ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನಿಮ್ಮ ಮೇಲೆ ಬಣ್ಣ ಬೀರುವ ಪರಿಣಾಮ

ನಿಮ್ಮ ಮೇಲೆ ಬಣ್ಣ ಬೀರುವ ಪರಿಣಾಮ

ನೀವು ಸುತ್ತಮುತ್ತ ದೃಷ್ಟಿ ಹಾಯಿಸುವಾಗ ನಿಮ್ಮ ಕಣ್ಣು ಮತ್ತು ಮಿದುಳು ಮಾಹಿತಿ ಸಂಗ್ರಹಿಸಲು ಜೊತೆಜೊತೆಯಾಗಿ ಕೆಲಸಮಾಡುತ್ತದೆ. ಒಂದು ಹಣ್ಣನ್ನು ನೋಡಿ ಅದನ್ನು ತಿನ್ನಬೇಕಾ ಇಲ್ಲವಾ ಅಂತ ಯೋಚಿಸುತ್ತೀರಿ. ಆಕಾಶ ನೋಡಿ, ಇವತ್ತು ಮಳೆ ಬರುವುದಿಲ್ಲ ಅಂತ ಮನಸ್ಸಲ್ಲೇ ಅಂದುಕೊಳ್ಳುತ್ತೀರಿ. ನೀವೀಗ ಓದುತ್ತಿರುವ ಪದಗಳನ್ನು ನೋಡಿ ಅವುಗಳ ಅರ್ಥವನ್ನು ಗ್ರಹಿಸುತ್ತಾ ಇದ್ದೀರಿ. ಯಾಕೆಂದರೆ ನಿಮ್ಮ ಮೇಲೆ ಬಣ್ಣ ಪರಿಣಾಮ ಬೀರುತ್ತಾ ಇದೆ. ನಿಜವಾಗ್ಲೂ?

ನೀವು ನೋಡಿದ ಹಣ್ಣಿನ ಬಣ್ಣ ಅದು ಹಣ್ಣಾಗಿದೆಯಾ ಅಂತ ತಿಳಿದುಕೊಳ್ಳಲು ಸಹಾಯಮಾಡಿತು. ಆಕಾಶ ಮತ್ತು ಮೋಡಗಳ ಬಣ್ಣದಿಂದಾಗಿ ನಿಮಗೆ ಹವಾಮಾನ ಹೇಗಿದೆಯೆಂದು ತಿಳಿಯಲು ನೆರವಾಯಿತು. ನೀವು ಈ ಲೇಖನದಲ್ಲಿನ ಪದಗಳನ್ನು ಓದುತ್ತಿರುವಾಗ ಈ ಪುಟ ಹಾಗೂ ಅದರ ಮೇಲಿನ ಅಕ್ಷರಗಳ ಬಣ್ಣದಲ್ಲಿರುವ ವ್ಯತ್ಯಾಸದಿಂದ ನಿಮ್ಮ ದೃಷ್ಟಿ ಹಾಯಾಗಿ ಮುಂದಕ್ಕೆ ಸಾಗುತ್ತಾ ಇದೆ. ಹೌದು ನಿಮ್ಮ ಸುತ್ತಲಿನ ಜಗತ್ತಿನ ಮಾಹಿತಿಯನ್ನು ಕಲೆಹಾಕಲು ನೀವು ಬಣ್ಣವನ್ನು ಸತತವಾಗಿ ಬಳಸುತ್ತಾ ಇದ್ದೀರಿ. ಬಹುಶಃ ಇದು ಅಷ್ಟಾಗಿ ನಿಮ್ಮ ಗಮನಕ್ಕೆ ಬಂದಿಲ್ಲವೇನೊ. ಇನ್ನೊಂದು ಸಂಗತಿಯೇನೆಂದರೆ, ಬಣ್ಣ ನಿಮ್ಮ ಭಾವನೆಗಳ ಮೇಲೂ ಪ್ರಭಾವ ಬೀರುತ್ತದೆ.

ಬಣ್ಣ ಬೀರುವ ಭಾವನಾತ್ಮಕ ಪರಿಣಾಮ

ಅಂಗಡಿಗಳಲ್ಲಿ ಜೋಡಿಸಿಡಲಾಗಿರುವ ಸಾಮಾನುಗಳು ವಿಭಿನ್ನ ಪ್ರಕಾರದ ಡಬ್ಬಿಗಳಲ್ಲಿ, ಪೊಟ್ಟಣಗಳಲ್ಲಿರುತ್ತವೆ. ಇವನ್ನು ನಿಮ್ಮ ಕಣ್ಸೆಳೆಯುವ ಉದ್ದೇಶದಿಂದಲೇ ವಿನ್ಯಾಸಿಸಲಾಗಿರುತ್ತದೆ. ಜಾಹೀರಾತುಗಾರರು ನಿಮ್ಮ ನಿರ್ದಿಷ್ಟ ಆಸೆಗಳನ್ನು, ನೀವು ಗಂಡೊ ಹೆಣ್ಣೊ ಎಂಬ ಸಂಗತಿಯನ್ನು, ನಿಮ್ಮ ವಯಸ್ಸನ್ನು ಮನಸ್ಸಿನಲ್ಲಿಟ್ಟು ನಿಮ್ಮನ್ನು ಆಕರ್ಷಿಸುವಂಥ ಬಣ್ಣ ಹಾಗೂ ಬಣ್ಣಗಳ ಮಿಶ್ರಣಗಳನ್ನು ಜಾಗ್ರತೆಯಿಂದ ಆಯ್ಕೆಮಾಡುತ್ತಾರೆ. ಗೃಹ ಅಲಂಕಾರಗಾರರು, ವಸ್ತ್ರ ವಿನ್ಯಾಸಕರು, ಕಲಾಕಾರರು ಸಹ ಬಣ್ಣಗಳು ಜನರ ಭಾವನೆಗಳನ್ನು ತಟ್ಟಿ ಸ್ಪಂದಿಸುವಂತೆ ಮಾಡುತ್ತವೆಂದು ತಿಳಿದವರೇ.

ಏಷ್ಯಾಖಂಡದ ಜನರು ಕೆಂಪು ಬಣ್ಣ ಅಂದರೆ ಅದೃಷ್ಟ, ಸಂಭ್ರಮವೆಂದು ಎಣಿಸುತ್ತಾರೆ. ಆದರೆ ಆಫ್ರಿಕದ ಕೆಲವೊಂದು ಭಾಗಗಳಲ್ಲಿ ಕೆಂಪು ಬಣ್ಣ ಶೋಕವನ್ನು ಸೂಚಿಸುತ್ತದೆ. ಸ್ಥಳೀಯ ಸಂಸ್ಕೃತಿ, ಪದ್ಧತಿಗಳಿಂದಾಗಿ ಜನರು ಬಣ್ಣಗಳಿಗೆ ಬೇರೆ ಬೇರೆ ಅರ್ಥಕೊಡುತ್ತಾರೆಂಬುದಕ್ಕೆ ಇದೊಂದು ಉದಾಹರಣೆ. ಹೀಗಿದ್ದರೂ ಜನರು ಬೆಳೆದು ಬಂದ ರೀತಿ ಯಾವುದೇ ಇರಲಿ ಅವರು ನಿರ್ದಿಷ್ಟ ಬಣ್ಣಗಳಿಗೆ ತೋರಿಸುವ ಭಾವನಾತ್ಮಕ ಪ್ರತಿಕ್ರಿಯೆ ಒಂದೇ ರೀತಿಯದ್ದು. ನಾವೀಗ ಮೂರು ಬಣ್ಣಗಳನ್ನು ಮತ್ತು ಅವು ನಿಮ್ಮ ಮೇಲೆ ಬೀರುವ ಪರಿಣಾಮವನ್ನು ಪರಿಗಣಿಸೋಣ.

ಕೆಂಪು ಬಣ್ಣ ಕಣ್ಣಿಗೆ ರಾಚುವಂಥದ್ದು. ಇದನ್ನು ಹೆಚ್ಚಾಗಿ ಶಕ್ತಿ, ಯುದ್ಧ, ಅಪಾಯದ ಸೂಚನೆಯಾಗಿ ಬಳಸಲಾಗುತ್ತದೆ. ಅದು ಗಾಢ ಭಾವನೆಗಳನ್ನು ಕೆರಳಿಸುವಂಥ ಬಣ್ಣವಾಗಿದ್ದು, ಮಾನವರಲ್ಲಿ ಚಯಾಪಚಯ ಪ್ರಕ್ರಿಯೆಯನ್ನು ಉತ್ತಮಗೊಳಿಸುತ್ತದೆ, ಉಸಿರಾಟದ ವೇಗವನ್ನು ಹೆಚ್ಚಿಸುತ್ತದೆ ಮತ್ತು ರಕ್ತದೊತ್ತಡವನ್ನು ಏರಿಸುತ್ತದೆ.

ಬೈಬಲಿನಲ್ಲಿ “ಕೆಂಪು” ಎಂಬ ಪದವು “ರಕ್ತ” ಎಂಬರ್ಥವುಳ್ಳ ಪದದಿಂದ ಬಂದಿದೆ. ಅದರಲ್ಲಿ ಒಬ್ಬ ಕೊಲೆಗೆಡುಕಿ ವೇಶ್ಯೆಯ ಬಗ್ಗೆ ಮರೆಯಲಾಗದ ಚಿತ್ರಣವನ್ನು ಮೂಡಿಸಲಿಕ್ಕಾಗಿ ಕೆಂಪು ಬಣ್ಣವನ್ನು ಬಳಸಲಾಗಿದೆ. ಆಕೆ ನೇರಳೆ ಮತ್ತು ಕಡುಗೆಂಪು ಬಣ್ಣದ ವಸ್ತ್ರಗಳನ್ನು ಧರಿಸಿಕೊಂಡಿದ್ದು ‘ಕಡುಗೆಂಪು ಬಣ್ಣದ ಕಾಡುಮೃಗದ ಮೇಲೆ ಕುಳಿತುಕೊಂಡಿದ್ದಳು ಮತ್ತು ಆ ಮೃಗದ ಮೇಲೆಲ್ಲ ದೇವದೂಷಣೆಯ ಹೆಸರುಗಳಿದ್ದವು’ ಎಂದು ಹೇಳಲಾಗಿದೆ.—ಪ್ರಕಟನೆ 17:1-6.

ಹಸಿರು ಬಣ್ಣವು ಬೀರುವ ಪರಿಣಾಮ ಕೆಂಪು ಬಣ್ಣಕ್ಕೆ ವಿರುದ್ಧವಾದದ್ದು. ಅದು ಚಯಾಪಚಯ ಪ್ರಕ್ರಿಯೆಯನ್ನು ನಿಧಾನಗೊಳಿಸುತ್ತದೆ ಮತ್ತು ಮನಸ್ಸನ್ನು ಶಾಂತಗೊಳಿಸುತ್ತದೆ. ಹಸಿರು ಪ್ರಶಾಂತ ಬಣ್ಣ. ನೆಮ್ಮದಿ ಸೂಚಿಸಲಿಕ್ಕಾಗಿ ಹೆಚ್ಚಾಗಿ ಬಳಸಲಾಗುತ್ತದೆ. ಆದ್ದರಿಂದಲೇ ಹಸಿರು ತೋಟಗಳನ್ನು, ಗುಡ್ಡಗಳನ್ನು ನೋಡುವಾಗ ನಮ್ಮ ಮನಸ್ಸಿಗೆ ತಂಪೆರಚಿದಂತಾಗುತ್ತದೆ. ದೇವರು ಮಾನವಕುಲಕ್ಕಾಗಿ ಹುಲ್ಲನ್ನೂ ಕಾಯಿಪಲ್ಯದ ಗಿಡಗಳನ್ನೂ ಸೃಷ್ಟಿಸಿದನೆಂದು ಆದಿಕಾಂಡದಲ್ಲಿ ಸೃಷ್ಟಿಯ ಕುರಿತ ವೃತ್ತಾಂತ ತಿಳಿಸುತ್ತದೆ.—ಆದಿಕಾಂಡ 1:11, 12, 29, 30.

ಬಿಳಿ ಬಣ್ಣವನ್ನು ಬೆಳಕು, ಸುರಕ್ಷತೆ, ಸ್ವಚ್ಛತೆ ಸೂಚಿಸಲಿಕ್ಕಾಗಿ ಬಳಸಲಾಗುತ್ತದೆ. ಒಳ್ಳೇತನ, ಮುಗ್ಧತೆ, ಶುದ್ಧತೆಯಂಥ ಗುಣಗಳ ದ್ಯೋತಕವೂ ಆಗಿದೆ. ಬೈಬಲಿನಲ್ಲಿ ಅತಿ ಹೆಚ್ಚಾಗಿ ತಿಳಿಸಲಾಗಿರುವ ಬಣ್ಣ ಬಿಳಿ. ದರ್ಶನಗಳಲ್ಲಿ ಮಾನವರು ಮತ್ತು ದೇವದೂತರು ಧರಿಸಿರುವ  ಬಟ್ಟೆಯ ಬಣ್ಣ ಬಿಳಿಯೆಂದು ವರ್ಣಿಸಲಾಗಿದೆ. ಇದು ನೀತಿ, ಆಧ್ಯಾತ್ಮಿಕ ಶುದ್ಧತೆಯನ್ನು ಎತ್ತಿತೋರಿಸುತ್ತದೆ. (ಯೋಹಾನ 20:12; ಪ್ರಕಟನೆ 3:4; 7:9, 13, 14) ಬಿಳಿ ಕುದುರೆಗಳು ಮತ್ತು ಶುಭ್ರ ಬಿಳಿ ಬಟ್ಟೆ ಧರಿಸಿರುವ ಸವಾರರು ನೀತಿಯುತ ಯುದ್ಧವನ್ನು ಸಾಂಕೇತಿಸುತ್ತಾರೆ. (ಪ್ರಕಟನೆ 19:14) ಪಾಪಗಳನ್ನು ಕ್ಷಮಿಸಲು ಸಿದ್ಧನಿದ್ದೇನೆಂದು ಒತ್ತಿಹೇಳಲು ದೇವರು ಬಿಳಿ ಬಣ್ಣವನ್ನು ಬಳಸುತ್ತಾ “ನಿಮ್ಮ ಪಾಪಗಳು ಕಡು ಕೆಂಪಾಗಿದ್ದರೂ ಹಿಮದ ಹಾಗೆ ಬಿಳುಪಾಗುವವು” ಎಂದು ಹೇಳುತ್ತಾನೆ.—ಯೆಶಾಯ 1:18.

ನೆನಪಿಡಲು ಸಹಾಯಕ—ಬಣ್ಣ

ಮಾನವರು ಬಣ್ಣಗಳೆಡೆಗೆ ತೋರಿಸುವ ಭಾವನಾತ್ಮಕ ಪ್ರತಿಕ್ರಿಯೆಯ ಬಗ್ಗೆ ದೇವರಿಗೆ ಚೆನ್ನಾಗಿ ಗೊತ್ತಿದೆ. ಇದು ಬೈಬಲಿನಲ್ಲಿ ಬಣ್ಣಗಳನ್ನು ಬಳಸಲಾಗಿರುವ ಸಂಗತಿಯಿಂದ ತೋರಿಬರುತ್ತದೆ. ಉದಾಹರಣೆಗೆ, ನಮ್ಮ ಸಮಯದಲ್ಲಿ ಆಗುತ್ತಿರುವ ಯುದ್ಧ, ಕ್ಷಾಮ ಮತ್ತು ಆಹಾರದ ಅಭಾವ ಹಾಗೂ ಸಾಂಕ್ರಾಮಿಕ ರೋಗದಿಂದಾಗುವ ಅಸಹಜ ಮರಣದಂಥ ವಿಷಯಗಳ ಬಗ್ಗೆ ಬೈಬಲಿನ ಪ್ರಕಟನೆ ಪುಸ್ತಕದಲ್ಲಿ ಮುಂತಿಳಿಸಲಾಗಿದೆ. ಆ ಸಂಗತಿಗಳನ್ನು ನೆನಪಿನಲ್ಲಿಡಲಿಕ್ಕಾಗಿ, ಕಣ್ಮನ ಸೆಳೆಯುವ ಒಂದು ದರ್ಶನದಲ್ಲಿ ನಾಲ್ಕು ಕುದುರೆ ಸವಾರರನ್ನು ತೋರಿಸಲಾಗಿದೆ. ಅದೂ ಸಾಮಾನ್ಯ ಕುದುರೆಗಳಲ್ಲ, ಬದಲಾಗಿ ಬಣ್ಣಬಣ್ಣದ ಕುದುರೆಗಳು.

ಮೊದಲಾಗಿ, ಶುದ್ಧ ಬಿಳಿ ಬಣ್ಣದ ಕುದುರೆ ಬರುತ್ತದೆ. ಅದು ಕ್ರಿಸ್ತ ಯೇಸು ನಡೆಸುವಂಥ ನೀತಿಯುತ ಯುದ್ಧವನ್ನು ಸಾಂಕೇತಿಸುತ್ತದೆ. ನಂತರ, ಅಗ್ನಿವರ್ಣದ ಕುದುರೆ ಬರುತ್ತದೆ. ಇದು ರಾಷ್ಟ್ರಗಳ ನಡುವಿನ ಯುದ್ಧವನ್ನು ಸೂಚಿಸುತ್ತದೆ. ಆ ಬಳಿಕ ಭೀತಿಹುಟ್ಟಿಸುವ ಕಪ್ಪು ಕುದುರೆ ಬರುತ್ತದೆ. ಅದು ಕ್ಷಾಮದ ಸಂಕೇತ. ಆನಂತರ ಬೂದು ಬಣ್ಣದ ಕುದುರೆ ಬರುತ್ತದೆ. “ಅದರ ಮೇಲೆ ಕೂತಿದ್ದವನ ಹೆಸರು ಮೃತ್ಯು.” (ಪ್ರಕಟನೆ 6:1-8) ಪ್ರತಿಯೊಂದು ಕುದುರೆಯ ಬಣ್ಣ ನಮ್ಮೊಳಗೆ ಒಂದು ಭಾವನೆಯನ್ನು ಬರಿಸುತ್ತದೆ. ಇದು ಆ ಕುದುರೆ ಏನನ್ನು ಸೂಚಿಸುತ್ತದೊ ಅದಕ್ಕೆ ಸರಿಹೊಂದುತ್ತದೆ. ಬೇರೆಬೇರೆ ಬಣ್ಣದ ಈ ಕುದುರೆಗಳನ್ನು ಮತ್ತು ನಮ್ಮ ದಿನದಲ್ಲಿ ಅವು ಏನನ್ನು ಸೂಚಿಸುತ್ತವೊ ಅದನ್ನು ನೆನಪಿಡುವುದು ಸುಲಭ.

ಗಮನಸೆಳೆಯುವ ಶಬ್ದಚಿತ್ರಗಳನ್ನು ಬಿಡಿಸಲಿಕ್ಕಾಗಿ ಬೈಬಲ್‌ ಬಣ್ಣವನ್ನು ಬಳಸಿರುವ ಅನೇಕ ಉದಾಹರಣೆಗಳಿವೆ. ಬೆಳಕು, ಬಣ್ಣ ಹಾಗೂ ಮಾನವ ಕಣ್ಣಿನ ನಿರ್ಮಾಣಿಕನು ಬಣ್ಣವನ್ನು ಬೋಧನಾ ಸಾಧನವಾಗಿ ಕುಶಲತೆಯಿಂದ ಬಳಸಿದ್ದಾನೆ. ಹಾಗಾಗಿ ವಾಚಕರಿಗೆ ಚಿತ್ರಣಗಳು ಅರ್ಥವಾಗಲು ಹಾಗೂ ನೆನಪಿನಲ್ಲಿಡಲು ಸುಲಭಸಾಧ್ಯವಾಗಿದೆ. ಬಣ್ಣವು ನಾವು ಮಾಹಿತಿಯನ್ನು ಕೂಡಿಸಿ ಕಲೆಹಾಕುವಂತೆ ಸಹಾಯಮಾಡುತ್ತದೆ. ಅದು ಭಾವನೆಗಳನ್ನು ಬಾಧಿಸಬಲ್ಲದು. ಪ್ರಾಮುಖ್ಯ ವಿಚಾರಗಳನ್ನು ನೆನಪಿಡಲು ಸಹಾಯಮಾಡಬಲ್ಲದು. ಬದುಕನ್ನು ಆನಂದಿಸಲಿಕ್ಕಾಗಿ ನಮ್ಮ ಸೃಷ್ಟಿಕರ್ತನು ಪ್ರೀತಿಯಿಂದ ಕೊಟ್ಟಿರುವ ಉಡುಗೊರೆಯೇ ಬಣ್ಣ. (w13-E 10/01)