ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಸುಖೀ ಸಂಸಾರಕ್ಕೆ ಸಲಹೆಗಳು | ಯುವಜನರು

ಬದಲಾವಣೆಗಳಿಗೆ ಹೊಂದಿಕೊಂಡು ಹೋಗುವುದು ಹೇಗೆ?

ಬದಲಾವಣೆಗಳಿಗೆ ಹೊಂದಿಕೊಂಡು ಹೋಗುವುದು ಹೇಗೆ?

ಸಮಸ್ಯೆ

  • ನಿಮ್ಮ ತಂದೆಯ ಕೆಲಸದ ಕಾರಣ ಬೇರೆ ಊರಿಗೆ ಹೋಗಬೇಕಾಗಿದೆ.

  • ನಿಮ್ಮ ಆಪ್ತ ಗೆಳೆಯ/ಗೆಳತಿ ಬೇರೆ ಕಡೆಗೆ ಸ್ಥಳಾಂತರಿಸುತ್ತಿದ್ದಾರೆ.

  • ನಿಮ್ಮ ಅಕ್ಕ/ಅಣ್ಣ ಮದುವೆಯಾಗಿ ನಿಮ್ಮನ್ನು ಬಿಟ್ಟು ಹೋಗುತ್ತಿದ್ದಾರೆ.

ಇಂಥ ಬದಲಾವಣೆಗಳಿಗೆ ಹೊಂದಿಕೊಳ್ಳಲು ನಿಮ್ಮಿಂದಾಗುತ್ತಾ?

ಜೋರಾಗಿ ಬೀಸುವ ಗಾಳಿಗೆ ತಕ್ಕಂತೆ ಬಗ್ಗುವ ಮರ ಬೇಗ ಮುರಿಯುವುದಿಲ್ಲ. ಆ ಮರದಂತೆ ನೀವು ಬದಲಾದ ಪರಿಸ್ಥಿತಿಗೆ ತಕ್ಕಂತೆ ಹೊಂದಿಕೊಳ್ಳಲು ಕಲಿಯಬೇಕು. ಯಾಕೆಂದರೆ ಆ ಪರಿಸ್ಥಿತಿಗಳು ನಿಮ್ಮ ನಿಯಂತ್ರಣದಲ್ಲಿರುವುದಿಲ್ಲ. ನೀವು ಹೇಗೆ ಹೊಂದಾಣಿಕೆ ಮಾಡಿಕೊಳ್ಳಬಹುದು ಎಂದು ನೋಡುವ ಮೊದಲು ಬದಲಾವಣೆಗಳ ಬಗ್ಗೆ ನೀವು ತಿಳಿದಿರಬೇಕಾದ ಕೆಲವು ವಿಷಯಗಳನ್ನು ನೋಡೋಣ.

ನಿಮಗಿದು ತಿಳಿದಿರಲಿ

ಬದಲಾವಣೆ ಬಂದೇ ಬರುತ್ತದೆ. ಬೈಬಲ್‌ ಮನುಷ್ಯರ ಬಗ್ಗೆ ಈ ಸತ್ಯಾಂಶವನ್ನು ತಿಳಿಸುತ್ತದೆ: “ಕಾಲವೂ ಪ್ರಾಪ್ತಿಯೂ ಯಾರಿಗೂ ತಪ್ಪಿದ್ದಲ್ಲ.” (ಪ್ರಸಂಗಿ 9:11) ಇವತ್ತಲ್ಲ ನಾಳೆ ನಮ್ಮ ಜೀವನದಲ್ಲಿ ಅನಿರೀಕ್ಷಿತ ಘಟನೆಗಳು ನಡೆಯುತ್ತವೆ. ಅನಿರೀಕ್ಷಿತವಾಗಿ ನಡೆಯುವ ಎಲ್ಲಾ ವಿಷಯಗಳೂ ಕೆಟ್ಟದಾಗಿರುತ್ತವೆ ಎಂದು ಹೇಳಲಿಕ್ಕಾಗುವುದಿಲ್ಲ. ಯಾಕೆಂದರೆ, ಮೊದಲು ನಮಗೆ ಕೆಟ್ಟದ್ದು ಅಂತ ಅನಿಸಿದ ಬದಲಾವಣೆಗಳಿಂದ ನಂತರ ಪ್ರಯೋಜನ ಆಗಬಹುದು. ಏನೇ ಆದರೂ, ಹೆಚ್ಚಿನ ಜನರು ತಮ್ಮ ಈಗಿನ ಪರಿಸ್ಥಿತಿಗೆ ಒಗ್ಗಿ ಹೋಗಿರುತ್ತಾರೆ. ಹಾಗಾಗಿ, ಎಂಥದ್ದೇ ಬದಲಾವಣೆಯಾದರೂ ಅದಕ್ಕೆ ಹೊಂದಿಕೊಳ್ಳಲು ಕಷ್ಟವಾಗುತ್ತದೆ.

ಬದಲಾವಣೆಗೆ ಹೊಂದಿಕೊಳ್ಳುವುದು ಹದಿವಯಸ್ಸಿನವರಿಗೆ ಕಷ್ಟ. ಯಾಕೆ? ಶಾರೀರಿಕವಾಗಿ, ಮಾನಸಿಕವಾಗಿ “ಈಗಾಗಲೇ ನಿಮ್ಮೊಳಗೆನೇ ಬದಲಾವಣೆಗಳು ಆಗುತ್ತಿರುತ್ತವೆ. ಹಾಗಿರುವಾಗ, ಹೊರಗಿನ ಪರಿಸ್ಥಿತಿಯಲ್ಲೂ ಬದಲಾವಣೆಯಾದರೆ ಇನ್ನೂ ಕಷ್ಟವಾಗುತ್ತದೆ” ಎಂದು ಅಲಿಕ್ಸ್‌ * ಎಂಬ ಯುವಕ ತಿಳಿಸುತ್ತಾನೆ.

ಇದಕ್ಕೆ ಇನ್ನೊಂದು ಕಾರಣ: ದೊಡ್ಡವರಿಗೆ ಅನುಭವ ಇರುವುದರಿಂದ ಬದಲಾವಣೆಗಳಿಗೆ ಸುಲಭವಾಗಿ ಹೊಂದಿಕೊಳ್ಳುತ್ತಾರೆ. ಆದರೆ ಯುವಜನರಿಗೆ ಅನುಭವ ಕಡಿಮೆ ಇರುವುದರಿಂದ ಕಷ್ಟ ಆಗುತ್ತದೆ.

ಹೊಂದಿಕೊಳ್ಳುವುದು ಅಸಾಧ್ಯವೇನಲ್ಲ. ಹೊಂದಿಕೊಳ್ಳುವುದು ಅಂದರೆ ಅನಿರೀಕ್ಷಿತ ಕೆಟ್ಟ ಘಟನೆಗಳಿಗೆ ಅಥವಾ ಬದಲಾವಣೆಗಳಿಗೆ ಕುಗ್ಗಿಹೋಗದೆ ನಮ್ಮನ್ನು ಬದಲಾಯಿಸಿಕೊಳ್ಳುವುದೇ ಆಗಿದೆ. ಹೊಂದಿಕೊಳ್ಳುವ ಸ್ವಭಾವದ ವ್ಯಕ್ತಿ, ಪರಿಸ್ಥಿತಿ ಬದಲಾಗುವಾಗ ಸಹನೆ ತೋರಿಸುತ್ತಾನೆ. ಮಾತ್ರವಲ್ಲ, ಮುಂದೆ ಬರಸಾಧ್ಯವಿರುವ ಅಡ್ಡಿತಡೆಗಳ ಜೊತೆ ಪ್ರಯೋಜನಗಳನ್ನೂ ನೋಡುತ್ತಾನೆ. ಇಂಥ ಸ್ವಭಾವವಿರುವ ಹದಿವಯಸ್ಕರು ಕಷ್ಟ ಬಂದಾಗ ಅಮಲೌಷಧ ಅಥವಾ ಮದ್ಯದ ಮೊರೆಹೋಗುವುದು ತುಂಬ ಕಡಿಮೆ.

ನೀವೇನು ಮಾಡಬಹುದು?

ಇದೆಲ್ಲಾ ಸಹಜ ಅನ್ನೋದನ್ನು ಮರೆಯಬೇಡಿ. ಜೀವನದಲ್ಲಿ ಎಲ್ಲವೂ ನಮ್ಮ ನಿಯಂತ್ರಣದಲ್ಲಿರಬೇಕು ಅಂತ ನಾವು ಬಯಸಬಹುದು, ಆದರೆ ಅದು ಸಾಧ್ಯವಿಲ್ಲ. ಸ್ನೇಹಿತರು ದೂರ ಹೋಗೋದು, ಮದುವೆಯಾಗಿ ಹೋಗೋದು, ಒಡಹುಟ್ಟಿದವರು ದೊಡ್ಡವರಾದ ಮೇಲೆ ದೂರ ಹೋಗೋದು, ಪರಿಸ್ಥಿತಿ ಬದಲಾದಾಗ ಸ್ನೇಹಿತರನ್ನೆಲ್ಲಾ ಬಿಟ್ಟು ಇಡೀ ಕುಟುಂಬನೇ ಬೇರೆ ಕಡೆಗೆ ಹೋಗೋದು ಇದೆಲ್ಲಾ ಸಾಮಾನ್ಯ. ಆದ್ದರಿಂದ ಆಗಿರೋದರ ಬಗ್ಗೆನೇ ಯೋಚಿಸುತ್ತಾ ಬೇಸರಪಡುವ ಬದಲು, ‘ಇದೆಲ್ಲಾ ಸಹಜ’ ಅಂತ ಪರಿಸ್ಥಿತಿಗೆ ಹೊಂದಿಕೊಳ್ಳಲು ಪ್ರಯತ್ನಿಸಿ.—ಬೈಬಲ್‌ ತತ್ವ: ಪ್ರಸಂಗಿ 7:10.

ಮುಂದಿನ ಜೀವನದ ಬಗ್ಗೆ ಯೋಚಿಸಿ. ಹಿಂದಿನ ಬಗ್ಗೆನೇ ಯೋಚಿಸೋದು ಬರೀ ರಿಯರ್‌ ವ್ಯೂ ಮಿರರ್‌ ನೋಡಿಕೊಂಡು ಕಾರನ್ನು ಚಲಾಯಿಸಿದಂತೆ. ಆಗೊಮ್ಮೆ, ಈಗೊಮ್ಮೆ ಅದನ್ನು ನೋಡುವುದು ಒಳ್ಳೇದಾದರೂ ಮುಂದೆ ಇರುವ ರಸ್ತೆಯ ಮೇಲೆ ಪೂರ್ತಿ ಗಮನ ಇಡುವುದು ತುಂಬ ಮುಖ್ಯ. ಅದೇ ರೀತಿ, ಪರಿಸ್ಥಿತಿಗಳು ಬದಲಾದಾಗಲೂ ಮುಂದಿನ ಜೀವನದ ಬಗ್ಗೆ ಯೋಚಿಸಿ. (ಜ್ಞಾನೋಕ್ತಿ 4:25) ಉದಾಹರಣೆಗೆ, ಮುಂದಿನ ಒಂದು ತಿಂಗಳಲ್ಲಿ ಅಥವಾ ಆರು ತಿಂಗಳಲ್ಲಿ ಮುಟ್ಟಲು ಯಾವ ಗುರಿ ಇಡಬಹುದು ಎಂದು ಯೋಚಿಸಿ.

ಪ್ರಯೋಜನಗಳ ಮೇಲೆ ಮನಸ್ಸಿಡಿ. “ಹೊಂದಿಕೊಳ್ಳೋದಕ್ಕೂ ನಮ್ಮ ಮನೋಭಾವಕ್ಕೂ ಸಂಬಂಧವಿದೆ.” ಆದ್ದರಿಂದ, “ನಿಮ್ಮ ಈಗಿನ ಪರಿಸ್ಥಿತಿಯಲ್ಲಿ ಯಾವ ಪ್ರಯೋಜನಗಳಿವೆ ಎಂದು ಯೋಚಿಸಿ” ಎನ್ನುತ್ತಾಳೆ ಲೋರ ಎಂಬ ಯುವತಿ. ನಿಮ್ಮ ಈಗಿನ ಪರಿಸ್ಥಿತಿಯಲ್ಲಿ ಇರುವ ಕಡಿಮೆ ಪಕ್ಷ ಒಂದು ಪ್ರಯೋಜನದ ಬಗ್ಗೆ ಬರೆಯಲು ಪ್ರಯತ್ನಿಸಿ.—ಬೈಬಲ್‌ ತತ್ವ: ಪ್ರಸಂಗಿ 6:9.

ವಿಕ್ಟೋರೀಯ ಎಂಬ ಯುವತಿ ಹದಿವಯಸ್ಸಿನಲ್ಲಿದ್ದಾಗ ಆಕೆಯ ಆಪ್ತ ಸ್ನೇಹಿತರೆಲ್ಲಾ ದೂರ ಹೋದ ಸಂದರ್ಭವನ್ನು ನೆನಪಿಸಿಕೊಳ್ಳುತ್ತಾ ಹೀಗೆ ಹೇಳುತ್ತಾಳೆ: “ನನಗೆ ಒಂಟಿತನ ತುಂಬ ಕಾಡುತ್ತಿತ್ತು. ಮುಂಚೆ ಇದ್ದ ಹಾಗೇ ಇದ್ದಿದ್ದರೆ ಚೆನ್ನಾಗಿರುತ್ತಿತ್ತು ಅಂತ ಯೋಚಿಸ್ತಿದ್ದೆ. ಆದ್ರೆ ಈಗ ಅನಿಸುತ್ತೆ, ಅದ್ರಿಂದ ಒಳ್ಳೇದೇ ಆಯ್ತು, ನಾನು ಪ್ರೌಢಳಾಗೋಕೆ ಸಾಧ್ಯ ಆಯ್ತು. ಪ್ರೌಢರಾಗಬೇಕಂದ್ರೆ ಈ ರೀತಿ ಬದಲಾವಣೆಗಳು ಅಗತ್ಯ ಅಂತ ಆಮೇಲೆ ನನಗನಿಸ್ತು. ಅದ್ರಲ್ಲೂ ನಾನು ಹೊಸ ಸ್ನೇಹಿತರನ್ನ ಮಾಡ್ಕೊಳ್ಳೋಕೆ ಪ್ರಯತ್ನಿಸಿದಾಗ ಈ ವಿಷ್ಯ ಇನ್ನೂ ಚೆನ್ನಾಗಿ ಅರ್ಥ ಆಯ್ತು.”—ಬೈಬಲ್‌ ತತ್ವ: ಜ್ಞಾನೋಕ್ತಿ 27:10.

ಹಿಂದಿನ ಬಗ್ಗೆನೇ ಯೋಚಿಸೋದು, ಬರೀ ರಿಯರ್‌ ವ್ಯೂ ಮಿರರ್‌ ನೋಡಿಕೊಂಡು ಕಾರನ್ನು ಚಲಾಯಿಸಿದಂತೆ

ಇತರರಿಗೆ ಸಹಾಯ ಮಾಡಿ. ‘ನಿಮ್ಮ ಸ್ವಂತ ವಿಷಯಗಳಲ್ಲೇ ಆಸಕ್ತಿವಹಿಸುವುದರ ಬದಲಿಗೆ ಇತರರ ವಿಷಯಗಳಲ್ಲಿಯೂ ಆಸಕ್ತಿವಹಿಸಿ’ ಎನ್ನುತ್ತದೆ ಬೈಬಲ್‌. (ಫಿಲಿಪ್ಪಿ 2:4) ಇತರರು ಸಮಸ್ಯೆಯಲ್ಲಿರುವಾಗ ಸಹಾಯ ಮಾಡುವುದೇ ನಮ್ಮ ಸಮಸ್ಯೆಗಳನ್ನು ಸರಿಪಡಿಸಲು ಇರುವ ಒಳ್ಳೇ ಮಾರ್ಗ. 17 ವಯಸ್ಸಿನ ಆನಾ ಹೀಗೆ ಹೇಳುತ್ತಾಳೆ: “ನನ್ನಂಥದ್ದೇ ಅಥವಾ ನನಗಿಂತ ಹೆಚ್ಚು ಕಷ್ಟದ ಪರಿಸ್ಥಿತಿಯಲ್ಲಿರುವ ಯಾರಿಗಾದರೂ ಸಹಾಯ ಮಾಡುವುದರಿಂದ ತುಂಬ ಪ್ರಯೋಜವಾಗುತ್ತೆ ಅಂತ ನನಗೆ ದೊಡ್ಡವಳಾಗುತ್ತಾ ಹೋದಂತೆ ಅರ್ಥವಾಯಿತು.” ▪ (g16-E No. 4)

^ ಪ್ಯಾರ. 11 ಕೆಲವು ಹೆಸರುಗಳನ್ನು ಬದಲಾಯಿಸಲಾಗಿದೆ.