ಯೋಹಾನನಿಗೆ ಕೊಟ್ಟ ಪ್ರಕಟನೆ 18:1-24

  • “ಮಹಾ ಬಾಬೆಲ್‌” ಬೀಳ್ತಾಳೆ (1-8)

    • “ನನ್ನ ಜನ್ರೇ, ಅವಳಿಂದ ಹೊರಗೆ ಬನ್ನಿ” (4)

  • ಬಾಬೆಲ್‌ ಬಿದ್ದಿದ್ದಕ್ಕೆ ಅವರು ಗೋಳಾಡ್ತಾರೆ (9-19)

  • ಬಾಬೆಲ್‌ ಬಿದ್ದಿದ್ದಕ್ಕೆ ಸ್ವರ್ಗದಲ್ಲಿ ಖುಷಿ ಆಗುತ್ತೆ (20)

  • ಕಲ್ಲನ್ನ ಸಮುದ್ರಕ್ಕೆ ಹಾಕೋ ತರ ಬಾಬೆಲನ್ನ ಬಿಸಾಕ್ತಾರೆ (21-24)

18  ಆಮೇಲೆ ಇನ್ನೊಬ್ಬ ದೇವದೂತ ಸ್ವರ್ಗದಿಂದ ಇಳಿದು ಬರೋದನ್ನ ನಾನು ನೋಡ್ದೆ. ಅವನಿಗೆ ತುಂಬ ಅಧಿಕಾರ ಇತ್ತು. ಅವನು ಎಷ್ಟು ಹೊಳೀತಾ ಇದ್ದ ಅಂದ್ರೆ ಇಡೀ ಭೂಮಿನೇ ಪ್ರಕಾಶಿಸ್ತು.  ಅವನು ಗಟ್ಟಿಯಾಗಿ ಕಿರಿಚ್ತಾ ಹೀಗಂದ: “ಅವಳು ಬಿದ್ದಿದ್ದಾಳೆ! ಮಹಾ ಬಾಬೆಲ್‌ ಬಿದ್ದಿದ್ದಾಳೆ.+ ಕೆಟ್ಟ ದೇವದೂತರಿಗೆ, ಅಪವಿತ್ರ ಮತ್ತು ಅಸಹ್ಯವಾಗಿರೋ ಎಲ್ಲ ಪಕ್ಷಿಗಳಿಗೆ ಅವಳು ಮನೆಯಾಗಿದ್ದಾಳೆ.+ ವಿಷಗಾಳಿ ಇರೋ ಜಾಗ ಆಗಿದ್ದಾಳೆ.  ಯಾಕಂದ್ರೆ ಲೈಂಗಿಕ ಅನೈತಿಕತೆಯ* ಆಸೆ* ಅನ್ನೋ ದ್ರಾಕ್ಷಾಮದ್ಯವನ್ನ ಅವಳು ಎಲ್ಲ ದೇಶಗಳಿಗೆ ಕುಡಿಸಿದ್ದಾಳೆ.+ ಭೂಮಿಯ ಮೇಲಿರೋ ರಾಜರೆಲ್ಲ ಅವಳ ಜೊತೆ ಲೈಂಗಿಕ ಅನೈತಿಕತೆ ಮಾಡಿದ್ದಾರೆ.+ ಭೂಮಿಯಲ್ಲಿರೋ ವ್ಯಾಪಾರಿಗಳು ಅವಳು ಕೂಡಿಸಿಟ್ಟ ಅಮೂಲ್ಯ ವಸ್ತುಗಳಿಂದ ಶ್ರೀಮಂತರಾಗಿದ್ದಾರೆ. ಆ ವಸ್ತುಗಳನ್ನ ಅವಳು ನಾಚಿಕೆ, ಮಾನ, ಮರ್ಯಾದೆ ಬಿಟ್ಟು ಕೂಡಿಸಿಟ್ಟಿದ್ದಾಳೆ.”  ಆಗ ಸ್ವರ್ಗದಿಂದ ಇನ್ನೊಂದು ಧ್ವನಿ ಹೀಗೆ ಹೇಳೋದನ್ನ ಕೇಳಿಸ್ಕೊಂಡೆ: “ನನ್ನ ಜನ್ರೇ, ಅವಳಿಂದ ಹೊರಗೆ ಬನ್ನಿ.+ ಅವಳು ಮಾಡೋ ಪಾಪದಲ್ಲಿ ನಿಮಗೆ ಒಂದು ಪಾಲೂ ಇರಬಾರದಂದ್ರೆ, ಅವಳಿಗೆ ಆಗೋ ಶಿಕ್ಷೆ ನಿಮಗೂ ಆಗಬಾರದಂದ್ರೆ ಅವಳನ್ನ ಬಿಟ್ಟು ಹೊರಗೆ ಬನ್ನಿ.+  ಯಾಕಂದ್ರೆ ಅವಳ ಪಾಪದ ಪಟ್ಟಿ ಆಕಾಶ ಮುಟ್ತಿದೆ.+ ಅವಳು ಮಾಡಿದ ಎಲ್ಲ ಕೆಟ್ಟ ವಿಷ್ಯಗಳಿಗೆ ದೇವರು ನ್ಯಾಯ ತೀರಿಸ್ತಾನೆ.+  ಅವಳು ಬೇರೆಯವರಿಗೆ ಕೆಟ್ಟದ್ದನ್ನ ಮಾಡಿದ್ದಾಳೆ. ಅದನ್ನೇ ಅವಳಿಗೂ ಮಾಡಿ.+ ಎರಡು ಪಟ್ಟು ಮಾಡಿ.+ ಅವಳು ಕಲಸಿದ ಬಟ್ಟಲಲ್ಲೇ+ ಅವಳಿಗೋಸ್ಕರ ಖಡಕ್ಕಾಗಿ ಎರಡು ಪಟ್ಟು ಕಲಸಿ ಕೊಡಿ.+  ಅವಳು ತುಂಬ ಜಂಬ ಕೊಚ್ಕೊಂಡಳು. ನಾಚಿಕೆ ಇಲ್ಲದೆ ಆಸ್ತಿಪಾಸ್ತಿಯನ್ನ ಅನುಭವಿಸಿದಳು. ಹಾಗಾಗಿ ಅವಳಿಗೆ ಅಷ್ಟೇ ಹಿಂಸೆ ಕೊಡಿ. ಅವಳು ಚೆನ್ನಾಗಿ ಅಳೋ ತರ ಮಾಡಿ. ಯಾಕಂದ್ರೆ ಅವಳು ಮನಸ್ಸಲ್ಲಿ ‘ನಾನು ಸಿಂಹಾಸನದಲ್ಲಿ ಕೂತಿರೋ ರಾಣಿ, ವಿಧವೆ ಅಲ್ಲ. ದುಃಖಪಡೋ ಪರಿಸ್ಥಿತಿ ನನಗೆ ಯಾವತ್ತೂ ಬರಲ್ಲ’+ ಅಂತ ಅಂದ್ಕೊಳ್ತಿದ್ದಾಳೆ.  ಹಾಗಾಗಿ ಒಂದೇ ದಿನದಲ್ಲಿ ಅವಳ ಮೇಲೆ ಎಲ್ಲ ಕಷ್ಟಗಳು ಅಂದ್ರೆ ಸಾವು, ದುಃಖ, ಬರ ಬರುತ್ತೆ. ದೇವರು ಅವಳನ್ನ ಬೆಂಕಿಯಿಂದ ಸುಟ್ಟುಹಾಕ್ತಾನೆ.+ ಯಾಕಂದ್ರೆ ಅವಳಿಗೆ ನ್ಯಾಯತೀರಿಸೋ ಯೆಹೋವ* ದೇವರಿಗೆ ತುಂಬ ಶಕ್ತಿ ಇದೆ.+  ಅವಳ ಜೊತೆ ಲೈಂಗಿಕ ಅನೈತಿಕತೆ ಮಾಡಿ, ಅವಳ ಜೊತೆ ಆಸ್ತಿಪಾಸ್ತಿಗಳನ್ನ ಅನುಭವಿಸಿದ ಭೂಮಿಯ ರಾಜರು ಅವಳು ಸುಟ್ಟುಹೋಗ್ತಾ ಇರುವಾಗ ಬರೋ ಹೊಗೆಯನ್ನ ನೋಡಿ ಅತ್ತು ಗೋಳಾಡ್ತಾ ಎದೆ ಬಡ್ಕೊಳ್ತಾರೆ. 10  ಅವಳ ತರ ನಾವೂ ಎಲ್ಲಿ ಕಷ್ಟ ಪಡಬೇಕಾಗುತ್ತೋ ಅಂತ ಭಯಪಟ್ಟು ದೂರದಲ್ಲಿ ನಿಂತು ಹೀಗೆ ಹೇಳ್ತಾರೆ: ‘ಅಯ್ಯೋ, ಅಯ್ಯೋ ಮಹಾ ಪಟ್ಟಣವೇ,+ ಬಲಿಷ್ಠ ಪಟ್ಟಣವಾದ ಬಾಬೆಲೇ, ಎಷ್ಟು ಬೇಗ ನಿನಗೆ ಈ ಗತಿ ಬಂತು!’ 11  ಭೂಮಿಯ ಮೇಲಿರೋ ವ್ಯಾಪಾರಿಗಳೂ ಅವಳಿಗಾದ ಗತಿಯನ್ನ ನೋಡಿ ಅತ್ತು ಗೋಳಾಡ್ತಾ ಇದ್ದಾರೆ. ಯಾಕಂದ್ರೆ ಅವ್ರ ಸರಕು-ಸಾಮಾನುಗಳನ್ನ ತಗೊಳ್ಳೋರು ಈಗ ಯಾರೂ ಇಲ್ಲ. 12  ಚಿನ್ನ, ಬೆಳ್ಳಿ, ಅಮೂಲ್ಯ ರತ್ನ, ಮುತ್ತು, ಒಳ್ಳೇ ಗುಣಮಟ್ಟದ ನಾರಿನ ಬಟ್ಟೆ, ನೇರಳೆ ಮತ್ತು ಕೆಂಪು ಬಣ್ಣದ ಬಟ್ಟೆ, ರೇಷ್ಮೆ ಬಟ್ಟೆ ಎಲ್ಲ ಹಾಗೇ ಇದೆ. ಸುಗಂಧ ಮರ, ಆನೆ ದಂತ, ಬೆಲೆಬಾಳೋ ಮರ, ತಾಮ್ರ, ಕಬ್ಬಿಣ ಮತ್ತು ಬಣ್ಣಬಣ್ಣದ ಕಲ್ಲಿಂದ ಮಾಡಿದ ಎಲ್ಲ ತರದ ವಸ್ತುಗಳನ್ನ ಯಾರೂ ಮೂಸಿ ಕೂಡ ನೋಡ್ತಾ ಇಲ್ಲ. 13  ಅಷ್ಟೇ ಅಲ್ಲ ಈ ಸರಕಲ್ಲಿ ಚಕ್ಕೆ, ಏಲಕ್ಕಿ, ಧೂಪ, ಸುಗಂಧ ತೈಲ, ಸಾಂಬ್ರಾಣಿ, ದ್ರಾಕ್ಷಾಮದ್ಯ, ಆಲೀವ್‌ ಎಣ್ಣೆ, ನುಣ್ಣಗಿನ ಹಿಟ್ಟು, ಗೋದಿ, ದನಕುರಿಗಳು, ಕುದುರೆಗಳು, ಬಂಡಿಗಳು, ದಾಸರು ಮತ್ತು ಜನ್ರೂ ಇದ್ದಾರೆ. 14  ಬಾಬೆಲ್‌ ಪಟ್ಟಣವೇ, ನೀನು ಇಷ್ಟಪಟ್ಟ ಎಲ್ಲ ಒಳ್ಳೇ ವಿಷ್ಯಗಳನ್ನ ನಿನ್ನಿಂದ ಕಿತ್ಕೊಂಡಾಗಿದೆ. ರುಚಿಯಾದ ಆಹಾರ ಪದಾರ್ಥಗಳಾಗಲಿ, ಅಮೂಲ್ಯ ವಸ್ತುಗಳಾಗಲಿ ಇನ್ಮುಂದೆ ನಿನಗೆ ಯಾವತ್ತೂ ಸಿಗಲ್ಲ. 15  ಈ ಸರಕುಗಳನ್ನ ಮಾರಿ ಅವಳಿಂದ ಶ್ರೀಮಂತರಾದ ವ್ಯಾಪಾರಿಗಳು ಅವಳ ಗತಿ ನೋಡಿ ಭಯಪಟ್ಟು ದೂರದಲ್ಲಿ ನಿಂತು ಗೋಳಾಡ್ತಾ ಹೀಗೆ ಹೇಳ್ತಾರೆ: 16  ‘ಅಯ್ಯೋ, ಅಯ್ಯೋ, ಒಳ್ಳೊಳ್ಳೆ ನಾರಿನ ಬಟ್ಟೆ, ನೇರಳೆ ಬಣ್ಣದ ಬಟ್ಟೆ, ಕೆಂಪು ಬಟ್ಟೆಯನ್ನ ಹಾಕೊಂಡು ಚಿನ್ನದ ಒಡವೆಗಳನ್ನ, ಅಮೂಲ್ಯ ರತ್ನ-ಮುತ್ತುಗಳನ್ನ ಹಾಕೊಂಡು ಅಲಂಕಾರ ಮಾಡ್ಕೊಂಡಿರೋ+ ಮಹಾ ಪಟ್ಟಣಕ್ಕೆ ಹೀಗಾಯ್ತಲ್ಲಾ? 17  ಅವಳ ಆಸ್ತಿಪಾಸ್ತಿಯೆಲ್ಲ ಎಷ್ಟು ಬೇಗ ನಾಶ ಆಯ್ತಲ್ಲಾ!’ ಹಡಗಿನ ಎಲ್ಲ ನಾಯಕರು, ಸಮುದ್ರದಲ್ಲಿ ಪ್ರಯಾಣಿಸುವವರು, ನಾವಿಕರು, ಸಮುದ್ರವನ್ನ ನಂಬ್ಕೊಂಡು ಜೀವನ ಮಾಡ್ತಿದ್ದವ್ರೆಲ್ಲ ದೂರದಲ್ಲಿ ನಿಂತ್ಕೊಂಡು 18  ಅವಳು ಸುಟ್ಟುಹೋಗ್ತಾ ಇರುವಾಗ ಬರೋ ಹೊಗೆ ನೋಡಿ ‘ಈ ಮಹಾ ಪಟ್ಟಣದ ತರ ಬೇರೆ ಯಾವುದಾದ್ರೂ ಪಟ್ಟಣ ಇದ್ಯಾ?’ ಅಂತ ಜೋರಾಗಿ ಕೂಗಿದ್ರು. 19  ಅವರು ತಲೆಗಳ ಮೇಲೆ ಮಣ್ಣು ಹಾಕೊಂಡು ಅಳ್ತಾ ಗೋಳಾಡ್ತಾ ‘ಛೇ, ಮಹಾ ಪಟ್ಟಣಕ್ಕೆ ಹೀಗಾಯ್ತಲ್ಲಾ! ಸಮುದ್ರದಲ್ಲಿ ಹಡಗುಗಳು ಇದ್ದವ್ರೆಲ್ಲ ಅವಳಿಂದಾನೇ ಶ್ರೀಮಂತರಾದ್ರು. ಅದು ಹೇಗೆ ಅವಳು ಅಷ್ಟು ಬೇಗ ನಾಶ ಆದಳು!’+ ಅಂತ ಕಿರಿಚಿದ್ರು. 20  ಸ್ವರ್ಗವೇ,+ ಪವಿತ್ರ ಜನ್ರೇ,+ ಅಪೊಸ್ತಲರೇ, ಪ್ರವಾದಿಗಳೇ, ಅವಳಿಗೆ ಆಗಿರೋದನ್ನ ನೋಡಿ ಖುಷಿಪಡಿ. ಯಾಕಂದ್ರೆ ದೇವರು ಅವಳಿಗೆ ಶಿಕ್ಷೆ ಕೊಟ್ಟು ನಿಮಗೆ ನ್ಯಾಯ ಸಿಗೋ ತರ ಮಾಡಿದ್ದಾನೆ.”+ 21  ಆಮೇಲೆ ಒಬ್ಬ ಬಲಶಾಲಿ ದೇವದೂತ ಬೀಸೋ ಕಲ್ಲಿನ ತರ ಇದ್ದ ಒಂದು ದೊಡ್ಡ ಕಲ್ಲನ್ನ ಎತ್ತಿ ಸಮುದ್ರಕ್ಕೆ ಎಸೆದು ಹೀಗೆ ಹೇಳಿದ: “ಬಾಬೆಲ್‌ ಮಹಾ ಪಟ್ಟಣವನ್ನೂ ಇದೇ ತರ ಎತ್ತಿ ಬಿಸಾಕ್ತಾರೆ. ಅದು ಇನ್ಯಾವತ್ತೂ ಕಾಣಿಸಲ್ಲ.+ 22  ಮಹಾ ಬಾಬೆಲೇ ನಿನ್ನಿಂದ ತಂತಿವಾದ್ಯ ನುಡಿಸೋ ಶಬ್ದ ಆಗಲಿ, ಗಾಯಕರು ಹಾಡೋದಾಗಲಿ, ಸಂಗೀತಗಾರರು ನುಡಿಸೋದಾಗಲಿ, ಕೊಳಲಿನ ತುತ್ತೂರಿಯ ಶಬ್ದವಾಗಲಿ ಇನ್ಯಾವತ್ತೂ ಕೇಳಿಸಲ್ಲ. ಯಾವ ತರದ ಕುಶಲ ಕೆಲಸಗಾರರೂ ನಿನ್ನಲ್ಲಿ ಇರಲ್ಲ. ಬೀಸೋ ಕಲ್ಲಿನ ಶಬ್ದನೂ ಇನ್ಯಾವತ್ತೂ ಕೇಳಿಸಲ್ಲ. 23  ದೀಪದ ಬೆಳಕು ಇನ್ಯಾವತ್ತೂ ನಿನ್ನಲ್ಲಿ ಬೆಳಗಲ್ಲ. ಮದುಮಗ ಮತ್ತು ಮದುಮಗಳ ಧ್ವನಿ ಇನ್ಯಾವತ್ತೂ ಕೇಳಿಸಲ್ಲ. ನಿನ್ನ ವ್ಯಾಪಾರಿಗಳು ಭೂಮಿಯಲ್ಲಿ ಇರುವವ್ರಲ್ಲೇ ದೊಡ್ಡ ವ್ಯಕ್ತಿಗಳಾಗಿದ್ರು. ನಿನ್ನ ಮಂತ್ರತಂತ್ರಗಳಿಂದ+ ದೇಶದ ಜನ್ರು ಮೋಸಹೋಗಿದ್ರು. 24  ಪ್ರವಾದಿಗಳ, ಪವಿತ್ರ ಜನ್ರ+ ಮತ್ತು ಭೂಮಿಯ ಮೇಲೆ ಕ್ರೂರವಾಗಿ ಕೊಂದ ಜನ್ರ ರಕ್ತ ಈ ಪಟ್ಟಣದಲ್ಲಿ ಕಾಣಿಸ್ತು.”+

ಪಾದಟಿಪ್ಪಣಿ

ಗ್ರೀಕಿನಲ್ಲಿ ಪೋರ್ನಿಯ. ಪದವಿವರಣೆ ನೋಡಿ.
ಅಥವಾ “ಕೋಪ.”