ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಹಿರಿಯರೇ, ಇತರರಿಗೆ ತರಬೇತಿ ಕೊಡುವ ಬಗ್ಗೆ ನಿಮ್ಮ ಅನಿಸಿಕೆ ಏನು?

ಹಿರಿಯರೇ, ಇತರರಿಗೆ ತರಬೇತಿ ಕೊಡುವ ಬಗ್ಗೆ ನಿಮ್ಮ ಅನಿಸಿಕೆ ಏನು?

“ಪ್ರತಿಯೊಂದಕ್ಕೂ ಒಂದೊಂದು ಸಮಯವಿದೆ.”—ಪ್ರಸಂ. 3:1, ಪವಿತ್ರ ಗ್ರಂಥ ಭಾಷಾಂತರ.

1, 2. ಅನೇಕ ಸಭೆಗಳಲ್ಲಿ ಸರ್ಕಿಟ್‌ ಮೇಲ್ವಿಚಾರಕರು ಏನು ಗಮನಿಸಿದ್ದಾರೆ?

ಸರ್ಕಿಟ್‌ ಮೇಲ್ವಿಚಾರಕನು ಹಿರಿಯರೊಟ್ಟಿಗಿನ ಕೂಟವನ್ನು ಇನ್ನೇನು ಮುಗಿಸಬೇಕೆಂದಿದ್ದನು. ತುಂಬ ಶ್ರಮಪಟ್ಟು ಕೆಲಸ ಮಾಡುತ್ತಿದ್ದ ಆ ಹಿರಿಯರೆಲ್ಲರನ್ನು ನೋಡಿ ಅವನಿಗೆ ಪ್ರೀತಿ ಉಕ್ಕಿ ಬಂತು. ಅವರಲ್ಲಿ ಕೆಲವರಿಗೆ ಅವನ ತಂದೆಯ ವಯಸ್ಸಾಗಿತ್ತು. ಆದರೆ ಸಭೆಗೆ ಸಂಬಂಧಪಟ್ಟ ಒಂದು ಪ್ರಮುಖ ವಿಷಯದ ಬಗ್ಗೆ ಅವನಿಗೆ ಚಿಂತೆ ಇತ್ತು. “ಸಹೋದರರೇ, ಸಭೆಯಲ್ಲಿ ಇತರರು ಹೆಚ್ಚು ಜವಾಬ್ದಾರಿ ವಹಿಸುವಂತೆ ತರಬೇತಿ ಕೊಡಲು ನೀವೇನು ಮಾಡಿದ್ದೀರಿ?” ಎಂದು ಆ ಹಿರಿಯರಿಗೆ ಕೇಳಿದನು. ಇತರರಿಗೆ ತರಬೇತಿ ಕೊಡಲು ಹೆಚ್ಚು ಸಮಯ ಮಾಡಿಕೊಳ್ಳುವಂತೆ ಸರ್ಕಿಟ್‌ ಮೇಲ್ವಿಚಾರಕನು ತನ್ನ ಹಿಂದಿನ ಭೇಟಿಯಲ್ಲಿ ಪ್ರೋತ್ಸಾಹಿಸಿದ್ದು ಹಿರಿಯರಿಗೆ ನೆನಪಿತ್ತು. ಆದರೆ ಒಬ್ಬ ಹಿರಿಯನು ಒಪ್ಪಿಕೊಂಡದ್ದು: “ನಿಜ ಹೇಳಬೇಕಂದರೆ ನಾವೇನೂ ಮಾಡಿಲ್ಲ.” ಅಲ್ಲಿದ್ದ ಬೇರೆ ಹಿರಿಯರೂ ಈ ಮಾತನ್ನು ಒಪ್ಪಿದರು.

2 ನೀವು ಹಿರಿಯರಾಗಿರುವಲ್ಲಿ ಬಹುಶಃ ನೀವೂ ಇದೇ ಉತ್ತರ ಕೊಡಬಹುದು. ಸಭೆಯನ್ನು ನೋಡಿಕೊಳ್ಳಲು ಯೌವನಸ್ಥರಿಗೆ ಮತ್ತು ಅವರಿಗಿಂಥ ಹೆಚ್ಚು ವಯಸ್ಸಿನ ಸಹೋದರರಿಗೆ ತರಬೇತಿ ಕೊಡಲು ಹಿರಿಯರು ಹೆಚ್ಚು ಸಮಯ ಕಳೆಯುವ ಅಗತ್ಯವಿದೆಯೆಂದು ಅನೇಕ ಸರ್ಕಿಟ್‌ ಮೇಲ್ವಿಚಾರಕರು ಗಮನಿಸಿದ್ದಾರೆ. ಆದರೆ ಇದು ಅಷ್ಟು ಸುಲಭವಲ್ಲ. ಏಕೆ?

3. (ಎ) ಇತರರಿಗೆ ತರಬೇತಿಕೊಡುವುದು ಪ್ರಾಮುಖ್ಯವೆಂದು ಬೈಬಲು ಹೇಗೆ ತೋರಿಸಿಕೊಡುತ್ತದೆ? (ಬಿ) ಈ ರೀತಿಯ ತರಬೇತಿಯಲ್ಲಿ ನಾವೆಲ್ಲ ಏಕೆ ಆಸಕ್ತಿ ತೋರಿಸಬೇಕು? (ಪಾದಟಿಪ್ಪಣಿ ನೋಡಿ.) (ಸಿ) ಕೆಲವು ಹಿರಿಯರಿಗೆ ಇತರರನ್ನು ತರಬೇತಿಗೊಳಿಸುವುದು ಏಕೆ ಕಷ್ಟ ಆಗಬಹುದು?

3 ಸಹೋದರರಿಗೆ ತರಬೇತಿ ಕೊಡಲು ಸಮಯ ಕೊಡುವುದು ಪ್ರಾಮುಖ್ಯವೆಂದು ಹಿರಿಯರಾದ ನಿಮಗೆ ಗೊತ್ತಿದೆ. * (ಪಾದಟಿಪ್ಪಣಿ ನೋಡಿ.) ಈಗ ಇರುವ ಸಭೆಗಳನ್ನು ಬಲಪಡಿಸಲು ಮತ್ತು ಭವಿಷ್ಯದಲ್ಲಿ ಹೊಸ ಸಭೆಗಳನ್ನು ಬೆಂಬಲಿಸಲು ಹೆಚ್ಚು ಸಹೋದರರ ಅಗತ್ಯವಿದೆ ಎಂದು ನಿಮಗೆ ತಿಳಿದಿದೆ. (ಯೆಶಾಯ 60:22 ಓದಿ.) ನೀವು ‘ಇತರರಿಗೆ ಬೋಧಿಸಬೇಕೆಂದು’ ಬೈಬಲು ಕಲಿಸುತ್ತದೆ. (2 ತಿಮೊಥೆಯ 2:2 ಓದಿ.) ಆದರೆ ಇದಕ್ಕಾಗಿ ಸಮಯ ಮಾಡಿಕೊಳ್ಳುವುದು ನಿಮಗೆ ಕಷ್ಟ ಅನಿಸಬಹುದು. ಏಕೆಂದರೆ ನಿಮ್ಮ ಕುಟುಂಬದ ಅಗತ್ಯಗಳನ್ನು ನೋಡಿಕೊಳ್ಳಬೇಕು, ಉದ್ಯೋಗಕ್ಕೆ ಗಮನಕೊಡಬೇಕು, ಸಭೆಯ ಜವಾಬ್ದಾರಿಗಳನ್ನು ನಿರ್ವಹಿಸಬೇಕು ಮತ್ತು ತುರ್ತು ಪರಿಸ್ಥಿತಿಯೂ ಎದುರಾಗಬಹುದು. ಇದೆಲ್ಲ ಇದ್ದರೂ ಇತರರ ತರಬೇತಿಗಾಗಿ ಸಮಯ ಕೊಡುವುದು ಏಕೆ ಪ್ರಾಮುಖ್ಯವೆಂದು ಚರ್ಚಿಸೋಣ.

ತರಬೇತಿ ಕೊಡುವುದು ತುರ್ತಿನದ್ದು

4. ಕೆಲವೊಮ್ಮೆ ಹಿರಿಯರು ಇತರ ಸಹೋದರರಿಗೆ ತರಬೇತಿ ಕೊಡುವುದನ್ನು ಯಾಕೆ ಮುಂದೂಡುತ್ತಾರೆ?

4 ಕೆಲವೊಮ್ಮೆ ಹಿರಿಯರಿಗೆ ಇತರರ ತರಬೇತಿಗಾಗಿ ಸಮಯ ಮಾಡಿಕೊಳ್ಳಲು ಯಾಕೆ ಕಷ್ಟವಾಗುತ್ತದೆ? ‘ಸಭೆಯಲ್ಲಿ ಗಮನ ಕೊಡಲಿಕ್ಕೆ ಬೇರೆ ಎಷ್ಟೋ ವಿಷಯಗಳಿವೆ. ಅದನ್ನೆಲ್ಲ ಮೊದಲು ಮಾಡಿ ಮುಗಿಸಬೇಕು. ತರಬೇತಿಯೆಲ್ಲ ಆಮೇಲೆ ಕೊಟ್ಟರೆ ಆಯ್ತು, ಸಭೆಯೇನೂ ಮುಳುಗಿಹೋಗುವುದಿಲ್ಲ’ ಎಂದು ಕೆಲವು ಹಿರಿಯರು ನೆನಸಬಹುದು. ನೀವು ಬೇರೆ ವಿಷಯಗಳ ಕಡೆಗೆ ತಕ್ಷಣ ಗಮನ ಕೊಡಬೇಕು ನಿಜ. ಆದರೆ ಸಹೋದರರಿಗೆ ಕೊಡಬೇಕಾದ ತರಬೇತಿಯನ್ನು ಮುಂದೂಡುತ್ತಾ ಹೋದರೆ ಸಭೆಗೆ ಹಾನಿಯಾಗುವುದಂತೂ ಖಂಡಿತ.

5, 6. (ಎ) ಬೈಕನ್ನು ನೋಡಿಕೊಳ್ಳುವುದರ ಕುರಿತ ಉದಾಹರಣೆಯಿಂದ ಏನು ಕಲಿಯುತ್ತೇವೆ? (ಬಿ) ಈ ಉದಾಹರಣೆಯನ್ನು ಸಭೆಯಲ್ಲಿ ಹಿರಿಯರು ಕೊಡುವ ತರಬೇತಿಗೆ ಹೇಗೆ ಹೋಲಿಸಬಹುದು?

5 ನಿಮ್ಮ ಬಳಿ ಒಂದು ಬೈಕ್‌ ಇದೆ ಎಂದು ನೆನಸಿ. ಅದು ಚೆನ್ನಾಗಿ ಓಡುತ್ತಾ ಇರಬೇಕಾದರೆ ಅದರ ಇಂಜಿನ್‌ ಆಯಿಲನ್ನು ಆಗಾಗ ಬದಲಾಯಿಸುತ್ತಾ ಇರಬೇಕು. ಆಯಿಲ್‌ ಬದಲಾಯಿಸುವುದಕ್ಕಿಂತ ಪೆಟ್ರೋಲ್‌ ಹಾಕುವುದೇ ತುಂಬ ಮುಖ್ಯ, ಇಲ್ಲದಿದ್ದರೆ ಬೈಕ್‌ ನಿಂತುಹೋಗುತ್ತದೆ. ‘ಈಗ ನನಗೆ ಸಮಯ ಇಲ್ಲ, ಆಯಿಲನ್ನು ಆಮೇಲೆ ಬದಲಾಯಿಸಿದರೆ ಆಯಿತು, ಬೈಕ್‌ ಏನೂ ನಿಂತುಹೋಗುವುದಿಲ್ಲ’ ಎಂದು ನೀವು ನೆನಸಬಹುದು. ಆದರೆ ಇದು ತುಂಬ ಅಪಾಯಕಾರಿ. ಸರಿಯಾದ ಸಮಯದಲ್ಲಿ ಆಯಿಲನ್ನು ಬದಲಾಯಿಸದೇ ಹೋದರೆ ಇವತ್ತಲ್ಲ ನಾಳೆ ಇಂಜಿನ್‌ ಹಾಳಾಗುತ್ತದೆ. ಇದನ್ನು ರಿಪೇರಿ ಮಾಡಲಿಕ್ಕೆ ನಿಮ್ಮ ಸಮಯ ಹಾಳಾಗುತ್ತದೆ ಜೊತೆಗೆ 100 ರೂಪಾಯಿಯಲ್ಲಿ ಮುಗಿದು ಹೋಗುವ ಕೆಲಸಕ್ಕೆ 1,000 ರೂಪಾಯಿ ಖರ್ಚಾಗುತ್ತದೆ. ಇದರಿಂದ ಏನು ಪಾಠ?

6 ಸಭೆಗೆ ಹಾನಿಯಾಗುವುದನ್ನು ತಪ್ಪಿಸಲು ಹಿರಿಯರು ಮುಖ್ಯವಾದ ವಿಷಯಗಳಿಗೆ ಬೇಗ ಗಮನ ಕೊಡಲೇಬೇಕು. ಹೀಗೆ ಅವರು “ಹೆಚ್ಚು ಪ್ರಮುಖವಾದ ವಿಷಯಗಳನ್ನು ಖಚಿತಪಡಿಸಿ”ಕೊಳ್ಳುತ್ತಾರೆ. (ಫಿಲಿ. 1:10) ಇದು ಆಗಾಗ ಬೈಕಿಗೆ ಪೆಟ್ರೋಲ್‌ ಹಾಕುವಂತಿದೆ. ಆದರೆ ಕೆಲವು ಹಿರಿಯರು ಈ ಮುಖ್ಯವಾದ ವಿಷಯಗಳಲ್ಲಿ ಎಷ್ಟು ಮುಳುಗಿರುತ್ತಾರೆಂದರೆ ಬೇರೆಯವರಿಗೆ ತರಬೇತಿ ಕೊಡಲು ಅವರಿಗೆ ಸಮಯವೇ ಇರುವುದಿಲ್ಲ. ಇದು ಬೈಕಿನ ಇಂಜಿನ್‌ ಆಯಿಲ್‌ ಬದಲಾಯಿಸುವುದನ್ನು ಅಲಕ್ಷ್ಯ ಮಾಡುವಂತಿದೆ. ಸಹೋದರರಿಗೆ ಕೊಡಬೇಕಾದ ತರಬೇತಿಯನ್ನು ಮುಂದೂಡುತ್ತಾ ಹೋದರೆ ಒಂದಲ್ಲ ಒಂದು ದಿನ ಸಭೆಯ ಕೆಲಸಗಳನ್ನು ನೋಡಿಕೊಳ್ಳಲಿಕ್ಕೆ ತರಬೇತಿ ಪಡೆದಿರುವ ಸಹೋದರರೇ ಇರುವುದಿಲ್ಲ.

7. ಸಹೋದರರಿಗೆ ತರಬೇತಿ ಕೊಡಲು ಸಮಯ ಮಾಡಿಕೊಳ್ಳುವ ಹಿರಿಯರನ್ನು ನಾವು ಹೇಗೆ ವೀಕ್ಷಿಸಬೇಕು?

7 ಆದ್ದರಿಂದ ಸಹೋದರರಿಗೆ ತರಬೇತಿ ಕೊಡುವುದು ಅಷ್ಟೇನು ತುರ್ತಿನದ್ದಲ್ಲ ಎಂದು ನೆನಸಬೇಡಿ. ಸಭೆಯ ಭವಿಷ್ಯದ ಬಗ್ಗೆ ಯೋಚಿಸಿ ಸಹೋದರರಿಗೆ ತರಬೇತಿ ನೀಡಲು ಸಮಯ ಮಾಡಿಕೊಳ್ಳುವ ಹಿರಿಯರು ವಿವೇಕಿಗಳು. ಇವರಿಂದ ಸಭೆಗೆ ತುಂಬ ಪ್ರಯೋಜನ ಸಿಗುತ್ತದೆ. (1 ಪೇತ್ರ 4:10 ಓದಿ.) ಯಾವ ಪ್ರಯೋಜನ?

ತರಬೇತಿಗೆ ಕೊಡುವ ಸಮಯ ವ್ಯರ್ಥ ಅಲ್ಲ

8. (ಎ) ಇತರರಿಗೆ ತರಬೇತಿ ಕೊಡಲು ಹಿರಿಯರಿಗೆ ಯಾವ ಕಾರಣಗಳಿವೆ? (ಬಿ) ಅಗತ್ಯವಿರುವ ಸ್ಥಳಗಳಲ್ಲಿರುವ ಹಿರಿಯರಿಗೆ ಯಾವ ತುರ್ತಿನ ಜವಾಬ್ದಾರಿ ಇದೆ? (“ಮಾಡಲೇಬೇಕಾದ ತುರ್ತಿನ ಕೆಲಸ” ಎಂಬ ಚೌಕ ನೋಡಿ.)

8 ತುಂಬ ಅನುಭವ ಇರುವ ಹಿರಿಯರಲ್ಲೂ ನಮ್ರತೆ ಇರಬೇಕು. ವಯಸ್ಸಾಗುತ್ತಾ ಹೋದಂತೆ ತಮಗೆ ಹೆಚ್ಚು ಕೆಲಸ ಮಾಡಲು ಆಗುವುದಿಲ್ಲ ಎನ್ನುವುದನ್ನು ಅರ್ಥ ಮಾಡಿಕೊಳ್ಳಬೇಕು. (ಮಿಾಕ 6:8) “ಕಾಲ ಹಾಗೂ ಅನಿರೀಕ್ಷಿತ ಘಟನೆಗಳಿಂದಾಗಿ” ಏನಾದರೂ ಹೆಚ್ಚುಕಡಿಮೆಯಾದರೆ ತಮಗಿರುವ ಜವಾಬ್ದಾರಿಗಳನ್ನು ನಿರ್ವಹಿಸಲು ಕಷ್ಟವಾಗಬಹುದೆಂದು ನೆನಪಿನಲ್ಲಿಡಬೇಕು. (ಪ್ರಸಂ. 9:11, 12, ನೂತನ ಲೋಕ ಭಾಷಾಂತರ ಪರಿಷ್ಕೃತ ಆವೃತ್ತಿ; ಯಾಕೋ. 4:13, 14) ಯೆಹೋವನ ಜನರ ಮೇಲೆ ಹಿರಿಯರಿಗೆ ತುಂಬ ಪ್ರೀತಿ ಕಾಳಜಿ ಇದೆ. ಹಾಗಾಗಿ, ಅವರು ತಾವು ಅನೇಕ ವರ್ಷಗಳಿಂದ ಕಲಿತ ವಿಷಯಗಳನ್ನು ಯುವ ಸಹೋದರರಿಗೆ ಕಲಿಸಲು ಶ್ರಮಪಡುತ್ತಾರೆ.—ಕೀರ್ತನೆ 71:17, 18 ಓದಿ.

9. ಭವಿಷ್ಯದ ಯಾವ ಘಟನೆಯಿಂದಾಗಿ ತರಬೇತಿ ಕೊಡುವುದು ತುಂಬ ಮುಖ್ಯ?

9 ಸಹೋದರರಿಗೆ ತರಬೇತಿ ಕೊಡುವ ಹಿರಿಯರಿಂದಾಗುವ ಇನ್ನೊಂದು ಪ್ರಯೋಜನವೇನೆಂದರೆ ಅವರ ಈ ಶ್ರಮದಿಂದಾಗಿ ಇಡೀ ಸಭೆ ಬಲಗೊಳ್ಳುತ್ತದೆ. ಇವರು ಕೊಡುವ ತರಬೇತಿಯಿಂದಾಗಿ ಇನ್ನಷ್ಟು ಸಹೋದರರು ಸಿದ್ಧರಾಗುತ್ತಾರೆ. ಯಾವುದಕ್ಕೆ? ಸಭೆಯವರು ಐಕ್ಯರಾಗಿದ್ದು ದೇವರಿಗೆ ನಂಬಿಗಸ್ತರಾಗಿರಲು ಬೇಕಾದ ಸಹಾಯ ಕೊಡಲಿಕ್ಕೆ. ಈ ಕಡೇ ದಿವಸಗಳಲ್ಲಿ ಈ ಗುಣಗಳು ತುಂಬ ಮುಖ್ಯ. ಬರಲಿರುವ ಮಹಾ ಸಂಕಟದಲ್ಲಂತೂ ಇವು ಬೇಕೇಬೇಕು. (ಯೆಹೆ. 38:10-12; ಮಿಾಕ 5:5, 6) ಆದ್ದರಿಂದ ನಮ್ಮ ಪ್ರಿಯ ಹಿರಿಯರೇ, ಇತರರಿಗೆ ನಿಯತವಾಗಿ ತರಬೇತಿ ಕೊಡಲು ಇಂದೇ ಸಮಯ ಮಾಡಿಕೊಳ್ಳಿ.

10. ಬೇರೆಯವರಿಗೆ ತರಬೇತಿ ಕೊಡಲಿಕ್ಕೆ ಸಮಯ ಮಾಡಿಕೊಳ್ಳಲು ಹಿರಿಯರು ಏನು ಮಾಡಬೇಕಾಗಬಹುದು?

10 ಸಭೆಗೆ ಸಂಬಂಧಪಟ್ಟ ಮುಖ್ಯ ಕೆಲಸಗಳನ್ನು ನೋಡಿಕೊಳ್ಳುತ್ತಿರುವುದರಿಂದ ನಿಮಗೆ ಸಮಯ ಇಲ್ಲವೆಂದು ನಮಗೆ ಅರ್ಥವಾಗುತ್ತದೆ. ಅವುಗಳಿಗೆ ನೀವು ಕೊಡುವ ಸಮಯದಿಂದ ಸ್ವಲ್ಪ ಸಮಯವನ್ನು ತರಬೇತಿ ಕೊಡಲು ಬಳಸಬೇಕಾಗಬಹುದು. (ಪ್ರಸಂ. 3:1) ಹೀಗೆ ಮಾಡುವುದರಿಂದ ಸಮಯವನ್ನು ಚೆನ್ನಾಗಿ ಬಳಸಿದಂತೆಯೂ ಆಗುತ್ತದೆ, ಭವಿಷ್ಯದಲ್ಲಿ ಸಭೆಗೆ ಪ್ರಯೋಜನವೂ ಸಿಗುತ್ತದೆ.

ವಿದ್ಯಾರ್ಥಿಯ ಹೃದಯವನ್ನು ಸಿದ್ಧಪಡಿಸಿ

11. (ಎ) ತರಬೇತಿಯ ಬಗ್ಗೆ ಬೇರೆಬೇರೆ ದೇಶಗಳಲ್ಲಿರುವ ಹಿರಿಯರು ಕೊಟ್ಟ ಸಲಹೆಗಳು ಹೇಗಿದ್ದವು? (ಬಿ) ಬೇರೆ ಹಿರಿಯರು ಕೊಟ್ಟ ಸಲಹೆಗಳನ್ನು ಚರ್ಚಿಸುವುದು ಜ್ಞಾನೋಕ್ತಿ 15:22ಕ್ಕನುಸಾರ ಏಕೆ ಪ್ರಾಮುಖ್ಯ?

11 ಸಭೆಯ ಕೆಲಸಗಳನ್ನು ನೋಡಿಕೊಳ್ಳಲು ಸಹೋದರರಿಗೆ ತರಬೇತಿ ಕೊಟ್ಟು ಒಳ್ಳೇ ಫಲಿತಾಂಶ ಪಡೆದಿರುವ ಕೆಲವು ಹಿರಿಯರಿಗೆ ಅದನ್ನು ಹೇಗೆ ಮಾಡಿದಿರಿ ಎಂದು ಇತ್ತೀಚಿಗೆ ಕೇಳಲಾಯಿತು. * (ಪಾದಟಿಪ್ಪಣಿ ನೋಡಿ.) ಒಬ್ಬೊಬ್ಬ ಹಿರಿಯನ ಪರಿಸ್ಥಿತಿ ಬೇರೆಬೇರೆ ಆಗಿದ್ದರೂ ಅವರೆಲ್ಲರೂ ಕೊಟ್ಟ ಸಲಹೆ ಒಂದೇ ರೀತಿಯದ್ದಾಗಿತ್ತು. ಇದರಿಂದ ಏನು ಗೊತ್ತಾಗುತ್ತದೆ? ಬೈಬಲಿನ ಆಧಾರದ ಮೇಲೆ ಕೊಡಲಾಗುವ ತರಬೇತಿ “ಎಲ್ಲ ಕಡೆಯಲ್ಲಿರುವ ಪ್ರತಿಯೊಂದು ಸಭೆಯಲ್ಲಿ” ಪ್ರಯೋಜನ ತರುತ್ತದೆ. (1 ಕೊರಿಂ. 4:17) ಆದ್ದರಿಂದ ಈ ಲೇಖನ ಮತ್ತು ಮುಂದಿನ ಲೇಖನದಲ್ಲಿ ಈ ಹಿರಿಯರು ಕೊಟ್ಟ ಕೆಲವೊಂದು ಸಲಹೆಗಳನ್ನು ಚರ್ಚಿಸೋಣ. (ಜ್ಞಾನೋ. 15:22) ಯಾರು ತರಬೇತಿ ಕೊಡುತ್ತಾರೊ ಅವರನ್ನು “ಶಿಕ್ಷಕ,” ಯಾರದನ್ನು ಪಡೆಯುತ್ತಾರೊ ಅವರನ್ನು “ವಿದ್ಯಾರ್ಥಿ” ಎಂದು ಈ ಲೇಖನಗಳಲ್ಲಿ ಕರೆಯಲಾಗಿದೆ.

12. ಒಬ್ಬ ಶಿಕ್ಷಕನು ಏನನ್ನು ಸಿದ್ಧಪಡಿಸಬೇಕು? ಏಕೆ?

12 ಶಿಕ್ಷಕರು ಮೊದಲು ಮಾಡಬೇಕಾದ ಕೆಲಸ ಏನೆಂದರೆ ವಿದ್ಯಾರ್ಥಿಯ ಹೃದಯವನ್ನು ಸಿದ್ಧಪಡಿಸಬೇಕು. ಇದು ಏಕೆ ಪ್ರಾಮುಖ್ಯ? ಬೀಜ ಬಿತ್ತುವ ಮುಂಚೆ ಹೇಗೆ ಒಬ್ಬ ತೋಟಗಾರ ಮೊದಲು ಮಣ್ಣನ್ನು ಸಿದ್ಧಪಡಿಸುತ್ತಾನೊ ಹಾಗೇ ಶಿಕ್ಷಕ ಹೊಸ ಕೌಶಲಗಳನ್ನು ಕಲಿಸುವ ಮುಂಚೆ ವಿದ್ಯಾರ್ಥಿಯ ಹೃದಯವನ್ನು ಸಿದ್ಧಪಡಿಸಬೇಕು. ಇದನ್ನು ಮಾಡುವುದು ಹೇಗೆ? ಇದಕ್ಕಾಗಿ ಕೌಶಲಭರಿತ ಶಿಕ್ಷಕನಾಗಿದ್ದ ಪ್ರವಾದಿ ಸಮುವೇಲನ ಮಾದರಿ ಸಹಾಯ ಮಾಡುತ್ತದೆ.

13-15. (ಎ) ಸಮುವೇಲನಿಗೆ ಯೆಹೋವನು ಏನು ಹೇಳಿದನು? (ಬಿ) ಸೌಲನ ಹೊಸ ನೇಮಕಕ್ಕೆ ಸಮುವೇಲನು ಅವನನ್ನು ಹೇಗೆ ಸಿದ್ಧಪಡಿಸಿದನು? (ಲೇಖನದ ಆರಂಭದ ಚಿತ್ರ ನೋಡಿ.) (ಸಿ) ಸಮುವೇಲನ ಬಗ್ಗೆ ಇರುವ ಈ ಬೈಬಲ್‌ ವೃತ್ತಾಂತ ಹಿರಿಯರಿಗೆ ಇಂದು ಹೇಗೆ ಸಹಾಯ ಮಾಡಬಲ್ಲದು?

13 ಮೂರು ಸಾವಿರಕ್ಕಿಂತಲೂ ಹೆಚ್ಚು ವರ್ಷಗಳ ಹಿಂದೆ ಒಂದು ದಿನ, ಯೆಹೋವನು ವೃದ್ಧ ಪ್ರವಾದಿ ಸಮುವೇಲನಿಗೆ “ನಾಳೆ ಇಷ್ಟು ಹೊತ್ತಿಗೆ ಬೆನ್ಯಾಮಿಾನ್‌ ದೇಶದವನೊಬ್ಬನನ್ನು ನಿನ್ನ ಬಳಿಗೆ ಬರಮಾಡುವೆನು; ನೀನು ಅವನನ್ನು ಇಸ್ರಾಯೇಲ್ಯರ ನಾಯಕನನ್ನಾಗಿ ಅಭಿಷೇಕಿಸಬೇಕು” ಎಂದು ಹೇಳಿದನು. (1 ಸಮು. 9:15, 16) ಸಮುವೇಲ ತಾನಿನ್ನು ಇಸ್ರಾಯೇಲ್‌ ಜನಾಂಗವನ್ನು ಮುನ್ನಡೆಸುವುದಿಲ್ಲ, ಅವರಿಗಾಗಿ ಒಬ್ಬ ಹೊಸ ನಾಯಕನನ್ನು ಅಭಿಷೇಕಿಸುವಂತೆ ಯೆಹೋವನು ಬಯಸುತ್ತಿದ್ದಾನೆಂದು ತಿಳಿದುಕೊಂಡನು. ಆದ್ದರಿಂದ ಈ ಹೊಸ ನೇಮಕಕ್ಕಾಗಿ ಆ ವ್ಯಕ್ತಿಯನ್ನು ಸಿದ್ಧಪಡಿಸಲು ಸಮುವೇಲನು ಒಂದು ಯೋಜನೆ ಮಾಡಿದನು.

14 ಮಾರನೇ ದಿನ ಸಮುವೇಲ ಸೌಲನನ್ನು ಭೇಟಿಯಾದ. “ನಾನು ತಿಳಿಸಿದ್ದ ಮನುಷ್ಯನು ಇವನೇ” ಎಂದು ಯೆಹೋವನು ಅವನಿಗೆ ಹೇಳಿದನು. ಕೂಡಲೆ ಸಮುವೇಲನು ತಾನು ಯೋಜಿಸಿದಂತೆಯೇ ಮಾಡಿದನು. ಸೌಲನ ಜೊತೆ ಮಾತಾಡಲು ಒಂದು ಒಳ್ಳೇ ಅವಕಾಶ ಮಾಡಿಕೊಂಡನು. ಅವನನ್ನು ಮತ್ತು ಅವನ ಸೇವಕನನ್ನು ಊಟಕ್ಕೆ ಕರೆದು ಮುಖ್ಯ ಆಸನಗಳಲ್ಲಿ ಕೂರಿಸಿದನು. ನಂತರ ಸೌಲನಿಗೆ ಮಾಂಸದ ಒಳ್ಳೇ ತುಂಡುಗಳನ್ನು ತಿನ್ನಲು ಕೊಟ್ಟನು. “ಇದು ನಿನಗೋಸ್ಕರ ಪ್ರತ್ಯೇಕಿಸಿದ್ದು; ಇದನ್ನು ತಿನ್ನು” ಎಂದು ಸಮುವೇಲ ಹೇಳಿದನು. ಊಟ ಆದ ಮೇಲೆ ಸೌಲನನ್ನು ಮನೆಗೆ ಕರೆದನು. ಅಲ್ಲಿಗೆ ಹೋಗುತ್ತಿರುವಾಗ ಇಬ್ಬರೂ ಮಾತಾಡಿಕೊಂಡು ಹೋದರು. ಮನೆಗೆ ಬಂದ ಮೇಲೆ ‘ಮಾಳಿಗೆಯ ಮೇಲೆ ಕರೆದುಕೊಂಡು ಹೋಗಿ ಅಲ್ಲಿಯೂ ಸಮುವೇಲನು ಸೌಲನ ಜೊತೆ ಮಾತಾಡಿದನು.’ ನಿದ್ದೆ ಬರುವವರೆಗೂ ಮಾತಾಡಿದರು. ಮರುದಿನ ಸಮುವೇಲ ಸೌಲನನ್ನು ಅಭಿಷೇಕಿಸಿ ಮುದ್ದಿಟ್ಟು ಹೆಚ್ಚಿನ ಸಲಹೆ-ಸೂಚನೆಗಳನ್ನು ಕೊಟ್ಟನು. ಇದಾದ ಮೇಲೆ ಸೌಲ ಅಲ್ಲಿಂದ ಹೊರಟನು. ಮುಂದೆ ಆಗಲಿದ್ದ ವಿಷಯಗಳಿಗೆ ಸೌಲನು ಈಗ ಸಿದ್ಧನಾಗಿದ್ದನು.—1 ಸಮು. 9:17-27; 10:1.

15 ಸಮುವೇಲ ಸೌಲನನ್ನು ಒಂದು ಜನಾಂಗದ ನಾಯಕನನ್ನಾಗಿ ಅಭಿಷೇಕಿಸಿದನು. ಇದು ನಮ್ಮ ಸಮಯದಲ್ಲಿ ಒಬ್ಬ ಸಹೋದರನಿಗೆ ಹಿರಿಯನಾಗಲು ಅಥವಾ ಶುಶ್ರೂಷಾ ಸೇವಕನಾಗಲು ತರಬೇತಿ ಕೊಡುವುದಕ್ಕಿಂತ ತುಂಬ ಭಿನ್ನವಾಗಿದೆ. ಆದರೂ ಸಮುವೇಲನು ಸೌಲನ ಹೃದಯವನ್ನು ಸಿದ್ಧಪಡಿಸಿದ ರೀತಿಯಿಂದ ಹಿರಿಯರು ಮಹತ್ವದ ಪಾಠಗಳನ್ನು ಕಲಿಯಬಹುದು. ಅವುಗಳಲ್ಲಿ ಎರಡನ್ನು ಈಗ ನೋಡೋಣ.

ಸಿದ್ಧಮನಸ್ಸಿನ ಶಿಕ್ಷಕರು ಮತ್ತು ಒಳ್ಳೇ ಸ್ನೇಹಿತರು

16. (ಎ) ತಮಗೊಬ್ಬ ರಾಜ ಬೇಕು ಎಂದು ಇಸ್ರಾಯೇಲ್ಯರು ಕೇಳಿದಾಗ ಸಮುವೇಲನಿಗೆ ಹೇಗನಿಸಿತು? (ಬಿ) ಸೌಲನನ್ನು ಅಭಿಷೇಕಿಸಲು ಯೆಹೋವನು ಹೇಳಿದಾಗ ಸಮುವೇಲನ ಪ್ರತಿಕ್ರಿಯೆ ಹೇಗಿತ್ತು?

16 ಒಲ್ಲದ ಮನಸ್ಸಿನಿಂದ ಅಲ್ಲ, ಸಿದ್ಧಮನಸ್ಸಿನಿಂದ ಮಾಡಿ. ಇಸ್ರಾಯೇಲ್ಯರು ತಮಗೊಬ್ಬ ಮಾನವ ರಾಜ ಬೇಕು ಎಂದು ಕೇಳಿದಾಗ ಸಮುವೇಲನಿಗೆ ತುಂಬ ದುಃಖ ಆಯಿತು. ನನ್ನನ್ನು ತಿರಸ್ಕರಿಸಿಬಿಟ್ಟರಲ್ಲಾ ಎಂದು ಅವನಿಗನಿಸಿತು. (1 ಸಮು. 8:4-8) ಇಸ್ರಾಯೇಲ್ಯರ ಮಾತು ಕೇಳು ಎಂದು ಯೆಹೋವನು ಸಮುವೇಲನಿಗೆ ಮೂರು ಸಲ ಹೇಳಬೇಕಾಯಿತು. ಯಾಕೆಂದರೆ ಅವರಿಗೆ ರಾಜನನ್ನು ಕೊಡಲು ಸಮುವೇಲನಿಗೆ ಇಷ್ಟವಿರಲಿಲ್ಲ. (1 ಸಮು. 8:7, 9, 22) ಅವನಿಗೆ ನೋವಾದರೂ ತನ್ನ ಸ್ಥಾನಕ್ಕೆ ಬರಲಿದ್ದವನ ಮೇಲೆ ಕೋಪ ಮಾಡಿಕೊಳ್ಳಲಿಲ್ಲ ಅಥವಾ ಹೊಟ್ಟೆಕಿಚ್ಚುಪಡಲಿಲ್ಲ. ಸೌಲನನ್ನು ಅಭಿಷೇಕಿಸಲು ಯೆಹೋವನು ಹೇಳಿದಾಗ ಅವನು ಒಲ್ಲದ ಮನಸ್ಸಿನಿಂದ ಅಲ್ಲ, ಸಿದ್ಧಮನಸ್ಸಿನಿಂದ ವಿಧೇಯತೆ ತೋರಿಸಿದನು. ಅವನಿದನ್ನು ಬೇರೆ ದಾರಿ ಇಲ್ಲದೆ ಮಾಡಿದ್ದಲ್ಲ ಬದಲಿಗೆ ಯೆಹೋವನ ಮೇಲೆ ಪ್ರೀತಿ ಇದ್ದದರಿಂದ ಮಾಡಿದನು.

17. (ಎ) ಇಂದು ಹಿರಿಯರು ಸಮುವೇಲನ ಮಾದರಿಯನ್ನು ಹೇಗೆ ಅನುಕರಿಸುತ್ತಾರೆ? (ಬಿ) ಇದರಿಂದ ಅವರಿಗೆ ಯಾವ ಆನಂದ ಸಿಗುತ್ತದೆ?

17 ಇಂದು ಸಮುವೇಲನ ಮಾದರಿಯನ್ನು ಅನುಕರಿಸಿ ಪ್ರೀತಿಯಿಂದ ತರಬೇತಿ ಕೊಟ್ಟಿರುವ ಅನೇಕ ಅನುಭವೀ ಹಿರಿಯರಿದ್ದಾರೆ. (1 ಪೇತ್ರ 5:2) ಈ ದಯಾಭರಿತ ಹಿರಿಯರು ಬೇರೆಯವರಿಗೆ ಕಲಿಸಲು ಸಿದ್ಧರಿದ್ದಾರೆ. ಸಭೆಯಲ್ಲಿ ತಮಗಿರುವ ಕೆಲವು ಸುಯೋಗಗಳನ್ನು ವಿದ್ಯಾರ್ಥಿಗಳ ಜೊತೆ ಹಂಚಿಕೊಳ್ಳಬೇಕಲ್ಲಾ ಎಂಬ ಭಯ ಅವರಿಗಿಲ್ಲ. ಬದಲಿಗೆ ಸಭೆಯನ್ನು ನೋಡಿಕೊಳ್ಳಲು ತಮಗೆ ನೆರವಾಗುವ ಅಮೂಲ್ಯ ‘ಜೊತೆ ಕೆಲಸಗಾರರಾಗಿ’ ಇವರನ್ನು ಕಾಣುತ್ತಾರೆ. (2 ಕೊರಿಂ. 1:24; ಇಬ್ರಿ. 13:16) ವಿದ್ಯಾರ್ಥಿಗಳು ಯೆಹೋವನ ಜನರಿಗೆ ಸಹಾಯ ಮಾಡಲು ತಮ್ಮ ಸಾಮರ್ಥ್ಯಗಳನ್ನು ಬಳಸುವುದನ್ನು ನೋಡಿ ಈ ನಿಸ್ವಾರ್ಥ ಹಿರಿಯರಿಗೆ ಆನಂದವಾಗುತ್ತದೆ.—ಅ. ಕಾ. 20:35.

18, 19. (ಎ) ತರಬೇತಿಗಾಗಿ ವಿದ್ಯಾರ್ಥಿಯ ಹೃದಯವನ್ನು ಹಿರಿಯರು ಹೇಗೆ ಸಿದ್ಧಪಡಿಸಬಹುದು? (ಬಿ) ಇದು ಏಕೆ ಪ್ರಾಮುಖ್ಯ?

18 ಶಿಕ್ಷಕರು ಮಾತ್ರ ಅಲ್ಲ ಸ್ನೇಹಿತರೂ ಆಗಿರಿ. ಸಮುವೇಲ ಸೌಲನನ್ನು ಭೇಟಿಯಾದಲ್ಲೇ ಅವನ ತಲೆ ಮೇಲೆ ಎಣ್ಣೆ ಸುರಿದು ರಾಜನನ್ನಾಗಿ ಅಭಿಷೇಕಿಸಬಹುದಿತ್ತು. ಹಾಗೆ ಮಾಡಿದ್ದರೆ ಸೌಲನಿಗೆ ರಾಜನಾಗಿ ಅಭಿಷೇಕವೇನೊ ಆಗುತ್ತಿತ್ತು ಆದರೆ ದೇವಜನರನ್ನು ಮುನ್ನಡೆಸಲು ಅವನಿಂದ ಆಗುತ್ತಿರಲಿಲ್ಲ. ಆದ್ದರಿಂದ ಸಮುವೇಲನು ಹೊಸ ನೇಮಕದ ಬಗ್ಗೆ ಸೌಲನ ಹೃದಯವನ್ನು ಸಿದ್ಧಪಡಿಸಲು ಸಮಯ ಮಾಡಿಕೊಂಡನು. ಸೌಲನನ್ನು ಅಭಿಷೇಕ ಮಾಡುವ ಮುಂಚೆ ಇಬ್ಬರೂ ಒಟ್ಟಿಗೆ ಊಟ ಮಾಡಿದರು, ಪ್ರಶಾಂತವಾದ ವಾತಾವರಣದಲ್ಲಿ ಸ್ವಲ್ಪ ದೂರ ನಡೆದರು, ತುಂಬ ಹೊತ್ತು ಮಾತಾಡಿದರು, ವಿಶ್ರಾಂತಿ ಕೂಡ ಪಡೆದರು. ಹೊಸ ರಾಜನನ್ನು ಅಭಿಷೇಕಿಸಲು ಸಮುವೇಲ ಸರಿಯಾದ ಸಮಯಕ್ಕೆ ಕಾದನು.

ಶಿಕ್ಷಕರೇ ನಿಮಗೆಷ್ಟೇ ಕೆಲಸ ಇರಲಿ, ವಿದ್ಯಾರ್ಥಿಗಾಗಿ ಸಮಯ ಮಾಡಿಕೊಳ್ಳಿ (ಪ್ಯಾರ 18, 19 ನೋಡಿ)

19 ಇವತ್ತಿಗೂ ಇದು ಸತ್ಯ. ವಿದ್ಯಾರ್ಥಿಯ ತರಬೇತಿಯನ್ನು ಆರಂಭಿಸುವ ಮುಂಚೆ ಹಿರಿಯನು ಅವನ ಸ್ನೇಹಿತನಾಗಲು ಪ್ರಯತ್ನಿಸಬೇಕು. ತನ್ನ ವಿದ್ಯಾರ್ಥಿ ಮುಜುಗರಪಡದೆ ಆರಾಮವಾಗಿರಲು ಶಿಕ್ಷಕ ಏನೆಲ್ಲಾ ಮಾಡುತ್ತಾನೆ ಎನ್ನುವುದು ಸನ್ನಿವೇಶ, ಸಂಸ್ಕೃತಿಯ ಮೇಲೆ ಹೊಂದಿಕೊಂಡಿರುತ್ತದೆ. ನೀವು ಯಾವುದೇ ದೇಶದಲ್ಲಿರಲಿ, ಎಷ್ಟೇ ಕೆಲಸ ಇರಲಿ ವಿದ್ಯಾರ್ಥಿಗೆ ತರಬೇತಿ ಕೊಡಲು ಸಮಯ ಮಾಡಿಕೊಂಡಾಗ ಅವನು ನಿಮಗೆ ತುಂಬ ಪ್ರಾಮುಖ್ಯ ಎಂಬುದನ್ನು ತೋರಿಸಿಕೊಡುತ್ತೀರಿ. (ರೋಮನ್ನರಿಗೆ 12:10 ಓದಿ.) ನಿಮ್ಮ ವಿದ್ಯಾರ್ಥಿಗಳಿಗೆ ಪ್ರೀತಿಯಿಂದ ಕಾಳಜಿ ತೋರಿಸಿದಾಗ ಮತ್ತು ಗಮನ ಕೊಟ್ಟಾಗ ಅದನ್ನವರು ತುಂಬ ಇಷ್ಟಪಡುತ್ತಾರೆ.

20, 21. (ಎ) ಒಬ್ಬ ಯಶಸ್ವಿ ಶಿಕ್ಷಕ ಹೇಗಿರಬೇಕೆಂದು ನೀವು ಹೇಳುತ್ತೀರಿ? (ಬಿ) ಮುಂದಿನ ಲೇಖನದಲ್ಲಿ ಏನು ಕಲಿಯಲಿದ್ದೇವೆ?

20 ಒಬ್ಬ ಯಶಸ್ವೀ ಶಿಕ್ಷಕ ಬೇರೆಯವರಿಗೆ ತರಬೇತಿ ಕೊಡಲು ತುಂಬ ಇಷ್ಟಪಡುತ್ತಾನೆ ನಿಜ. ಆದರೆ ಅವನು ಯಾರಿಗೆ ತರಬೇತಿ ಕೊಡುತ್ತಿದ್ದಾನೊ ಆ ವ್ಯಕ್ತಿಯನ್ನೂ ಪ್ರೀತಿಸಬೇಕು. (ಯೋಹಾನ 5:20 ಹೋಲಿಸಿ.) ಇದು ಯಾಕೆ ಪ್ರಾಮುಖ್ಯ? ನಿಜವಾಗಲೂ ನಿಮಗೆ ವಿದ್ಯಾರ್ಥಿಯ ಮೇಲೆ ಕಾಳಜಿ ಇದೆ ಎಂದು ತಿಳಿದಾಗ ಅವನಿಗೂ ನಿಮ್ಮಿಂದ ಕಲಿಯಲು ಸಿದ್ಧಮನಸ್ಸಿರುತ್ತದೆ. ಆದ್ದರಿಂದ ಹಿರಿಯರೇ, ಬರೀ ಶಿಕ್ಷಕರಾಗಿರಬೇಡಿ. ಒಳ್ಳೇ ಸ್ನೇಹಿತರೂ ಆಗಿರಿ.—ಜ್ಞಾನೋ. 17:17; ಯೋಹಾ. 15:15.

21 ವಿದ್ಯಾರ್ಥಿಯ ಹೃದಯವನ್ನು ಸಿದ್ಧಪಡಿಸಿದ ನಂತರ ಹಿರಿಯನೊಬ್ಬನು ತರಬೇತಿ ಕೊಡಲು ಶುರುಮಾಡಬಹುದು. ಹಿರಿಯರು ಯಾವೆಲ್ಲ ವಿಧಾನಗಳನ್ನು ಬಳಸಬಹುದು? ಮುಂದಿನ ಲೇಖನದಲ್ಲಿ ಅದನ್ನು ನೋಡೋಣ.

^ ಪ್ಯಾರ. 3 ಈ ಲೇಖನ ಮತ್ತು ಮುಂದಿನ ಲೇಖನ ವಿಶೇಷವಾಗಿ ಹಿರಿಯರಿಗಾಗಿದೆ. ಆದರೆ ಈ ಮಾಹಿತಿಯಲ್ಲಿ ಎಲ್ಲರೂ ಆಸಕ್ತಿ ತೋರಿಸಬೇಕು. ಏಕೆ? ಸಭೆಯಲ್ಲಿ ಹೆಚ್ಚಿನ ಕೆಲಸ ಮಾಡಲಿಕ್ಕೆ ತರಬೇತಿಯ ಅಗತ್ಯವಿದೆ ಎಂದು ಗ್ರಹಿಸಲು ಇದು ಎಲ್ಲ ಸಹೋದರರಿಗೆ ಸಹಾಯಮಾಡುತ್ತದೆ. ಸಭೆಯಲ್ಲಿ ತರಬೇತಿ ಪಡೆದಿರುವ ಸಹೋದರರ ಸಂಖ್ಯೆ ಹೆಚ್ಚಾದರೆ ಎಲ್ಲರಿಗೂ ಪ್ರಯೋಜನ ಸಿಗುತ್ತದೆ.

^ ಪ್ಯಾರ. 11 ಈ ಹಿರಿಯರು ಅಮೆರಿಕ, ಆಸ್ಟ್ರೇಲಿಯ, ಕೊರಿಯ, ಜಪಾನ್‌, ದಕ್ಷಿಣ ಆಫ್ರಿಕ, ನಮೀಬಿಯ, ನೈಜೀರಿಯ, ಫ್ರಾನ್ಸ್‌, ಫ್ರೆಂಚ್‌ ಗಯಾನ, ಬಾಂಗ್ಲಾದೇಶ, ಬೆಲ್ಜಿಯಮ್‌, ಬ್ರೆಜಿಲ್‌, ಮೆಕ್ಸಿಕೊ, ರಷ್ಯ ಮತ್ತು ರೀಯೂನಿಯನ್‌ ದೇಶಗಳವರು.