ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನೈಸರ್ಗಿಕ ವಿಪತ್ತುಗಳು ದೇವರ ಶಿಕ್ಷೆಯೋ?

ನೈಸರ್ಗಿಕ ವಿಪತ್ತುಗಳು ದೇವರ ಶಿಕ್ಷೆಯೋ?

ನಮ್ಮ ಓದುಗರ ಪ್ರಶ್ನೆ

ನೈಸರ್ಗಿಕ ವಿಪತ್ತುಗಳು ದೇವರ ಶಿಕ್ಷೆಯೋ?

ದೇವರು ನೈಸರ್ಗಿಕ ವಿಪತ್ತುಗಳ ಮೂಲಕ ನಿರ್ದೋಷಿಗಳನ್ನು ಶಿಕ್ಷಿಸುವುದಿಲ್ಲ. ಆತನು ಹಾಗೆ ಈ ಮುಂಚೆ ಮಾಡಿದ್ದೂ ಇಲ್ಲ, ಇನ್ನು ಮಾಡುವುದೂ ಇಲ್ಲ. ಏಕೆ? ಏಕೆಂದರೆ “ದೇವರು ಪ್ರೀತಿಸ್ವರೂಪಿಯು” ಎಂದು ಬೈಬಲ್‌ 1 ಯೋಹಾನ 4:8ರಲ್ಲಿ ಹೇಳುತ್ತದೆ.

ದೇವರ ಕ್ರಿಯೆಗಳೆಲ್ಲ ಪ್ರೀತಿಯಿಂದಲೇ ಹೊರಚಿಮ್ಮುತ್ತವೆ. ಪ್ರೀತಿಯು ನಿರ್ದೋಷಿಗಳಿಗೆ ಕೇಡನ್ನು ಮಾಡದು. “ಪ್ರೀತಿಯು ಮತ್ತೊಬ್ಬರಿಗೆ ಯಾವ ಕೇಡನ್ನೂ ಮಾಡುವದಿಲ್ಲ” ಎಂದು ಬೈಬಲ್‌ ಹೇಳುತ್ತದೆ. (ರೋಮಾಪುರ 13:10) ಅಲ್ಲದೆ, ಯೋಬ 34:12ರಲ್ಲಿ ಬೈಬಲ್‌ ಹೇಳುವುದು: “ದೇವರು ಕೆಟ್ಟದ್ದನ್ನು ನಡಿಸುವದೇ ಇಲ್ಲ.”

ನಮ್ಮ ಸಮಯಗಳಲ್ಲಿ “ಮಹಾಭೂಕಂಪ”ಗಳಂಥ ವಿಪತ್ತುಗಳು ಸಂಭವಿಸುವವೆಂದು ಬೈಬಲ್‌ ಮುಂತಿಳಿಸಿದೆ ನಿಜ. (ಲೂಕ 21:11) ಬಿರುಗಾಳಿಯನ್ನು ಮುಂತಿಳಿಸುವ ಹವಾತಜ್ಞನು ಅದರಿಂದಾಗುವ ಹಾವಳಿಗೆ ಹೇಗೆ ಜವಾಬ್ದಾರನಲ್ಲವೋ ಹಾಗೆಯೇ ಯೆಹೋವನೂ ನೈಸರ್ಗಿಕ ವಿಪತ್ತುಗಳಿಂದಾಗುವ ನಾಶನಕ್ಕೆ ಜವಾಬ್ದಾರನಲ್ಲ. ನೈಸರ್ಗಿಕ ವಿಪತ್ತುಗಳಿಂದುಂಟಾಗುವ ಕಷ್ಟಾನುಭವಕ್ಕೆ ದೇವರು ಕಾರಣನಲ್ಲವಾದರೆ ಬೇರೆ ಯಾರು ಕಾರಣ?

“ಲೋಕವೆಲ್ಲವು ಕೆಡುಕನ” ಅಂದರೆ ಪಿಶಾಚನಾದ ಸೈತಾನನ “ವಶದಲ್ಲಿ ಬಿದ್ದಿದೆ” ಎಂದು ಬೈಬಲ್‌ ತಿಳಿಸುತ್ತದೆ. (1 ಯೋಹಾನ 5:19) ಸೈತಾನನು ಮಾನವಕುಲದ ಆರಂಭದಲ್ಲಿ ದೇವರ ವಿರುದ್ಧ ದಂಗೆಯೆದ್ದ ಸಮಯದಿಂದ ಇಂದಿನ ವರೆಗೂ ಕೊಲೆಗಾರನು. (ಯೋಹಾನ 8:44) ಮಾನವ ಜೀವವು ಸೈತಾನನ ದೃಷ್ಟಿಯಲ್ಲಿ ಕ್ಷುಲ್ಲಕವೂ ಬೆಲೆಯಿಲ್ಲದ್ದೂ ಆಗಿದೆ. ಅವನು ಸ್ವಾರ್ಥಪರ ಹೆಬ್ಬಯಕೆಯುಳ್ಳವನು. ಆದ್ದರಿಂದಲೇ ಸ್ವಾರ್ಥವೇ ಅಸ್ಥಿಗತವಾಗಿರುವ ಲೋಕವನ್ನು ಅವನು ನಿರ್ಮಿಸಿದ್ದಾನೆ. ಇಂದು ಲೋಕದಲ್ಲಿರುವ ಸ್ವಾರ್ಥಪರ ಜನರ ಕೃತ್ಯಗಳು ನಿರ್ದೋಷಿಗಳಾದ ಜನರನ್ನು ನೈಸರ್ಗಿಕ ಅಥವಾ ಮಾನವ ನಿರ್ಮಿತ ವಿಪತ್ತುಗಳು ಸಂಭವಿಸುವ ಅಪಾಯಕರ ಸ್ಥಳಗಳಲ್ಲಿ ವಾಸಿಸುವಂತೆ ಒತ್ತಾಯಪಡಿಸಿವೆ. (ಎಫೆ. 2:2; 1 ಯೋಹಾ. 2:16) ಆದ್ದರಿಂದ ಈ ನಿರ್ದೋಷಿ ಜನರು ಅನುಭವಿಸುವ ಕೆಲವು ವಿಪತ್ತುಗಳಿಗೆ ಸ್ವಾರ್ಥಪರ ಮಾನವರೇ ಕಾರಣರು. (ಪ್ರಸಂ. 8:9) ಅದು ಹೇಗೆ?

ಹೆಚ್ಚಿನ ವಿಪತ್ತುಗಳಿಗೆ ಆಂಶಿಕವಾಗಿಯಾದರೂ ಮಾನವರೇ ಕಾರಣರಾಗಿದ್ದಾರೆ. ಉದಾಹರಣೆಗೆ ಅಮೆರಿಕದ ನ್ಯೂ ಆರ್ಲೀನ್ಸ್‌ ನಗರದಲ್ಲಿ ಬಿರುಗಾಳಿಯಿಂದಾಗಿ ನೆರೆಬಂದಾಗ ಹಾಗೂ ವೆನೆಜುವೇಲಾದ ಕರಾವಳಿಯ ಬೆಟ್ಟಗಳಿಂದ ಕೆಸರುಮಣ್ಣು ಕುಸಿದುಬಿದ್ದು ಮನೆಗಳನ್ನು ನೆಲಸಮಮಾಡಿದಾಗ, ಪೀಡಿತ ನಿವಾಸಿಗಳ ಸಂಕಷ್ಟಗಳ ಕುರಿತು ತುಸು ಯೋಚಿಸಿರಿ. ಈ ಘಟನೆಗಳಲ್ಲಿ ಮತ್ತು ಇತರ ಸಂದರ್ಭಗಳಲ್ಲಿ ಸಾಮಾನ್ಯವಾದ ನೈಸರ್ಗಿಕ ಗಾಳಿ, ಮಳೆಗಳು ವಿಪತ್ಕಾರಕವಾದದ್ದು ಹೇಗೆ? ಮನುಷ್ಯರು ವಾತಾವರಣವನ್ನು ದುರ್ಲಕ್ಷಿಸಿದ್ದರಿಂದಲೇ. ಕೆಳದರ್ಜೆಯ ಎಂಜಿನಿಯರಿಂಗ್‌, ನ್ಯೂನ ಯೋಜನೆ, ಎಚ್ಚರಿಕೆಯ ಕಡೆಗೆ ಅಲಕ್ಷ್ಯ, ಅಧಿಕಾರಿಗಳ ಅಡ್ಡಾದಿಡ್ಡಿ ಕೆಲಸಗಳೇ ಅವುಗಳಿಗೆ ಹೆಚ್ಚಿನ ಕಾರಣಗಳಾಗಿದ್ದವು.

ಯೇಸುವಿನ ಸಮಯದಲ್ಲಾದ ಒಂದು ವಿಪತ್ತನ್ನು ಪರಿಗಣಿಸಿ. ಆಗ ಅಕಸ್ಮಾತ್ತಾಗಿ ಒಂದು ಬುರುಜು ಬಿದ್ದು 18 ಮಂದಿ ಸತ್ತರು. (ಲೂಕ 13:4) ಇದು ಮನುಷ್ಯರ ತಪ್ಪಿನಿಂದಾಗಿಯೋ, “ಮುಂಗಾಣದ ಘಟನೆ”ಯಿಂದಾಗಿಯೋ ಅಥವಾ ಎರಡೂ ಕಾರಣಗಳಿಂದಾಗಿ ಆಗಿರಬಹುದು. ಆದರೆ ಅದು ದೇವರು ವಿಧಿಸಿದ ಶಿಕ್ಷೆಯಲ್ಲವೆಂಬುದಂತೂ ಖಂಡಿತ.—ಪ್ರಸಂಗಿ 9:11, NW.

ದೇವರು ಸ್ವತಃ ಎಂದಾದರೂ ಯಾವುದೇ ವಿಪತ್ತುಗಳನ್ನು ತಂದಿದ್ದಾನೋ? ಹೌದು, ತಂದಿದ್ದಾನೆ. ಆದರೆ ನೈಸರ್ಗಿಕ ಹಾಗೂ ಮನುಷ್ಯನು ತಂದ ವಿಪತ್ತುಗಳಿಗಿಂತ ಅವು ಬೇರೆಯಾಗಿವೆ. ಹೇಗೆಂದರೆ ದುಷ್ಟರ ಮೇಲೆ ಮಾತ್ರ ಅಂಥ ವಿಪತ್ತುಗಳು ಬಂದವು, ಅವುಗಳಿಗೆ ಸರಿಯಾದ ಕಾರಣಗಳೂ ಇದ್ದವು, ಮಾತ್ರವಲ್ಲ ಅವು ತೀರಾ ವಿರಳವಾಗಿದ್ದವು. ಇದಕ್ಕೆ ಎರಡು ಉದಾಹರಣೆಗಳು, ನೋಹನ ದಿನದಲ್ಲಾದ ಜಲಪ್ರಳಯ ಮತ್ತು ಲೋಟನ ದಿನಗಳಲ್ಲಿ ಆದ ಸೊದೋಮ್‌ ಗೊಮೋರ ಪಟ್ಟಣಗಳ ನಾಶನ. (ಆದಿಕಾಂಡ 6:7-9, 13; 18:20-32; 19:24) ದೇವರು ಜಾರಿಗೊಳಿಸಿದ ಆ ನ್ಯಾಯತೀರ್ಪುಗಳು ಪಶ್ಚಾತ್ತಾಪಪಡದ ದುಷ್ಟ ಜನರನ್ನು ನಾಶಗೊಳಿಸಿದವು ಮತ್ತು ದೇವರ ದೃಷ್ಟಿಯಲ್ಲಿ ನೀತಿವಂತರಾಗಿದ್ದವರನ್ನು ಕಾಪಾಡಿ ಉಳಿಸಿದವು.

ನಿಜ ಸಂಗತಿಯೇನೆಂದರೆ ಯೆಹೋವ ದೇವರಿಗೆ ಎಲ್ಲಾ ಕಷ್ಟಗಳನ್ನು ಅಂತ್ಯಗೊಳಿಸುವ ಹಾಗೂ ನೈಸರ್ಗಿಕ ವಿಪತ್ತುಗಳು ತರುವ ಹಾನಿಗಳನ್ನು ಪರಿಹರಿಸುವ ಶಕ್ತಿ, ಸಾಮರ್ಥ್ಯ ಮತ್ತು ಅಪೇಕ್ಷೆ ಇದೆ. ದೇವರು ನೇಮಿಸಿರುವ ರಾಜನಾದ ಯೇಸು ಕ್ರಿಸ್ತನ ಕುರಿತು ಕೀರ್ತನೆ 72:12 ಮುಂತಿಳಿಸಿರುವುದು: “ಅವನು ಮೊರೆಯಿಡುವ ಬಡವರನ್ನೂ ದಿಕ್ಕಿಲ್ಲದೆ ಕುಗ್ಗಿದವರನ್ನೂ ಉದ್ಧರಿಸುವನು.” (w08 5/1)