗ ತೋರಿಸುವುದೇ ಹೊರತು ಹೆತ್ತವರ ಸಿಟ್ಟನ್ನು ಹೊರಹಾಕುವ ಮಾರ್ಗವಲ್ಲ.

[ಪುಟ 8ರಲ್ಲಿರುವ ಚಿತ್ರ]

[ಪುಟ 9ರಲ್ಲಿರುವ ಚಿತ್ರ]

[ಪುಟ 9ರಲ್ಲಿರುವ ಸಂಕ್ಷಿಪ್ತ ವಿವರ]

“ಯಾವನೂ ತನ್ನ ಕುರಿತು ಅಗತ್ಯಕ್ಕಿಂತ ಹೆಚ್ಚಾಗಿ ಭಾವಿಸಿಕೊಳ್ಳಬಾರದು.” —ರೋಮನ್ನರಿಗೆ 12:3

[ಪುಟ 10ರಲ್ಲಿರುವ ಚಿತ್ರ]

[ಪುಟ 10ರಲ್ಲಿರುವ ಸಂಕ್ಷಿಪ್ತ ವಿವರ]

‘ಪ್ರತಿಯೊಬ್ಬನು ತನ್ನ ಸ್ವಂತ ಕೆಲಸವನ್ನು ಪರೀಕ್ಷಿಸಿಕೊಳ್ಳಲಿ, ಆಗ ಅವನಿಗೆ ತನ್ನ ವಿಷಯದಲ್ಲೇ ಹೆಚ್ಚಳಪಡಲು ಕಾರಣವಿರುವುದು.’—ಗಲಾತ್ಯ 6:4

[ಪುಟ 11ರಲ್ಲಿರುವ ಚಿತ್ರ]

[ಪುಟ 11ರಲ್ಲಿರುವ ಸಂಕ್ಷಿಪ್ತ ವಿವರ]

“ಐಶ್ವರ್ಯವಂತರಾಗಬೇಕೆಂದು ದೃಢನಿರ್ಧಾರಮಾಡಿಕೊಂಡಿರುವವರು ಪ್ರಲೋಭನೆಯಲ್ಲಿಯೂ ಉರ್ಲಿನಲ್ಲಿಯೂ ಬುದ್ಧಿಹೀನವಾದ ಮತ್ತು ಹಾನಿಕರವಾದ ಆಶೆಗಳಲ್ಲಿಯೂ ಬೀಳುತ್ತಾರೆ.”—1 ತಿಮೊಥೆಯ 6:9