ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ತಮ್ಮನ್ನು ಮನಃಪೂರ್ವಕವಾಗಿ ನೀಡಿಕೊಂಡರು—ನ್ಯೂ ಯಾರ್ಕ್‍ನಲ್ಲಿ

ತಮ್ಮನ್ನು ಮನಃಪೂರ್ವಕವಾಗಿ ನೀಡಿಕೊಂಡರು—ನ್ಯೂ ಯಾರ್ಕ್‍ನಲ್ಲಿ

ಕೆಲವು ವರ್ಷಗಳ ಹಿಂದೆ ಸೀಸರ್‌ ಮತ್ತವರ ಹೆಂಡತಿ ರೊಸಿಯೊ ಎಂಬವರು ಕ್ಯಾಲಿಫೋರ್ನಿಯದಲ್ಲಿ ಆರಾಮವಾದ ಜೀವನ ನಡೆಸುತ್ತಾ ಇದ್ದರು. ಸೀಸರ್‌ಗೆ ಪೂರ್ಣ ಸಮಯದ ಉದ್ಯೋಗವಿತ್ತು. ಅವರು ಮನೆಗಳಿಗೆ ಶಾಖ ವ್ಯವಸ್ಥೆ, ಗಾಳಿ ಸಂಚಾರ ವ್ಯವಸ್ಥೆ, ಹವಾನಿಯಂತ್ರಣ ವ್ಯವಸ್ಥೆಯನ್ನು ಅಳವಡಿಸುವ ಕೆಲಸ ಮಾಡುತ್ತಿದ್ದರು. ರೊಸಿಯೊ ಒಬ್ಬ ವೈದ್ಯರ ಆಫೀಸಿನಲ್ಲಿ ಅರೆಕಾಲಿಕ ಕೆಲಸಮಾಡುತ್ತಿದ್ದರು. ಅವರಿಗೆ ಮಕ್ಕಳಿರಲಿಲ್ಲ. ಸ್ವಂತ ಮನೆ ಇತ್ತು. ಒಂದು ದಿನ ಅವರ ಬದುಕನ್ನೇ ಬದಲಾಯಿಸಿದ ಒಂದು ಆಮಂತ್ರಣ ಬಂತು. ಏನದು?

2009ರ ಅಕ್ಟೋಬರ್‌ನಲ್ಲಿ ಯುನೈಟೆಡ್ ಸ್ಟೇಟ್ಸ್‌ ಬ್ರಾಂಚ್‌ ಆಫೀಸು ಆ ದೇಶದ ಎಲ್ಲ ಸಭೆಗಳಿಗೆ ಕಳುಹಿಸಿದ ಒಂದು ಪತ್ರದಲ್ಲಿ ವಿಶೇಷ ತರಬೇತಿ ಪಡೆದಿರುವ ಅನುಭವೀ ಸ್ವಯಂಸೇವಕರಿಗಾಗಿ ಕರೆಕೊಟ್ಟಿತು. ನ್ಯೂ ಯಾರ್ಕ್‍ನ ವಾಲ್‌ಕಿಲ್‍ನಲ್ಲಿರುವ ಬ್ರಾಂಚ್‌ ಸೌಕರ್ಯಗಳ ವಿಸ್ತರಣೆ ಕೆಲಸದಲ್ಲಿ ನೆರವಾಗಲು ಅದೊಂದು ಆಮಂತ್ರಣವಾಗಿತ್ತು. ಸಹೋದರ ಸಹೋದರಿಯರು ತಾತ್ಕಾಲಿಕ ಬೆತೆಲ್‌ ಸೇವೆಯನ್ನು ಮಾಡಬಹುದಿತ್ತು. ಬೆತೆಲ್‌ ಸೇವೆಗಾಗಿ ನಿಗದಿತವಾಗಿರುವ ವಯಸ್ಸು ಮೀರಿದವರೂ ಅರ್ಜಿಹಾಕಬಹುದಿತ್ತು. 35 ವರ್ಷ ದಾಟಿದ್ದ ಸೀಸರ್‌ ಮತ್ತು ರೊಸಿಯೊ ಹೇಳಿದ್ದು: “ನಮ್ಮ ವಯಸ್ಸಿನಿಂದಾಗಿ ಈ ಅವಕಾಶ ನಮಗೆ ಪುನಃ ಸಿಗಲಿಕ್ಕಿಲ್ಲ ಎಂದು ಗೊತ್ತಿತ್ತು. ಆದ್ದರಿಂದ ಇದು ಕೈ ಜಾರಿ ಹೋಗಲು ನಾವು ಬಯಸಲಿಲ್ಲ.” ಅವರು ತಕ್ಷಣ ಅರ್ಜಿಗಳನ್ನು ಸಲ್ಲಿಸಿದರು.

ವಾರ್ವಿಕ್‍ನಲ್ಲಿ ಕೆಲಸಮಾಡುತ್ತಿರುವ ಸ್ವಯಂಸೇವಕರಲ್ಲಿ ಕೆಲವರು

ಇದಾಗಿ ಒಂದು ವರ್ಷ ದಾಟಿತ್ತು. ಸೀಸರ್‌ ಮತ್ತು ರೊಸಿಯೊಗೆ ಬೆತೆಲ್‍ನಿಂದ ಕರೆ ಬರಲೇ ಇಲ್ಲ. ಹಾಗಿದ್ದರೂ ತಮ್ಮ ಆ ಗುರಿಯ ದಿಶೆಯಲ್ಲಿ ಇನ್ನಷ್ಟು ಹೆಜ್ಜೆಗಳನ್ನಿಟ್ಟರು. ತಮ್ಮ ಬದುಕನ್ನು ಸರಳೀಕರಿಸಿದರು. “ತುಂಬ ವರ್ಷಗಳಿಂದ ಕಟ್ಟಿಸಬೇಕೆಂದಿದ್ದ ಮನೆಯನ್ನು ಒಂದೆರಡು ವರ್ಷದ ಹಿಂದೆಯಷ್ಟೇ ಕಟ್ಟಿಸಿದ್ದೆವು. ಅದು 200 ಚದರ ಮೀಟರ್‌ನಷ್ಟು ದೊಡ್ದದಾಗಿತ್ತು. ಆದರೆ ಈಗ ಅದನ್ನು ಬಾಡಿಗೆಗೆ ಕೊಟ್ಟು ನಮ್ಮ ವಾಹನವಿಡುವ ಶೆಡ್ಡನ್ನು ಒಂದು-ಕೋಣೆಯಿರುವ ಮನೆಯಾಗಿ ಮಾಡಿ ಅಲ್ಲಿಗೆ ಸ್ಥಳಾಂತರಿಸಿದೆವು. ಇದು ಚಿಕ್ಕದ್ದಾಗಿತ್ತು, ಬರೀ 25 ಚದರ ಮೀಟರ್‌ನಷ್ಟಿತ್ತು. ಬೆತೆಲ್‌ಗೆ ಹೋಗುವ ಆಮಂತ್ರಣ ಬಂದರೆ ತಕ್ಷಣ ಹೊರಡಬಹುದು ಎನ್ನುವ ಉದ್ದೇಶದಿಂದ ಈ ಬದಲಾವಣೆ ಮಾಡಿದೆವು” ಎನ್ನುತ್ತಾರೆ ಸೀಸರ್‌. ಮುಂದೇನಾಯಿತು? “ಈ ಚಿಕ್ಕ ಮನೆಗೆ ಬಂದ ಒಂದು ತಿಂಗಳಲ್ಲೇ ವಾಲ್‌ಕಿಲ್‍ನಲ್ಲಿ ತಾತ್ಕಾಲಿಕ ಸ್ವಯಂಸೇವಕರಾಗಿ ಸೇವೆಮಾಡುವ ಆಮಂತ್ರಣ ಬಂತು. ನಮ್ಮ ಬದುಕನ್ನು ಸರಳಮಾಡಿಕೊಂಡು ಯೆಹೋವನು ಹೇಳಿದಂತೆಯೇ ಮಾಡಿದ್ದರಿಂದ ಆತನು ನಮ್ಮನ್ನು ಆಶೀರ್ವದಿಸಿದನು” ಎನ್ನುತ್ತಾರೆ ರೊಸಿಯೊ.

ಜೇಸನ್‌, ಸೀಸರ್‌, ವಿಲ್ಯಮ್‌

ಅವರ ಸ್ವತ್ಯಾಗದ ಮನೋಭಾವಕ್ಕೆ ಆಶೀರ್ವಾದ

ಸೀಸರ್‌ ಮತ್ತು ರೊಸಿಯೊರಂತೆ ನೂರಾರು ಸಹೋದರ ಸಹೋದರಿಯರು ನ್ಯೂ ಯಾರ್ಕ್‍ನಲ್ಲಿ ನಡೆಯುತ್ತಿರುವ ಕಟ್ಟಡ ನಿರ್ಮಾಣ ಕೆಲಸದಲ್ಲಿ ಪಾಲ್ಗೊಳ್ಳಲು ತ್ಯಾಗಗಳನ್ನು ಮಾಡಿದ್ದಾರೆ. ಇವರಲ್ಲಿ ಅನೇಕರು ವಾಲ್‌ಕಿಲ್‍ನಲ್ಲಾಗುತ್ತಿರುವ ವಿಸ್ತರಣಾ ಕೆಲಸದಲ್ಲಿ ನೆರವಾಗುತ್ತಿದ್ದಾರೆ. ಇತರರು ವಾರ್ವಿಕ್‍ನಲ್ಲಿ ನಡೆಯುತ್ತಿರುವ ಜಾಗತಿಕ ಮುಖ್ಯಕಾರ್ಯಾಲಯದ ನಿರ್ಮಾಣ ಕೆಲಸದಲ್ಲಿ ಕೈಜೋಡಿಸುತ್ತಿದ್ದಾರೆ. * ಅನೇಕ ದಂಪತಿಗಳು ಯೆಹೋವನ ಸೇವೆಯನ್ನು ಇನ್ನಷ್ಟು ಮಾಡುವ ಉದ್ದೇಶದಿಂದ ಒಳ್ಳೊಳ್ಳೆ ಮನೆಗಳನ್ನು, ಒಳ್ಳೇ ಉದ್ಯೋಗಗಳನ್ನು ಬಿಟ್ಟುಬಂದಿದ್ದಾರೆ. ಮುದ್ದು ಪ್ರಾಣಿಗಳನ್ನೂ ಕೊಟ್ಟುಬಿಟ್ಟಿದ್ದಾರೆ. ಅವರ ಈ ಸ್ವತ್ಯಾಗದ ಮನೋಭಾವವನ್ನು ಯೆಹೋವನು ಆಶೀರ್ವದಿಸಿದ್ದಾನಾ? ಖಂಡಿತ!

ವೇ

ಎಲೆಕ್ಟ್ರಿಷಿಯನ್‌ ಆಗಿರುವ ವೇ ಮತ್ತವರ ಹೆಂಡತಿ ಡೆಬ್ರ ಎಂಬವರ ಉದಾಹರಣೆ ತಕ್ಕೊಳ್ಳಿ. ಇಬ್ಬರಿಗೂ ಹತ್ತಿರಹತ್ತಿರ 60 ವರ್ಷ. ಕಾನ್ಸಾಸ್‌ನಲ್ಲಿದ್ದ ತಮ್ಮ ಮನೆ, ಸಾಮಾನುಗಳನ್ನು ಮಾರಿ ಕಮ್ಯೂಟರ್‌ ಬೆತೆಲಿಗರಾಗಿ (ಬೆತೆಲಿನಿಂದ ಹೊರಗೆ ವಾಸಿಸುವ ಸ್ವಯಂಸೇವಕರು) ಸೇವೆಸಲ್ಲಿಸಲು ವಾಲ್‌ಕಿಲ್‌ಗೆ ಸ್ಥಳಾಂತರಿಸಿದರು. * ಇದಕ್ಕಾಗಿ ಅವರು ಬದುಕಲ್ಲಿ ಮಾಡಿದ ಹೊಂದಾಣಿಕೆ, ತ್ಯಾಗಗಳು ಸಾರ್ಥಕ ಎಂದು ಅವರಿಗನಿಸುತ್ತಿದೆ. ಬೆತೆಲಿನಲ್ಲಿ ತನಗಿರುವ ನೇಮಕದ ಬಗ್ಗೆ ಡೆಬ್ರ ಹೇಳುವುದು: “ಒಮ್ಮೊಮ್ಮೆ ನನಗೆ ನಮ್ಮ ಸಾಹಿತ್ಯದಲ್ಲಿ ತೋರಿಸಲಾಗುವ ಪರದೈಸಿನಲ್ಲಿನ ನಿರ್ಮಾಣಕಾರ್ಯದ ದೃಶ್ಯದೊಳಗೆ ಕಾಲಿಟ್ಟಂತೆ ಅನಿಸುತ್ತದೆ.”

ಮೆಲ್ವಿನ್‌ ಮತ್ತು ಶಾರನ್‌ ವಾರ್ವಿಕ್‍ನಲ್ಲಿ ಸಹಾಯಮಾಡಲಿಕ್ಕೆಂದು ಸೌತ್‌ ಕ್ಯಾರೊಲಿನಾದಲ್ಲಿದ್ದ ತಮ್ಮ ಮನೆ ಹಾಗೂ ಸಾಮಾನುಗಳನ್ನು ಮಾರಿಬಿಟ್ಟರು. ಈ ತ್ಯಾಗಗಳನ್ನು ಮಾಡುವುದು ಸುಲಭವಾಗಿರಲಿಲ್ಲ. ಹಾಗಿದ್ದರೂ ಇಂಥ ಒಂದು ಐತಿಹಾಸಿಕ ಕೆಲಸದಲ್ಲಿ ಭಾಗಿಗಳಾಗುವುದು ತಮ್ಮ ಸುಯೋಗವೆಂದು ಈ ದಂಪತಿಗೆ ಅನಿಸುತ್ತದೆ. ಅವರನ್ನುವುದು: “ನಮ್ಮ ಜಗದ್ವಾ್ಯಪಕ ಸಂಘಟನೆಗೆ ಪ್ರಯೋಜನವಾಗುವ ಕೆಲಸದಲ್ಲಿ ಪಾಲ್ಗೊಳ್ಳುತ್ತಿದ್ದೇವೆ ಎಂಬ ಭಾವನೆ ಅತ್ಯದ್ಭುತ!”

ಕೆನೆತ್‌

ಕೆನೆತ್‌ ಮತ್ತವರ ಹೆಂಡತಿ ಮೌರೀನ್‌ಗೆ 55 ವರ್ಷ ದಾಟಿದೆ. ಕಟ್ಟಡನಿರ್ಮಾಣ ಕೆಲಸ ಮಾಡುತ್ತಿದ್ದ ಕೆನೆತ್‌ ನಿವೃತ್ತರಾಗಿದ್ದರು. ಆದರೆ ವಾರ್ವಿಕ್‌ ನಿರ್ಮಾಣ ಯೋಜನೆಯಲ್ಲಿ ನೆರವಾಗಲು ಗಂಡಹೆಂಡತಿ ಇಬ್ಬರೂ ಕ್ಯಾಲಿಫೋರ್ನಿಯದಿಂದ ಸ್ಥಳಾಂತರಿಸಿದರು. ತಮ್ಮ ಮನೆಯನ್ನು ನೋಡಿಕೊಳ್ಳಲು ಸಭೆಯಲ್ಲಿರುವ ಒಬ್ಬ ಸಹೋದರಿಯನ್ನು ಕೇಳಿಕೊಂಡರು. ಕೆನೆತ್‍ರ ವಯಸ್ಸಾದ ತಂದೆಯನ್ನು ನೋಡಿಕೊಳ್ಳಲಿಕ್ಕಾಗಿ ಕುಟುಂಬದವರ ಸಹಾಯ ಕೇಳಿದರು. ಬೆತೆಲಿನಲ್ಲಿ ಸೇವೆಮಾಡಲಿಕ್ಕಾಗಿ ಮಾಡಿದ ತ್ಯಾಗಗಳ ಬಗ್ಗೆ ಅವರಿಗೆ ಏನಾದರೂ ಬೇಜಾರು ಇದೆಯಾ? ಇಲ್ಲ! “ನಮಗೇ ಬಹಳಷ್ಟು ಪ್ರಯೋಜನವಾಗುತ್ತಿದೆ” ಎನ್ನುತ್ತಾರೆ ಕೆನೆತ್‌. ಅವರು ಮುಂದುವರಿಸಿದ್ದು: “ನಮಗೇನೂ ಕಷ್ಟ ಆಗಲಿಲ್ಲ ಎಂದೇನಿಲ್ಲ. ಆದರೆ ಈಗ ನಮ್ಮ ಬದುಕಲ್ಲಿ ತುಂಬ ತೃಪ್ತಿ ಇದೆ. ಇತರರೂ ಈ ಸೇವೆ ಮಾಡಬೇಕಂತ ಹೃದಯಾಳದಿಂದ ಹೇಳುತ್ತೇವೆ.”

ಸವಾಲುಗಳನ್ನು ಜಯಿಸುವುದು

ಸ್ವಯಂಸೇವಕರಾಗಿ ಕೆಲಸಮಾಡಲು ಮುಂದೆಬಂದವರಲ್ಲಿ ಹೆಚ್ಚಿನವರು ನಿರ್ದಿಷ್ಟ ಅಡ್ಡಿತಡೆಗಳಿದ್ದವು. 60 ದಾಟಿರುವ ವಿಲ್ಯಮ್‌ ಮತ್ತು ಸ್ಯಾ೦ಡ್ರ ಎಂಬವರನ್ನು ತೆಗೆದುಕೊಳ್ಳಿ. ಇವರು ಪೆನ್ಸಿಲ್ವೇನಿಯದಲ್ಲಿ ನೆಲೆಸಿದ್ದು, ಬದುಕನ್ನು ಆನಂದಿಸುತ್ತಿದ್ದರು. ಯಂತ್ರ ಭಾಗಗಳನ್ನು ತಯಾರಿಸುವ ಒಂದು ಕಂಪೆನಿ ಅವರಿಗಿತ್ತು. ಚೆನ್ನಾಗಿ ನಡೆಯುತ್ತಿತ್ತು. 17 ಮಂದಿ ಅಲ್ಲಿ ಕೆಲಸಕ್ಕಿದ್ದರು. ಈ ದಂಪತಿ ಚಿಕ್ಕಂದಿನಿಂದ ಒಂದೇ ಸಭೆಯಲ್ಲಿದ್ದು, ಎಲ್ಲರೂ ಚೆನ್ನಾಗಿ ಪರಿಚಿತರಾಗಿದ್ದರು. ಅವರ ಹೆಚ್ಚಿನ ಸಂಬಂಧಿಕರೂ ಆ ಕ್ಷೇತ್ರದಲ್ಲೇ ವಾಸಿಸುತ್ತಿದ್ದರು. ಹಾಗಾಗಿ ವಾಲ್‌ಕಿಲ್‌ ಬೆತೆಲಿನಲ್ಲಿ ಕಮ್ಯೂಟರ್‌ ಬೆತೆಲಿಗರಾಗಿ ಸೇವೆಸಲ್ಲಿಸುವ ಅವಕಾಶ ಬಂದಾಗ, ತಮ್ಮ ಚಿರಪರಿಚಿತ ಜನರಿಗೂ ಸ್ಥಳಗಳಿಗೂ ವಿದಾಯ ಹೇಳಬೇಕೆಂದು ಅವರಿಗೆ ಗೊತ್ತಿತ್ತು. ವಿಲ್ಯಮ್‌ ಹೇಳುವುದು: “ನಾವಿದ್ದ ಈ ಅನುಕೂಲ ಪರಿಸ್ಥಿತಿ ಬಿಟ್ಟು ಬರುವುದೇ ನಮಗಿದ್ದ ಒಂದೇ ಒಂದು ದೊಡ್ಡ ಸವಾಲಾಗಿತ್ತು.” ಹಾಗಿದ್ದರೂ ಅವರು ತುಂಬ ಪ್ರಾರ್ಥನೆ ಮಾಡಿ ಸ್ಥಳಾಂತರಿಸುವ ನಿರ್ಧಾರ ತಕ್ಕೊಂಡರು. ಇದರ ಬಗ್ಗೆ ಅವರಿಗೆ ಸ್ವಲ್ಪವೂ ಬೇಜಾರಿಲ್ಲ. “ಬೆತೆಲ್‌ ಕುಟುಂಬದೊಂದಿಗೆ ನೇರವಾಗಿ ಸಹವಾಸ ಮಾಡುತ್ತಿದ್ದು, ಅವರ ಜೊತೆಯೇ ಸೇವೆಮಾಡುವ ಈ ಆನಂದಕ್ಕೆ ಸಾಟಿಯೇ ಇಲ್ಲ! ನಾನು ಮತ್ತು ಸ್ಯಾ೦ಡ್ರ ಇಷ್ಟು ಖುಷಿ ಯಾವತ್ತೂ ಅನುಭವಿಸಿರಲಿಲ್ಲ” ಎನ್ನುತ್ತಾರೆ ವಿಲ್ಯಮ್‌.

ವಾಲ್‌ಕಿಲ್‍ನಲ್ಲಿ ಕೆಲಸಮಾಡುತ್ತಿರುವ ದಂಪತಿಗಳಲ್ಲಿ ಕೆಲವರು

ರಿಕಿ ಎಂಬವರು ಹವಾಯಿಯಲ್ಲಿ ಕನ್‌ಸ್ಟ್ರಕ್ಷನ್‌ ಪ್ರಾಜೆಕ್ಟ್‌ ಮ್ಯಾನೇಜರ್‌ ಆಗಿದ್ದರು. ವಾರ್ವಿಕ್‌ ನಿರ್ಮಾಣ ಕೆಲಸದಲ್ಲಿ ನೆರವಾಗಲಿಕ್ಕಾಗಿ ಕಮ್ಯೂಟರ್‌ ಬೆತೆಲಿಗರಾಗಿ ಸೇವೆಸಲ್ಲಿಸಲು ರಿಕಿಯನ್ನು ಆಮಂತ್ರಿಸಲಾಯಿತು. ಈ ಆಮಂತ್ರಣವನ್ನು ರಿಕಿ ಸ್ವೀಕರಿಸಬೇಕೆಂದು ಹೆಂಡತಿ ಕೆಂಡ್ರಗೆ ತುಂಬ ಆಸೆಯಿತ್ತು. ಆದರೆ ಅವರು ತಮ್ಮ 11 ವರ್ಷದ ಮಗ ಜೇಕಬ್ ಬಗ್ಗೆ ಯೋಚಿಸಬೇಕಿತ್ತು. ಇಡೀ ಕುಟುಂಬ ನ್ಯೂ ಯಾರ್ಕ್‍ಗೆ ಸ್ಥಳಾಂತರಿಸುವುದು ವಿವೇಕದ ನಿರ್ಧಾರನಾ ಇಲ್ಲವಾ, ಆ ಹೊಸ ವಾತಾವರಣಕ್ಕೆ ಮಗ ಹೊಂದಿಕೊಳ್ಳುತ್ತಾನಾ ಇಲ್ಲವಾ ಎಂಬ ಚಿಂತೆ ಅವರಿಗಿತ್ತು.

ರಿಕಿ ಹೇಳುವುದು: “ಒಳ್ಳೇ ಆಧ್ಯಾತ್ಮಿಕ ಯುವಜನರಿರುವ ಸಭೆಗೆ ಹೋಗುವುದೇ ನಮ್ಮ ಆದ್ಯತೆಗಳಲ್ಲಿ ಒಂದಾಗಿತ್ತು. ಜೇಕಬ್ಗೆ ತುಂಬ ಮಂದಿ ಒಳ್ಳೇ ಗೆಳೆಯರು ಇರಬೇಕೆನ್ನುವುದೇ ನಮ್ಮ ಆಸೆಯಾಗಿತ್ತು.” ಮುಂದೇನಾಯಿತು? ಅವರನ್ನು ನೇಮಿಸಲಾದ ಸಭೆಯಲ್ಲಿ ತುಂಬ ಬೆತೆಲಿಗರಿದ್ದರು, ಮಕ್ಕಳು ಕಡಿಮೆ. “ಈ ಸಭೆಯಲ್ಲಿ ಮೊದಲ ಕೂಟ ಆದಮೇಲೆ ‘ಹೊಸ ಸಭೆ ಹೇಗನಿಸಿತು?’ ಎಂದು ಜೇಕಬ್ಗೆ ಕೇಳಿದೆ. ಕಾರಣ, ಅಲ್ಲಿ ಅವನ ವಯಸ್ಸಿನ ಮಕ್ಕಳೇ ಇರಲಿಲ್ಲ. ಅದಕ್ಕವನು ‘ಚಿಂತೆ ಮಾಡಬೇಡಿ ಡ್ಯಾಡಿ. ಬೆತೆಲಿನ ಯುವ ಸಹೋದರರಿದ್ದಾರಲ್ಲ, ಅವರೇ ನನ್ನ ಗೆಳೆಯರಾಗುತ್ತಾರೆ’ ಎಂದು ಹೇಳಿದ” ಎನ್ನುತ್ತಾರೆ ರಿಕಿ.

ಜೇಕಬ್ ಮತ್ತವನ ಹೆತ್ತವರು ತಮ್ಮ ಸಭೆಯಲ್ಲಿರುವ ಬೆತೆಲಿಗರೊಂದಿಗಿನ ಸಹವಾಸವನ್ನು ಆನಂದಿಸುತ್ತಿರುವುದು

ಜೇಕಬ್ ಹೇಳಿದಂತೆಯೇ ಆಯಿತು. ಆ ಯುವ ಬೆತೆಲಿಗರು ಅವನ ಗೆಳೆಯರಾದರು. ಪರಿಣಾಮ? ರಿಕಿ ಹೇಳುವುದು: “ಒಂದು ರಾತ್ರಿ ಮಗನ ಕೋಣೆಯನ್ನು ದಾಟಿಹೋಗುತ್ತಿದ್ದಾಗ ಒಳಗೆ ಲೈಟ್‌ ಉರಿಯುತ್ತಿದ್ದದ್ದನ್ನು ನೋಡಿದೆ. ಅವನು ಎಲೆಕ್ಟ್ರಾನಿಕ್‌ ಗೇಮ್‌ ಆಡುತ್ತಿರಬಹುದೆಂದು ನೆನಸಿ ಒಳಗೆ ಹೋಗಿ ನೋಡಿದರೆ ಆಶ್ಚರ್ಯ! ಅವನು ಬೈಬಲ್‌ ಓದುತ್ತಿದ್ದ. ಏನು ಮಾಡುತ್ತಿದ್ದೀಯಾ ಎಂದು ಕೇಳಿದಾಗ ‘ನಾನೊಬ್ಬ ಯುವ ಬೆತೆಲಿಗ ಡ್ಯಾಡಿ, ಒಂದು ವರ್ಷದೊಳಗೆ ಇಡೀ ಬೈಬಲ್‌ ಓದಿ ಮುಗಿಸುತ್ತೇನೆ’ ಎಂದು ಹೇಳಿದ.” ರಿಕಿ ಮತ್ತು ಕೆಂಡ್ರ ತುಂಬ ಸಂತೋಷದಿಂದಿದ್ದಾರೆ. ಏಕೆಂದರೆ ರಿಕಿ ವಾರ್ವಿಕ್‌ ನಿರ್ಮಾಣ ಕೆಲಸದಲ್ಲಿ ಪಾಲ್ಗೊಳ್ಳುತ್ತಿದ್ದಾರೆ, ಜೊತೆಗೆ ತಮ್ಮ ಈ ನಿರ್ಧಾರದಿಂದ ಮಗನ ಆಧ್ಯಾತ್ಮಿಕ ಬೆಳವಣಿಗೆ ಹೆಚ್ಚುತ್ತಿದೆ.—ಜ್ಞಾನೋ. 22:6.

ಮುಂದೇನು ಎಂಬ ಚಿಂತೆ ಇಲ್ಲ

ಲೂಯೀಸ್‌ ಮತ್ತು ಡೇಲ್‌

ವಾಲ್‌ಕಿಲ್‌ ಮತ್ತು ವಾರ್ವಿಕ್‍ನಲ್ಲಿರುವ ನಿರ್ಮಾಣ ಕೆಲಸ ಒಂದಲ್ಲ ಒಂದು ದಿನ ಮುಗಿಯುತ್ತದೆ. ಆದ್ದರಿಂದ ಅಲ್ಲಿಗೆ ಆಮಂತ್ರಿಸಲಾದವರಿಗೆ ತಮ್ಮ ಬೆತೆಲ್‌ ಸೇವೆ ತಾತ್ಕಾಲಿಕ ಎಂದು ತಿಳಿದಿದೆ. ಆನಂತರ ಎಲ್ಲಿ ಹೋಗುವುದು, ಏನು ಮಾಡುವುದು ಎಂದವರು ವಿಪರೀತ ಚಿಂತೆ ಮಾಡುತ್ತಾರಾ? ಖಂಡಿತ ಇಲ್ಲ. ಫ್ಲಾರಿಡ ದಿಂದ ಬಂದಿರುವ 50 ವರ್ಷ ದಾಟಿದ ಎರಡು ದಂಪತಿಗಳಿಗೆ ಅನಿಸುವ ಹಾಗೆಯೇ ಹೆಚ್ಚಿನವರಿಗೆ ಅನಿಸುತ್ತದೆ. ಇವರಲ್ಲಿ ಒಂದು ದಂಪತಿ ಜಾನ್‌ ಮತ್ತು ಕಾರ್ಮೆನ್‌. ಜಾನ್‌ ಕಟ್ಟಡ ನಿರ್ಮಾಣ ಕೆಲಸಗಾರ. ಗಂಡಹೆಂಡತಿ ಇಬ್ಬರೂ ವಾರ್ವಿಕ್‍ನಲ್ಲಿ ತಾತ್ಕಾಲಿಕ ಸ್ವಯಂಸೇವಕರಾಗಿ ಸೇವೆಸಲ್ಲಿಸುತ್ತಿದ್ದಾರೆ. ಅವರನ್ನುವುದು: “ಇಲ್ಲಿ ವರೆಗೆ ಯೆಹೋವನು ನಮ್ಮ ನಿರ್ದಿಷ್ಟ ಅಗತ್ಯಗಳನ್ನು ಹೇಗೆ ಪೂರೈಸಿದ್ದಾನೆಂದು ನೋಡಿದ್ದೇವೆ. ಯೆಹೋವನು ನಮ್ಮನ್ನು ಇಲ್ಲಿ ತಂದಿರುವುದು ಮುಂದೆ ನಮ್ಮ ಕೈಬಿಡಲಿಕ್ಕಾಗಿ ಅಲ್ಲವೇ ಅಲ್ಲ ಎಂದು ನಮಗೆ ಗೊತ್ತು.” (ಕೀರ್ತ. 119:116) ಲೂಯೀಸ್‌ ಎಂಬವರು ಬೆಂಕಿ ಆರಿಸಲು ಸಿಂಪಡಿಸುವ ಸಾಧನಗಳನ್ನು ವಿನ್ಯಾಸಿಸುತ್ತಾರೆ. ಹೆಂಡತಿ ಕೇನ್ಯಾ ಜೊತೆ ವಾಲ್‌ಕಿಲ್‍ನಲ್ಲಿ ಸೇವೆಮಾಡುತ್ತಿದ್ದಾರೆ. ಅವರನ್ನುವುದು: “ನಮಗೆ ಭೌತಿಕವಾಗಿ ಏನು ಬೇಕೊ ಅದನ್ನು ಯೆಹೋವನು ಉದಾರ ಹಸ್ತದಿಂದ ಕೊಡುವುದನ್ನು ಈಗಾಗಲೇ ನೋಡಿದ್ದೇವೆ. ಆತನು ನಮ್ಮನ್ನು ಪರಾಮರಿಸುವುದನ್ನು ಖಂಡಿತ ಮುಂದುವರಿಸುತ್ತಾನೆ ಎಂಬ ದೃಢಭರವಸೆ ನಮಗಿದೆ. ಹೇಗೆ, ಯಾವಾಗ, ಎಲ್ಲಿ ಎಂದು ನಮಗೆ ಗೊತ್ತಿಲ್ಲದಿದ್ದರೂ ಆ ಖಾತ್ರಿ ನಮಗಿದೆ.”—ಕೀರ್ತ. 34:10; 37:25.

‘ಸ್ಥಳಹಿಡಿಯಲಾಗದಷ್ಟು ಸುವರ ಸುರಿಯುವನು’

ಜಾನ್‌ ಮತ್ತು ಮೆಲ್ವಿನ್‌

ನ್ಯೂ ಯಾರ್ಕ್‍ನಲ್ಲಿ ನಿರ್ಮಾಣ ಕೆಲಸದಲ್ಲಿ ನೆರವಾಗುತ್ತಿರುವ ಹೆಚ್ಚಿನವರು ಈ ಸ್ವಯಂಸೇವೆ ಮಾಡದಿರಲು ಕಾರಣಗಳನ್ನು ಹುಡುಕಬಹುದಿತ್ತು. ಆದರೆ ಅವರು ಯೆಹೋವನನ್ನು ಪರೀಕ್ಷಿಸಲು ನಿರ್ಣಯಿಸಿದರು. “ನಾನು ಪರಲೋಕದ ದ್ವಾರಗಳನ್ನು ತೆರೆದು ನಿಮ್ಮಲ್ಲಿ ಸ್ಥಳಹಿಡಿಯಲಾಗದಷ್ಟು ಸುವರವನ್ನು ಸುರಿಯುವೆನೋ ಇಲ್ಲವೋ ನನ್ನನ್ನು . . . ಪರೀಕ್ಷಿಸಿರಿ” ಎಂದು ಸ್ವತಃ ಯೆಹೋವನೇ ಆಮಂತ್ರಿಸಿದ್ದಾನೆ. ನಮಗೆಲ್ಲರಿಗೂ ಇದನ್ನು ಮಾಡುವಂತೆ ಆಮಂತ್ರಿಸಿದ್ದಾನೆ.—ಮಲಾ. 3:10.

ಯೆಹೋವನನ್ನು ಪರೀಕ್ಷಿಸಿ ಆತನ ಸಮೃದ್ಧ ಆಶೀರ್ವಾದ ಅನುಭವಿಸಲು ನಿಮಗೂ ಇಷ್ಟವಿದೆಯಾ? ನ್ಯೂ ಯಾರ್ಕ್‍ನಲ್ಲಾಗಲಿ ಬೇರಾವುದೇ ದೇವಪ್ರಭುತ್ವ ನಿರ್ಮಾಣ ಯೋಜನೆಗಳಲ್ಲಾಗಲಿ ನಡೆಯುವ ರೋಮಾಂಚಕ ಕೆಲಸದಲ್ಲಿ ಹೇಗೆ ಭಾಗವಹಿಸಬಲ್ಲಿರೆಂದು ಪ್ರಾರ್ಥನಾಪೂರ್ವಕವಾಗಿ ಯೋಚಿಸಿ ನೋಡಿ. ಆಗ ಯೆಹೋವನು ಹೇಗೆ ಪ್ರತಿಫಲ ಕೊಡುತ್ತಾನೆಂದು ನಿಮಗೇ ಗೊತ್ತಾಗುತ್ತದೆ.—ಮಾರ್ಕ 10:29, 30.

ಗ್ಯಾರಿ

ಡೇಲ್‌ ಎಂಬವರು ಸಿವಿಲ್‌ ಇಂಜಿನೀಯರ್‌. ಇವರ ಹೆಂಡತಿ ಕ್ಯಾಥಿ. ಇಬ್ಬರೂ ಆ್ಯಲಬಾಮಾದವರು. ಇಂಥ ನಿರ್ಮಾಣ ಯೋಜನೆಗಳಲ್ಲಿ ಕೆಲಸಮಾಡುವಂತೆ ಇತರರನ್ನೂ ಪ್ರೋತ್ಸಾಹಿಸುತ್ತಾರೆ. ವಾಲ್‌ಕಿಲ್‍ನಲ್ಲಿ ಸೇವೆಮಾಡುತ್ತಿರುವ ಇವರನ್ನುವುದು: “ನಿಮ್ಮ ಅನುಕೂಲವಾದ ಪರಿಸ್ಥಿತಿಯಿಂದ ಹೊರಗೆ ಬರಲು ನೀವು ಧೈರ್ಯಮಾಡಿದರೆ, ಯೆಹೋವನ ಪವಿತ್ರಾತ್ಮ ಕೆಲಸಮಾಡುವುದನ್ನು ನೋಡಲು ನಿಮಗೆ ಅವಕಾಶ ಸಿಗುವುದು.” ಈ ಕೆಲಸಕ್ಕೆ ನಿಮ್ಮನ್ನೇ ಸಿದ್ಧಗೊಳಿಸಲು ಏನು ಮಾಡಬೇಕು? ಡೇಲ್‌ ಹೀಗನ್ನುತ್ತಾರೆ: “ನಿಮ್ಮ ಬದುಕನ್ನು ಸಾಧ್ಯವಾದಷ್ಟು ಹೆಚ್ಚು ಸರಳ ಮಾಡಿ. ಈ ಬಗ್ಗೆ ನೀವು ಯಾವತ್ತೂ ವಿಷಾದಪಡುವುದೇ ಇಲ್ಲ.” ನಾರ್ತ್‌ ಕ್ಯಾರೊಲೀನಾದವರಾದ ಗ್ಯಾರಿ ಎಂಬವರಿಗೆ ಕಟ್ಟಡ ನಿರ್ಮಾಣ ಕೆಲಸದಲ್ಲಿ 30 ವರ್ಷಗಳ ಅನುಭವವಿದೆ. ಅವರು ಮತ್ತವರ ಹೆಂಡತಿ ಮೌರೀನ್‌ ತಮಗೆ ವಾರ್ವಿಕ್‍ನಲ್ಲಿ ಸಿಗುತ್ತಿರುವ ಆಶೀರ್ವಾದಗಳ ಬಗ್ಗೆ ಹೇಳುತ್ತಾ ಅದರಲ್ಲಿ ಒಂದು ಆಶೀರ್ವಾದ “ಬೆತೆಲಿನಲ್ಲಿ ಯೆಹೋವನ ಸೇವೆಯಲ್ಲಿ ತಮ್ಮ ಇಡೀ ಬದುಕನ್ನು ಕಳೆದಿರುವ ಎಷ್ಟೋ ಸಹೋದರ ಸಹೋದರಿಯರನ್ನು ಭೇಟಿಮಾಡಿ ಅವರ ಜೊತೆ ಕೆಲಸಮಾಡುವುದು ಆಗಿದೆ” ಎನ್ನುತ್ತಾರೆ. ಗ್ಯಾರಿ ಕೂಡಿಸಿ ಹೇಳಿದ್ದು: “ಬೆತೆಲಿನಲ್ಲಿ ಸೇವೆಮಾಡಲಿಕ್ಕಾಗಿ ಸರಳ ಜೀವನ ನಡೆಸುವುದು ಅಗತ್ಯ. ಈ ವ್ಯವಸ್ಥೆಯಲ್ಲಿ ಸರಳ ಜೀವನವೇ ಅತ್ಯುತ್ತಮ ಜೀವನ ರೀತಿ.” ಜೇಸನ್‌ ಎಂಬವರು ಎಲೆಕ್ಟ್ರಿಕಲ್‌ ಕಾಂಟ್ರ್ಯಾಕ್ಟರ್‌ ಕೆಳಗೆ ಕೆಲಸಮಾಡುತ್ತಿದ್ದರು. ಇವರು ಮತ್ತವರ ಹೆಂಡತಿ ಜೆನಿಫರ್‌ ಎಂಬವರು ಇಲಿನೊಯಿ ಎಂಬ ಸ್ಥಳದವರು. ವಾಲ್‌ಕಿಲ್‍ನಲ್ಲಿ ಬೆತೆಲ್‌ ಪ್ರಾಜೆಕ್ಟ್‌ವೊಂದರಲ್ಲಿ ಕೆಲಸಮಾಡುವುದು “ಹೆಚ್ಚುಕಡಿಮೆ ಹೊಸ ಲೋಕದಲ್ಲಿ ಜೀವಿಸಿದಂತೆಯೇ ಇದೆ” ಅನ್ನುತ್ತಾರೆ ಜೇಸನ್‌. ಇವರ ಮಾತಿಗೆ ಕೂಡಿಸಿ ಜೆನಿಫರ್‌ ಹೇಳುವುದು: “ನಾವು ಇಲ್ಲಿ ಮಾಡುವ ಪ್ರತಿಯೊಂದು ಕೆಲಸವನ್ನು ಯೆಹೋವನು ಮೆಚ್ಚುತ್ತಾನೆ ಮತ್ತು ಅದು ಆತನು ನಮಗಾಗಿ ತಯಾರಿಸುತ್ತಿರುವ ಭವಿಷ್ಯತ್ತಿಗಾಗಿ ಬಂಡವಾಳದಂತಿದೆ ಎಂಬ ಭಾವನೆ ಮನಸ್ಸಿಗೆ ತುಂಬ ಖುಷಿ ತರುತ್ತದೆ. ನಮಗೆ ಅಳೆಯಲಾಗದಷ್ಟು ಸಮೃದ್ಧವಾದ ಆಶೀರ್ವಾದ ಸಿಗುವಂತೆ ಯೆಹೋವನು ನೋಡಿಕೊಳ್ಳುತ್ತಾನೆ.”

^ ಪ್ಯಾರ. 6 2014 ಇಯರ್‌ಬುಕ್‌ ಆಫ್‌ ಜೆಹೋವಾಸ್‌ ವಿಟ್ನೆಸೆಸ್‌ ಪುಟ 12-13 ನೋಡಿ.

^ ಪ್ಯಾರ. 7 ಅರೆಕಾಲಿಕ ಕಮ್ಯೂಟರ್‌ ಬೆತೆಲಿಗರು ವಾಸಕ್ಕೆ ಸ್ವಂತ ಏರ್ಪಾಡು ಮಾಡಿಕೊಳ್ಳುತ್ತಾರೆ. ತಮ್ಮ ಖರ್ಚುಗಳನ್ನು ತಾವೇ ನೋಡಿಕೊಳ್ಳುತ್ತಾರೆ. ವಾರದಲ್ಲಿ ಒಂದು ಅಥವಾ ಹೆಚ್ಚು ದಿನ ಬೆತೆಲಿಗೆ ಬಂದು ಕೆಲಸಮಾಡುತ್ತಾರೆ.