ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಬೈಬಲಿನ ದೃಷ್ಟಿಕೋನ

ಪ್ರಾರ್ಥನೆ

ಪ್ರಾರ್ಥನೆ

ನಮ್ಮ ಪ್ರಾರ್ಥನೆಗಳನ್ನು ಯಾರಾದರೂ ಕೇಳುತ್ತಾರಾ?

“ಪ್ರಾರ್ಥನೆಯನ್ನು ಕೇಳುವವನೇ, ನರರೆಲ್ಲರು ನಿನ್ನ ಬಳಿಗೆ ಬರುವರು.”—ಕೀರ್ತನೆ 65:2.

ಜನರು ಏನು ಹೇಳುತ್ತಾರೆ?

ನಮ್ಮ ಪ್ರಾರ್ಥನೆಗಳಿಗೆ ಉತ್ತರ ಸಿಗದಿದ್ದಾಗ ನಾವು ಮಾಡುವ ಪ್ರಾರ್ಥನೆಯನ್ನು ದೇವರು ಕೇಳುತ್ತಾ ಇಲ್ಲ, ಅದು ಗಾಳಿಯಲ್ಲಿ ಮಾತಾಡಿದ ಹಾಗೆ ಇದೆ ಅಂತ ನಮಗನಿಸಬಹುದು. ಕಷ್ಟಗಳಲ್ಲಿರುವ ಜನರು, ‘ನಿಜವಾಗಿ ಯಾರಾದರೂ ನಮ್ಮ ಪ್ರಾರ್ಥನೆಗಳನ್ನು ಕೇಳ್ತಾರಾ’ ಅಂತ ಸಂದೇಹ ಪಡಬಹುದು.

ಬೈಬಲ್‌ ಏನು ಹೇಳುತ್ತದೆ?

‘ಯೆಹೋವನ ಕಣ್ಣುಗಳು ನೀತಿವಂತರ ಮೇಲಿವೆ ಮತ್ತು ಆತನ ಕಿವಿಗಳು ಅವರ ಯಾಚನೆಯ (ಪ್ರಾರ್ಥನೆಯ) ಕಡೆಗಿವೆ; ಆದರೆ ಯೆಹೋವನ ಮುಖವು ಕೆಟ್ಟದ್ದನ್ನು ಮಾಡುವವರ ವಿರುದ್ಧವಾಗಿದೆ.’ (1 ಪೇತ್ರ 3:12) ಬೈಬಲ್‍ನ ಈ ಮಾತಿನಿಂದ ದೇವರು ಪ್ರಾರ್ಥನೆಯನ್ನು ಕೇಳುತ್ತಾನೆ ಅಂತ ಗೊತ್ತಾಗುತ್ತದೆ. ವಿಶೇಷವಾಗಿ ಯಾರು ಆತನ ಚಿತ್ತವನ್ನು ಮಾಡುತ್ತಾರೋ ಅಂಥವರ ಪ್ರಾರ್ಥನೆಗಳನ್ನು ಕೇಳಲು ಆತನು ತುಂಬ ಇಷ್ಟಪಡುತ್ತಾನೆ. ನಮ್ಮ ಪ್ರಾರ್ಥನೆಗಳಿಗೆ ದೇವರು ಕಿವಿಗೊಡುತ್ತಾನೆಂದು ತೋರಿಸುವ ಇನ್ನೊಂದು ಬೈಬಲ್ ವಚನವನ್ನೂ ಗಮನಿಸಿ: “ನಾವು ಆತನ ಚಿತ್ತಕ್ಕನುಸಾರ ಯಾವುದನ್ನೇ ಕೇಳಿಕೊಂಡರೂ ಆತನು ನಮಗೆ ಕಿವಿಗೊಡುತ್ತಾನೆಂಬ ಭರವಸೆಯು ಆತನ ವಿಷಯವಾಗಿ ನಮಗುಂಟು.” (1 ಯೋಹಾನ 5:14) ಆದ್ದರಿಂದ, ಪ್ರಾಮಾಣಿಕವಾಗಿ ದೇವರಿಗೆ ಪ್ರಾರ್ಥಿಸಲು ಬಯಸುವವರು ಆತನ ಚಿತ್ತಕ್ಕೆ ಹೊಂದಿಕೆಯಾಗಿ ಪ್ರಾರ್ಥಿಸುವುದು ಹೇಗೆ ಎಂದು ತಿಳಿದುಕೊಳ್ಳಬೇಕು.

ನಾವು ಹೇಗೆ ಪ್ರಾರ್ಥಿಸಬೇಕು?

“ನೀನು ಪ್ರಾರ್ಥನೆಮಾಡುವಾಗ ಅನ್ಯಜನರು ಮಾಡುವಂತೆ ಹೇಳಿದ್ದನ್ನೇ ಪುನಃ ಪುನಃ ಹೇಳಬೇಡ”—ಮತ್ತಾಯ 6:7.

ಜನರು ಏನು ಹೇಳುತ್ತಾರೆ?

ಬೌದ್ಧ, ಕ್ರೈಸ್ತ, ಹಿಂದೂ, ಮುಸ್ಲಿಮ್‌ ಮುಂತಾದ ಧರ್ಮಗಳಲ್ಲಿ ಜಪಮಣಿಗಳನ್ನು ಉಪಯೋಗಿಸಿ ಗಟ್ಟಿಯಾದ ಸ್ವರದಲ್ಲಿ ಪ್ರಾರ್ಥಿಸುತ್ತಾರೆ, ಕೆಲವರಂತೂ ಪ್ರಾರ್ಥನೆಗಳನ್ನು ಎಷ್ಟು ಬಾರಿ ಮಾಡಿದ್ದೇವೆ ಅಂತ ಲೆಕ್ಕಿಸುತ್ತಾರೆ.

ಬೈಬಲ್‌ ಏನು ಹೇಳುತ್ತದೆ?

ಪ್ರಾರ್ಥನೆಗಳು ಪ್ರಾಮಾಣಿಕವಾಗಿ ಹೃದಯಾಳದಿಂದ ಹೊರಬರಬೇಕು, ಅವುಗಳನ್ನು ಬಾಯಿಪಾಠ ಮಾಡಿ ಹೇಳಿದ್ದನ್ನೇ ಹೇಳಬಾರದು. ಬೈಬಲ್‌ ಹೀಗೆ ಹೇಳುತ್ತದೆ: “ಪ್ರಾರ್ಥನೆಮಾಡುವಾಗ ಅನ್ಯಜನರು ಮಾಡುವಂತೆ ಹೇಳಿದ್ದನ್ನೇ ಪುನಃ ಪುನಃ ಹೇಳಬೇಡ; ಏಕೆಂದರೆ ತಾವು ತುಂಬ ಮಾತುಗಳನ್ನು ಉಪಯೋಗಿಸುವುದಾದರೆ ತಮ್ಮ ಪ್ರಾರ್ಥನೆಗಳು ಕೇಳಲ್ಪಡುತ್ತವೆ ಎಂದು ಅವರು ನೆನಸುತ್ತಾರೆ. ಆದುದರಿಂದ ನೀವು ನಿಮ್ಮನ್ನು ಅವರಂತೆ ಮಾಡಿಕೊಳ್ಳಬೇಡಿ; ಏಕೆಂದರೆ ನೀವು ನಿಮ್ಮ ತಂದೆಯಾದ ದೇವರನ್ನು ಕೇಳುವ ಮುಂಚೆಯೇ ನಿಮಗೆ ಯಾವುದರ ಆವಶ್ಯಕತೆ ಇದೆಯೆಂಬುದು ಆತನಿಗೆ ತಿಳಿದಿದೆ.”—ಮತ್ತಾಯ 6:7, 8.

ಇದು ಗಂಭೀರ ವಿಷಯವೇಕೆ?

ಒಬ್ಬ ವ್ಯಕ್ತಿ ದೇವರಿಗೆ ಇಷ್ಟವಿಲ್ಲದ ರೀತಿಯಲ್ಲಿ ಪ್ರಾರ್ಥಿಸುವುದಾದರೆ, ಆತನು ತನ್ನ ಸಮಯವನ್ನು ವ್ಯರ್ಥಮಾಡುತ್ತಿರುತ್ತಾನೆ. ಏಕೆಂದರೆ ಇಂಥ ಪ್ರಾರ್ಥನೆಗಳು ದೇವರಿಗೆ ಕೋಪ ಅಥವಾ ಜಿಗುಪ್ಸೆ ಬರುವಂತೆ ಮಾಡುತ್ತವೆ. ದೇವರ ಚಿತ್ತವನ್ನು ಮಾಡದ ಜನರ ಪ್ರಾರ್ಥನೆಗಳು ಆತನಿಗೆ ‘ಅಸಹ್ಯವಾಗಿವೆ’ ಎಂದು ಬೈಬಲ್ ಹೇಳುತ್ತದೆ.—ಜ್ಞಾನೋಕ್ತಿ 28:9.

ನಾವು ಯಾರಿಗೆ ಪ್ರಾರ್ಥಿಸಬೇಕು?

‘ಯೆಹೋವನು ಸಿಕ್ಕುವ ಕಾಲದಲ್ಲಿ ಆತನನ್ನು ಆಶ್ರಯಿಸಿರಿ, ಆತನು ಸಮಿಾಪದಲ್ಲಿರುವಾಗ ಆತನಿಗೆ ಬಿನ್ನಹ (ಪ್ರಾರ್ಥನೆ) ಮಾಡಿರಿ.’—ಯೆಶಾಯ 55:6.

ಜನರು ಏನು ಹೇಳುತ್ತಾರೆ?

ಕೆಲವು ಜನ ಮರಿಯಳಿಗೆ, ಇನ್ನು ಕೆಲವರು ದೇವದೂತರಿಗೆ ಮತ್ತು ಸಂತರಿಗೆ ಪ್ರಾರ್ಥಿಸುತ್ತಾರೆ. ಇವರುಗಳು ದೇವರ ಮುಂದೆ ತಮಗಾಗಿ ಬೇಡುತ್ತಾರೆ ಎನ್ನುವುದು ಜನರ ನಂಬಿಕೆ.

ಬೈಬಲ್ ಏನು ಹೇಳುತ್ತದೆ?

ನಿಜ ಆರಾಧಕರು ‘ಸ್ವರ್ಗದಲ್ಲಿರುವ ತಂದೆಗೆ’ ಪ್ರಾರ್ಥಿಸಬೇಕು. (ಮತ್ತಾಯ 6:9) “ಯಾವ ವಿಷಯದ ಕುರಿತಾಗಿಯೂ ಚಿಂತೆಮಾಡಬೇಡಿರಿ; ಎಲ್ಲ ವಿಷಯಗಳಲ್ಲಿ ಕೃತಜ್ಞತಾಸ್ತುತಿಯಿಂದ ಕೂಡಿದ ಪ್ರಾರ್ಥನೆ ಮತ್ತು ಯಾಚನೆಗಳಿಂದ ನಿಮ್ಮ ಬಿನ್ನಹಗಳನ್ನು ದೇವರಿಗೆ ತಿಳಿಯಪಡಿಸಿರಿ” ಎಂಬ ನಿರ್ದೇಶನ ಬೈಬಲಿನಲ್ಲಿದೆ.—ಫಿಲಿಪ್ಪಿ. 4:6. ▪ (g14-E 09)