ಮಾಹಿತಿ ಇರುವಲ್ಲಿ ಹೋಗಲು

ಬದುಕು ಬದಲಾದ ವಿಧ

“ಸತ್ಯ ಏನಂತ ನಾನೇ ಕಂಡುಹಿಡಿಯೋಕೆ ಅವರು ಪ್ರೋತ್ಸಾಹ ಮಾಡಿದರು”

“ಸತ್ಯ ಏನಂತ ನಾನೇ ಕಂಡುಹಿಡಿಯೋಕೆ ಅವರು ಪ್ರೋತ್ಸಾಹ ಮಾಡಿದರು”
  • ಜನನ: 1982

  • ದೇಶ: ಡೊಮಿನಿಕನ್‌ ಗಣರಾಜ್ಯ

  • ಹಿಂದೆ: ಮಾರ್ಮನ್‌ ಪಂಗಡದವರು

ಹಿನ್ನೆಲೆ:

ನಾನು ಡೊಮಿನಿಕನ್‌ ಗಣರಾಜ್ಯದಲ್ಲಿರೋ ಸ್ಯಾಂಟೋ ಡೊಮಿಂಗೊದಲ್ಲಿ ಹುಟ್ಟಿದೆ. ನಾಲ್ಕು ಜನ ಮಕ್ಕಳಲ್ಲಿ ನಾನೇ ಚಿಕ್ಕವನು. ನಮ್ಮ ಅಪ್ಪಅಮ್ಮ ವಿದ್ಯಾವಂತರು. ನಾವು ಒಳ್ಳೆ ವ್ಯಕ್ತಿಗಳ ಜೊತೆ ಬೆಳಿಬೇಕು ಅಂತ ಅವರು ಇಷ್ಟಪಟ್ರು. ನಾನು ಹುಟ್ಟೋ ನಾಲ್ಕು ವರ್ಷಗಳ ಮುಂಚೆನೇ ಅಪ್ಪಅಮ್ಮ ಮಾರ್ಮನ್‌ ಮಿಷನರಿಗಳನ್ನ ಭೇಟಿಯಾಗಿದ್ದರು. ಆ ಮಿಷನರಿಗಳು ಚೆನ್ನಾಗಿ ಬಟ್ಟೆ ಹಾಕೊಳ್ತಿದ್ರು, ನೀಟಾಗಿ ತಲೆ ಬಾಚ್ಕೊಳ್ತಿದ್ರು. ಅದನ್ನೆಲ್ಲ ನೋಡಿ ಅಪ್ಪಅಮ್ಮಗೆ ತುಂಬ ಇಷ್ಟ ಆಯ್ತು. ಅದಕ್ಕೆ ಆ ಚರ್ಚಿಗೆ ಸೇರಿಬಿಡೋಣ ಅಂತ ಅವರು ತೀರ್ಮಾನ ಮಾಡಿದ್ರು. ನಮ್ಮ ದ್ವೀಪದಲ್ಲಿ ನಾವೇ ಈ ಚರ್ಚಿಗೆ (ಚರ್ಚ್‌ ಆಫ್‌ ಜೀಸಸ್‌ ಕ್ರೈಸ್ಟ್‌ ಆಫ್‌ ಲ್ಯಾಟರ್‌ ಡೇ ಸೇಂಟ್ಸ್‌) ಮೊದಲು ಸೇರಿದವರು.

ನಮ್ಮ ಚರ್ಚಿನವರ ಜೊತೆ ಸಮಯ ಕಳೆಯೋದಂದ್ರೆ ನನಗೆ ತುಂಬ ಇಷ್ಟ. ಯಾಕಂದ್ರೆ ಅವರು ಕುಟುಂಬಕ್ಕೆ, ನೈತಿಕ ಮಟ್ಟಗಳಿಗೆ ತುಂಬ ಪ್ರಾಮುಖ್ಯತೆ ಕೊಡ್ತಿದ್ರು. ಅದಕ್ಕೆ ನಾನೊಬ್ಬ ಮಿಷನರಿ ಆಗಬೇಕಂತ ಅಂದ್ಕೊಂಡೆ.

ನಂಗೆ 18 ವರ್ಷ ಆದಾಗ ನನ್ನನ್ನ ಒಂದು ಒಳ್ಳೆ ಯೂನಿವರ್ಸಿಟಿಗೆ ಸೇರಿಸಬೇಕು ಅಂತ ಅಪ್ಪಅಮ್ಮ ಅಂದ್ಕೊಂಡ್ರು. ಅದಕ್ಕೆ ನಾವೆಲ್ಲ ಅಮೆರಿಕಾಗೆ ಹೋಗ್ಬಿಟ್ವಿ. ಒಂದು ವರ್ಷ ಆದ್ಮೇಲೆ ಫ್ಲಾರಿಡಾಗೆ ಚಿಕ್ಕಪ್ಪ ಮತ್ತು ಚಿಕ್ಕಮ್ಮ ನಮ್ಮನ್ನ ನೋಡೋಕೆ ಬಂದ್ರು. ಅವರು ಯೆಹೋವನ ಸಾಕ್ಷಿಗಳಾಗಿದ್ದರು. ಅವರು ನಮ್ಮನ್ನ ಒಂದು ಅಧಿವೇಶನಕ್ಕೆ ಕರ್ಕೊಂಡು ಹೋದ್ರು. ಅಲ್ಲಿರೋರೆಲ್ಲ ವಚನಗಳನ್ನ ತೆಗೆದು ನೋಡ್ತಾ ಇದ್ರು, ಹೇಳ್ತಿರೋ ವಿಷಯಗಳನ್ನೆಲ್ಲ ಬರಕೊಳ್ತಿದ್ರು. ಅದನ್ನ ನೋಡಿ ನನಗೆ ತುಂಬ ಖುಷಿ ಆಯ್ತು. ಅದಕ್ಕೆ ನಾನು ‘ನಂಗೂ ಒಂದು ಪೇಪರ್‌ ಮತ್ತು ಪೆನ್ನು ಕೊಡಿ’ ಅಂತ ಕೇಳಿಕೊಂಡು ಅವರ ತರ ನೋಟ್ಸ್‌ ಬರಕೊಳಕ್ಕೆ ಶುರು ಮಾಡಿದೆ.

ಅಧಿವೇಶನ ಆದ್ಮೇಲೆ ಚಿಕ್ಕಪ್ಪ ಮತ್ತು ಚಿಕ್ಕಮ್ಮ, ಹೇಗೂ ನಿನಗೆ ಮಿಷನರಿ ಆಗೋ ಆಸೆ ಇದೆ ಅಲ್ವಾ. ನಾವು ನಿನಗೆ ಬೈಬಲ್‌ ಕಲಿಸ್ತೀವಿ ಅಂತ ಹೇಳಿದ್ರು. ಅದಕ್ಕೆ ನಾನು ಸರಿ ಅಂದೆ. ಯಾಕಂದ್ರೆ ನನಗೆ ಬೈಬಲ್‌ಗಿಂತ ಮಾರ್ಮನ್‌ ಪುಸ್ತಕದ ಬಗ್ಗೆನೇ ಜಾಸ್ತಿ ಗೊತ್ತಿತ್ತು.

ಬದುಕನ್ನೇ ಬದಲಾಯಿಸಿತು ಬೈಬಲ್‌:

ಚಿಕ್ಕಪ್ಪ ಮತ್ತೆ ಚಿಕ್ಕಮ್ಮ ಫೋನ್‌ ಮೂಲಕ ನನಗೆ ಬೈಬಲ್‌ ಕಲಿಸ್ತಿದ್ರು. ಬೈಬಲಲ್ಲಿ ನಾನ್‌ ಕಲಿತಿರೋ ವಿಷಯಗಳನ್ನ ಮತ್ತು ಚರ್ಚಲ್ಲಿ ಕಲಿತಿರೋ ವಿಷಯಗಳನ್ನ ಹೋಲಿಸಿ ನೋಡಕ್ಕೆ ಅವರು ನನಗೆ ಯಾವಾಗಲೂ ಹೇಳ್ತಿದ್ರು. ಹೀಗೆ ಸತ್ಯ ಏನಂತ ನಾನೇ ಕಂಡುಹಿಡಿಯೋಕೆ ಅವರು ಪ್ರೋತ್ಸಾಹ ಮಾಡಿದ್ರು.

ಮಾರ್ಮನ್‌ ಪಂಗಡದಲ್ಲಿರೋ ಹೆಚ್ಚಿನ ವಿಷಯಗಳನ್ನ ನಾನು ಒಪ್ಕೊಂಡಿದ್ದೆ. ಆದರೆ ಅವೆಲ್ಲ ಬೈಬಲಲ್ಲಿ ಇದ್ಯೋ ಇಲ್ವೋ ಅಂತ ನಂಗೊತ್ತಿರಲಿಲ್ಲ. ಒಂದಿನ ಚಿಕ್ಕಮ್ಮ ನನಗೆ ನವೆಂಬರ್‌ 8, 1995ರ ಎಚ್ಚರ! ಪತ್ರಿಕೆಯನ್ನ ಕಳಿಸ್ಕೊಟ್ರು. ಅದ್ರಲ್ಲಿ ಮಾರ್ಮನ್‌ ಬೋಧನೆಗಳ ಬಗ್ಗೆ ಇತ್ತು. ಅದನ್ನ ಓದಿದಾಗ ಎಷ್ಟೋ ಮಾರ್ಮನ್‌ ನಂಬಿಕೆಗಳ ಬಗ್ಗೆ ನನಗೆ ಗೊತ್ತಿಲ್ಲ ಅಂತ ಅರ್ಥ ಆಯ್ತು. ಅದಕ್ಕೆ ನಾನು ಈ ಪತ್ರಿಕೆಯಲ್ಲಿರೋದು ನಿಜಾನಾ ಅಂತ ತಿಳ್ಕೊಳ್ಳೋಕೆ ಮಾರ್ಮನ್‌ ವೆಬ್ಸೈಟ್‌ಗೆ ಹೋಗಿ ಸಂಶೋಧನೆ ಮಾಡಿದೆ. ಅಷ್ಟೇ ಅಲ್ಲ ಯೂಟದಲ್ಲಿರೋ ಮಾರ್ಮನ್‌ ಮ್ಯೂಸಿಯಂಗಳಿಗೂ ಹೋದೆ. ಆಗ ನಂಗೆ ಈ ಎಚ್ಚರ! ಪತ್ರಿಕೆಯಲ್ಲಿ ಇರೋದೆಲ್ಲ ನಿಜ ಅಂತ ಗೊತ್ತಾಯ್ತು.

ಮಾರ್ಮನ್‌ ಪುಸ್ತಕ ಮತ್ತು ಬೈಬಲ್‌ ಇವೆರಡು ಒಂದೇ ಅಂತ ನಾನ್‌ ಅಂದ್ಕೊಂಡಿದ್ದೆ. ಆದ್ರೆ ಬೈಬಲನ್ನ ಓದೋಕೆ ಶುರು ಮಾಡಿದಾಗ ಇದರಲ್ಲಿರೋ ವಿಷಯಾನೇ ಬೇರೆ, ಮಾರ್ಮನ್‌ ಬೋಧನೆಗಳೇ ಬೇರೆ ಅಂತ ಗೊತ್ತಾಯ್ತು. ಉದಾಹರಣೆಗೆ, ಯೆಹೆಜ್ಕೇಲ 18:4ರಲ್ಲಿ ಪ್ರಾಣ ಅಥವಾ ಆತ್ಮ ಸಾಯುತ್ತೆ ಅಂತಿದೆ. ಆದ್ರೆ ಮಾರ್ಮನ್‌ ಪುಸ್ತಕದ ಅಲ್ಮ 42:9ರಲ್ಲಿ “ಆತ್ಮ ಯಾವತ್ತೂ ಸಾಯಲ್ಲ” ಅಂತಿದೆ.

ಮಾರ್ಮನ್‌ ಚರ್ಚಿನಲ್ಲಿ ಬೈಬಲಿಗೆ ವಿರುದ್ಧವಾಗಿರೋ ವಿಷಯಗಳನ್ನ ಮಾತ್ರವಲ್ಲ ದೇಶಭಕ್ತಿಯನ್ನ ಹುಟ್ಟಿಸೋ ವಿಷಯಗಳನ್ನೂ ಕಲಿಸ್ತಿದ್ರು. ಅದಕ್ಕೆ ನನಗೆ ತುಂಬ ಬೇಜಾರಾಯ್ತು. ಉದಾಹರಣೆಗೆ ಅಮೇರಿಕಾದ ಮಿಸೌರಿಯ ಜ್ಯಾಕ್ಸನ್‌ ದೇಶದಲ್ಲಿ ಏದೆನ್‌ ತೋಟ ಇತ್ತು ಅಂತ ಅವರು ಕಲಿಸ್ತಿದ್ರು. ಮುಂದೆ ದೇವರು ಭೂಮಿಯನ್ನ ಅಳುವಾಗ ಅಮೆರಿಕದ ಸರ್ಕಾರದ ಮೂಲಕ ಆಳ್ವಿಕೆ ಮಾಡ್ತಾನೆ ಅಂತ ಚರ್ಚಿನ ಮುಖಂಡರು ಕಲಿಸ್ತಿದ್ರು.

ಹಾಗಾದ್ರೆ ಬೇರೆಲ್ಲ ದೇಶದ ಗತಿ ಏನು ಅಂತ ನಾನು ಯೋಚಿಸಿದೆ. ಚರ್ಚಿನಲ್ಲಿ ಮಿಷನರಿ ಆಗೋಕೆ ತರಬೇತಿ ಪಡ್ಕೊಳ್ತಿರೋ ಒಬ್ಬ ಹುಡುಗ ನನಗೆ ಒಂದಿನ ಫೋನ್‌ ಮಾಡಿದ. ಅವನ ಹತ್ರ ನಾನು ಈ ವಿಷಯದ ಬಗ್ಗೆ ಮಾತಾಡ್ದೆ. ಒಂದುವೇಳೆ ಬೇರೆ ಮಾರ್ಮನ್ನರ ವಿರುದ್ಧ ಯುದ್ಧ ಮಾಡೋ ಪರಿಸ್ಥಿತಿ ಬಂದ್ರೆ ನೀನು ಯುದ್ಧ ಮಾಡ್ತೀಯಾ? ಅಂತ ಕೇಳ್ದೆ. ಆಗ ಅವನು ಮಾಡ್ತೀನಿ ಅಂದ. ಅದನ್ನ ಕೇಳಿ ನನಗೆ ತುಂಬ ಆಶ್ಚರ್ಯ ಆಯ್ತು. ನನ್ನ ನಂಬಿಕೆ ಬಗ್ಗೆ ಜಾಸ್ತಿ ಸಂಶೋಧನೆ ಮಾಡಿದೆ. ಮತ್ತು ಇದರ ಬಗ್ಗೆ ಚರ್ಚಿನ ಮುಖಂಡರ ಹತ್ರನೂ ಮಾತಾಡಿದೆ. ಸದ್ಯಕ್ಕೆ ಇದಕ್ಕೆಲ್ಲ ಉತ್ತರ ಸಿಗೋದಿಲ್ಲ. ಆದರೆ ಮುಂದೆ ಯಾವತ್ತಾದ್ರೂ ಉತ್ತರ ಸಿಗಬಹುದೇನೋ ಅಂತ ಅವರು ಹೇಳಿದ್ರು.

ಇದನ್ನ ಕೇಳಿ ನನಗೆ ತುಂಬ ಬೇಜಾರಾಗಿ ನಾನ್ಯಾಕೆ ಮಿಷನರಿ ಆಗಬೇಕು ಅಂತ ಯೋಚ್ನೆ ಮಾಡ್ದೆ. ಬೇರೆ ಜನ್ರಿಗೆ ಸಹಾಯ ಮಾಡ್ಬೇಕು ಅನ್ನೋ ಆಸೆ ನಂಗಿತ್ತು. ಅದಕ್ಕೆ ಮಿಷನರಿ ಆಗಬೇಕು ಅಂದ್ಕೊಂಡೆ. ಅಷ್ಟೇ ಅಲ್ಲ ಮಿಷನರಿ ಆದ್ರೆ ಜನರು ನನಗೆ ಗೌರವನೂ ಕೊಡ್ತಿದ್ರು. ಆದ್ರೆ ನಿಜ ಹೇಳ್ಬೇಕಂದ್ರೆ ನನಗೆ ದೇವರ ಬಗ್ಗೆ ಜಾಸ್ತಿ ಏನೂ ಗೊತ್ತಿರಲಿಲ್ಲ. ನಾನು ಬೈಬಲನ್ನ ತುಂಬ ಸಲ ಓದಿದ್ದೀನಿ. ಆದ್ರೆ ಅದನ್ನ ಓದೋದು ಅಷ್ಟು ಪ್ರಾಮುಖ್ಯ ಅಂತ ನಾನು ಅಂದ್ಕೊಂಡೇ ಇರ್ಲಿಲ್ಲ. ಮನುಷ್ಯರಿಗೋಸ್ಕರ, ಭೂಮಿಗೋಸ್ಕರ ದೇವರ ಉದ್ದೇಶ ಏನು ಅಂತ ನಂಗೊತ್ತಿರಲಿಲ್ಲ.

ಸಿಕ್ಕಿದ ಪ್ರಯೋಜನಗಳು:

ನಾನು ಯೆಹೋವನ ಸಾಕ್ಷಿಗಳ ಜೊತೆ ಬೈಬಲ್‌ ಕಲಿಯೋಕೆ ಶುರು ಮಾಡಿದಾಗ ತುಂಬ ವಿಷಯಗಳನ್ನ ಕಲಿತ್ಕೊಂಡೆ. ಉದಾಹರಣೆಗೆ ದೇವರ ಹೆಸರೇನು? ಸತ್ತಾಗ ಏನಾಗುತ್ತೆ? ದೇವರು ತನ್ನ ಉದ್ದೇಶವನ್ನು ನೆರವೇರಿಸೋಕೆ ಯೇಸುವನ್ನ ಹೇಗೆ ಉಪಯೋಗಿಸುತ್ತಾನೆ ಅಂತ ಕಲಿತ್ಕೊಂಡೆ. ಕೊನೆಗೂ ಬೈಬಲ್‌ ಅನ್ನೋ ಈ ಅದ್ಭುತ ಪುಸ್ತಕದಿಂದ ನಾನು ತುಂಬ ವಿಷಯಗಳನ್ನ ಕಲಿತ್ಕೊಂಡೆ. ಕಲಿತಿರೋದನ್ನ ಬೇರೆಯವರಿಗೂ ಕಲಿಸ್ತಾ ಇದ್ದೀನಿ. ದೇವರಿದ್ದಾನೆ ಅಂತ ನಂಗೊತ್ತಿತ್ತು. ಆದರೆ ಆತನ ಜೊತೆ ಒಂದು ಬೆಸ್ಟ್‌ ಫ್ರೆಂಡ್‌ ತರ ಮಾತಾಡೋ ಅವಕಾಶ ನನಗೀಗ ಸಿಕ್ಕಿದಕ್ಕೆ ತುಂಬ ಖುಷಿಯಾಗುತ್ತೆ. ಜುಲೈ 12, 2004ರಲ್ಲಿ ದೀಕ್ಷಾಸ್ನಾನ ತಗೊಂಡೆ. ಅದಾಗಿ ಆರು ತಿಂಗಳಿಗೆ ಪೂರ್ಣಸಮಯದ ಸೇವೆ ಶುರು ಮಾಡಿದೆ.

ಆಮೇಲೆ ನ್ಯೂಯಾರ್ಕ್‌ನಲ್ಲಿರೋ ಯೆಹೋವನ ಸಾಕ್ಷಿಗಳ ಮುಖ್ಯ ಕಾರ್ಯಾಲಯದಲ್ಲಿ ಐದು ವರ್ಷ ಕೆಲಸ ಮಾಡಿದೆ. ಅಲ್ಲಿ ನಾನು ಲಕ್ಷಾಂತರ ಜನ್ರಿಗೆ ಸಹಾಯ ಮಾಡೋ ಬೈಬಲ್‌ ಮತ್ತು ಬೈಬಲ್‌ ಆಧಾರಿತ ಪ್ರಕಾಶನಗಳನ್ನ ತಯಾರಿ ಮಾಡೋ ಕೆಲಸ ಮಾಡಿದೆ. ▪