ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅಧ್ಯಾಯ ಎರಡು

ಸತ್ಯ ದೇವರೊಂದಿಗೆ ಅನ್ಯೋನ್ಯವಾಗಿ ನಡೆದವನು

ಸತ್ಯ ದೇವರೊಂದಿಗೆ ಅನ್ಯೋನ್ಯವಾಗಿ ನಡೆದವನು

1, 2. (1) ನೋಹ ಮತ್ತವನ ಕುಟುಂಬ ಯಾವ ಕೆಲಸದಲ್ಲಿ ತೊಡಗಿತ್ತು? (2) ಅವರು ಎದುರಿಸಿದ ಕೆಲವೊಂದು ಸವಾಲುಗಳು ಯಾವುವು?

ನೋಹ ಸೊಂಟ ನೆಟ್ಟಗೆ ಮಾಡಿ, ನಿಟಿಕೆ ತೆಗೆದು ಮೈಮುರಿದನು. ಇದನ್ನು ಚಿತ್ರಿಸಿಕೊಳ್ಳಿ: ಅವನೊಂದು ಅಗಲವಾದ ತೊಲೆಯ ಮೇಲೆ ಕೂತಿದ್ದನು. ಒಂದು ಕ್ಷಣ ಸುಧಾರಿಸಿಕೊಳ್ಳಲು ತನ್ನ ಕೆಲಸ ನಿಲ್ಲಿಸಿ ಸುತ್ತ ದೃಷ್ಟಿ ಹಾಯಿಸಿದನು. ನಾವೆಯ ಬೃಹದಾಕಾರ ಅವನ ಕಣ್ಣಿಗೆ ಕಾಣುತ್ತಿತ್ತು. ರಾಳದ ಘಾಟು ಮೂಗಿಗೆ ಬಡಿಯುತ್ತಿತ್ತು. ಮರಗೆಲಸದ ಉಪಕರಣಗಳ ಟಕ್‌ಟಕ್‌, ಗರ್‌ಗರ್‌ ಸದ್ದು ಮಾರ್ದನಿಸುತ್ತಿರುವುದು ಅವನ ಕಿವಿಗೆ ಬೀಳುತ್ತಿತ್ತು. ಆಧಾರಕ್ಕಾಗಿ ಜೋಡಿಸಲಾಗಿದ್ದ ಮರದ ಪಟ್ಟಿಗಳ ನಡುವೆ ತನ್ನ ಪುತ್ರರು ಒಬ್ಬೊಬ್ಬರು ಒಂದೊಂದು ಕಡೆ ಕೆಲಸದಲ್ಲಿ ಮುಳುಗಿರುವುದು ನೋಹನಿಗೆ ಕುಳಿತಲ್ಲಿಂದಲೇ ಕಾಣುತ್ತಿತ್ತು. ಅವನು ದಶಕಗಳಿಂದ ಮಾಡುತ್ತಿದ್ದ ಈ ಕೆಲಸದಲ್ಲಿ ಮಕ್ಕಳು, ಸೊಸೆಯಂದಿರು, ಮೆಚ್ಚಿನ ಮಡದಿ ಎಲ್ಲರೂ ಅವನೊಟ್ಟಿಗೆ ಕೈಜೋಡಿಸಿದ್ದರು. ನಾವೆಯ ನಿರ್ಮಾಣ ಕೆಲಸ ಒಂದು ಹಂತಕ್ಕೆ ತಲಪಿತ್ತು. ಆದರೆ ಮಾಡಲಿಕ್ಕೆ ಇನ್ನೂ ಬಹಳಷ್ಟು ಬಾಕಿಯಿತ್ತು!

2 ಆ ಪ್ರದೇಶದ ಜನರು ಅವರೆಲ್ಲರನ್ನೂ ಹುಚ್ಚರೆಂದು ಲೇವಡಿಮಾಡುತ್ತಿದ್ದರು. ನಾವೆಗೆ ಆಕಾರ ಬರುತ್ತಿದ್ದಂತೆ ಜನರು ಆಡಿಕೊಳ್ಳುವುದು, ಕುಹಕವಾಗಿ ನಗುವುದು ಹೆಚ್ಚುತ್ತಾ ಹೋಯಿತು. ಇಡೀ ಭೂಮಿಯಲ್ಲಿ ಪ್ರಳಯ ಬರಲಿದೆಯೆಂದು ನೋಹ ಎಚ್ಚರಿಸುತ್ತಿದ್ದ ವಿಷಯವು ಅಸಂಭವ, ಕಥೆಕಟ್ಟಿ ಹೇಳಿದಂತಿದೆ ಎಂಬುದು ಅವರ ಎಣಿಕೆಯಾಗಿತ್ತು. ನೋಹ ಈ ರೀತಿಯ ಮೂರ್ಖ ಕೆಲಸಕ್ಕೆ ಕೈಹಾಕಿ ತನ್ನದಲ್ಲದೆ ತನ್ನ ಕುಟುಂಬದ ಬದುಕನ್ನೂ ಹಾಳುಮಾಡುತ್ತಿದ್ದಾನೆಂಬುದು ಅವರ ಅಭಿಪ್ರಾಯವಾಗಿತ್ತು. ನೋಹನ ದೇವರಾದ ಯೆಹೋವನಿಗಾದರೊ ಅವನ ಬಗ್ಗೆ ಬೇರೆಯೇ ಅಭಿಪ್ರಾಯವಿತ್ತು.

3. ನೋಹ ದೇವರೊಂದಿಗೆ ಅನ್ಯೋನ್ಯವಾಗಿ ನಡೆದದ್ದು ಯಾವ ಅರ್ಥದಲ್ಲಿ?

3 ನೋಹ ಸತ್ಯ ‘ದೇವರೊಂದಿಗೆ ಅನ್ಯೋನ್ಯವಾಗಿ ನಡೆದನು’ ಎನ್ನುತ್ತದೆ ದೇವರ ವಾಕ್ಯ. (ಆದಿಕಾಂಡ 6:9 ಓದಿ.) ಅದರರ್ಥವೇನು? ದೇವರು ಭೂಮಿಗೆ ಬಂದು ನೋಹನ ಜೊತೆ ನಡೆದನೆಂದಾಗಲಿ, ನೋಹ ಸ್ವರ್ಗಕ್ಕೆ ಹೋಗಿ ದೇವರ ಜೊತೆ ನಡೆದನೆಂದಾಗಲಿ ಅಲ್ಲ. ಬದಲಾಗಿ ನೋಹ ದೇವರ ಒಂದೊಂದು ಮಾತನ್ನು ಚಾಚೂತಪ್ಪದೆ ಪಾಲಿಸಿದ ಮತ್ತು ಆತನನ್ನು ಗಾಢವಾಗಿ ಪ್ರೀತಿಸಿದ ಎಂದಾಗಿದೆ. ಇದು ನೋಹ ಮತ್ತು ಯೆಹೋವ ದೇವರು ಸ್ನೇಹಿತರ ಹಾಗೆ ಜೊತೆಜೊತೆಯಾಗಿ ನಡೆಯುತ್ತಿದ್ದಂತೆ ಇತ್ತು. ಸಾವಿರಾರು ವರ್ಷಗಳ ನಂತರ ನೋಹನ ಬಗ್ಗೆ ಬೈಬಲ್‌ ಹೀಗಂದಿತು: “ನಂಬಿಕೆಯಿಂದಲೇ ಅವನು ಲೋಕವನ್ನು ಖಂಡಿಸಿದನು.” (ಇಬ್ರಿ. 11:7) ಅದು ಹೇಗೆ? ಅವನ ನಂಬಿಕೆಯಿಂದ ನಾವಿಂದು ಏನು ಕಲಿಯಬಹುದು?

ದಾರಿತಪ್ಪಿದ ಲೋಕದಲ್ಲಿ ತಪ್ಪಿಲ್ಲದೆ ನಡೆದವನು

4, 5. ನೋಹನ ದಿನದಲ್ಲಿ ಲೋಕ ಹೇಗೆ ಹದಗೆಟ್ಟಿತು?

4 ದಿನೇ ದಿನೇ ಹದಗೆಡುತ್ತಿದ್ದ ಲೋಕದಲ್ಲಿ ನೋಹ ಬೆಳೆದು ದೊಡ್ಡವನಾದನು. ಅವನ ಮುತ್ತಜ್ಜನಾದ ಹನೋಕನ ಕಾಲಕ್ಕೇ ಲೋಕ ಕೆಟ್ಟು ಹೋಗಿತ್ತು. ಹನೋಕ ಕೂಡ ದೇವರೊಂದಿಗೆ ನಡೆದ ನೀತಿವಂತ ಮನುಷ್ಯ. ಭಕ್ತಿಹೀನ ಜನರ ಮೇಲೆ ದೇವರ ನ್ಯಾಯತೀರ್ಪಿನ ದಿನ ಬರಲಿದೆಯೆಂದು ಮುಂತಿಳಿಸಿದ್ದನು. ಈಗ ನೋಹನ ಕಾಲದಲ್ಲಂತೂ ದುಷ್ಟತನ ವಿಪರೀತವಾಗಿತ್ತು. ಯೆಹೋವನ ದೃಷ್ಟಿಕೋನದಲ್ಲಿ ಭೂಲೋಕದವರೆಲ್ಲರೂ ಕೆಟ್ಟುಹೋಗಿದ್ದರು ಏಕೆಂದರೆ ಅನ್ಯಾಯ, ಹಿಂಸೆ ಲೋಕದಲ್ಲಿ ತುಂಬಿಕೊಂಡಿತ್ತು. (ಆದಿ. 5:22; 6:11; ಯೂದ 14, 15) ಪರಿಸ್ಥಿತಿ ಹೇಗೆ ಇಷ್ಟರ ಮಟ್ಟಿಗೆ ಹದಗೆಟ್ಟಿತು?

5 ದೇವಕುಮಾರರು ಅಂದರೆ ದೇವದೂತರಲ್ಲಿ ಒಬ್ಬನು ಯೆಹೋವನ ವಿರುದ್ಧ ದಂಗೆಯೆದ್ದಿದ್ದ. ದೇವರನ್ನು ನಿಂದಿಸಿ ಆದಾಮಹವ್ವರನ್ನು ಪಾಪಕ್ಕೆ ಸೆಳೆಯುವ ಮೂಲಕ ಪಿಶಾಚನಾದ ಸೈತಾನನಾಗಿದ್ದ. ನೋಹನ ಕಾಲದಲ್ಲಿ ಇನ್ನೂ ಇತರ ದೇವದೂತರು ಯೆಹೋವನ ನ್ಯಾಯವಾದ ಆಳ್ವಿಕೆಯ ವಿರುದ್ಧ ಬಂಡಾಯವೆದ್ದಿದ್ದರು. ಸ್ವರ್ಗದಲ್ಲಿ ದೇವರು ಅವರಿಗೆ ಕೊಟ್ಟಿದ್ದ ಸ್ಥಾನವನ್ನು ತೊರೆದು, ಭೂಮಿಗೆ ಬಂದು ಮಾನವ ರೂಪ ಧರಿಸಿ, ಸುಂದರ ಸ್ತ್ರೀಯರನ್ನು ಹೆಂಡರನ್ನಾಗಿ ಮಾಡಿಕೊಂಡಿದ್ದರು. ಈ ಗರ್ವಿಷ್ಠ, ಸ್ವಾರ್ಥಪರ ದಂಗೆಕೋರ ದೇವದೂತರು ಮಾನವರ ಮೇಲೆ ಬೀರುತ್ತಿದ್ದ ಪ್ರಭಾವ ವಿಷಕಾರಿಯಾಗಿತ್ತು.—ಆದಿ. 6:1, 2; ಯೂದ 6, 7.

6. (1) ನೆಫೀಲಿಯರು ಲೋಕದ ಪರಿಸ್ಥಿತಿ ಮೇಲೆ ಎಂಥ ಪ್ರಭಾವ ಬೀರಿದರು? (2) ಯೆಹೋವನು ಏನು ಮಾಡಲು ನಿರ್ಣಯಿಸಿದನು?

6 ಅಲ್ಲದೆ, ಮಾನವ ದೇಹ ತಾಳಿದ್ದ ದೇವದೂತರ ಹಾಗೂ ಭೂಮಿಯಲ್ಲಿನ ಸ್ತ್ರೀಯರ ನಡುವಿನ ಪ್ರಕೃತಿವಿರುದ್ಧವಾದ ಮಿಲನದಿಂದಾಗಿ ಮಿಶ್ರತಳಿಯ ಪುತ್ರರು ಹುಟ್ಟಿದ್ದರು. ಅವರು ಅಸಾಧಾರಣ ಮೈಕಟ್ಟು ಹಾಗೂ ಶಕ್ತಿಯುಳ್ಳವರಾಗಿದ್ದರು. ಬೈಬಲ್‌ ಅವರನ್ನು ನೆಫೀಲಿಯರು ಎಂದು ಕರೆಯುತ್ತದೆ. ಅದರರ್ಥ “ಕೆಡಹುವವರು” ಅಂದರೆ ಜನರನ್ನು ಹೊಡೆದುರುಳಿಸುವವರು. ಹಿಂಸಾತ್ಮಕ ಗೂಂಡಾಗಳಂತಿದ್ದ ಈ ನೆಫೀಲಿಯರು ಲೋಕದ ಪರಿಸ್ಥಿತಿಗಳನ್ನು ಇನ್ನಷ್ಟು ಕೆಡಿಸಿದ್ದರು. ಈ ಕಾರಣಗಳಿಗಾಗಿಯೇ ಸೃಷ್ಟಿಕರ್ತನು ‘ಮನುಷ್ಯರ ಕೆಟ್ಟತನವು ಭೂಮಿಯ ಮೇಲೆ ಹೆಚ್ಚಾಗಿದೆ, ಅವರು ಹೃದಯದಲ್ಲಿ ಯೋಚಿಸುವುದೆಲ್ಲವು ಯಾವಾಗಲೂ ಬರೀ ಕೆಟ್ಟದ್ದೇ’ ಎಂದನು. ಇನ್ನು 120 ವರ್ಷಗಳಲ್ಲಿ ಆ ದುಷ್ಟ ಸಮಾಜವನ್ನು ಅಳಿಸಿಹಾಕಲು ನಿರ್ಧರಿಸಿದನು.—ಆದಿಕಾಂಡ 6:3-5 ಓದಿ.

7. ಸುತ್ತಲಿನ ದುಷ್ಟ ಪ್ರಭಾವ ತಮ್ಮ ಪುತ್ರರಿಗೆ ತಟ್ಟದಂತೆ ಕಾಪಾಡುವುದು ನೋಹ ಮತ್ತವನ ಹೆಂಡತಿಗೆ ಏಕೆ ಒಂದು ಸವಾಲಾಗಿತ್ತು?

7 ಅಂಥ ಒಂದು ಜಗತ್ತಿನಲ್ಲಿ ಮಕ್ಕಳನ್ನು ಬೆಳೆಸಲು ಎಷ್ಟು ಕಷ್ಟವಾಗಿರಬೇಕೆಂದು ಸ್ವಲ್ಪ ಊಹಿಸಿ! ಆದರೆ ನೋಹನು ಇದರಲ್ಲಿ ಯಶಸ್ವಿಯಾದ. ಅವನಿಗೆ ಸಿಕ್ಕಿದ ಹೆಂಡತಿ ಒಳ್ಳೆಯವಳು. ನೋಹನಿಗೆ 500 ದಾಟಿದ ಬಳಿಕ ಮೂವರು ಪುತ್ರರು ಹುಟ್ಟಿದರು. * ಅವರ ಹೆಸರು ಶೇಮ್‌, ಹಾಮ್‌, ಯಾಫೇತ್‌. ಹೆತ್ತವರಾದ ನೋಹ ಮತ್ತವನ ಹೆಂಡತಿ ತಮ್ಮ ಮಕ್ಕಳಿಗೆ ಸುತ್ತಮುತ್ತಲಿನ ದುಷ್ಟ ಪ್ರಭಾವ ತಟ್ಟದಂತೆ ಕಾಪಾಡಬೇಕಾಯಿತು. ಸಾಮಾನ್ಯವಾಗಿ ಪುಟ್ಟ ಬಾಲಕರು ಪೈಲ್ವಾನ್‌ಗಳಂತಿರುವ ಕಟ್ಟುಮಸ್ತಿನ ದೇಹ, ಶಕ್ತಿಯುಳ್ಳವರನ್ನು ಕಂಡರೆ ಕಣ್ಣುಬಾಯಿಬಿಟ್ಟುಕೊಂಡು ವಿಸ್ಮಯದಿಂದ ನೋಡುತ್ತಿರುತ್ತಾರೆ. ನೆಫೀಲಿಯರೂ ‘ಮಹಾಶರೀರಿಗಳು,’ ‘ಪರಾಕ್ರಮಶಾಲಿಗಳು’ ಆಗಿದ್ದರಿಂದ ಆ ಕಾಲದ ಮಕ್ಕಳು ಸಹ ಅವರನ್ನು ಮೆಚ್ಚುಗೆಯಿಂದ ನೋಡುತ್ತಿದ್ದಿರಬಹುದು. ಈ ರಾಕ್ಷಸರು ಮಾಡುತ್ತಿದ್ದ ಶೋಷಣೆ, ದಬ್ಬಾಳಿಕೆಯ ಕುರಿತ ಯಾವುದೇ ಸಂಗತಿ ಮಕ್ಕಳ ಕಿವಿಗೆ ಬೀಳದಂತೆ ಮಾಡಲು ನೋಹ ಮತ್ತವನ ಹೆಂಡತಿಗೆ ಖಂಡಿತ ಸಾಧ್ಯವಿರಲಿಲ್ಲ. ಆದರೆ ಯೆಹೋವ ದೇವರು ಎಲ್ಲ ತರದ ದುಷ್ಟತನವನ್ನು ದ್ವೇಷಿಸುತ್ತಾನೆಂಬ ಸತ್ಯವನ್ನು ಮಕ್ಕಳಿಗೆ ಖಂಡಿತ ಕಲಿಸಲು ಸಾಧ್ಯವಿತ್ತು. ಲೋಕದಲ್ಲಿನ ಹಿಂಸಾಚಾರ, ದಂಗೆ ನೋಡಿ ಯೆಹೋವನು ತುಂಬ ನೊಂದುಕೊಳ್ಳುತ್ತಾನೆಂದು ತಮ್ಮ ಹುಡುಗರು ಮನಗಾಣುವಂತೆ ಅವರು ಸಹಾಯ ಮಾಡಲೇಬೇಕಿತ್ತು.—ಆದಿ. 6:6.

ನೋಹ ಮತ್ತವನ ಹೆಂಡತಿ ತಮ್ಮ ಮಕ್ಕಳಿಗೆ ಕೆಟ್ಟ ಪ್ರಭಾವ ತಟ್ಟದಂತೆ ಕಾಪಾಡಬೇಕಿತ್ತು

8. ನೋಹ ಮತ್ತವನ ಹೆಂಡತಿಯ ಮಾದರಿಯನ್ನು ವಿವೇಕಿಗಳಾದ ಹೆತ್ತವರು ಇಂದು ಹೇಗೆ ಅನುಕರಿಸಬಲ್ಲರು?

8 ನಮ್ಮ ಕಾಲದ ಹೆತ್ತವರಿಗೆ ನೋಹ ಮತ್ತವನ ಪತ್ನಿಯ ಕಷ್ಟ ಚೆನ್ನಾಗಿ ಅರ್ಥವಾಗಬಹುದು. ಏಕೆಂದರೆ ಅಂದಿನಂತೆ ಇಂದೂ ಲೋಕದಲ್ಲಿ ಹಿಂಸಾಚಾರ, ದಂಗೆಕೋರತನ ಅಟ್ಟಹಾಸ ಮೆರೆಯುತ್ತಿದೆ. ನಗರಗಳಲ್ಲಿ ಯುವ ಪುಂಡರು ಗುಂಪುಕಟ್ಟಿಕೊಂಡು ದರ್ಬಾರು ನಡೆಸುತ್ತಿರುತ್ತಾರೆ. ಎಳೆಯ ಮಕ್ಕಳಿಗಾಗಿರುವ ಮನೋರಂಜನೆಯಲ್ಲೂ ಹೊಡೆದಾಟ ಬಡಿದಾಟ, ಕೊಲೆ ಮುಂತಾದ ಹಿಂಸಾತ್ಮಕ ವಿಷಯಗಳೇ ತುಂಬಿಕೊಂಡಿರುತ್ತವೆ. ಇಂಥೆಲ್ಲ ಕೆಟ್ಟ ಪ್ರಭಾವ ತಮ್ಮ ಮಕ್ಕಳಿಗೆ ತಟ್ಟದಂತೆ ವಿವೇಕಿ ಹೆತ್ತವರು ತಮ್ಮಿಂದಾದುದೆಲ್ಲವನ್ನು ಮಾಡುತ್ತಾರೆ. ಹೇಗೆ? ಶಾಂತಿಯ ದೇವರಾದ ಯೆಹೋವನ ಬಗ್ಗೆ, ಎಲ್ಲ ರೀತಿಯ ಹಿಂಸಾಚಾರಕ್ಕೆ ಆತನು ಅಂತ್ಯತರಲಿರುವುದರ ಬಗ್ಗೆ ಮಕ್ಕಳಿಗೆ ಕಲಿಸಿಕೊಡುವ ಮೂಲಕವೇ. (ಕೀರ್ತ. 11:5; 37:10, 11) ಈ ದುಷ್ಟ ಲೋಕದಲ್ಲೂ ಸರಿಯಾದದ್ದನ್ನೇ ಮಾಡುವಂತೆ ಮಕ್ಕಳಿಗೆ ಕಲಿಸುವುದರಲ್ಲಿ ಹೆತ್ತವರು ಯಶಸ್ಸು ಗಳಿಸಸಾಧ್ಯ! ನೋಹ ಮತ್ತವನ ಹೆಂಡತಿ ಯಶಸ್ವಿಗಳಾದರು. ಅವರ ಮಕ್ಕಳು ಉತ್ತಮ ವ್ಯಕ್ತಿಗಳಾದರು. ಆ ಗಂಡುಮಕ್ಕಳು ಮದುವೆಯಾದ ಸ್ತ್ರೀಯರು ಸಹ ಸತ್ಯ ದೇವರಾದ ಯೆಹೋವನನ್ನು ತಮ್ಮ ಬದುಕಲ್ಲಿ ಪ್ರಥಮವಾಗಿಡಲು ಸಿದ್ಧಮನಸ್ಸಿನವರಾಗಿದ್ದರು.

‘ನೀನು ನಾವೆಯನ್ನು ಮಾಡಿಕೊ’

9, 10. (1) ಯೆಹೋವನು ಕೊಟ್ಟ ಯಾವ ಆಜ್ಞೆ ನೋಹನ ಬದುಕನ್ನೇ ಬದಲಾಯಿಸಿತು? (2) ನಾವೆಯ ವಿನ್ಯಾಸ ಮತ್ತು ಉದ್ದೇಶದ ಕುರಿತು ಯೆಹೋವನು ನೋಹನಿಗೆ ಏನು ಪ್ರಕಟಿಸಿದನು?

9 ಒಂದು ದಿನ ಯೆಹೋವನು ತನ್ನ ಈ ನೆಚ್ಚಿನ ಸೇವಕನೊಟ್ಟಿಗೆ ಮಾತಾಡಿ ಲೋಕಕ್ಕೆ ಅಂತ್ಯ ತರುವ ತನ್ನ ಉದ್ದೇಶದ ಬಗ್ಗೆ ತಿಳಿಸಿದನು. ಅಂದಿನಿಂದ ನೋಹನ ಇಡೀ ಜೀವನ ಬದಲಾಯಿತು. ಯೆಹೋವನು ನೋಹನಿಗೆ, “ನೀನು ತುರಾಯಿ ಮರದಿಂದ ನಾವೆಯನ್ನು [“ಮೂಲ: ಪೆಟ್ಟಿಗೆಯನ್ನು,” ಸತ್ಯವೇದವು ಪಾದಟಿಪ್ಪಣಿ] ಮಾಡಿಕೋ” ಎಂದು ಆಜ್ಞಾಪಿಸಿದನು.—ಆದಿ. 6:14.

10 ಆ ನಾವೆ ಅನೇಕರು ನೆನಸುವಂತೆ ಒಂದು ದೋಣಿ ಅಥವಾ ಹಡಗು ಆಗಿರಲಿಲ್ಲ. ಅದಕ್ಕೆ ದೋಣಿಯಂತೆ ಚೂಪಾದ ಮುಂಭಾಗ-ಹಿಂಭಾಗ, ತಳಭಾಗದಲ್ಲಿ ಅಡಿಗಟ್ಟು, ಚುಕ್ಕಾಣಿ, ಕಮಾನಿನ ಆಕಾರ ಯಾವುದೂ ಇರಲಿಲ್ಲ. ಅದು ಒಂದು ದೊಡ್ಡ ಪೆಟ್ಟಿಗೆಯ ಹಾಗಿತ್ತು. ಯೆಹೋವನು ನೋಹನಿಗೆ ಅದರ ಅಳತೆಯನ್ನು ನಿಖರವಾಗಿ ತಿಳಿಸಿದನು. ವಿನ್ಯಾಸದ ಬಗ್ಗೆಯೂ ಕೆಲವು ವಿವರಗಳನ್ನು ಕೊಟ್ಟನು. ನಾವೆಯ ಒಳಗೂ ಹೊರಗೂ ರಾಳ ಹಚ್ಚಬೇಕೆಂದು ಹೇಳಿದನು. ಜೊತೆಗೆ ಈ ನಾವೆ ಕಟ್ಟುವುದರ ಉದ್ದೇಶವನ್ನೂ ತಿಳಿಸುತ್ತಾ “ನಾನಂತೂ ಭೂಮಿಯ ಮೇಲೆ ಜಲಪ್ರಳಯವನ್ನು ಬರಮಾಡಿ . . . ಸಕಲ ಪ್ರಾಣಿಗಳನ್ನೂ ಅಳಿಸಿಬಿಡುವೆನು; ಭೂಮಿಯಲ್ಲಿರುವ ಸಮಸ್ತವೂ ಲಯವಾಗುವದು” ಎಂದನು. ಆದರೆ ನೋಹನೊಂದಿಗೆ ಯೆಹೋವನು ಒಂದು ನಿಬಂಧನೆ ಅಥವಾ ಒಪ್ಪಂದವನ್ನೂ ಮಾಡಿದನು. ಆತನು ಹೇಳಿದ್ದು: “ನೀನು ಹೆಂಡತಿ ಮಕ್ಕಳು ಸೊಸೆಯರು ಸಹಿತವಾಗಿ ನಾವೆಯಲ್ಲಿ ಸೇರಬೇಕು.” ಮಾತ್ರವಲ್ಲ ನೋಹ ಎಲ್ಲ ರೀತಿಯ ಪಶುಪ್ರಾಣಿಗಳ ಕೆಲವು ಜೋಡಿಗಳನ್ನೂ ನಾವೆಯೊಳಗೆ ಸೇರಿಸಿಕೊಳ್ಳಬೇಕಿತ್ತು. ನಾವೆಯೊಳಗಿದ್ದವರು ಮಾತ್ರ ಬರಲಿದ್ದ ಜಲಪ್ರಳಯದಿಂದ ಬಚಾವಾಗಬಹುದಿತ್ತು.—ಆದಿ. 6:17-20.

ದೇವರ ಆಜ್ಞೆಗಳನ್ನು ಪಾಲಿಸಲು ನೋಹ ಮತ್ತವನ ಕುಟುಂಬ ಜೊತೆಯಾಗಿ ಕೆಲಸಮಾಡಿತು

11, 12. (1) ನೋಹನಿಗೆ ಯಾವ ದೊಡ್ಡ ಕೆಲಸ ಕೊಡಲಾಯಿತು? (2) ಈ ಕಷ್ಟಕರ ಕೆಲಸಕ್ಕೆ ಅವನ ಪ್ರತಿಕ್ರಿಯೆ ಏನಾಗಿತ್ತು?

11 ನೋಹನ ಮುಂದಿದ್ದ ಕೆಲಸ ಬೆಟ್ಟದಷ್ಟು ದೊಡ್ಡದಾಗಿತ್ತು. ಆ ನಾವೆ 437 ಅಡಿ ಉದ್ದ, 73 ಅಡಿ ಅಗಲ, 44 ಅಡಿ ಎತ್ತರ ಇರಬೇಕಿತ್ತು. ಅಬ್ಬಾ! ನಿಜಕ್ಕೂ ಇದು ಬೃಹದಾಕಾರ! ಆಧುನಿಕ ಕಾಲದಲ್ಲಿ ಸಮುದ್ರಯಾನಕ್ಕೆಂದು ತಯಾರಿಸಲಾದ ಮರದ ಅತಿ ದೊಡ್ಡ ಹಡಗುಗಳಿಗಿಂತ ಆ ನಾವೆ ಎಷ್ಟೋ ಪಟ್ಟು ದೊಡ್ಡದ್ದಾಗಿತ್ತು. ಈ ಕೆಲಸದ ಬಗ್ಗೆ ಕೇಳಿದೊಡನೆ ನೋಹ ಅದರಿಂದ ನುಣುಚಿಕೊಂಡನೇ? ಆ ಕೆಲಸಕ್ಕೆ ಕೈಹಾಕಿದರೆ ಎದುರಾಗುವ ಕಷ್ಟಗಳ ಉದ್ದ ಪಟ್ಟಿ ಒದರಿದನೇ? ತನ್ನ ಕೆಲಸ ಸುಲಭಮಾಡಿಕೊಳ್ಳಲಿಕ್ಕಾಗಿ ದೇವರ ನಿರ್ದೇಶನಗಳನ್ನು ತನಗೆ ಬೇಕಾದ ಹಾಗೆ ಬದಲಿಸಿಕೊಂಡನೇ? ಇದಕ್ಕೆಲ್ಲ ಬೈಬಲ್‌ ಕೊಡುವ ಉತ್ತರವೇನೆಂದರೆ, “ದೇವರು ಅಪ್ಪಣೆಕೊಟ್ಟ ಪ್ರಕಾರವೇ ನೋಹನು ಮಾಡಿದನು.”—ಆದಿ. 6:22.

12 ಈ ಕೆಲಸ ಮಾಡಿ ಮುಗಿಸಲು ದಶಕಗಳೇ ಹಿಡಿದವು. ಬಹುಶಃ 40-50 ವರ್ಷ ಹಿಡಿದಿರಬೇಕು. ಏಕೆಂದರೆ ಮರಗಳನ್ನು ಕಡಿಯಬೇಕಿತ್ತು, ದಿಮ್ಮಿಗಳನ್ನು ಎಳೆದು ತರಬೇಕಿತ್ತು. ಅನಂತರ ಅವುಗಳಿಂದ ತೊಲೆಗಳನ್ನು ತಯಾರಿಸಿ, ಅವುಗಳಿಗೆ ಆಕಾರ ಕೊಟ್ಟು, ಜೋಡಿಸಬೇಕಿತ್ತು. ನಾವೆಯಲ್ಲಿ ಮೂರು ಅಂತಸ್ತುಗಳು ಇರಬೇಕಿತ್ತು, ಅವುಗಳಲ್ಲಿ ಹಲವಾರು ಕೋಣೆಗಳಿರಬೇಕಿತ್ತು. ನಾವೆಯ ಒಂದು ಬದಿಗೆ ಬಾಗಿಲಿಟ್ಟು, ಮೇಲ್ಭಾಗದಲ್ಲಿ ಸಾಲಾಗಿ ಸುತ್ತಲೂ ಕಿಟಿಕಿಗಳನ್ನು ಇಡಬೇಕಿತ್ತು. ಅಲ್ಲದೆ ಛಾವಣಿಯ ಮಧ್ಯಭಾಗ ಸ್ವಲ್ಪ ಮೇಲಿದ್ದು, ನೀರು ಸುಲಭವಾಗಿ ಹರಿದು ಹೋಗಸಾಧ್ಯವಾಗುವಂತೆ ಛಾವಣಿಯ ಇಕ್ಕೆಲಗಳು ಇಳಿಜಾರಾಗಿರಬೇಕಿತ್ತು.—ಆದಿ. 6:14-16.

13. (1) ನೋಹನ ಕೆಲಸದ ಯಾವ ಅಂಶ ನಾವೆ ಕಟ್ಟುವುದಕ್ಕಿಂತ ಹೆಚ್ಚು ಕಷ್ಟಕರ ಆಗಿದ್ದಿರಬಹುದು? (2) ಜನರ ಪ್ರತಿಕ್ರಿಯೆ ಏನಾಗಿತ್ತು?

13 ವರ್ಷಗಳು ಉರುಳಿದಂತೆ ನಾವೆಗೆ ಒಂದು ಆಕಾರ ಬರತೊಡಗಿತು. ಈ ಕೆಲಸದಲ್ಲಿ ತನ್ನ ಕುಟುಂಬ ಕೊಡುತ್ತಿದ್ದ ಸಹಕಾರಕ್ಕಾಗಿ ನೋಹ ತುಂಬ ಸಂತೋಷಪಟ್ಟಿರಬೇಕು. ದೇವರು ಕೊಟ್ಟ ಕೆಲಸದಲ್ಲಿ ನಾವೆ ಕಟ್ಟುವುದಕ್ಕಿಂತ ಹೆಚ್ಚು ಕಷ್ಟಕರವಾದ ಇನ್ನೊಂದು ಅಂಶವಿತ್ತು. ನೋಹ “ನೀತಿಯನ್ನು ಸಾರುವವನಾಗಿದ್ದ” ಎನ್ನುತ್ತದೆ ಬೈಬಲ್‌. (2 ಪೇತ್ರ 2:5 ಓದಿ.) ಆ ದುಷ್ಟ, ಭಕ್ತಿಹೀನ ಜನರಿಗೆ ಬರಲಿರುವ ನಾಶನದ ಕುರಿತು ಎಚ್ಚರಿಕೆ ಕೊಡುವುದರಲ್ಲಿ ಅವನು ಧೈರ್ಯದಿಂದ ಮುಂದಾಳತ್ವ ವಹಿಸಿದನು. ಜನರ ಪ್ರತಿಕ್ರಿಯೆ ಏನಾಗಿತ್ತು? ನೋಹನ ಕಾಲದ ಬಗ್ಗೆ ಮಾತಾಡುವಾಗ ಯೇಸು ಕ್ರಿಸ್ತನು ಆ ಜನರು “ಲಕ್ಷ್ಯಕೊಡಲೇ ಇಲ್ಲ” ಎಂದು ಹೇಳಿದನು. ತಿನ್ನುವ, ಕುಡಿಯುವ, ಮದುವೆಯಾಗುವ ಮುಂತಾದ ದೈನಂದಿನ ಕೆಲಸಕಾರ್ಯಗಳಲ್ಲೇ ಅವರು ಮುಳುಗಿದ್ದು, ನೋಹನ ಮಾತನ್ನು ಕಿವಿಗೇ ಹಾಕಿಕೊಳ್ಳಲಿಲ್ಲ. (ಮತ್ತಾ. 24:37-39) ಅವನನ್ನೂ ಅವನ ಕುಟುಂಬದವರನ್ನೂ ಅನೇಕರು ನಿಸ್ಸಂಶಯವಾಗಿ ಅಪಹಾಸ್ಯ ಮಾಡಿರಬೇಕು. ಕೆಲವರು ಅವನಿಗೆ ಬೆದರಿಕೆ ಹಾಕಿರಬಹುದು, ಹಿಂಸೆ ಕೊಟ್ಟು ವಿರೋಧಿಸಿರಬಹುದು. ನಿರ್ಮಾಣ ಕೆಲಸವನ್ನು ಹಾಳುಮಾಡಲೂ ಪ್ರಯತ್ನಿಸಿರಬಹುದು.

ನೋಹನ ಮೇಲೆ ದೇವರ ಆಶೀರ್ವಾದವಿದೆ ಎನ್ನುವುದಕ್ಕೆ ಸಾಕ್ಷ್ಯವಿದ್ದರೂ ಜನರು ಅವನನ್ನು ಅಪಹಾಸ್ಯ ಮಾಡಿದರು, ಅವನ ಸಂದೇಶವನ್ನು ಕಿವಿಗೆ ಹಾಕಿಕೊಳ್ಳಲಿಲ್ಲ

14. ನೋಹ ಮತ್ತವನ ಕುಟುಂಬದಿಂದ ಇಂದಿನ ಕ್ರೈಸ್ತ ಕುಟುಂಬಗಳು ಏನು ಕಲಿಯಬಲ್ಲವು?

14 ಆದರೂ ನೋಹ ಮತ್ತವನ ಕುಟುಂಬ ತಮ್ಮ ಕೆಲಸವನ್ನು ಕೈಬಿಡಲಿಲ್ಲ. ಅವರು ತಮ್ಮ ಜೀವನದಲ್ಲಿ ಯಾವ ಕೆಲಸಕ್ಕೆ ಪ್ರಮುಖ ಸ್ಥಾನ ಕೊಟ್ಟಿದ್ದರೊ ಅದು ಸುತ್ತಲಿನ ಜನರಿಗೆ ಕ್ಷುಲ್ಲಕವಾಗಿ, ತಪ್ಪಾದದ್ದಾಗಿ, ಹುಚ್ಚುತನವಾಗಿ ಕಂಡಿತು. ಆದರೂ ಅವರು ನಂಬಿಗಸ್ತಿಕೆಯಿಂದ ತಮ್ಮ ಕೆಲಸ ಮುಂದುವರಿಸಿದರು. ನೋಹ ಮತ್ತವನ ಕುಟುಂಬ ತೋರಿಸಿದ ಇಂಥ ನಂಬಿಕೆಯಿಂದ ಇಂದಿನ ಕ್ರೈಸ್ತ ಕುಟುಂಬಗಳು ಬಹಳಷ್ಟನ್ನು ಕಲಿಯಬಲ್ಲವು. ಎಷ್ಟೆಂದರೂ ನಾವು ಜೀವಿಸುತ್ತಿರುವ ಸಮಯ ಕೂಡ ಲೋಕ ವ್ಯವಸ್ಥೆಯ ‘ಕಡೇ ದಿವಸಗಳು’ ಆಗಿವೆಯೆಂದು ಬೈಬಲ್‌ ಹೇಳುತ್ತದೆ. (2 ತಿಮೊ. 3:1) ನಮ್ಮೀ ಕಾಲವೂ ನೋಹ ನಾವೆ ಕಟ್ಟಿದ ಕಾಲದಂತೆಯೇ ಇರುವುದೆಂದು ಯೇಸು ಹೇಳಿದನು. ಜನರು ದೇವರ ರಾಜ್ಯದ ಸಂದೇಶವನ್ನು ಕೇಳಿಸಿಕೊಂಡಾಗ ಉದಾಸೀನತೆ, ಅಪಹಾಸ್ಯ ಅಥವಾ ಹಿಂಸೆಯಂಥ ಪ್ರತಿಕ್ರಿಯೆ ತೋರಿಸುವಾಗ ಕ್ರೈಸ್ತರಾದ ನಾವು ನೋಹನನ್ನು ನೆನಪಿಸಿಕೊಳ್ಳಬೇಕು. ಯಾಕೆಂದರೆ ಇಂಥ ಸವಾಲುಗಳನ್ನು ಎದುರಿಸುವುದರಲ್ಲಿ ನಾವೇನೂ ಮೊದಲಿಗರಲ್ಲ, ನೋಹನೂ ಎದುರಿಸಿದನು.

“ನಾವೆಯಲ್ಲಿ ಸೇರಿರಿ”

15. ನೋಹನಿಗೆ ಹತ್ತಿರಹತ್ತಿರ 600 ವರ್ಷ ಆಗುವಾಗ ಎಂಥ ನೋವನ್ನು ಅನುಭವಿಸಿದ?

15 ದಶಕಗಳು ದಾಟಿದವು, ಕ್ರಮೇಣ ನಾವೆಯ ಕೆಲಸ ಪೂರ್ಣಗೊಂಡಿತು. ನೋಹನಿಗೆ ಹತ್ತಿರಹತ್ತಿರ 600 ವರ್ಷ ಆಗುವಾಗ ಅವನು ತನ್ನ ಆಪ್ತರ ಮರಣದಿಂದ ನೋವನ್ನು ಅನುಭವಿಸಿದ. ಮೊದಲು ಅವನ ತಂದೆ ಲೆಮೆಕ ಮೃತನಾದ. * ಐದು ವರ್ಷಗಳ ಬಳಿಕ ಲೆಮೆಕನ ತಂದೆ ಅಂದರೆ ನೋಹನ ಅಜ್ಜ ಮೆತೂಷೆಲಹ 969ನೇ ಪ್ರಾಯದಲ್ಲಿ ತೀರಿಹೋದ. ಬೈಬಲಿನ ದಾಖಲೆಗನುಸಾರ ಬಹು ದೀರ್ಘಕಾಲ ಬದುಕಿದ ಒಬ್ಬನೇ ವ್ಯಕ್ತಿ ಈತನೇ. (ಆದಿ. 5:27) ಮೆತೂಷೆಲಹ ಹಾಗೂ ಲೆಮೆಕ ಪ್ರಥಮ ಪುರುಷನಾದ ಆದಾಮನ ಸಮಕಾಲೀನರಾಗಿದ್ದರು.

16, 17. (1) ನೋಹನಿಗೆ 600 ವರ್ಷವಾದಾಗ ಯಾವ ಹೊಸ ನಿರ್ದೇಶನ ಸಿಕ್ಕಿತು? (2) ನೋಹ ಮತ್ತವನ ಕುಟುಂಬವು ಕಣ್ಣಾರೆ ಕಂಡ ಅವಿಸ್ಮರಣೀಯ ದೃಶ್ಯವನ್ನು ವರ್ಣಿಸಿ.

16 ಪೂರ್ವಜನಾದ ನೋಹನಿಗೆ 600 ವರ್ಷವಾದಾಗ ಯೆಹೋವ ದೇವರು ಈ ಹೊಸ ನಿರ್ದೇಶನ ಕೊಟ್ಟ: “ನೀನೂ ನಿನ್ನ ಮನೆಯವರೆಲ್ಲರೂ ನಾವೆಯಲ್ಲಿ ಸೇರಿರಿ.” ಅದೇ ಸಮಯದಲ್ಲಿ ದೇವರು ನೋಹನಿಗೆ ಎಲ್ಲ ವಿಧದ ಪ್ರಾಣಿಗಳನ್ನು ನಾವೆಯಲ್ಲಿ ಸೇರಿಸಿಕೊಳ್ಳುವಂತೆಯೂ ಹೇಳಿದ. ಶುದ್ಧ ಪಶುಗಳನ್ನು ಅಂದರೆ ಯಜ್ಞಕ್ಕೆ ಯೋಗ್ಯವಾದವುಗಳಲ್ಲಿ ಏಳೇಳನ್ನು, ಉಳಿದ ಪಶುಗಳಲ್ಲಿ ಎರಡೆರಡನ್ನು ಸೇರಿಸಿಕೊಳ್ಳುವಂತೆ ತಿಳಿಸಿದ.—ಆದಿ. 7:1-3.

17 ನಾನಾ ಗಾತ್ರದ, ವಿಧವಿಧ ಆಕಾರದ, ಭಿನ್ನಭಿನ್ನ ಸ್ವಭಾವದ ಸಾವಿರಾರು ಪ್ರಾಣಿಪಕ್ಷಿಗಳು ದೂರದ ದಿಗಂತದಿಂದ ನಡೆಯುತ್ತಾ, ಹಾರುತ್ತಾ, ತೆವಳುತ್ತಾ, ತೂಗಾಡುತ್ತಾ, ದಾಪುಗಾಲಿಡುತ್ತಾ ಬಂದವು. ಅದೊಂದು ಅವಿಸ್ಮರಣೀಯ ದೃಶ್ಯ. ಬಡಪಾಯಿ ನೋಹ ಈ ಎಲ್ಲ ಕಾಡು ಪ್ರಾಣಿಗಳನ್ನು ನಾವೆಯೊಳಗೆ ಕಳುಹಿಸಲು ಅದೆಷ್ಟು ಒದ್ದಾಡಿದನೊ, ಕೂಗಾಡಿದನೊ, ಯಾವ್ಯಾವ ವಿಧದಲ್ಲಿ ಪುಸಲಾಯಿಸಿದನೊ ಎಂದು ಯೋಚಿಸುತ್ತಿದ್ದೀರಾ? ಅವನು ಅಷ್ಟು ಕಷ್ಟಪಡಬೇಕಾಗಿರಲಿಲ್ಲ. ಏಕೆಂದರೆ ವೃತ್ತಾಂತ ಹೇಳುವಂತೆ ಅವುಗಳೇ ನೋಹನ ಬಳಿಗೆ ಬಂದು “ನಾವೆಯಲ್ಲಿ ಸೇರಿದವು.”ಆದಿ. 7:9.

18, 19. (1) ನೋಹನ ವೃತ್ತಾಂತದಲ್ಲಿನ ಘಟನೆಗಳ ಬಗ್ಗೆ ಸಂದೇಹವಾದಿಗಳು ಎಬ್ಬಿಸುವ ಪ್ರಶ್ನೆಗಳಿಗೆ ನಾವು ಹೇಗೆ ಉತ್ತರಿಸಬಹುದು? (2) ಯೆಹೋವನು ಪ್ರಾಣಿಪಕ್ಷಿಗಳನ್ನು ರಕ್ಷಿಸಲು ಆರಿಸಿಕೊಂಡ ವಿಧದಲ್ಲಿ ನಮಗೆ ಆತನ ವಿವೇಕ ಹೇಗೆ ತೋರಿಬರುತ್ತದೆ?

18 ‘ಇದಂತೂ ಅಸಾಧ್ಯ! ಅದು ಮಾತ್ರವಲ್ಲ, ನಾಲ್ಕೂ ಕಡೆಯಲ್ಲಿ ಮುಚ್ಚಿರುವಂಥ ನಾವೆಯೊಳಗೆ ಆ ಎಲ್ಲ ಪ್ರಾಣಿಗಳು ಶಾಂತಿಯಿಂದಿರಲು ಹೇಗೆ ಸಾಧ್ಯ?’ ಎಂದು ಕೆಲವು ಸಂದೇಹವಾದಿಗಳು ಕೇಳಬಹುದೇನೊ. ಆದರೆ ಸ್ವಲ್ಪ ಯೋಚಿಸಿ: ಇಡೀ ವಿಶ್ವವನ್ನೇ ಸೃಷ್ಟಿಮಾಡಿದಾತನಿಗೆ ಈ ಪ್ರಾಣಿಪಕ್ಷಿಗಳನ್ನು ನಿಯಂತ್ರಿಸಲು, ಅಗತ್ಯಬಿದ್ದಲ್ಲಿ ಅವುಗಳನ್ನು ಸಾಧುಸ್ವಭಾವದವುಗಳು, ಪಳಗಿದವುಗಳು ಆಗಿ ಮಾಡುವಷ್ಟು ಶಕ್ತಿ ಇಲ್ಲವೇ? ಪ್ರಾಣಿಗಳನ್ನು ಸೃಷ್ಟಿಸಿದವನು ಯೆಹೋವನೇ ಎಂದು ನೆನಪಿಡಿ. ಸಮಯಾನಂತರ ಆತನು ಕೆಂಪು ಸಮುದ್ರವನ್ನು ಇಬ್ಭಾಗ ಮಾಡಿದನು, ಸೂರ್ಯ ನಿಂತಲ್ಲೇ ನಿಲ್ಲುವಂತೆ ಮಾಡಿದನು. ಇಷ್ಟೊಂದು ಶಕ್ತಿಯುಳ್ಳವನು ನೋಹನ ವೃತ್ತಾಂತದಲ್ಲಿ ವರ್ಣಿಸಲಾಗಿರುವ ಪ್ರತಿಯೊಂದು ಘಟನೆಯನ್ನು ನಡೆಸಲು ಸಾಧ್ಯವಿಲ್ಲವೇ? ಖಂಡಿತ ಆತನಿಗೆ ಸಾಧ್ಯ. ಹಾಗೆ ಮಾಡಿದನು ಸಹ!

19 ಯೆಹೋವನು ತಾನು ಸೃಷ್ಟಿಸಿದ ಪ್ರಾಣಿಪಕ್ಷಿಗಳನ್ನು ರಕ್ಷಿಸಲು ಖಂಡಿತವಾಗಿ ಬೇರೊಂದು ವಿಧ ಆರಿಸಬಹುದಿತ್ತು. ಆದರೆ ಆತನು ಆರಿಸಿದ ಆ ವಿಧ ವಿವೇಕಯುತವಾಗಿತ್ತು. ಏಕೆಂದರೆ ಆತನು ಆರಂಭದಲ್ಲಿ ಮಾನವರಿಗೆ ಭೂಮಿ ಮೇಲಿರುವ ಎಲ್ಲ ಜೀವಿಗಳನ್ನು ನೋಡಿಕೊಳ್ಳಲು ವಹಿಸಿಕೊಟ್ಟಿದ್ದ ಜವಾಬ್ದಾರಿಯನ್ನು ಅದು ನಮ್ಮ ನೆನಪಿಗೆ ತರುತ್ತದೆ. (ಆದಿ. 1:28) ಇಂದಿನ ಅನೇಕ ಹೆತ್ತವರು ನೋಹನ ಕಥೆಯನ್ನು ಮಕ್ಕಳಿಗೆ ಹೇಳುವಾಗ, ಯೆಹೋವನು ತನ್ನ ಸೃಷ್ಟಿಯಾಗಿರುವ ಮಾನವರನ್ನೂ ಪ್ರಾಣಿಪಕ್ಷಿಗಳನ್ನೂ ಅಮೂಲ್ಯವೆಂದೆಣಿಸುತ್ತಾನೆ ಎಂದು ಕಲಿಸಿಕೊಡುತ್ತಾರೆ.

20. ಜಲಪ್ರಳಯಕ್ಕೆ ಇನ್ನು ಒಂದೇ ವಾರವಿದ್ದಾಗ ನೋಹ ಮತ್ತವನ ಕುಟುಂಬ ಯಾವ್ಯಾವ ಕೆಲಸಗಳಲ್ಲಿ ಮುಳುಗಿರಬಹುದು?

20 ಯೆಹೋವನು ನೋಹನಿಗೆ ಇನ್ನು ಒಂದೇ ವಾರದಲ್ಲಿ ಜಲಪ್ರಳಯ ಬರಲಿದೆಯೆಂದು ಹೇಳಿದನು. ಆ ವಾರ ನೋಹನ ಕುಟುಂಬಕ್ಕೆ ಸ್ವಲ್ಪವೂ ಪುರುಸೊತ್ತು ಇದ್ದಿರಲಿಕ್ಕಿಲ್ಲ. ಎಷ್ಟೊಂದು ಕೆಲಸ ಇತ್ತೆಂದು ಸ್ವಲ್ಪ ಊಹಿಸಿ. ಎಲ್ಲ ಪ್ರಾಣಿಗಳನ್ನು ನಾವೆಯೊಳಗೆ ಸೇರಿಸಿಕೊಳ್ಳಬೇಕಿತ್ತು, ಅವುಗಳಿಗಾಗಿಯೂ ತಮ್ಮ ಕುಟುಂಬಕ್ಕಾಗಿಯೂ ಬೇಕಾದ ಆಹಾರವನ್ನೆಲ್ಲ ಒಳತಂದು ವ್ಯವಸ್ಥಿತ ರೀತಿಯಲ್ಲಿ ಜೋಡಿಸಿಡಬೇಕಿತ್ತು. ತಮ್ಮ ಮನೆಯಲ್ಲಿದ್ದ ಸಾಮಾನುಗಳನ್ನೂ ನಾವೆಯೊಳಗೆ ತರಬೇಕಿತ್ತು. ನೋಹನ ಹೆಂಡತಿ ಮತ್ತು ಸೊಸೆಯಂದಿರು ಆ ನಾವೆಯೊಳಗೆ ತಮ್ಮ ಕುಟುಂಬಕ್ಕಾಗಿ ವಾಸಯೋಗ್ಯವಾದ ಸ್ಥಳವನ್ನು ಸಿದ್ಧಪಡಿಸಲು ವಿಶೇಷ ಗಮನಕೊಟ್ಟಿರಬೇಕು.

21, 22. (1) ನೋಹನ ಕಾಲದ ಜನರ ಉದಾಸೀನತೆ ಏಕೆ ನಮಗೆ ಅಚ್ಚರಿಯ ವಿಷಯವಲ್ಲ? (2) ನೋಹ ಮತ್ತವನ ಕುಟುಂಬಕ್ಕೆ ಸುತ್ತಲಿನ ಜನರು ಮಾಡುತ್ತಿದ್ದ ಅಪಹಾಸ್ಯ ಯಾವಾಗ ಕೊನೆಗೊಂಡಿತು?

21 ಸುತ್ತಮುತ್ತಲಿನ ಜನರ ಪ್ರತಿಕ್ರಿಯೆ ಏನಾಗಿತ್ತು? ಆಗಲೂ ಅವರು ‘ಲಕ್ಷ್ಯಕೊಡಲೇ ಇಲ್ಲ.’ ನೋಹ ಮತ್ತವನ ಕೆಲಸವನ್ನು ಯೆಹೋವನು ಆಶೀರ್ವದಿಸುತ್ತಿದ್ದಾನೆಂಬುದಕ್ಕೆ ಅವರ ಕಣ್ಣೆದುರು ಅಷ್ಟೆಲ್ಲ ಸಾಕ್ಷ್ಯವಿದ್ದರೂ ಅವರದಕ್ಕೆ ಗಮನ ಕೊಡಲೇ ಇಲ್ಲ. ಪ್ರಾಣಿಗಳು ಪ್ರವಾಹದಂತೆ ನಾವೆಗೆ ಬರುತ್ತಿರುವುದನ್ನು ಅವರು ಖಂಡಿತ ನೋಡಿದರು. ಆದರೂ ಉದಾಸೀನತೆ ತೋರಿಸಿದರು. ಇದೇನೂ ಅಚ್ಚರಿಯ ವಿಷಯವಲ್ಲ. ಏಕೆಂದರೆ ಇಂದು ಸಹ ಜನರು ಹಾಗೆಯೇ ಇದ್ದಾರೆ. ನಾವು ಈ ಲೋಕವ್ಯವಸ್ಥೆಯ ಕೊನೆ ದಿನಗಳಲ್ಲಿ ಜೀವಿಸುತ್ತಿದ್ದೇವೆಂದು ತಿಳಿದುಕೊಳ್ಳಲು ಪುರಾವೆಯ ಮಹಾಪೂರವೇ ಇದ್ದರೂ ಜನರು ಅದಕ್ಕೆ ಲಕ್ಷ್ಯ ಕೊಡುತ್ತಿಲ್ಲ. ಅಪೊಸ್ತಲ ಪೇತ್ರ ಮುಂತಿಳಿಸಿದಂತೆ ಕುಚೋದ್ಯಗಾರರು ಕುಚೋದ್ಯದ ಮಾತುಗಳನ್ನಾಡುತ್ತಾರೆ, ದೇವರ ಎಚ್ಚರಿಕೆಗೆ ಗಮನ ಕೊಡುವವರನ್ನು ಅಣಕಿಸುತ್ತಾರೆ. (2 ಪೇತ್ರ 3:3-6 ಓದಿ.) ಅದೇ ರೀತಿಯಲ್ಲಿ ನೋಹನ ಕಾಲದ ಜನರು ಕೂಡ ಅವನನ್ನೂ ಅವನ ಕುಟುಂಬವನ್ನೂ ಖಂಡಿತ ಅಪಹಾಸ್ಯಮಾಡಿರಬೇಕು.

22 ಅವರ ಅಪಹಾಸ್ಯ ಯಾವಾಗ ಕೊನೆಗೊಂಡಿತು? ನೋಹ ತನ್ನ ಕುಟುಂಬವನ್ನೂ ಪ್ರಾಣಿಗಳನ್ನೂ ನಾವೆಯೊಳಗೆ ಸೇರಿಸಿದ ಬಳಿಕ ಯೆಹೋವನು ಅದರ ಬಾಗಿಲು ಮುಚ್ಚಿದನೆಂದು ವೃತ್ತಾಂತ ಹೇಳುತ್ತದೆ. ಅಪಹಾಸ್ಯ ಮಾಡುವವರು ಯಾರಾದರೂ ಅಲ್ಲೇ ಹತ್ತಿರದಲ್ಲಿ ಇದ್ದಿದ್ದರೆ ಆ ದೈವಿಕ ಕ್ರಿಯೆ ನೋಡಿ ಖಂಡಿತ ಅವರು ಬಾಯಿ ಮುಚ್ಚಿರಬೇಕು. ಒಂದುವೇಳೆ ಆಗ ಅಲ್ಲದಿದ್ದರೂ ಮಳೆ ಶುರುವಾದಾಗಲಂತೂ ಖಂಡಿತ ಅವರ ಅಟ್ಟಹಾಸ ನಿಂತುಹೋಯಿತು. ತಟತಟನೆ ಶುರುವಾದ ಮಳೆ ಒಂದೇ ಸಮನೆ ಧೋ ಎಂದು ಸುರಿಯುತ್ತಲೇ ಇತ್ತು, ನಿಲ್ಲಲೇ ಇಲ್ಲ. ಎಷ್ಟರ ಮಟ್ಟಿಗೆಂದರೆ ಯೆಹೋವನು ಹೇಳಿದಂತೆ ಇಡೀ ಭೂಮಿ ನೀರಲ್ಲಿ ಮುಳುಗಿತು.—ಆದಿ. 7:16-21.

23. (1) ನೋಹನ ದಿನಗಳಲ್ಲಿದ್ದ ದುಷ್ಟರ ಸಾವಿನಲ್ಲಿ ಯೆಹೋವನು ಸ್ವಲ್ಪವೂ ಸಂತೋಷಪಡಲಿಲ್ಲವೆಂದು ಹೇಗೆ ಗೊತ್ತಾಗುತ್ತದೆ? (2) ಇಂದು ನೋಹನ ನಂಬಿಕೆಯನ್ನು ಅನುಕರಿಸುವುದು ಏಕೆ ಪ್ರಾಮುಖ್ಯ?

23 ಆ ದುಷ್ಟ ಜನರು ಸಾಯುವುದನ್ನು ನೋಡಿ ಯೆಹೋವನಿಗೆ ಸಂತೋಷವಾಯಿತೇ? ಖಂಡಿತ ಇಲ್ಲ! (ಯೆಹೆ. 33:11) ವಾಸ್ತವದಲ್ಲಿ ಆತನು ಅವರಿಗೆ ದುರ್ಮಾರ್ಗವನ್ನು ಬಿಟ್ಟು ಸರಿಯಾದದ್ದನ್ನು ಮಾಡಲು ಸಾಕಷ್ಟು ಸಮಯ ಕೊಟ್ಟಿದ್ದನು. ಅವರು ಹಾಗೆ ಮಾಡಸಾಧ್ಯವಿತ್ತಾ? ನೋಹನ ಜೀವನಕ್ರಮ ಇದಕ್ಕೆ ಉತ್ತರದಂತಿದೆ. ಎಲ್ಲ ವಿಷಯಗಳಲ್ಲೂ ಯೆಹೋವನಿಗೆ ವಿಧೇಯನಾಗಿದ್ದು ಆತನೊಂದಿಗೆ ನಡೆಯುವ ಮೂಲಕ ನಾಶನದಿಂದ ಬಚಾವಾಗಲು ಸಾಧ್ಯವಿದೆಯೆಂದು ನೋಹ ತೋರಿಸಿಕೊಟ್ಟ. ಈ ಅರ್ಥದಲ್ಲೇ ಅವನ ನಂಬಿಕೆ ಲೋಕವನ್ನು ಖಂಡಿಸಿತು. ಅವನ ತಲೆಮಾರಿನವರು ದುಷ್ಟರಾಗಿದ್ದರೆಂದು ಅದು ತೋರಿಸಿಕೊಟ್ಟಿತು. ನೋಹನ ನಂಬಿಕೆ ಅವನನ್ನೂ ಅವನ ಕುಟುಂಬವನ್ನೂ ಸುರಕ್ಷಿತವಾಗಿರಿಸಿತು. ನೋಹನ ನಂಬಿಕೆಯನ್ನು ನೀವು ಅನುಕರಿಸಿದರೆ ನಿಮ್ಮನ್ನೂ ನಿಮ್ಮ ಪ್ರಿಯರನ್ನೂ ರಕ್ಷಿಸುವಿರಿ. ನೋಹನಂತೆ ನೀವು ಯೆಹೋವ ದೇವರ ಮಿತ್ರರಾಗಿ ಆತನೊಂದಿಗೆ ನಡೆಯಬಹುದು. ಈ ಮಿತ್ರತ್ವ ಸದಾಕಾಲಕ್ಕೂ ಬಾಳಬಲ್ಲದು!

^ ಪ್ಯಾರ. 7 ಆ ಕಾಲದ ಜನರ ಆಯಸ್ಸು ಇಂದಿನ ಜನರ ಆಯಸ್ಸಿಗಿಂತ ಹೆಚ್ಚಾಗಿತ್ತು. ಆದಾಮಹವ್ವ ಪರಿಪೂರ್ಣತೆ ಕಳೆದುಕೊಂಡು ಹೆಚ್ಚು ಸಮಯವೇನೂ ದಾಟಿರಲಿಲ್ಲ. ಆದಕಾರಣ ಆ ಕಾಲದವರಿಗೆ ಆಯಸ್ಸು ಮತ್ತು ದೈಹಿಕ ಶಕ್ತಿ ಹೆಚ್ಚು ಇತ್ತು.

^ ಪ್ಯಾರ. 15 ಲೆಮೆಕ ತನ್ನ ಮಗನಿಗೆ ನೋಹ ಎಂದು ಹೆಸರಿಟ್ಟ. ಆ ಹೆಸರಿನ ಅರ್ಥ ಬಹುಶಃ “ವಿಶ್ರಾಂತಿ” ಅಥವಾ “ಉಪಶಮನ.” ಶಾಪಹೊಂದಿದ ಭೂಮಿಯಿಂದ ಉಂಟಾದ ಕಷ್ಟಶ್ರಮೆಯಿಂದ ಮಾನವರಿಗೆ ಉಪಶಮನಕೊಡುವ ಮೂಲಕ ನೋಹ ತನ್ನ ಹೆಸರಿನ ಅರ್ಥವನ್ನು ಪೂರೈಸುವನೆಂದು ಲೆಮೆಕ ಪ್ರವಾದಿಸಿದ. (ಆದಿ. 5:28, 29, ಸತ್ಯವೇದವು ಪಾದಟಿಪ್ಪಣಿ) ಲೆಮೆಕ ತನ್ನ ಈ ಪ್ರವಾದನೆ ನೆರವೇರಿದ್ದನ್ನು ನೋಡಲು ಬದುಕಿರಲಿಲ್ಲ. ನೋಹನ ತಾಯಿ, ಸಹೋದರರು, ಸಹೋದರಿಯರು ಜಲಪ್ರಳಯದಲ್ಲಿ ನಾಶವಾಗಿರಬಹುದು.